ಸ್ಯಾಂಡಲ್ವುಡ್ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಇವರು ಬಳಲುತ್ತಿದ್ದರು. ನಟ ದ್ವಾರಕೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅವರ ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ದ್ವಾರಕೀಶ್ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇವರು ಕನ್ನಡದ ಪ್ರತಿಭಾನ್ವಿತ ನಟರಾಗಿ ಹೆಸರು ಗಳಿಸಿದ್ದರು. ನಿರ್ದೇಶನದಲ್ಲೂ ಸೈ ಎಣಿಸಿಕೊಂಡಿದ್ದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
“ರಾತ್ರಿ ಹೊಟ್ಟೆ ನೋವು ಅನ್ತಾ ಇದ್ರು. ಅವರಿಗೆ ಲೂಸ್ ಮೋಷನ್ ಆಗಿತ್ತು. ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದಿದ್ದರು. ಕಾಫಿ ಕುಡಿದು ಸ್ವಲ್ಪ ಎರಡು ಗಂಟೆ ನಿದ್ದೆ ಮಾಡ್ತಿನಿ ಅಂತ ನಿದ್ದೆ ಮಾಡಿದ್ದರು. ಬಳಿಕ ಎದ್ದೇಳಲಿಲ್ಲ ಬಳಿಕ ಹಾರ್ಟ್ ಅಟ್ಯಾಕ್ ಆಗಿತ್ತು” ಎಂದು ದ್ವಾರಕೀಶ್ ಪುತ್ರ ಯೋಗೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ನಟ ದ್ವಾರಕೀಶ್ ಬಗ್ಗೆ
ಕನ್ನಡ ನಟ ದ್ವಾರಕೀಶ್ ಅವರು 1942ರ ಆಗಸ್ಟ್ 19ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬಾನುಮಯ್ಯ ಸ್ಕೂಲ್ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್ ಆರಂಭಿಸಿದರು. ಭಾರತ್ ಆಟೋ ಸ್ಪೇರ್ ಹೆಸರಿನ ಶಾಪ್ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.
1966ರಲ್ಲಿ ತುಂಗಾ ಬ್ಯಾನರ್ಸ್ನಡಿ ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. 1969ರಲ್ಲಿ ಮೇಯರ್ ಮುತ್ತಣ್ಣ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾದರು. ಇದು ಡಾ. ರಾಜ್ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸೂಪರ್ಹಿಟ್ ಸಿನಿಮಾ. ಮೇಯರ್ ಮುತ್ತಣ್ಣದ ಬಳಿಕ ಸ್ಯಾಂಡಲ್ವುಡ್ಗೆ ಹಲವು ಪ್ರಮುಖ ಸಿನಿಮಾಗಳನ್ನು ನೀಡಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಆಗಿವೆ.
ನಿರ್ದೇಶಕರಾಗಿ ದ್ವಾರಕೀಶ್
1985ರಲ್ಲಿ ದ್ವಾರಕೀಶ್ ಸಿನಿಮಾ ನಿರ್ದೇಶನ ಆರಂಭಿಸಿದರು. ನೀ ಬರೆದ ಕಾದಂಬರಿ ಇವರು ನಿರ್ದೇಶನದ ಮೊದಲ ಸಿನಿಮಾ. ಇತರೆ ನಿರ್ಮಾಪಕರ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಲು ಆರಂಭಿಸಿದರು. ಡ್ಯಾನ್ಸ್ ರಾಜಾ ಡ್ಯಾನ್ಸ್, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ನೀಡಿದ್ದಾರೆ. ಇವರ ಕೆಲವೊಂದು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ವಿಫಲವಾದವರು. ಇದು ಆರ್ಥಿಕವಾಗಿ ಇವರಿಗೆ ಹೊಡೆತವನ್ನು ನೀಡಿತ್ತು. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ಕಲಾವಿದರನ್ನು ನೀಡಿದ್ದರು. ಸಾಕಷ್ಟು ಹೊಸ ಡೈರೆಕ್ಟರ್ಗಳಿಗೆ ಅವಕಾಶ ನೀಡಿದ್ದರು. ಟೆಕ್ನಿಷಿಯನ್ಗಳಿಗೆ ಅವಕಾಶ ನೀಡಿದ್ದರು. ಚೌಕಾ ಇವರ ಇತ್ತೀಚಿನ ಮತ್ತು ಕೊನೆಯ ಸಿನಿಮಾ. 2004ರಲ್ಲಿ ಆಪ್ತಮಿತ್ರ ಸಿನಿಮಾ ನಿರ್ಮಾಣ ಮಾಡಿದ್ದರು. ಇದು ಬಾಕ್ಸ್ ಆಫೀಸ್ನಲ್ಲಿ ಸೂಪರ್ಹಿಟ್ ಆಗಿತ್ತು.