ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನದ ಸಂಭ್ರಮ
‘ಯೋಗದಿಂದ ಚೈತನ್ಯಶಕ್ತಿ ಸಂವರ್ಧನೆ’
ಧಾರವಾಡ: ನಿತ್ಯದ ಯೋಗ ಸಾಧನೆಯು ಮಾನವನ ಚರಣಗಳ ತುದಿ ಬೆರಳಿನಿಂದ ನಡು ನೆತ್ತಿಯವರೆಗೆ ದೇಹದೆಲ್ಲೆಡೆ ಚೈತನ್ಯ ಶಕ್ತಿ ಸಂವರ್ಧನೆಗೆ ಸಹಕಾರಿಯಾಗಿದೆ ಎಂದು ಹಿರಿಯ ಯೋಗ ಪಟು, ಶಾರೀರಿಕ ಶಿಕ್ಷಣ ತಜ್ಞ ಎಂ. ಜಿ. ತಿಮ್ಮಾಪೂರ ಹೇಳಿದರು.
ಅವರು ನಗರದ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಶ್ವ ಯೋಗದಿನದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯೋಗವು ಮಾನವನಲ್ಲಿಯ ಎಲ್ಲ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಿ ಧನಾತ್ಮಕ ಚಿಂತನೆಯನ್ನು ಸಂವರ್ಧಿಸುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ಯೋಗ ಸಾಧನೆಗೆ ತೆರೆದುಕೊಳ್ಳಬೇಕು. ವಿದ್ಯಾರ್ಥಿಗಳು ಯೋಗ ಮತ್ತು ಧ್ಯಾನದ ತನ್ಮಯತೆಯನ್ನು ರೂಢಿಸಿಕೊಂಡರೆ ಅವರು ವ್ಯಾಸಂಗದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದೂ ತಿಮ್ಮಾಪೂರ ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಾಲೆಯ ಸಂಸ್ಥಾಪಕ ಅರುಣ ಚರಂತಿಮಠ ಮಾತನಾಡಿ, ಅಖಂಡ ವಿಶ್ವವೇ ಯೋಗದತ್ತ ಮುಖ ಮಾಡಲು ಭಾರತದ ಪಾರಂಪರಿಕ ಯೋಗ ಸಾಧನೆಯ ಹಿರಿಮೆಯೇ ಕಾರಣವಾಗಿದೆ. ಯೋಗಾಭ್ಯಾಸವು ಸರ್ವ ಶ್ರೇಷ್ಠ ಹವ್ಯಾಸವಾಗಿದ್ದು, ಇದು ಕೇವಲ ದಿನಾಚರಣೆಗಷ್ಟೇ ಸೀಮಿತವಾಗದೇ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು.
ಶಾಲೆಯ ಪ್ರಿನ್ಸಿಪಾಲ್ ಅಶ್ವಿನಿ ಚಿಕ್ಕಬಳ್ಳಾಪೂರ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ, ಶಾಲೆಯ ಶಿಕ್ಷಕ-ಶಿಕ್ಷಕಿಯರು ಮತ್ತು ಮಕ್ಕಳ ಪಾಲಕ-ಪೋಷಕ ಪ್ರತಿನಿಧಿಗಳು ಇದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಆಕರ್ಷಕ ಯೋಗಾಸನಗಳ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳ ವಾದ್ಯ ತಂಡದ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು.