ನೆಲ ಮೂಲದ ಕಾರ ಹುಣ್ಣಿಮೆ ಹಬ್ಬ
ಭಾರತೀಯ ಸಮಾಜದಲ್ಲಿ ಹಬ್ಬ ಹರಿದಿನಗಳಿಗೆ ತನ್ನದೇ ಆದ ಮಹತ್ವ ಇದೆ. ಅದರಲ್ಲೂ ಹಬ್ಬಗಳೆಂದರೆ ಹಳ್ಳಿಗಳಿಗೆ ಜೀವನಾಡಿಗಳಿದ್ದಂತೆ. ಸಂತೋಷದ ಹೂರಣ ಸವಿಯುವ ಪ್ರತಿಯೊಂದು ಹಬ್ಬಗಳನ್ನು ಸಹ ಹಳ್ಳಿಗಳು ಜಗಮಗಿಸುವಂತೆ ಆಚರಿಸುತ್ತಾರೆ. ಹಬ್ಬ ಹರಿದಿನಗಳ ಮುಖೇನ ಬಂದ ಬೆಸೆಯುವ ಈ ಹಬ್ಬಗಳು ಸಂಬಂಧಿಕರನ್ನು ಕೂಡಿಸಿ, ಸಿಹಿ ಸವಿಯುವುದರ ಮೂಲಕ ಹಬ್ಬ ಆಚರಣೆ ಮಾಡುವ ವಿಶೇಷತೆ ಇಂದಿಗೂ ಹಳ್ಳಿಗಳಲ್ಲಿ ಇದೆ. ಅದರಲ್ಲೂ ಈ ನೆಲದ ಮೂಲ ಮಣ್ಣಿನ ಹಬ್ಬ ಎಂದರೆ ಕಾರ ಹುಣ್ಣಿಮೆಯು ಹೌದು. ಹಳ್ಳಿಗರು ಹೇಳುವಂತೆ ಮುಂಗಾರಿ(ಮುಂಗಾರು ಮಳೆ) ಆರಂಭದ ಮೊದಲ ಹಬ್ಬವಾಗಿರದ್ದು ಕಾರ ಹುಣ್ಣಿಮೆ, ಈ ಹಬ್ಬವು ಉಳಿದ ಹಬ್ಬಗಳನ್ನು ಕರೆದುಕೊಂಡು ಬರುವ ಹಬ್ಬವಾಗಿದೆ ಎಂದು ಹಳ್ಳಿಗರು ಹೇಳುತ್ತಾರೆ. ಮೂಲದಲ್ಲಿ ಈ ಹಬ್ಬ ತನ್ನದೇ ಆದ ಇತಿಹಾಸ ಚರಿತ್ರೆ ಹೊಂದಿದ್ದು ಪಶುಪಾಲನಾ ನೆಲೆಯಲ್ಲಿ ಬಂದವರಂತೂ, ಹಳ್ಳಿಗರಂತೂ ಸಂಭ್ರಮಾಚಾರಣೆಯಿಂದ ಮಾಡುತ್ತಾರೆ. ನೆಲ, ಮಣ್ಣಿಗೆ ಸಂಬಂಧಿಸಿದಂತೆ ಮಣ್ಣಿನಿಂದ ಬಂದ ನಮಗೆ ಮಣ್ಣಿನ ಮಹತ್ವವನ್ನು ಸಾರುವ ಹಬ್ಬವಿದು ಎಂದು ಹೇಳಬಹುದು. “ಹಳ್ಳಿಗರ ಹೃದಯ ಭಾಗದಲ್ಲಿ, ಅದರಲ್ಲೂ ರೈತರಲ್ಲಿ ಈ ಕಾರ ಹುಣ್ಣಿಮೆ ತನ್ನದೇ ಆದಂತಹ ವಿಶಿಷ್ಟ ಸ್ಥಾನ”ಪಡೆದಿದೆ ಎಂದು ಹೇಳಬಹುದು.
