ಬಹಿರಂಗವಾಗಿ ಸರ್ಕಾರದ ವಿರುದ್ದ ಸಮರ ಸಾರಿದ ರಾಜ್ಯ ಸರ್ಕಾರಿ ನೌಕರರು.
ಡಿಸಿಎಮ್ ಡಿಕೆ ಶಿವಕುಮಾರ್ ಅವರಿಗೆ ಅರ್ಥವಾಯಿತು ನೌಕರರ ತಾಕತ್ತು!!
ಏಳನೇ ವೇತನ ಆಯೋಗ ಜಾರಿ ಸಂಬಂಧಿಸಿದಂತೆ ಮಹತ್ವದ ಮಾಹಿತಿ…
ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಚಲಾಯಿಸಿದ ಅಂಚೆಮತಗಳು ರಾಜ್ಯ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಅಸಮಾಧಾನಗೊಂಡಿರುವುದಕ್ಕೆ ಸಾಕ್ಷಿಯಾಗಿವೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಬಾರಿ ಕಡಿಮೆ ಮತಗಳು ಬಂದಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.,
ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧವಾಗಿದೆ. ನೌಕರರ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಸರ್ಕಾರಿ ನೌಕರರ ಸಮಸ್ಯೆಗಳ ಅರಿವಿದೆ. ಮಂತ್ರಿಗಳು ಸರ್ಕಾರದ ಸೇವಕರೇ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಪ್ರಾಮಾಣಿಕ ಪ್ರಯತ್ನಿಸೋಣ’ ಎಂದರು.
‘ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ 625ಕ್ಕೆ 625 ಅಂಕ ಗಳಿಸಿದ್ದಾರೆ. ಹಳ್ಳಿ ಮಕ್ಕಳು ಕೂಡ ಸಮರ್ಥರಿದ್ದಾರೆ. ಉತ್ತಮ ಶಿಕ್ಷಕರು ಇದ್ದಾರೆ. ಪ್ರತಿ ಎರಡು ಅಥವಾ ಮೂರು ಪಂಚಾಯ್ತಿಗೆ ಒಂದರಂತೆ ಸಿಎಸ್ಆರ್ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ಮಾಡಲಾಗುವುದು. ಪ್ರತಿಷ್ಠಿತ ಶಾಲೆಗಳು ಇಂತಹ ಶಾಲೆಗಳ ಜವಾಬ್ದಾರಿ ಪಡೆದು, ಶಿಕ್ಷಕರ ಸೇವೆಯನ್ನೂ ಒದಗಿಸಲಿವೆ. ಖಾಲಿ ಇರುವ 50 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭಾಪತಿ ಬಸವರಾಜ ಎಸ್.ಹೊರಟ್ಟಿ, ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ರಾಜ್ಯ ಸರ್ಕಾರಿ ಕೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿದ್ದರು.