“ದೇಸಾಯಿ’ ಉತ್ತರ ಕರ್ನಾಟಕದ ಜವಾರಿ ಭಾಷೆಯ ಸದಭಿರುಚಿಯ ಚಲನಚಿತ್ರ
‘ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ ಚಿತ್ರ, ‘ದೇಸಾಯಿ. ಈ ಸಿನಿಮಾಕ್ಕೆ ನಾಗಿರೆಡ್ಡಿ ಭಡ ನಿರ್ದೇಶನ ಮಾಡಿರುವರು. ‘ಲವ್ ೩೬೦’ ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ ರಾಧ್ಯಾ ಜೋಡಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಮಹಾಂತೇಶ್ ಕೂಡಾ ಕೋಚ್ ಪ್ರಮುಖ ಪಾತ್ರ ಮಾಡಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಯಕನಿಗೆ ಶಹಬ್ಬಾಷ್ ಕೊಡುವ ಪಾತ್ರದಲ್ಲಿ ನಟಿಸಿದ್ದಾರೆ. ಈ ಕತೆಗೆ ಮಹಾಂತೇಶ ಆಯ್ದು ಕೊಂಡಿದ್ದು ಗಾಣಿಗ ವೃತ್ತಿ ಬದುಕಿನ ದೇಸಾಯಿ ಕುಟುಂಬದ ಹಿನ್ನಲೆಯ ಕತೆಯನ್ನು. ಅದು ಸಿನಿಮಾ ಮಾಡುವ ಅವರ ಕನಸು ಕೂಡ. ಅದಕ್ಕೆ ನಿದರ್ಶನ ನಾಗಿರೆಡ್ಡಿ ಭಡ ಅವರದು.
ಒಂದು ಕಮರ್ಷಿಯಲ್ ಚಲನಚಿತ್ರಕ್ಕೆ ಯಾವ ಅಂಶಗಳಿರಬೇಕೋ ಆ ಎಲ್ಲ ಅಂಶಗಳನ್ನು ದೇಸಾಯಿ ಒಳಗೊಂಡಿದೆ. ಉತ್ತರ ಕರ್ನಾಟಕದ ಪ್ರತಿಭೆಯೊಂದು ಹಾಲಿವುಡ್ ಮಾದರಿಯಲ್ಲಿ ಸಿನಿಮಾ ಮಾಡಿದ್ದನ್ನು ನಾವು ಚಲನಚಿತ್ರ ಮಂದಿರದಲ್ಲಿ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎನ್ನುವುದಾದರೆ ಚಲನಚಿತ್ರ ಮಂದಿರಕ್ಕೆ ಬಂದು ಇಂತಹ ಚಲನಚಿತ್ರ ನೋಡಬೇಕು.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥಾ ಹಂದರವನ್ನು ಒಳಗೊಂಡ ಚಲನಚಿತ್ರಗಳು ಬರುತ್ತಿಲ್ಲ ಎನ್ನುವವರಿಗೆ ದೇಸಾಯಿ ಉತ್ತಮ ಕೌಟುಂಬಿಕ ಚಲನಚಿತ್ರ ಎಂದರೆ ಅತಿಶಯೋಕ್ತಿಯಾಗಲಾರದು.ಯುವ ನಟ ನಟಿಯರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಕಷ್ಟದ ಕೆಲಸ ಅಂತದ್ದರಲ್ಲಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಒಂದು ಉತ್ತಮ ಕಥೆ ಹೆಣೆದು ನಿರ್ಮಾಣ ಮಾಡಿರುವ ಮಹಾಂತೇಶ ಅವರನ್ನು ನಾನು ಅಭಿನಂದಿಸಲೇಬೇಕು.
ಕೂಡು ಕುಟುಂಬದ ಕಥಾಹಂದರ ಹೊಂದಿರುವ ಸಿನಿಮಾ ಇದು. ‘ಸಿನಿಮಾದಲ್ಲಿ ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಕಥೆ ಸಾಗುತ್ತದೆ. ಮಕ್ಕಳು ದೊಡ್ಡವರಾದ ನಂತರ, ಮದುವೆ ಬಳಿಕ ತಂದೆ-ತಾಯಂದಿರನ್ನು ಬಿಟ್ಟು ಹೇಗೆ ದೂರ ಹೋಗುತ್ತಾರೆ. ಈ ಸಮಯದಲ್ಲಿ ಹಿರಿಯ ಜೀವಗಳು ಅನುಭವಿಸುವ ನೋವು ಏನು,? ಈ ನಡುವೆ ಮೊಮ್ಮಕ್ಕಳ ಪಾತ್ರ, ಮುಂದೊಂದು ತಾವು ತಂದೆ- ತಾಯಿಗೆ ಕೊಟ್ಟ ನೋವು ಸ್ವತಃ ಮಕ್ಕಳಿಗೆ ಸಿಕ್ಕಾಗ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇದರ ಮಧ್ಯೆ ಅಣ್ಣ-ತಮ್ಮಂದಿರ ಕಿತ್ತಾಟ, ಉತ್ತರ ಕರ್ನಾಟಕ ಭಾಗದ ಕೆಲವು ಸಮಸ್ಯೆಗಳನ್ನು ಕೂಡಾ ಹೇಳಿದ್ದಾರೆ. ಕೃಷ್ಣಾ ನದಿ ಹಿನ್ನೀರಿನಲ್ಲಿ ನೆಲೆ ಕಳೆದುಕೊಂಡ ಸಂತೃಸ್ತರಿಗೆ ದೇಸಾಯಿ ಅವರ ಹೋರಾಟದ ಫಲವಾಗಿ ಸರಕಾರ ಸಹಾಯ ಧನ ನೀಡಿರುವುದು.ಅದು ಬಹಳ ವರ್ಷಗಳ ನಂತರ ಸಂತೃಸ್ತರಿಗೆ ದೊರಕುವುದು.ಇನ್ನೂ ಕೂಡ ಹಣ ಭೂಮಿ ಕಳೆದುಕೊಂಡ ರೈತರಿಗೆ ಸಿಗಬೇಕು.ಆ ಮನೆತನದ ಕಲಿತವರಿಗೆ ಉದ್ಯೋಗ ಕೊಡಬೇಕು ಎಂಬ ದೇಸಾಯಿ ಅವರ ಕಾಳಜಿ ನಮ್ಮ ಸಂಸ್ಕೃತಿ ಹಾಗೂ ಮಾನವೀಯತೆ ಅರಿವನ್ನು ಚಲನಚಿತ್ರ ದ ಮೂಲಕ ತೋರಿಸಿರುವರು.
ಚಿಚಖಂಡಿ ವೀರಭದ್ರೇಶ್ವರ ದೇವಾಲಯ ಹಾಗೂ ಅಲ್ಲಿನ ಜಾತ್ರೆಯ ದೃಶ್ಯಗಳಂತೂ ತುಂಬಾ ಅದ್ಭುತವಾಗಿ ಮೂಡಿಬಂದಿವೆ.ಐಹೊಳೆ.ಬದಾಮಿ.ಮಹಾಕೂಟ.ಪಟ್ಟದಕಲ್ ದೇವಾಲಯ.ಬದಾಮಿಯ ಗುಹೆಗಳು.ಅಲ್ಲಿನ ಹೊರಾಂಗಣ ದೃಶ್ಯಗಳಂತೂ ಬಹಳ ಅದ್ಭುತವಾಗಿ ಮೂಡಿ ಬಂದಿವೆ.
