ಪೂರ್ವ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ಆದೇಶ..
ವೇತನ ಶ್ರೇಣಿ,ಸೇರಿದಂತೆ ಕೆಲ ಷರತ್ತುಗಳು ಅನ್ವಯ..
ಪೂರ್ವ ಪ್ರಾಥಮಿಕ ಶಾಲೆಗಳ ಸ್ಥಾಪನೆಗೆ ನಿಯಮಗಳೇನು?,ಮಾರ್ಗಸೂಚಿ ಇಲ್ಲಿವೆ ನೋಡಿ..
ಜೂನ್ 22: ಕರ್ನಾಟಕ ಸರ್ಕಾರ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಾಗಿ ಘೋಷನೆ ಮಾಡಿದೆ. ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುವೇದನೆಗೊಂಡಂತೆ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಪೂರ್ವ ಪ್ರಾಥಮಿಕ ಶಾಲೆಗಳ ಸ್ಥಾಪನೆಗೆ ನಿಯಮಗಳೇನು?,ಮಾರ್ಗಸೂಚಿ ಏನು? ಎಂದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಮಹಾಂತಯ್ಯ ಎಸ್. ಹೊಸಮಠ ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿ) ಆದೇಶವನ್ನು ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ 2023-24 ಹಾಗೂ 2024 254ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪದವಿ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ. 2023-24ನೇ ಸಾಲಿನಲ್ಲಿ ರಾಜ್ಯದ ಆಯ್ದ 262 ಮತ್ತು 2024-25ನೇ ಸಾಲಿನಲ್ಲಿ 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
ಕಡ್ಡಾಯವಾದ ಸೂಚನೆಗಳು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಆದೇಶದಲ್ಲ ವಿವರಿಸಲಾಗಿದೆ.
2024-25ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳತಕ್ಕದ್ದು. ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿಯವರು ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪ್ರಚಾರವನ್ನು ಮಾಡತಕ್ಕದ್ದು. 2024-25ನೇ ಸಾಲಿನ ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದು. ಈ ವಿಭಾಗ ಪ್ರಾರಂಭಿಸಲು 4 ವರ್ಷದಿಂದ 5 ವರ್ಷದ ವಯೋಮಾನದ ಕನಿಷ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು ಹಾಗೂ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸತಕದ್ದು.
ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿಕೊಳ್ಳುವುದು ಹಾಗೂ ಕೊಠಡಿ ಸಜ್ಜುಗೊಳಿಸುವುದು ಅವಶ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸುವುದು. ಕೊಠಡಿ ಸಜ್ಜುಗೊಳಿಸಲು ಸ್ಥಳೀಯ ಚಿತ್ರಕಲಾ ಶಿಕ್ಷಕರನ್ನು/ ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾದ ಚಿತ್ರಗಳ ರಚನೆ, ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳು ಬರೆಯಲು/ ಚಿತ್ರ ರಚಿಸಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ್/ ಕರಿಹಲಗೆ ರಚನೆ ಮುಂತಾದ ಕಾರ್ಯಗಳನ್ನು ಮಾಡುವುದು. ಖರೀದಿಸಬೇಕಾದ ಸಾಧನ ಸಾಮಗ್ರಿಗಳ ಪಟ್ಟಿಯನ್ನು ಹಾಗೂ ಕೆಲವು ಕೊಠಡಿಯ ವಿನ್ಯಾಸದ ಕೆಲವು ಮಾದರಿ ಉದಾಹರಣೆಗಳನ್ನು ಕೂಡಲೇ ಒದಗಿಸತಕ್ಕದ್ದು.
ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕಿ/ ಶಿಕ್ಷಕ ಮತ್ತು ಒಬ್ಬರು ಆಯಾರವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳುಗಳ ಅವಧಿಗೆ ನೇಮಕ ಮಾಡಿಕೊಳ್ಳತಕ್ಕದ್ದು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿ/ ಶಿಕ್ಷಕರಿಗೆ ಪಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ ರೂ. 10,000 ಮತ್ತು ಆಯಾ ಇವರಿಗೆ ಮಾಸಿಕ ರೂ. 5000 ಸಂಭಾವನೆಯನ್ನು ನಿಗದಿಪಡಿಸತಕ್ಕದ್ದು.
ವೇತನ ಅನುದಾನವನ್ನು ಆಯಾ ಎಸ್.ಡಿ.ಎಂ.ಸಿ. ಖಾತೆಗೆ ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಿಂದ ಬಿಡುಗಡೆ ಮಾಡತಕ್ಕದ್ದು. ಶಿಕ್ಷಕಿ/ ಶಿಕ್ಷಕರನ್ನು ಮತ್ತು ಆಯಾರವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹತೆ. ಶಿಕ್ಷಕರು ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿ/ ಶಿಕ್ಷಕ ಪದವಿ ಪೂರ್ವ ಶಿಕ್ಷಣದಲ್ಲಿ (PUC) ಕನಿಷ್ಠ 50% ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು ಮತ್ತು NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೋಮಾ ಇನ್ ನರ್ಸರಿ ಟೀಚರ್ಸ್ ಎಜುಕೇಶನ್/ ಪ್ರೀ- ಸ್ಕೂಲ್ ಎಜ್ಯುಕೇಶನ್/ ಅರ್ಲಿ ಚೈಲ್ಡ್ಹುಡ್ ಎಜ್ಯುಕೇಶನ್ ಪ್ರೊಗ್ರಾಂ (ಡಿ.ಇ.ಸಿ.ಇಡಿ) ಅಥವಾ ಬಿ.ಇಡಿ (ನರ್ಸರಿ) ಅರ್ಹತೆ ಹೊಂದಿರಬೇಕು, ವಯಸ್ಸು 45 ವರ್ಷಕ್ಕಿಂತ ಕಡಿಮೆ ಇರತಕ್ಕದ್ದು.
ಒಂದು ವೇಳೆ ಈ ಮೇಲಿನ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಿ.ಯು.ಸಿ.ಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆಯುವುದರ ಜೊತೆಗೆ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಡಿ.ಎಡ್ ತರಬೇತಿ ಹೊಂದಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳನ್ನು ಪರಿಗಣಿಸತಕ್ಕದ್ದು.
ಆಯಾಗಳ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಕಡ್ಡಾಯವಾಗಿ ಮಹಿಳೆಯಾಗಿರಬೇಕು, ವಯಸ್ಸು 45 ವರ್ಷಕ್ಕಿಂತ ಕಡಿಮೆ ಇರಬೇಕು. ಮತ್ತು ಸ್ಥಳಿಯರಾಗಿರಬೇಕು (ಆಯಾ ಗ್ರಾಮ/ ವಾರ್ಡ್ ವ್ಯಾಪ್ತಿಯವರು), ಒಂದು ವೇಳೆ ಸ್ಥಳೀಯವಾಗಿ ಯಾವುದೇ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಸರ್ಕಾರಿ ಶಾಲೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದವರನ್ನು/ ಪಕ್ಕದ ವಾರ್ಡಿನವರನ್ನು ಪರಿಗಣಿಸತಕ್ಕದ್ದು.