ಹಳೆ ಪಿಂಚಣಿ ಯೋಜನೆ ಹಾಗೂ 7ನೇ ವೇತನ ಆಯೋಗದ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಹಿರಿಯೂರು:
ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾ ಭವನದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವ ಬಿಜೆಪಿಯವರು ಯಾವುದೇ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ. ಮಕ್ಕಳಿಗೆ ಜ್ಞಾನದ ದಾಸೋಹ ಉಣಬಡಿಸುವ ಶಿಕ್ಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಒಂದು ಮತವೂ ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಬೀಳದಂತೆ ಎಚ್ಚರ ವಹಿಸಬೇಕು. ಈ ಬಾರಿ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ’ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ‘ಹಿಂದಿನ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಶಿಕ್ಷಕರಿಗೆ ಸ್ಪಂದಿಸಲಿಲ್ಲ. ಇಲ್ಲಿಯವರೆಗೆ ಶಿಕ್ಷಕ ಸಮೂಹದ ಯಾವ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ ಎಂಬುದನ್ನು ಅವರು ಹೇಳಬೇಕು’ ಎಂದು ಪ್ರಶ್ನಿಸಿದರು.