ಬೆಂಗಳೂರು : ಕಲಿಕಾ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಈ ಸಂಬಂಧ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಲಿಕಾ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಕ್ಕಳ ಕಲಿಕೆಯನ್ನು ಉತ್ತಮಪಡಿಸುವುದು ಎಲ್ಲಾ ಅನುಷ್ಠಾನಾಧಿಕಾರಿಗಳ ಆದ್ಯ ಕರ್ತವ್ಯವಾಗಿದೆ.
ಸಾಧನಾ ಪರೀಕ್ಷೆ, ವಾರ್ಷಿಕ ಪರೀಕ್ಷೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯು ನಾವು ನೀಡುವ ಶೈಕ್ಷಣಿಕ ಬೆಂಬಲದ ಕೈಗನ್ನಡಿಯಾಗಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಂಬಲವು ನಮ್ಮೆಲ್ಲರ ಕಾರ್ಯ ನಿರ್ವಹಣೆಯನ್ನು ಬಿಂಬಿಸುತ್ತದೆ.
ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ಶಿಕ್ಷಕರನ್ನು ಪ್ರೇರಣೆಗೊಳಿಸುವ ಹಾಗೂ ಅಗತ್ಯ ಬೆಂಬಲವನ್ನು ಶಾಲಾ ಹಂತದಿಂದ ರಾಜ್ಯ ಹಂತದವರೆಗೆ ನೀಡುವ ಕಾರ್ಯವು ಚಾಲ್ತಿಯಲ್ಲಿದೆ. ಬ್ಲಾಕ್, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಹಂತದಲ್ಲಿ ಕ್ರಿಯಾ ಯೋಜನೆಯೊಂದಿಗೆ ಅನುಷ್ಠಾನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತರಗತಿಗಳನ್ನು ನಿರ್ವಹಣೆಯ ಬಗ್ಗೆ ಶಿಕ್ಷಕರಿಗೆ ಎಲ್ಲಾ ಹಂತಗಳಲ್ಲೂ ಬೋಧನಾಶಾಸ್ತ್ರ (Pedagogy) ಸಂಬಂಧಿತ ಅಂಶಗಳಲ್ಲಿ ಜ್ಞಾನವನ್ನು ರೂಪಿಸುವ ತರಬೇತಿ (ಸಚೇತನ ಹಾಗೂ ಶಾಲಾ ಬೆಂಬಲ ವ್ಯವಸ್ಥೆ) ಗಳನ್ನು ರಾಜ್ಯ ಹಂತದಲ್ಲಿ ರೂಪಿಸಿ, ಡಯಟ್ ನ ಬೋಧಕ ಸಿಬ್ಬಂದಿ ಹಾಗೂ ವಿಷಯ ಪರಿವೀಕ್ಷಕರುಗಳಿಗೆ ಈಗಾಗಲೇ ನೀಡಲಾಗಿದೆ. ಅವರುಗಳ ಮೂಲಕ ಜಿಲ್ಲಾ ಹಂತ ಹಾಗೂ ಬ್ಲಾಕ್ ಹಂತದ ಅನುಷ್ಠಾನಾಧಿಕಾರಿಗಳು ಮತ್ತು ಶಿಕ್ಷಕರನ್ನು ತಲುಪುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ.
ಪ್ರತಿ ತಿಂಗಳು ನಡೆಸುವ ಡಯಟ್ ಪ್ರಾಂಶುಪಾಲರುಗಳ ಮಾಸಿಕ ಸಭೆಯಲ್ಲಿಯೂ ಪ್ರಥಮ ಆದ್ಯತೆಯಾಗಿ ಶೈಕ್ಷಣಿಕ ಅಂಶಗಳನ್ನು ಚರ್ಚಿಸಲಾಗುತ್ತಿದೆ. ಈ ವಿಷಯಗಳನ್ನು ಆನ್ಲೈನ್ ಮೂಲಕ ಎಲ್ಲಾ ಡಯಟ್ ಉಪನ್ಯಾಸಕರುಗಳಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ಡಿ.ಎಸ್.ಇ.ಆರ್.ಟಿ.ಯಿಂದ ನಿರಂತರವಾಗಿ ನಡೆಯುತ್ತಿವೆ. ಉತ್ತಮ ಶೈಕ್ಷಣಿಕ ಅಭ್ಯಾಸಗಳನ್ನು ರೂಪಿಸಿ ರೂಢಿಸಿಕೊಂಡಿರುವ ಡಯಟ್ ಗಳಿಂದಲೂ ಮಾಹಿತಿ ವಿನಿಮಯ ಮಾಡಿಕೊಳ್ಳಲು ಪ್ರಾಂಶುಪಾಲರ ಸಭೆಗಳ ಮೂಲಕ ಅವಕಾಶ ಮಾಡಿಕೊಟ್ಟಿರುವುದು ತಮ್ಮೆಲ್ಲರಿಗೂ ತಿಳಿದಿದೆ.
ಮೇಲೆ ಪ್ರಸ್ತಾಪಿಸಿರುವ ಅಂಶಗಳನ್ನು ಆಧರಿಸಿ ಶಾಲಾ ಬೆಂಬಲ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಡಿ.ಎಸ್.ಇ.ಆರ್.ಟಿ. ವತಿಯಿಂದ ರಾಜ್ಯ ಹಂತದಲ್ಲಿ ಪ್ರತಿ ಡಯಟ್ ನ ಇಬ್ಬರು ಅಧಿಕಾರಿಗಳು ಹಾಗೂ ಶಿಕ್ಷಣಾಧಿಕಾರಿಗಳು / ವಿಷಯ ಪರಿವೀಕ್ಷಕರಿಗೆ “ಶಾಲಾಧಾರಿತ ತರಬೇತಿ, ಶಾಲಾ ಭೇಟಿ ಮತ್ತು ಬೆಂಬಲ ವ್ಯವಸ್ಥೆ” ಯ ಬಗ್ಗೆ 03 ದಿನಗಳ ತರಬೇತಿಯನ್ನು ದಿನಾಂಕ:22/05/2024 ರಿಂದ 24/05/2024 ರ ವರೆಗೆ ಆಯೋಜಿಸಲಾಗಿರುತ್ತದೆ.
ಈ ತರಬೇತಿಯ ಮೂಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಇವರುಗಳು ಜಂಟಿಯಾಗಿ 2024-25ನೇ ಶೈಕ್ಷಣಿಕ ಸಾಲಿಗೆ ತಮ್ಮ ಜಿಲ್ಲೆಯ “ಶಾಲಾಧಾರಿತ ತರಬೇತಿ, ಶಾಲಾ ಭೇಟಿ ಮತ್ತು ಬೆಂಬಲ ವ್ಯವಸ್ಥೆ” ಯ ಕುರಿತು ಶೈಕ್ಷಣಿಕ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಾಗಿದೆ.