ಶಾಲೆಗೆ ಬಂದ ವಿದ್ಯಾರ್ಥಿಗಳ ಪಾದ ಪೂಜೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕ ವೃಂದ…
ಚಕ್ಕಡಿ ಏರಿ ಶಾಲೆಗೆ ಬಂದ ವಿದ್ಯಾರ್ಥಿಗಳು..
ರಾಮನಗರ (ಜೂ.1): ಸರ್ಕಾರಿ ಶಾಲೆಗೆ ಪ್ರವೇಶ ಪಡೆದು ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗೆ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿ ಪಾದಪೂಜೆ ನೆರವೇರಿಸಿ ಶಾಲೆಗೆ ಬರಮಾಡಿಕೊಂಡರು.
ರಾಜ್ಯಾದ್ಯಂತ 2024-25ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗುತ್ತಿವೆ.,
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಆದರೆ, ಸರ್ಕಾರಿ ಶಾಲೆಗೆ ದಾಖಲಾತಿ ಪಡೆದು ಮೊದಲ ದಿನ ಶಾಲೆಗೆ ಬಂದ ಮಗುವಿಗೆ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾದಪೂಜೆ ಮಾಡಿ ಸ್ವಾಗತ ಕೋರಿದ್ದಾರೆ. ಇನ್ನು ಇಡೀ ಗ್ರಾಮದಲ್ಲಿಯೇ ಶಾಲೆ ಪ್ರಾರಂಭೋತ್ಸವವನ್ನು ಹಬ್ಬವನ್ನಾಗಿ ಆಚರಣೆ ಮಾಡಲಾಗಿದೆ.
ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿ ಸರ್ಕಾರಿ ಶಾಲೆಗೆ ಆಗಮಿಸಿದ ಮಗುವಿಗೆ ಪಾದಪೂಜೆ ಮಾಡಿ ಸ್ವಾಗತ ಕೋರಿದ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿಯ ಬೆತ್ತಂಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸರ್ಕಾರಿ ಶಾಲೆ ಪ್ರರಂಭೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ಮಕ್ಕಳ ದಾಖಲಾತಿಯನ್ನು ಹೆಚ್ಚಳ ಮಾಡಲು ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ. ಬೆತ್ತಂಗೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಬ್ಬ ವಾತಾವರಣ ನಿರ್ಮಾಣವಾಗಿತ್ತು.
ಸರ್ಕಾರಿ ಶಾಲೆಗೆ ದಾಖಲಾತಿ ಪಡೆದುಕೊಂಡ ಮಕ್ಕಳನ್ನು ಸಿಂಗಾರಗೊಂಡ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಗ್ರಾಮದ ಮಹಿಳೆಯರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ತಲೆಯ ಮೇಲೆ ಕುಂಭವನ್ನು ಹೊತ್ತು ಕೆಲವರು ಕಳಶವನ್ನು ಹಿಡಿದುಕೊಂಡು ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ತಳಿರು ತೋರಣಗಳಿಂದ ಸಿಂಗರಿಸಿದ್ದ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸೋಮಲಿಂಗಯ್ಯ ಹಾಗೂ ಶಾಲಾ ಶಿಕ್ಚಕರು ಸೇರಿ ಪಾದ ಪೂಜೆ ನೆರೆವೆರಿಸಿದರು..