ನಿವೃತ್ತ ಡಿಡಿಪಿಐ ವ್ಹಿ.ಎಂ.ಪಾಟೀಲ ನಿಧನ
ಗಣ್ಯರಿಂದ ಭಾವಪೂರ್ಣ ಶೃದ್ಧಾಂಜಲಿ
ಧಾರವಾಡ : ಶಾಲಾ ಶಿಕ್ಷಣ ಇಲಾಖೆಯಲ್ಲಿ ವ್ಹಿ.ಎಂ.ಪಾಟೀಲ ಎಂದೇ ಚಿರಪರಿಸಿತರಾಗಿದ್ದ ಹಿರಿಯ ಶಿಕ್ಷಣ ತಜ್ಞ, ನಿವೃತ್ತ ಡಿ.ಡಿ.ಪಿ.ಐ. ವಿರೂಪಾಕ್ಷಗೌಡ ಮಲ್ಲನಗೌಡ ಪಾಟೀಲ (74) ಮಂಗಳವಾರ ಬೆಳಗಿನ ಜಾವ ನಿಧನರಾದರು.
ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದವರಾದ ಪಾಟೀಲ ಅವರು ಕಳೆದ 5 ದಶಕಗಳಿಗೂ ಹೆಚ್ಚು ಕಾಲದಿಂದ ನಗರದ ಲೈನ್ ಬಜಾರ ಭೋವಿಗಲ್ಲಿ ನಿವಾಸಿಯಾಗಿದ್ದರು.
ಪ್ರೌಢ ಶಾಲಾ ಮುಖ್ಯಾಧ್ಯಾಪಕರಾಗಿ, ಶಾಲಾ ಶಿಕ್ಷಣ ಇಲಾಖೆಯ ಈ ಹಿಂದಿನ ವ್ಯವಸ್ಥೆಯಲ್ಲಿ ವಿವಿಧ ತಾಲೂಕುಗಳ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಧಾರವಾಡ ಜಿಲ್ಲಾ ಆಡಳಿತ ಉಪನಿರ್ದೇಶಕ(ಡಿಡಿಪಿಐ) ಆಗಿ, ಜೊತೆಗೆ ಧಾರವಾಡ ಹಾಗೂ ಬೆಳಗಾವಿ ಡಯಟ್ ಪ್ರಾಚಾರ್ಯರಾಗಿ ಅನುಪಮ ಸೇವೆಸಲ್ಲಿಸಿದ್ದರು. ಕೆಲವೇ ವರ್ಷಗಳ ಬೆಳಗಾವಿ ಜಿಲ್ಲೆಯ ಸೇವೆಯನ್ನು ಹೊರ್ತುಪಡಿಸಿದರೆ ತಮ್ಮ ಸಂಪೂರ್ಣ ಸರಕಾರಿ ಸೇವೆಯನ್ನು ಧಾರವಾಡ ಜಿಲ್ಲೆಯಲ್ಲಿಯೇ ಸಲ್ಲಿಸಿ ಶಿಕ್ಷಣ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಆಡಳಿತಗಾರರೆಂದು ಹೆಸರು ಮಾಡಿದ್ದರು.
ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ.
ಪ್ರಶಸ್ತಿ-ಪುರಸ್ಕಾರ :
ರಾಜ್ಯ ಶಿಕ್ಷಣ ಇಲಾಖೆಯಿಂದ ‘ಶ್ರೇಷ್ಠ ಸಹಾಯಕ ಶಿಕ್ಷಣಾಧಿಕಾರಿ’ ಪ್ರಶಸ್ತಿ ಹಾಗೂ ‘ಅತ್ಯುತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ’ ಪ್ರಶಸ್ತಿ, ನಟಶೇಖರ ಪಂಡಿತ ಬಸವರಾಜ ಮನಸೂರ ಪ್ರಶಸ್ತಿ, ನವದೆಹಲಿಯ ವಿದ್ಯಾ ವಿಕಾಸ ಪ್ರತಿಷ್ಠಾನದ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾಟೀಲ ಭಾಜನರಾಗಿದ್ದರು.
ಸಂತಾಪ :
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರುಗಳಾದ ವಿನಯ ಕುಲಕರ್ಣಿ, ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕರುಗಳಾದ ಚಂದ್ರಕಾಂತ ಬೆಲ್ಲದ, ಎ.ಬಿ.ದೇಸಾಯಿ, ಅಮೃತ ದೇಸಾಯಿ, ಸೀಮಾ ಮಸೂತಿ ಹಾಗೂ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ವ್ಹಿ.ಎಂ. ಪಾಟೀಲ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಸಂಜೆ ನಗರದ ಹೊಸಯಲ್ಲಾಪೂರ ರುದ್ರಭೂಮಿಯಲ್ಲಿ ವೀರಶೈವ-ಲಿಂಗಾಯತ ಧರ್ಮ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿತು.