ಒಬ್ಬ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು…ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲ!!
ಹೊಂದಾಣಿಕೆ ಕೊರತೆಯಿಂದ ಶಾಲೆ ಭಣಭಣ!!
ಬಿಇಓ,, ವಿದ್ಯಾರ್ಥಿನಿ ಏನು ಹೇಳಿದ್ದಾರೆ ನೋಡಿ..
ಕೋಲಾರ:ಬಂಗಾರಪೇಟ..
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆ ಪರದಾಡುತ್ತಿದೆ. ಆದರೆ ಮುತ್ತೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಒಬ್ಬರು ಖಾಯಂ ಶಿಕ್ಷಕರನ್ನು ಇಲಾಖೆ ನೇಮಕ ಮಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದು, ಇದನ್ನು ನಿಭಾಯಿಸಲು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿದೆ. ಆದರೂ ಸಹ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಇಲ್ಲದಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕದ ಹಿನ್ನೆಲೆಯಲ್ಲಿ ಬಹಳಷ್ಟು ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಆದರೆ ಬಂಗಾರಪೇಟೆ ತಾಲೂಕಿನ ಮುತ್ತೇನಹಳ್ಳಿಯಲ್ಲಿ ಮಾತ್ರ ಒಬ್ಬ ವಿದ್ಯಾರ್ಥಿನಿಗೆ ಇಬ್ಬರನ್ನು ನೇಮಕ ಮಾಡಿದ್ದು, ಆ ಇರುವ ಒಬ್ಬ ವಿದ್ಯಾರ್ಥಿನಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳಿವೆ.
ಗುಣಮಟ್ಟದ ಶಿಕ್ಷಣದಿಂದ ವಂಚಿತ: ಮುತ್ತೇನಹಳ್ಳಿ ಶಾಲೆಯಲ್ಲಿ ಶಿಕ್ಷಕಿ ರೂಪಾ ಅವರು 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಶಾಲೆಯಲ್ಲಿ ವಸಂತ ಎಂಬ ಶಿಕ್ಷಕಿಯೂ ಸಹ ಕಳೆದ 8ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರಲ್ಲೂ ಹೊಂದಾಣಿಕೆ ಕೊರತೆ ಇದ್ದು, ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದಾರೆ. ಕಳೆದ ವರ್ಷ ಶಾಲೆಯಲ್ಲಿ 8 ಮಕ್ಕಳಿದ್ದರು. ಆದರೆ ಶಿಕ್ಷಕರ ನಡುವಿನ ಮುಸುಕಿನ ಗುದ್ದಾಟದಿಂದ ಪಾಲಕರು ಬೇಸರಗೊಂಡು 7 ಮಕ್ಕಳನ್ನು ಬೇರೆ ಬೇರೆ ಶಾಲೆಗಳಿಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಪಾಲಕರು ಹಿರಿಯ
ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಧಿಕಾರಿಗಳು ಸಹ ಶಾಲೆಗೆ ಭೇಟಿ ನೀಡಿ, ಇಬ್ಬರನ್ನು ಬೂದಿಕೋಟೆಯ ಕೆಪಿಎಸ್ ಶಾಲೆಗೆ ನಿಯೋಜನೆ ಮಾಡಿದ್ದರು. ಆದರೆ ಈ ಶಿಕ್ಷಕರು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪುನಃ ಮುತ್ತೇನಹಳ್ಳಿ ಶಾಲೆಗೆ ಬಂದಿದ್ದಾರೆ.
ಕಸಕಡ್ಡಿ ತುಂಬಿದ ಶೌಚಗೃಹ: ಶಾಲೆಯಲ್ಲಿ 11 ಕ್ಕಿಂತ ಕಡಿಮೆ ಮಕ್ಕಳಿದ್ದರೆ ಒಬ್ಬ ಶಿಕ್ಷಕರನ್ನು, ಅದಕ್ಕೂ ಮೇಲ್ಪಟ್ಟಿದ್ದರೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ ಶಾಲೆಯಲ್ಲಿ ಈಗ ಕೇವಲ ಒಬ್ಬಳೇ ವಿದ್ಯಾರ್ಥಿನಿ ಇದ್ದರೂ ಮಗುವಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಇತ್ಯಾದಿ ಸಹ ಮಗುವಿಗೆ ನೀಡದೆ ಶಿಕ್ಷಕರು ಕಡೆಗಣಿಸಿದ್ದಾರೆ. ಆಧಿಕಾರಿಗಳಿಗೆ ಇಲ್ಲಿನ ವಾಸ್ಥವ ಸ್ಥಿತಿ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಮಕ್ಕಳಿಗೆ ಶೌಚಗೃಹ ಕೊರತೆ ಎಂಬುದು ಗ್ರಾಮಸ್ಥರ ಆರೋಪ.
