ನ್ಯಾಯಾಲಯದಿಂದ ಮಹತ್ವದ ತೀರ್ಪು…ಗಂಡ ಲಂಚ ಪಡೆದು ಸಿಕ್ಕಿಬಿದ್ದರೆ ಶಿಕ್ಷೆ ಎದುರಿಸಲು ಪತ್ನಿ ಕೂಡ ರೆಡಿಯಾಗಿರಬೇಕು!!
ಹೈಕೋರ್ಟ್ ಮಹತ್ವದ ತೀರ್ಪು!!
ಸರ್ಕಾರಿ ನೌಕರರು ಲಂಚ ಸ್ವಿಕರಿಸುವ ಮುನ್ನ ಈ ವರದಿ ನೋಡಿ…
ದುರೈ: ಮಾಜಿ ಸರ್ಕಾರಿ ನೌಕರನ ವಿರುದ್ಧ ದಾಖಲಾಗಿರುವ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಪತ್ನಿಗೆ ವಿಧಿಸಿರುವ ಶಿಕ್ಷೆಯನ್ನು ಕೈಬಿಡುವಂತೆ ಕೋರಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದು, ಲಂಚ ಪಡೆಯುವ ಸರ್ಕಾರಿ ನೌಕರ ಮಾತ್ರವಲ್ಲ ಅದಕ್ಕೆ ಕುಮ್ಮಕ್ಕು ನೀಡುವ ಪತ್ನಿಯು ಕೂಡ ಶಿಕ್ಷೆಗೆ ಅರ್ಹಳು ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಕೆ. ರಾಮಕೃಷ್ಣನ್, ಭ್ರಷ್ಟಾಚಾರ ಮನೆಯಿಂದಲೇ ಆರಂಭವಾಗುತ್ತದೆ ಮತ್ತು ಮನೆಯಲ್ಲಿರುವವರು ಭ್ರಷ್ಟಾಚಾರದಲ್ಲಿ ತೊಡಗಿದರೆ ಅದಕ್ಕೆ ಕೊನೆಯೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಂಚ ಪಡೆಯದಂತೆ ಗಂಡನನ್ನು ಉತ್ತೇಜಿಸುವುದು ಸರ್ಕಾರಿ ನೌಕರನ ಹೆಂಡತಿಯ ಕರ್ತವ್ಯ. ಜೀವನದ ಮೂಲ ತತ್ವವೆಂದರೆ ಲಂಚದಿಂದ ದೂರವಿರುವುದು. ಯಾರಾದರೂ ಲಂಚ ಸ್ವೀಕರಿಸಿದರೆ, ಅವನು ಮತ್ತು ಅವನ ಕುಟುಂಬವು ಹಾಳಾಗುತ್ತದೆ. ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಎಂಜಾಯ್ ಮಾಡಿದರೆ ಮುಂದೊಂದು ದಿನ ಕರ್ಮದ ಫಲ ಅನುಭವಿಸಬೇಕಾಗುತ್ತದೆ. ಕುಟುಂಬವೇ ಸರ್ವನಾಶವಾಗುತ್ತದೆ. ಈ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಭ್ರಷ್ಟಾಚಾರ ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಮನೆಯಲ್ಲಿರುವವರು ಭ್ರಷ್ಟಾಚಾರದ ಪರವಾಗಿದ್ದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಅಕ್ರಮವಾಗಿ ಸಂಪಾದಿಸಿದ ಹಣದಿಂದಾಗಿ ಮನೆಯ ಯಜಮಾನಿಯ ಜೀವನವು ಸುಖದ ಸುಪ್ಪತ್ತಿಗೆಯಲ್ಲಿರುತ್ತದೆ. ಆದ್ದರಿಂದ ಅವಳು ಕೂಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?
2017ರಲ್ಲಿ ಶಕ್ತಿವೇಲ್ ಹೆಸರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಆದರೆ ವಿಚಾರಣೆ ವೇಳೆ ಶಕ್ತಿವೇಲ್ ಸಾವಿಗೀಡಾದರು. ನಂತರ ಪೊಲೀಸರು ಆತನ ಪತ್ನಿ ದೇವನಾಯಕಿಯನ್ನು ಸಹ ಆರೋಪಿ ಎಂದು ಆರೋಪಪಟ್ಟಿ ಸಲ್ಲಿಸಿದ್ದರು. ತಿರುಚಿರಾಪಳ್ಳಿಯ ವಿಶೇಷ ನ್ಯಾಯಾಲಯವು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ, ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ, ಹೈಕೋರ್ಟ್ನಲ್ಲಿ ದೇವನಾಯಕಿಗೆ ಹಿನ್ನೆಡೆಯಾಗಿದೆ.
ಅಂದಹಾಗೆ 1992ರ ಜನವರಿಯಿಂದ 1996ರ ಡಿಸೆಂಬರ್ ಅವಧಿಯಲ್ಲಿ ಶಕ್ತಿವೇಲ್ ಅಕ್ರಮವಾಗಿ 6.7 ಲಕ್ಷ ರೂ. ಪಡೆದಿದ್ದ. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಶಕ್ತಿವೇಲ್ ಮೃತಪಟ್ಟ ಕಾರಣ, ಸಹ ಆರೋಪಿ ದೇವನಾಯಕಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1000 ರೂ. ದಂಡವನ್ನು ವಿಧಿಸಿದೆ.