ಈ ಸಿನಿಮಾದ ಮತ್ತೊಬ್ಬ ಹೀರೋ ಎಂದರೆ ಛಾಯಾಗ್ರಹಣ ಮಾಡಿದ ಪಿ ಕೆ ಎಚ್ ದಾಸ್ ಎನ್ನಬಹುದು.ಇವರ ಕ್ಯಾಮರಾ ಕೈಚಳಕದ ಬಗ್ಗೆ ಹೇಳಲೇಬೇಕು. ನೀರಿನಲ್ಲಿ ಯೋಗಮುದ್ರೆಯಲ್ಲಿ ಕುಳಿತ ನಾಯಿಕಿ. ಸ್ನೇಹಿತರ ಹಲವು ಮಾತುಗಳನ್ನು ಚಾಲೆಂಜ್ ಆಗಿ ಸ್ವೀಕರಿಸಿ ಬೆಟ್ಟದ ಮೇಲಿನಿಂದ ನೀರಿಗೆ ಧುಮುಕುವ ನಾಯಕ.ನೀರಿನಲ್ಲಿ ಧ್ಯಾನಾಸಕ್ತ ಭಂಗಿಯಲ್ಲಿ ಯೋಗಮುದ್ರೆಯಲ್ಲಿ ಕುಳಿತ ನಾಯಕಿಯಲ್ಲಿ ಅನುರಕ್ತನಾಗಿ ಅವಳ ಸ್ಪರ್ಶಿಸುವ ದೃಶ್ಯ. ಹಾಗೂ ಬದಾಯಿಯ ಬೆಟ್ಟದಲ್ಲಿ ಟ್ರಿಕಿಂಗ್ ಪಾಯಿಂಟ್ ನಲ್ಲಿ ನಾಯಕಿಯ ತಂಗಿ ನಾಯಕನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಬೆಟ್ಟದ ಅಂಚಿನಲ್ಲಿರುವ ನಾಯಕನ ಬಳಿಗೆ ಹೋಗಿ ಬೆಟ್ಟ ಏರಿ ಸೆಲ್ಪಿ ತಗೆದುಕೊಳ್ಳುವುದು. ಚಚಖಂಡಿ ವೀರಭದ್ರೇಶ್ವರ ಜಾತ್ರೆಯಲ್ಲಿ ತಮಗಿರುವ ಮಗುವನ್ನು ಮರೆತು ಸೆಲ್ಪಿ ಹುಚ್ಚಿಗೆ ಬಿದ್ದ ತಂದೆತಾಯಿಗಳಿಂದ ಮಗು ಜಾರಿ ಚಚಖಂಡಿ ವೀರಭದ್ರೇಶ್ವರ ಹತ್ತಿರ ಬ್ರಿಟಿಷರ ಕಾಲಕ್ಕೆ ನಿರ್ಮಿಸಲಾದ ತಡೆಗೋಡೆಗೆ ಸಣ್ಣ ಗಿಡವೊಂದಕ್ಕೆ ಬೀಳುವ ಹಾಗೂ ಆ ಮಗುವನ್ನು ನಾಯಕ ರಕ್ಷಿಸುವ ರೀತಿ.ಪಟ್ಟದ ಕಲ್ ಬದಾಮಿ ಸುತ್ತಮುತ್ತ ಚಿತ್ರೀಕರಣವಾದ ಯುಗಳ ಗೀತೆ ಒಲವು ಮೂಡೋ ಕಾಲವು ಇವುಗಳ ಛಾಯಾಗ್ರಹಣ ನೋಡಿದಾಗ ಯೋಗರಾಜ್ ಭಟ್ಟರು ಮುಂಗಾರು ಮಳೆಯಲ್ಲಿ ಜೋಗ್ ಜಲಪಾತ ಚಿತ್ರೀಕರಿಸಿದ ರೀತಿ ನೆನಪಾಯಿತು.
ವಿಶಿಷ್ಟವಾಗಿ ಸಮಯಕ್ಕೆ ಒಡ್ಡಿಕೊಳ್ಳುವ ಸಮಯದಲ್ಲಿ ಕ್ಯಾಮರಾದೊಳಗಿನ ಬೆಳಕಿನ ಸೂಕ್ಷ್ಮತೆಯನ್ನು ಅರಿತು ಚಿತ್ರೀಕರಣ ಮಾಡುವ ರೀತಿಯಿದೆಯಲ್ಲ.,ಅದನ್ನು ಪಿಕೆಎಚ್ ದಾಸ್ ಬಹಳ ಪ್ರಭಾವಕಾರಿಯಾಗಿ ಚಿತ್ರೀಕರಿಸಿರುವರು,ಒಬ್ಬ ಉತ್ತಮ ಛಾಯಾಗ್ರಹಕನ ಕೈಯಲ್ಲಿ ಉತ್ತಮ ಕತೆ ಕಲಾವಿದರು ತಂತ್ರಜ್ಞರು ಸಿಕ್ಕರೆ ಆ ಸಿನಿಮಾ ಜನಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ ಎನ್ನುವುದಕ್ಕೆ ದೇಸಾಯಿ ಸಾಕ್ಷಿಯಾಗಿದೆ.
ಈ ಚಲನಚಿತ್ರದ ಸಂಗೀತ ಮತ್ತು ನಿರ್ದೇಶನ.ಎಲ್ಲ ನಟರ ಅಭಿಯನಯ ಚಲನಚಿತ್ರಕ್ಕೊಂದು ಮೆರಗು. ಚಿತ್ರದ ಬಹುತೇಕ ಚಿತ್ರೀಕರಣ ಬಾಗಲಕೋಟೆ.ಐಹೊಳೆ.ಬದಾಮಿ.ಪಟ್ಟದಕಲ್.ಮಹಾಕೂಟ. ಸುತ್ತಮುತ್ತ ನಡೆದಿದೆ.
ಚಲನಚಿತ್ರ ಆರಂಭವಾಗುವುದೇ ಒಂದು ಅಪಘಾತದ ದೃಶ್ಯದ ಚಿತ್ರೀಕರಣದೊಂದಿಗೆ ಕತ್ತಲಲ್ಲಿ ಬರುತ್ತಿರುವ ಕಾರು.ಅದನ್ನು ಅಪಘಾತ ಮಾಡಲೆಂದೇ ಹಿಮ್ಮೆಟ್ಟಿಸಿ ಬರುವ ಲಾರಿ.ಜೊತೆಗೆ ಲಾರಿ ಕಾರನ್ನು ಅಪಘಾತಕ್ಕೊಳಪಡಿಸಿ ತೆರಳುವ ಕತ್ತಲು ಬೆಳಕಿನ ಸಂಯೋಜನೆ ಗಮನ ಸೆಳೆಯುವುದರೊಂದಿಗೆ ಚಲನಚಿತ್ರ ಆರಂಭವಾಗುವುದಿದೆಯಲ್ಲ.ಕಥೆಯ ಪರಿಕಲ್ಪನೆ .ನಂತರ ಕುಸ್ತಿ ಪಂದ್ಯದ ದೃಶ್ಯ ಪೂರ್ಣ ಪ್ರಮಾಣದ ಉತ್ತರ ಕರ್ನಾಟಕದ ಬಯಲು ಜಾಗೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಕುಸ್ತಿ ಪಂದ್ಯಗಳನ್ನು ಸಂಘಟಿಸುವ ಗ್ರಾಮೀಣ ಸೊಗಡು. ನಾಯಕನನ್ನು ಪರಿಚಯಿಸುವ ರೀತಿ.ಬದಾಮಿಯ ಊರ ಒಳಗಿರುವ ದೃಶ್ಯಗಳಲ್ಲಿ ನಾಯಕ ತನ್ನ ಬೈಕಿನಲ್ಲಿ ಬರುವ ದೃಶ್ಯಗಳು ಹೀಗೆ ಹೇಳುತ್ತ ಹೊರಟರೆ ದೃಶ್ಯಗಳು ಇಡೀ ಚಿತ್ರವನ್ನು ಆವರಿಸುವ ರೀತಿ ಕ್ಯಾಮರಾ ಕೈಚಳಕದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಕನ್ನಡ ಚಲನಚಿತ್ರಗಳಲ್ಲಿ ಈ ರೀತಿ ಪೋಟೋಗ್ರಫಿ ಬರುತ್ತಿರುವುದಕ್ಕೆ ನಮ್ಮಲ್ಲಿನ ಪ್ರತಿಭಾನ್ವಿತ ಛಾಯಾಗ್ರಾಹಕರು ಇದ್ದಾರೆ ಎಂಬುದಕ್ಕೆ ಇಂತಹ ಚಲನಚಿತ್ರಗಳೇ ಸಾಕ್ಷಿ. ಹ್ಯಾಟ್ಸ ಆಪ್ ಟು ಪಿಕೆಎಚ್ ದಾಸ್.