ಹಳ್ಳಿಗರು ಪ್ರತಿ ಹಬ್ಬಗಳನ್ನು ಜೀವಿಸುತ್ತಾರೆ. ಅದರಂತೆ ಕಾರ ಹುಣ್ಣಿಮೆಯನ್ನು ವಿಶೇಷವಾಗಿ ಮಾಡುತ್ತಾರೆ. ಮನೆಯ ಜಾನುವಾರಗಳನ್ನು, ವಿಶೇಷವಾಗಿ ಎತ್ತುಗಳನ್ನು ಮುಂಜಾವಿಗೆ ಎದ್ದು ಊರ ಕೆರೆ, ಹಳ್ಳ ಅಥವಾ ನೀರು ಹರಿಯುವ ಸ್ಥಳಗಳಲ್ಲಿ ಸ್ನಾನ ಮಾಡಿಸಿ ಅವುಗಳನ್ನು ಶೃಂಗರಿಸುವುದೇ ಒಂದು ಸಂಭ್ರಮ. ಮುಂದೆ ಬರುವ ಬಿತ್ತನೆ ಕಾರ್ಯಗಳೆಲ್ಲವೂ ಸುಸೂತ್ರವಾಗಿ ನಡೆಯಲೆಂದು ಸಂಕಲ್ಪ ಮಾಡಿ ಕಾರ ಹುಣ್ಣಿಮೆ ಆಚರಿಸುವ ಪದ್ಧತಿ, ಸಾಂಪ್ರದಾಯ ಇಂದಿಗೂ ಹಳ್ಳಿಗರ ಮನೆ ಮನಗಳಲ್ಲೂ ಮನೆಮಾಡಿದೆ.
ಹಾಗೆ ನೋಡಿದರೆ ವರ್ಷಕ್ಕೆ ಐದರಿಂದ ಆರು ಬಾರಿ ಮಣ್ಣಿಗೆ ಮಣ್ಣಿಗೆ ಪೂಜೆ ಸಲ್ಲಿಸುತ್ತಾರೆ ನಮ್ಮ ರೈತರು. ಮೊದಲನೆಯದಾಗಿ ಕಾರ ಹುಣ್ಣಿಮೆ, ನಂತರ ಮಣ್ಣೆತ್ತಿನ ಅಮಾವಾಸ್ಯೆ, ಜೋಕುಮಾರನ ಹಬ್ಬ, ನಾಗರ ಪಂಚಮಿ, ಯುಗಾದಿ ಮೊದ್ಲ ಸಂಭ್ರಮಗಳಲ್ಲಿ, ಗೌರಿ ಗಣೇಶನ ಹಬ್ಬದಲ್ಲಿ ವಿಶೇಷವಾಗಿ ಮಣ್ಣಿನ ಪೂಜೆ ಮಾಡುತ್ತಾರೆ. ಅಂತಹ ವಿಶೇಷಗಳಲ್ಲಿ ಕಾರಹುಣ್ಣಿಮೆಯೂ ಹೌದು.
ಕಾರ ಹುಣ್ಣಿಮೆಯು ಜೇಷ್ಠ ಮಾಸದ ಹುಣ್ಣಿಮೆಯಂದು ಬರುತ್ತದೆ ಮತ್ತು ಇದು ರೈತರಿಗೆ ಅತ್ಯಂತ ಮಹತ್ವಪೂರ್ಣವಾದ ಹಬ್ಬವಾಗಿದೆ. ರೈತರು ಈ ಹಬ್ಬವನ್ನು ಆಚರಿಸಲು ವಿಶೇಷವಾದ ಕಾರಣವೂ ಒಂದಿದೆ. ಜಾನುವಾರಗಳು ಹಳ್ಳಿಗರ, ರೈತರ ಪಾಲಿಗೆ ಆರ್ಥಿಕತೆಯನ್ನು ವೃದ್ಧಿಸುವ ಸಂಪನ್ಮೂಲಗಳೆಂದರೂ ತಪ್ಪಾಗಲಾರದು. ಏಕೆಂದರೆ ವ್ಯವಸಾಯದಲ್ಲಿ ಬಹುಪಾಲು ರೈತನೊಂದಿಗೆ ಹೆಗಲು ಕೊಡುವುದು ಜಾನುವಾರಗಳೇ ಅದರಲ್ಲೂ ಎತ್ತುಗಳು. ಹಾಗಾಗಿ ಎತ್ತುಗಳನ್ನು ವಿಶೇಷವಾಗಿ ಪೂಜಿಸುವ ರೈತರ ಹಬ್ಬ ಎಂದೇ ಇದು ಪ್ರಖ್ಯಾತಿ ಪಡೆದಿದೆ. ಕಾರ ಹುಣ್ಣಿಮೆಯಂದು ಇಡೀ ಹಳ್ಳಿಗಳೇ ಸಂಭ್ರಮ ಸಡಗರದಿಂದ ಕೂಡಿರುತ್ತದೆ. ಕಾರ ಹುಣ್ಣಿಮೆಯನ್ನು ಆಚರಿಸಲು ಎರಡು ಮೂರು ದಿನದಿಂದಲೇ ಹಳ್ಳಿಗಳು ತಯಾರಿ ನಡೆಸಿರುತ್ತಾರೆ. ತಮ್ಮ ಮನೆಗಳನ್ನೆಲ್ಲ ಸ್ವಚ್ಛಗೊಳಿಸಿ, ಮನೆಗೆ ಬೇಕಾಗಿರುವಂತಹ ಸಾಮಗ್ರಿಗಳನ್ನು ತಂದು ವಿಶೇಷವಾಗಿ ಎತ್ತು ಹಸುಗಳನ್ನು ಶೃಂಗರಿಸಲು ಅವುಗಳ ಕೊಂಬುಗಳಿಗೆ ಚಂದ ಕಾಣಲು ಬಣ್ಣ, ಗೆಜ್ಜೆಗಳು, ಮೂಗುದಾರ, ಬಾರುಕೋಲು, ಬಣ್ಣದ ರಿಬ್ಬನ್ ಟೇಪುಗಳು, ಬಣ್ಣ ಬಣ್ಣದ ದಾರಗಳ ಗುಂಚಲುಗಳು ಇವೆಲ್ಲವುಗಳನ್ನು ತಂದು ಹಬ್ಬದ ದಿನದಂದು ಅವುಗಳಿಗೆ ಸ್ನಾನ ಮಾಡಿಸಿ, ಬಣ್ಣ ಬಳಿದು, ಗೆಜ್ಜೆ ಕಟ್ಟಿ, ಹೊಸ ಮೂಗುದಾರವನ್ನು ಹಾಕಿ ಶೃಂಗರಿಸಿ ಸಂಭ್ರಮ ಪಡುತ್ತಾರೆ. ಆ ದಿನ ಮನೆಯ ಮಹಿಳೆಯರು ಮಡಿ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ, ಎತ್ತುಗಳಿಗೆ ಜಾನುವಾರುಗಳಿಗೆ ಪೂಜೆ ಸಲ್ಲಿಸಿ, ಮನೆಯಲ್ಲಿ ಮಾಡಿದಂತಹ ಒಬ್ಬಟ್ಟು, ಕಾಯಿ ಕಡಬು, ಹೊಟ್ಟೆಡೆ(ಮಡಿ ಪ್ರಸಾದ)ಗಳನ್ನು ಇಟ್ಟು ಮೊದಲು ಅವುಗಳಿಗೆ ಪ್ರಸಾದ ಸೇವಿಸಲು ನೀಡಿ, ಅವುಗಳು ತಿಂದು ಉಳಿದ ಅನ್ನದ ಪ್ರಸಾದ ಅಗಳುಗಳನ್ನು ತುಂಬಿದ ಕೊಡದ ನೀರಿಗೆ ಹಾಕಿ, ತಮ್ಮ ತಮ್ಮ ಹೊಲಗಳಿಗೆ ತೆರಳಿ, ಒಂದು ಕಡೆ ಎಲ್ಲಾದರೂ ಮಣ್ಣಿಗೆ ಪೂಜಿಸಿ ಆ ನೀರನ್ನು ಚರಗ(ಅನ್ನದ ನೀರು)ಯೆಂದು ಹೊಲಕ್ಕೆ ಸಿಂಪಡಿಸಿ ಭೂಮಿತಾಯಿಯು ಅನ್ನದ ನೀರನ್ನು, ಅದರಲ್ಲೂ ಬಸವಳಿಯದೆ ರೈತನಿಗೆ ಹೇಗಾಲಾಗುವ ಬಸವ ಸೇವಿಸಿದ ಪ್ರಸಾದದ ನೀರನ್ನು ಮಣ್ಣಿಗೆ ಚರಗ ಹಾಕುವುದರಿಂದ ಭೂಮಿ ತಾಯಿಯು ಸಂತೃಪ್ತಗೊಳ್ಳುತ್ತಾಳೆಂದು ಭಾವಿಸುತ್ತಾರೆ. ಇದಾದ ಬಳಿಕ ಎತ್ತುಗಳನ್ನು ತಮ್ಮ ಊರ ಮುಖ್ಯ ದೇವರ ಗುಡಿಯ ಬಳಿಗೆ ಕರೆದೊಯ್ದು ಪೂಜಿಸಿ ದೇವರ ಗುಡಿಯ ಸುತ್ತಲೂ ಮೂರು ಅಥವಾ ಐದು ಸುತ್ತುಗಳನ್ನು ಎಲ್ಲ ರೈತರು