ಮೊಬೈಲ್ನಲ್ಲೇ ಕಾಲಹರಣ: ಓರ್ವ ವಿದ್ಯಾರ್ಥಿನಿಗೆ ಶಿಕ್ಷಣ ಕಲಿಸಲು ಬರುವ ಇಬ್ಬರು ಶಿಕ್ಷಕಿಯರು ಮೊಬೈಲ್ ನೋಡಿಕೊಂಡು ತಮ್ಮ ಪಾಡಿಗೆ ತಾವು ಇರುತ್ತಾರೆ. ನಾನು ನಿತ್ಯ ಶಾಲೆಗೆ ಬಂದು ನನಗೆ ಗೊತ್ತಿರುವುದನ್ನು ಪುಸ್ತಕದಲ್ಲಿ ಬರೆದು ಮನೆಗೆ ಹೋಗುತ್ತಿದ್ದೇನೆ. ಮೊಟ್ಟೆ, ಪೌಷ್ಟಿಕ ಆಹಾರ ನೀಡುತ್ತಿಲ್ಲ. ನನ್ನ ಜತೆಯಿದ್ದ ಸಹಪಾಠಿಗಳು ಬೇರೆಡೆಗೆ ಹೋಗುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಶಿಕ್ಷಣ ಸಿಗುವ ಶಾಲೆಗೆ ನನ್ನನ್ನೂ ಕಳುಹಿಸಿಕೊಡಿ ಎಂದು ಮಗು ಅಳಲು ತೋಡಿಕೊಂಡಿದೆೆ.
ಕಳೆದ ಎರಡು ವರ್ಷಗಳಿಂದ ಶಿಕ್ಷಕರ ಹೊಂದಾಣಿಕೆ ಇಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿತ್ತು. ಹಲವು ಬಾರಿ ಅಧಿಕಾರಿಗಳು ರಾಜಿ ಸಂಧಾನ ಮಾಡಿದ್ದರೂ ಶಿಕ್ಷಕರು ಬದಲಾಗಲಿಲ್ಲ. ಈಗ ಶಾಲೆಯಲ್ಲಿ ಮಕ್ಕಳಿಲ್ಲದೆ ಶಾಲೆಗೆ ಬೀಗ ಜಡಿಯುವಂತಾಗಿದೆ.
ಚಂದ್ರಪ್ಪ ಗ್ರಾ.ಪಂ.ಉಪಾಧ್ಯಕ್ಷ ಮುತ್ತೇನಹಳ್ಳಿ
ಮುತ್ತೇನಹಳ್ಳಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಶಿಕ್ಷಕಿಯರನ್ನು ಬೇರೆಡೆಗೆ ನಿಯೋಜನೆ ಮಾಡಲು ಆದೇಶಿಸಲಾಗಿದೆ. ಶಾಲೆಯಲ್ಲಿ ಇರುವ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.
ಸುಕನ್ಯಾ ಬಿಇಒ ಬಂಗಾರಪೇಟೆ
ಶಾಲೆಯಲ್ಲಿ ಮಕ್ಕಳಿಗೆ ಊಟ ಒದಗಿಸಲು ಶಿಕ್ಷಕರು ಸರಿಯಾಗಿ ಆಹಾರ ಸಾಮಾಗ್ರಿ ಪೂರೈಸುತ್ತಿಲ್ಲ. ನಾನು ಸ್ವಂತ ಖರ್ಚು ಮಾಡಿ ತರಕಾರಿ ಇತ್ಯಾದಿ ತಂದು ಅಡುಗೆ ಮಾಡಿ ಮಕ್ಕಳಿಗೆ ಊಟ ಬಡಿಸಿದ್ದೇನೆ. ಖರ್ಚಿನ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದ ಶಿಕ್ಷಕರು ಮತ್ತು ಆಡಳಿತ ಮಂಡಳಿ ಇದುವರೆಗೂ ನೀಡಿಲ್ಲ.
ಮಂಜುಳಾ ಅಡುಗೆ ತಯಾರಕರು