ಆಸ್ತಿ ಸಲುವಾಗಿ ಅಣ್ಣ ತಮ್ಮಂದಿರ ಮಧ್ಯ ನಡೆಯುವ ಕಲಹ.ಅದು ವಿಕೋಪಕ್ಕೆ ಹೋದಾಗ ಆಗುವ ಅನಾಹುತ. ತಮ್ಮ ಗಾಣದ ಕುಲಕಸಬನ್ನು ನಂಬಿರುವ ದೇಸಾಯಿ ಮನೆತನ.ತಲಾತಲಾಂತರದಿಂದ ಗಾಣದ ಎಣ್ಣೆಯನ್ನು ಉತ್ಪಾದಿಸುತ್ತ ಎತ್ತಿನ ಗಾಣವನ್ನು ತನ್ನ ಮನೆಯಲ್ಲಿ ಇಂದಿಗೂ ಉಳಿಸಿಕೊಂಡ ದೇಸಾಯಿ ಮನೆತನ.ಅಣ್ಣ ತಮ್ಮಂದಿರು ಬೇರೆ ಬೇರೆ ಆಗಿ ಆಸ್ತಿಯನ್ನು ಹಂಚಿಕೊಂಡಿದ್ದರರೂ ಕೂಡ ಹಿರಿಯ ಅಣ್ಣ ತನ್ನ ಮನೆಯಲ್ಲಿ ಗಾಣ ಇಟ್ಟು ಅದರಿಂದ ಬರುವ ಎಣ್ಣೆಯನ್ನು ಊರಿನ ದೇವಾಲಯಕ್ಕೆ ಮತ್ತು ಶಾಲೆಗೆ ಕೊಡುವ ಉದಾರತೆಯನ್ನು ಕಥೆಯಲ್ಲಿ ಮಹಾತೇಶ ತೋರಿಸಿರುವ ರೀತಿ ಅನನ್ಯ.ನಮ್ಮ ಸಂಸ್ಕೃತಿ ಉಳಿಯಬೇಕು.ಕಲಬೆರಕೆ ಆಹಾರ ಸೇವನೆಯಿಂದ ಶಾರೀರಿಕ ಪ್ರಕೃತಿ ಹದಗೆಡುವ ಕಾರಣವನ್ನು ದೇಸಾಯಿ ಮಾತಿನಲ್ಲಿ ಹೇಳಿರುವುದು ನಿಜಕ್ಕೂ ಖುಷಿಯ ಸಂಗತಿ.ದೇಸಾಯಿ ಪಾತ್ರ ಕುಟುಂಬದ ಯಜಮಾನನ ಸಾಂಸ್ಕೃತಿಕ ಪ್ರತಿಬಿಂಬ.ಆ ಪಾತ್ರದ ಜೊತೆಗೆ ಅಣ್ಣ ತಮ್ಮಂದಿರ ಮಕ್ಕಳ ದಾಯಾದಿ ಹಗೆತನ ತೋರಿಸಿರುವ ರೀತಿಯನ್ನು ಮೆಚ್ಚಲೇಬೇಕು.
ದುಶ್ಚಟ.ದುರ್ವತನೆಯಲ್ಲಿ ಮನಸ್ಸು ತೊಡಗಿದರೆ ಏನಾಗಬಹುದು ಎಂಬುದನ್ನು ತೋರಿಸಿರುವ ರೀತಿ ಕೂಡ ತುಂಬಾ ಚನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಇಡೀ ಚಿತ್ರವನ್ನು ಎಲ್ಲಿಯೂ ಬೇಸರವಾಗದ ರೀತಿಯಲ್ಲಿ ಕಟ್ಟಿಕೊಟ್ಟಿರುವುದು.ಉತ್ತರ ಕರ್ನಾಟಕದವರು ನಾವೂ ಉತ್ತಮ ಚಲನಚಿತ್ರ ಮಾಡಿ ತೋರಿಸಬಲ್ಲೆವು ಎಂಬುದಕ್ಕೆ ಮಹಾಂತೇಶ ಅವರ ಸತತ ಪ್ರಯತ್ನದ ಹಿಂದೆ ಪರಿಶ್ರಮ ಇರುವುದು ಕಂಡುಬರುತ್ತದೆ.
