ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಾನ್ಯತೆ ನೀಡಿ ಸರ್ಕಾರ ಆದೇಶ…
ಸರ್ಕಾರದಿಂದ ಕೆಲ ಷರತ್ತುಗಳು ಅನ್ವಯ…!!
ಬೆಂಗಳೂರು: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ಸಂಘಕ್ಕೆ ಸರ್ಕಾರವು ಮಾನ್ಯತೆ ನೀಡಿದೆ. ಮಾನ್ಯತೆಗಾಗಿ ಶಿಕ್ಷಕರ ಸಂಘದ ಅಧ್ಯಕ್ಷರು ಶಾಲಾ ಶಿಕ್ಷಣ ಇಲಾಖೆಗೆ ಕೋರಿಕೆ ಸಲ್ಲಿಸಿದ್ದರು. ಕರ್ನಾಟಕ ಸಿವಿಲ್ ಸೇವಾ (ಸೇವಾ ಸಂಘಗಳ ಮಾನ್ಯತೆ) ಸಂಘಗಳ ಮಾನ್ಯತೆ ನಿಯಮಗಳು-2015ರನ್ವಯ ಮಾನ್ಯತೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಶಾಲಾ ಶಿಕ್ಷಣ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸಂಘಕ್ಕೆ ಮಾನ್ಯತೆ. ನೀಡಲು ತೀರ್ಮಾನಿಸಲಾಗಿದೆ.
ಸೇವಾ ಸಂಘವು ಸಾಮಾನ್ಯ ವಿಷಯಗಳನ್ನು ಹೊರತುಪಡಿಸಿ ಸಂಘದ ಸದಸ್ಯರ ವೈಯಕ್ತಿಕ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ.
ಪ್ರತಿ ವರ್ಷದ ವಾರ್ಷಿಕ ಸಾಮಾನ್ಯಸಭೆ ನಂತರ ಜುಲೈ ತಿಂಗಳ 1ನೇ ತಾರೀಕುನೊಳಗೆ ಪದಾಧಿಕಾರಿಗಳ ಪಟ್ಟಿ, ನಿಯಮಗಳ ಒಂದು ಪ್ರತಿ, ವಾರ್ಷಿಕ ವರದಿ ಮತ್ತು ಸೇವಾ ಸಂಘದ ಲೆಕ್ಕ ಪರಿಶೋಧನೆ ಮಾಡಲಾದ ಲೆಕ್ಕಪತ್ರಗಳ ವಿವರಣಾ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.