ಒಮ್ಮೆಗೆ ಸುತ್ತುವರಿಸುವ ಪದ್ಧತಿಯು ಇದೆ. ಅದನ್ನು ಊರ ಜನರು ಕಣ್ ಪಿಳುಕಿಸದೆ ಬೆರಗುಗಣ್ಣುಗಳಿಂದ ತಾ ಮುಂದು ನಾ ಮುಂದು ಎಂದು ಎತ್ತು ಸುತ್ತುವರೆಯುವುದನ್ನು ಜನರು ನೋಡಿ ಚಪ್ಪಾಳೆ ತಟ್ಟುತ್ತಾರೆ. ಈ ಪದ್ಧತಿಯು ಇಂದಿಗೂ ಮುಂದುವರೆದಿದ್ದು ಇದನ್ನು ಕರಿಹರಿಯುವ ಹಬ್ಬವೆಂತಲೂ ಕರೆಯುತ್ತಾರೆ. ಇನ್ನು ಕೆಲವು ಭಾಗಗಳಲ್ಲಿ ಎತ್ತಿನ ಬಂಡಿ ಹೂಡಿ ಸ್ಪರ್ಧೆ ಏರ್ಪಡಿಸುತ್ತಾರೆ. ಊರ ದೇವಸ್ಥಾನದಿಂದ ನಿಗದಿಪಡಿಸಿದ ದಾರಿಯವರೆಗೆ ಜನರು ನಿಂತಿರುತ್ತಾರೆ. ನಿಗದಿಪಡಿಸಿದ ಜಾಗಕ್ಕೆ ಎತ್ತುಗಳು ಓಡಲು ಸಜ್ಜಾದಾಗ ಜನರು ಸಂಭ್ರಮಿಸುತ್ತಾರೆ. ಯಾರ ಎತ್ತಿನ ಗಾಡಿ ಮೊದಲು ನಿಗದಿಪಡಿಸಿದ ಜಾಗಕ್ಕೆ ತಲುಪುತ್ತದೆಯೋ ಅವರಿಗೆ ಊರಿನ ಮುಖ್ಯಸ್ಥರು ಉಡುಗೊರೆಯನ್ನು ಕೊಡುವ ಮೂಲಕ ಹಬ್ಬವನ್ನು ಆಚರಿಸುವ ಪದ್ಧತಿಯು ಕೆಲವು ಭಾಗಗಳಲ್ಲಿ ಇದೆ.
ಮನೆಗಳಲ್ಲಿ ಎತ್ತು ಅಥವಾ ಜಾನುವಾರಗಳನ್ನು ಹೊಂದಿಲ್ಲದವರು ಸಹ ಕುಂಬಾರರು ಮಾಡಿದ ಮಣ್ಣಿನ ಎತ್ತುಗಳನ್ನು ಮನೆಗೆ ತಂದು ಮನೆಯ ದೇವರ ಕೋಣೆಯ ಜಗುಲಿಯ ಮೇಲೆ ಅಥವಾ ಸ್ವಚ್ಛಗೊಳಿಸಿದ ಜಾಗದ ಕಡೆ ಸೀರೆಗಳಿಂದ ಶೃಂಗರಿಸಿ ಎತ್ತುಗಳ ಮಣ್ಣಿನ ಪ್ರತಿಮೆಯನ್ನು ಇಟ್ಟು ಅವುಗಳನ್ನು ಪೂಜಿಸುತ್ತಾರೆ. ಕಾರ ಹುಣ್ಣಿಮೆ ಹಬ್ಬವು ರೈತ ಮಿತ್ರ ಎತ್ತುಗಳನ್ನು ಪೂಜಿಸಿ ಗೌರವಿಸುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಎಲ್ಲ ಎತ್ತುಗಳನ್ನು ಬಣ್ಣ ಹಾಗೂ ಹೊಸ ಹೊಸ ಮೂಗುಧಾರ, ಬಾರುಕೋಲುಗಳಿಂದ ಶೃಂಗರಿಸಿ ಸಂಭ್ರಮಪಡುತ್ತಾರೆ. ಅಷ್ಟು ಮಾತ್ರವಲ್ಲದೆ ಕುಂಟೆ, ಕೂರಿಗೆ, ಮಡಿಕೆ, ಹಗ್ಗ, ಬಾರಕೋಲು ಮೊದಲಾದ ವ್ಯವಸಾಯದ ಪರಿಕರಗಳನ್ನು ಪೂಜಿಸುವ ವಾಡಿಕೆ ಇಂದಿಗೂ ಗ್ರಾಮೀಣಿಗರಲ್ಲಿ ಇದೆ.