ಸೆಂಟಿಮೆಂಟ್ಗೆ ಜಾಗವಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಾಗಿರೆಡ್ಡಿ ‘ಇದೊಂದು ಕೌಟುಂಬಿಕ ಕಥಾಹಂದರದ ಸಿನಿಮಾ. ತಾತ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ. ಈ ಚಲನಚಿತ್ರದಲ್ಲಿ ಸೆಂಟಿಮೆಂಟ್ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ. ಜನರು ಬಯಸುವ ಎಲ್ಲಾ ಮನರಂಜನಾತ್ಮಕ ಅಂಶಗಳು ನಮ್ಮ ಸಿನಿಮಾದಲ್ಲಿದೆ’ ಎನ್ನುತ್ತಾರೆ.ಇದು ಸತ್ಯವೂ ಕೂಡ.ದಯವಿಟ್ಟು ಚಲನಚಿತ್ರ ಮಂದಿರಕ್ಕೆ ಬಂದು ಈ ಚಿತ್ರ ವೀಕ್ಷಿಸಿದರೆ ಹೊಸಬರ ಪ್ರಯತ್ನಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ.
ಈ ಚಿತ್ರಕ್ಕೆ ಸಾಯಿಕಾರ್ತಿಕ್ ಸಂಗೀತ ಸಂಯೋಚಿಸಿದ್ದಾರೆ. ಹೋಳಿ ಹುಣ್ಣಿಮೆ ಹಬ್ಬಕ್ಕ ಎಂಬ ಗೀತೆಯನ್ನು ಅನಿರುದ್ಧ ಶಾಸ್ತ್ರೀ ಹಾಡಿರುವರು.ಇದು ಕೂಡು ಕುಟುಂಬದ ಸನ್ನಿವೇಶದಲ್ಲಿ ಚಿತ್ರೀಕರಣವಾಗಿದೆ.,ತಮ್ಮ ವೃತ್ತಿ ಬದುಕಿನ ಹಿನ್ನಲೆಯಲ್ಲಿ ಗಾಣ ದೇವತೆಯಲ್ಲಿ ಗಾಣದ ಮೂಲಕ ಎಣ್ಣೆ ತಗೆಯುವ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಬೆರೆತು ಹಾಡುವ ಸನ್ನಿವೇಶಗಳನ್ನು ಈ ಹಾಡು ಒಳಗೊಂಡಿದೆ.ನಂತರ ಯುಗಳ ಗೀತೆ ಒಲವು ಮೂಡೋ ಕಾಲವು ಈ ಗೀತೆಯನ್ನು ಅನುರಾಧ ಭಟ್ ಮತ್ತು ವಿಜಯ್ ಪ್ರಕಾಶ್ ಹಾಡಿರುವರು.ಬದಾಮಿ ಮಹಾಕೂಟ.ಐಹೊಳೆ.ಪಟ್ಟದಕಲ್,ಸುತ್ತಮುತ್ತ ಚಿತ್ರೀಕರಣ ಮಾಡಿರುವ ಈ ಗೀತೆ ಉತ್ತರ ಕರ್ನಾಟಕದ ಹೊರಾಂಗಣದಲ್ಲಿ ಸುಂದರವಾಗಿ ಮೂಡಿದೆ.ಈ ಗೀತೆಯನ್ನು ಖ್ಯಾತ ನಿರ್ದೇಶಕ ಡಾ.ವ್ಹಿ.ನಾಗೇಂದ್ರಪ್ರಸಾದ್ ರಚಿಸಿರುವರು. ಮತ್ತೊಂದು ಗೀತೆ ಓ ಜಾನು ಈ ಗೀತೆಯನ್ನು ಸಂತೋಷ ವೆಂಕಿ ಹಾಗೂ ಐಶ್ವರ್ಯಾ ರಂಗರಾಜನ್ ಹಾಡಿರುವರು..ಪಡ್ಡೆ ಹುಡುಗರ ಪ್ರೇಮ ಪ್ರೀತಿಯನ್ನು ನಾಯಕ ನಾಯಕಿಯರ ನೃತ್ಯದಲ್ಲಿ ಈ ಗೀತೆಯಲ್ಲಿ ಕಾಣಬಹುದಾಗಿದೆ.ಈ ಗೀತೆಗೆ ಸೆಟ್ ಹಾಕುವ ಮೂಲಕ ಸೆಟ್ ಕೂಡ ವಿಭಿನ್ನವಾಗಿ ಮೂಡಿ ಬಂದಿದ್ದು ಚಿತ್ರೀಕರಣಕ್ಕೆ ಹ್ಯಾಟ್ಸಪ್ ಹೇಳಲೇಬೇಕು.ಒಂದು ಸಿನಿಮಾಕ್ಕೆ ಬೇಕಾದ ಎಲ್ಲ ರೀತಿಯ ಕಮರ್ಷಿಯಲ್ ಸೂತ್ರಗಳನ್ನು ಈ ಕತೆಯ ಜೊತೆಯಲ್ಲಿ ಅಳವಡಿಸಿಕೊಂಡಿರುವುದನ್ನು ಈ ಗೀತೆಗಳಲ್ಲಿ ನಾವು ಕಾಣಬಹುದಾಗಿದೆ.
