ಮೇ-31 ರಂದು ಕೆ.ಇ.ಎಸ್. ಅಧಿಕಾರಿ ಪಾರ್ವತಿ ವಸ್ತ್ರದ ನಿವೃತ್ತಿ : ಬೀಳ್ಕೊಡುಗೆ
ಧಾರವಾಡ: ನಗರದ ಡಯಟ್ ಆವರಣದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ, ಕೆ.ಇ.ಎಸ್. ಅಧಿಕಾರಿ ಪಾರ್ವತಿ ವಸ್ತ್ರದ ತಮ್ಮ 34 ವರ್ಷಗಳ ಸರಕಾರಿ ಸೇವೆಯಿಂದ ಮೇ-31 ರಂದು ನಿವೃತ್ತಿ ಹೊಂದಲಿದ್ದಾರೆ.
ಆರಂಭದಲ್ಲಿ 1990ರ ಫೆಬ್ರುವರಿಯಿಂದ 9 ವರ್ಷಗಳ ಕಾಲ ಕಲಬುರ್ಗಿ ಜಿಲ್ಲೆ ಶಹಪೂರ, ಕಲಬುರ್ಗಿ ನಗರ ಹಾಗೂ ಉ.ಕ. ಜಿಲ್ಲೆ ಹಳಿಯಾಳದಲ್ಲಿ ಸರಕಾರಿ ಪ.ಪೂ. ಕಾಲೇಜು ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
*ಕೆ.ಇ.ಎಸ್. ತೇರ್ಗಡೆ :* 1999ರಲ್ಲಿ ಕೆ.ಇ.ಎಸ್. ತೇರ್ಗಡೆ ಹೊಂದಿ ಪತ್ರಾಂಕಿತ ಅಧಿಕಾರಿಯಾಗಿ ಉ.ಕ. ಜಿಲ್ಲೆ ಹಳಿಯಾಳದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಹುದ್ದೆಗೆ ನೇಮಕಗೊಂಡರು. ನಂತರ ಧಾರವಾಡ ಡಯಟ್ ಉಪನ್ಯಾಸಕಿಯಾಗಿ, 2006 ರಿಂದ 7 ವರ್ಷಗಳ ಕಾಲ ನಗರದ ಪ್ರತಿಷ್ಠಿತ ಹೆಣ್ಣು ಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜು (ಹೆಟ್ರೇಕಾ) ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದಾರೆ. ‘ಹೆಟ್ರೇಕಾ’ದ ಮೂಲಸೌಕರ್ಯ ಅಭಿವೃದ್ಧಿಯೂ ಸೇರಿದಂತೆ ಸರ್ವಾಂಗೀಣ ವಿಕಾಸಕ್ಕೆ ನಿರಂತರ ಶ್ರಮಿಸಿದ್ದಾರೆ. 2013ರಿಂದ ರಾಜ್ಯ ಮಟ್ಟದ ತರಬೇತಿ ಸಂಸ್ಥೆ ಧಾರವಾಡದ ‘ಸಿಸ್ಲೆಪ್’ದಲ್ಲಿ 5 ವರ್ಷ ಉಪನ್ಯಾಸಕಿಯಾಗಿ ಸೇವೆಸಲ್ಲಿಸಿದರು.
2018ರಲ್ಲಿ ಪದೋನ್ನತಿ ಹೊಂದಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಬಿ.ಇ.ಓ. ಹುದ್ದೆಗೆ ನೇಮಕಗೊಂಡು, ಅಲ್ಲಿದ್ದ ಎರಡೂವರೆ ವರ್ಷಗಳಲ್ಲಿ ಬೈಲಹೊಂಗಲ ತಾಲೂಕಿನ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಶಿಕ್ಷಕರ ಬಾಕಿ ಕಡತಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡಿ ಶ್ರಮಿಸಿದ್ದಾರೆ. ನಂತರ ಮತ್ತೆ ಇಲ್ಲಿಯ ಡಯಟ್ ಹಿರಿಯ ಉಪನ್ಯಾಸಕ ಹುದ್ದೆಯಲ್ಲಿ ಸೇವೆಸಲ್ಲಿಸಿದ್ದ ಇವರು, 2021ರ ಆಗಷ್ಟದಿಂದ ಪ್ರಸ್ತುತ ನಿವೃತ್ತಿಯವರೆಗೆ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿಯಾಗಿ ಸೇವೆಸಲ್ಲಿಸಿದ್ದಾರೆ.
ಬೀಳ್ಕೊಡುಗೆಯ ಅಭಿನಂದನೆ :ಇಲಾಖೆಯ ಮತ್ತು ಕಚೇರಿ ಸಹೋದ್ಯೋಗಿಗಳು ನಿವೃತ್ತಿ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಬೀಳ್ಕೊಡುಗೆಯ ಅಭಿನಂದನಾ ಸಮಾರಂಭ ಶುಕ್ರವಾರ(ಮೇ-31) ಸಂಜೆ 4 ಗಂಟೆಗೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಜರುಗಲಿದೆ.