“ಬೆಂದು ಜೀವ ಬಿಟ್ಟ” ಮಗಳ ನೆನಪಿಗಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾರಿದೀಪವಾದ ASI.
ಇವತ್ತಿನ ಜನರೇಶನ್ ಇವರನ್ನು ನೋಡಿ ಕಲಿಯುವುದು ಬಹಳಷ್ಟಿದೆ..
ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸೆಕ್ಟರ್ ಲೋಕೇಶಪ್ಪನವರು ತಮ್ಮ ಸಂಬಳದಲ್ಲಿ ಇಂತಿಷ್ಟು ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟು ನೆರವಾಗಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದು ಹೆಚ್ಚಿನ ಶಿಕ್ಷಣಕ್ಕೆ ಹಣದ ಕೊರತೆಯಾಗಿ ಪರದಾಡಿದ್ದ ಲೋಕೇಶಪ್ಪನವರು ಮಗಳ ಸಾವಿನ ಬಳಿಕ ಬಡ ಮಕ್ಕಳ ನೆರವಿಗೆ ನಿಂತಿದ್ದಾರೆ.
ಬೆಂಗಳೂರು, ಜುಲೈ.01: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂದು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸಂಸ್ಕಾರ ಕಲಿಸಿಕೊಟ್ಟರೆ ಮುಂದಿನ ಪೀಳಿಗೆ ಸುಭದ್ರವಾಗಿರುತ್ತೆ ಎಂಬ ಮಾತಿದೆ. ಆದರೆ ಬಡತನದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ವಿದ್ಯಾಭ್ಯಾಸವೆಂಬುವುದು (Education) ಕೇವಲ ಖರ್ಚಾಗಿ ಉಳಿದಿದೆ. ಮಕ್ಕಳಿಗೆ ಪುಸ್ತಕ ಕೊಡಿಸಲಾಗದೇ ಪೋಷಕರು ಮಕ್ಕಳನ್ನು ಶಾಲೆಗೆ ಸೇರುವುದೇ ಇಲ್ಲ. ಇಂತಹ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಹಿರಿಯ ಪೊಲೀಸ್ ಸಿಬ್ಬಂದಿ ತಾವು ದುಡಿಯುವ ದುಡಿಮೆಯಲ್ಲಿ ಇಂತಿಷ್ಟು ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆಂದು ನೀಡಿ ಬಡ ಮಕ್ಕಳಿಗೆ ನೆರವಾಗುತ್ತಿದ್ದಾರೆ.
ಮಕ್ಕಳ ಸೇವೆಗೆ ಮಗಳೇ ಪ್ರೇರಣೆ
ಬೆಂಕಿ ದುರಂತದಲ್ಲಿ ASI ಲೋಕೇಶಪ್ಪ ಅವರು ತಮ್ಮ ಮಗಳನ್ನು ಕಳೆದುಕೊಂಡರು. ಅಂದಿನಿಂದಲೂ ಅವರು ಬಡ ಮಕ್ಕಳ ಸಹಾಯಕ್ಕಾಗಿ ದುಡಿಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ. ಆರಂಭದಲ್ಲಿ ಒಂದು ಶಾಲೆಯಿಂದ ಶುರುವಾದ ಇವರ ಸೇವೆ ಈಗ 6 ಶಾಲೆಗಳ ಮಕ್ಕಳ ನೆರವಿನವರೆಗೆ ಬಂದಿದೆ. ಸುಮಾರು 600 ಬಡ ಮಕ್ಕಳಿಗೆ ಲೋಕೇಶಪ್ಪ ಅವರು ಶಾಲಾ ಸಾಮಾಗ್ರಿಗಳನ್ನು ಒದಗಿಸಿ ತಮಗಾಗುವಷ್ಟು ಸಹಾಯ ಮಾಡುತ್ತಿದ್ದಾರೆ. ತಮ್ಮ ಎರಡು ತಿಂಗಳ ಸಂಬಳವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ಮುಡಿಪಿಟ್ಟಿದ್ದಾರೆ.
ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯದಲ್ಲಿದ್ದಾಗ 2019ರಲ್ಲಿ ಲೋಕೇಶಪ್ಪ ತನ್ನ ಮಗಳನ್ನು ಕಳೆದುಕೊಂಡರು. ಬೆಂಕಿ ಅವಘಡದಲ್ಲಿ ಮಗಳು ಹರ್ಷಾಲಿ ಮೃತಪಟ್ಟಳು. ಮಗಳ ಸಾವಿನ ಬಳಿಕ ಲೋಕೇಶಪ್ಪನವರು ಬಡ ಮಕ್ಕಳ ಸಹಾಯಕ್ಕೆ ನಿಲ್ಲಲು ನಿರ್ಧರಿಸಿದರು. ತನ್ನ ಮಗಳ ನೆನಪಿನಲ್ಲಿ ಬಡಮಕ್ಕಳಿಗೆ ಸಹಾಯ ಮಾಡುವ ಮುಂದಾದರು. ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣ ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ನೀಡುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಆರು ಶಾಲೆಗಳ ಬಡ ಮಕ್ಕಳಿಗೆ ಶಾಲಾ ಸಾಮಾಗ್ರಿಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ಬೆಂಗಳೂರಿನ ಒಂದು ಶಾಲೆ, ಮೈಸೂರಿನ ಒಂದು ಶಾಲೆ ಹಾಗೂ ಹಾಸನದ ನಾಲ್ಕು ಶಾಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಬೆಂಗಳೂರಿನ 200 ಮಕ್ಕಳು ಸೇರಿದಂತೆ 01 ರಿಂದ 08ನೇ ತರಗತಿಯ 600 ಮಕ್ಕಳಿಗೆ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ. ಲೋಕೇಶಪ್ಪ ಅವರ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ತಮ್ಮ ಮಗಳ ಹೆಸರಿನಲ್ಲಿ ಎನ್ ಜಿಒ ನಡೆಸುತ್ತಿದ್ದಾರೆ. ಸದ್ಯ ASI ಲೋಕೇಶಪ್ಪನವರ ಕೆಲಸಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗಿದೆ.
ಬಡತನದಲ್ಲೇ ಬೆಳೆದಿದ್ದ ಎಎಸ್ಐ ಲೋಕೇಶಪ್ಪ, ಪಿಯುಸಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದರೂ ಹಣ ಇಲ್ಲದೆ ಶಿಕ್ಷಣಕ್ಕೆ ಪರದಾಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಎದುರಾಗುವ ಆರ್ಥಿಕ ಸಮಸ್ಯೆ ಅರಿತಿದ್ದ ಲೋಕೇಶಪ್ಪ, ಮಗಳ ಸಾವಿಗೆ ಕೊರಗುವ ಬದಲು ಬದಲಾವಣೆಯ ನಿರ್ಧಾರ ಮಾಡಿದರು.
ಬುಡಕಟ್ಟು ಜನಾಂಗದ ಮಕ್ಕಳು, ಕಟ್ಟಡ ನಿರ್ಮಾಣ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಲೋಕೇಶಪ್ಪ ಸೇವೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.