ಚಿತ್ರದಲ್ಲಿ ಪ್ರಶಾಂತ್, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ ಮುಂತಾದವರು ‘ದೇಸಾಯಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಗಾಣಿಗ ಮನೆತನದ ಕುಲಕಸಬನ್ನು ಕಮರ್ಷಿಯಲ್ ಎಳೆಯಲ್ಲಿ ಕಥೆ ಹೆಣೆದು ನಿರ್ಮಾಣ ಮಾಡಿರುವ ಬಾಗಲಕೋಟೆಯ ಮಹಾಂತೇಶ ಅವರನ್ನು ಎಷ್ಟು ಹೊಗಳಿದರೂ ಸಾಲದು.ಇಡೀ ಚಲನಚಿತ್ರ ವೀಕ್ಷಿಸಿ ಹೊರಬರುವಾಗ ಕೌಟುಂಬಿಕ ದೃಶ್ಯಗಳು ಕಣ್ಣಂಚಿನಲ್ಲಿ ನೀರು ತರಿಸುವುದನ್ನು ನೆನೆದು ನಮ್ಮ ಭಾರತೀಯ ಸಂಸ್ಕೃತಿ ಈ ರೀತಿಯಾದರೂ ಉಳಿಯುವ ಮೂಲಕ ಒಳ್ಳೆಯತನಕ್ಕೆ ಯಾವತ್ತೂ ಬೆಲೆ ಇದೆ ಎನ್ನುವುದನ್ನು ನೆನೆಯುತ್ತ ಹೊರಬರುವಾಗ ದೇಸಾಯಿ ನಮ್ಮ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ.
ಎಲ್ಲಿಯೂ ಅಶ್ಲೀಲತೆಯ ಸೋಂಕು ತಾಗದ.ನವಿರಾದ ಪ್ರೇಮ ಕಥೆಯೊಡನೆ ಕೌಟುಂಬಿದ ಸಂಸ್ಕಾರ ಸಾರುವ ಕಥೆಯ ತಿರುಳನ್ನು ಉತ್ತರ ಕರ್ನಾಟಕದ ಪ್ರತಿಭೆ ಮಹಾಂತೇಶ ಕಟ್ಟಿಕೊಟ್ಟಿರುವ ರೀತಿಯನ್ನು ನೋಡಿದಾಗ ನಮ್ಮಲ್ಲಿನ ಕಥೆಗಾರರ ಕಥೆಗಳು ತೆರೆಯ ಮೇಲೆ ನಮ್ಮದೇ ಆದ ಗಟ್ಟಿತನದ ಉತ್ತರ ಕರ್ನಾಟಕದ ಭಾಷೆಯಲ್ಲಿ ಮೂಡಿ ಬಂದರೆ ಎಷ್ಟೊಂದು ಖುಷಿ ಅಲ್ಲವೇ.?ಎನಿಸದಿರದು.ಎಲ್ಲ ಭಾಗಗಳ ಜನರು ಇಂತಹ ಕಥೆಗಳಿಗೆ ಪ್ರೋತ್ಸಾಹ ನೀಡಬೇಕು,ಅಂದಾಗ ಓರ್ವ ಕತೆಗಾರ ಒಂದು ಚಿತ್ರತಂಡ ಉಳಿಯಲು ಸಾಧ್ಯ. ದಯವಿಟ್ಟು ದೇಸಾಯಿ ಚಲನಚಿತ್ರ ವನ್ನು ಚಿತ್ರಮಂದಿರದಲ್ಲಿ ಹೋಗಿ ನೋಡಿರಿ ಕನ್ನಡ ಸಿನಿಮಾ ಉಳಿಸಿ.
ವೈ.ಬಿ.ಕಡಕೋಳ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
೯೪೪೯೫೧೮೪೦೦