ಒಟ್ಟಾರೆಯಾಗಿ ಕಾರ ಹುಣ್ಣಿಮೆ ಎಂಬ ಹಬ್ಬವು ರೈತಾಪಿ ಕುಟುಂಬಕ್ಕೆ ಸಂಭ್ರಮ ಸಡಗರವನ್ನು ಹೊತ್ತು ತರುತ್ತದೆ. ಇಡೀ ಹಳ್ಳಿಗರು ಒಂದೆಡೆ ಸೇರಿ ಎತ್ತುಗಳನ್ನು ಶೃಂಗರಿಸಿ ಕರಿಹರಿಸುವ ಹಬ್ಬವು ಜಮೀನಿನಲ್ಲಿ ದುಡಿದು ಬಸವಳಿದು, ಕಷ್ಟ ನೋವು ಸಂಕಟಗಳನ್ನು ನೀಯುವ ರೈತಪಿ ಜನರ ಪಾಲಿಗೆ ಸಂತಸದ ವರದಾನವೆಂದು ಹೇಳಬಹುದು. ಭೂಮಿತಾಯಿಯನ್ನೇ ನಂಬಿ ಬದುಕುವ ರೈತ ಬಂಧುಗಳಿಗೆ ಇಂತಹ ಹಬ್ಬಗಳು ಕೊಡುವ ಖುಷಿ ಬೇರೆ ಯಾರಿಂದಲೂ ತಂದುಕೊಡಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಸಿಹಿ ಸವಿಯುವ ಸಂಕೇತಕ್ಕೆ ಸಾಕ್ಷಿಯಾಗುವುದು ಇಂತಹ ಹಬ್ಬಗಳು. ಬದುಕಿನ ಬಾಣಲೆ ಎದುರು ಬೆಂದವರು ಇಂತಹ ಹಬ್ಬ ಹರಿದಿನಗಳಲ್ಲಾದರೂ ಹೋಳಿಗೆ ಬೇಯಿಸಿ ತಿನ್ನುವಂತಾಗಲಿ ಭಗವಂತ ಒಳಿತು ಮಾಡಲಿ. ಕಾರ ಹುಣ್ಣಿಮೆಯಂದು ರೈತರು ಮಾತ್ರವಲ್ಲದೆ ರೈತರಿಗೆ ಹೆಗಲಾಗಿ ದುಡಿಯುವ ಎತ್ತುಗಳು ಸಹ ಸಂಭ್ರಮ ಪಡುವಂತಹ ಕಾರ ಹುಣ್ಣಿಮೆ ಮುಂಬರುವ ಕೃಷಿಯಲ್ಲಿ ರೈತನಿಗೆ ಜೊತೆಯಾಗಿ ಇಡೀ ಜಗತ್ತಿಗೆ ಅನ್ನ ನೀಡುವ ಕಾಯಕದಲ್ಲಿ ತೊಡುಗುವಂತಹ ರೈತ ಮತ್ತು ಎತ್ತುಗಳಿಗೆ ಭಗವಂತ ಮತ್ತಷ್ಟು ಬಲ ತುಂಬಲಿ.
ಡಾ ಮೇಘನ ಜಿ
ಉಪನ್ಯಾಸಕರು