ನನ್ನನ್ನು ಚುನಾವಣಾ ಕಣದಿಂದ ಹಿಂದೆ ಸರಿಸುವ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಏಪ್ರಿಲ್ 18 ರಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದೇನೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿ:
ಗುರುವಾರ ಇಲ್ಲಿನ ನೆಹರು ಮೈದಾನದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೂ ಮುಂಚೆ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ, ಸರಿಸುತ್ತಾರೆ ಎಂಬುದು ಕೇವಲ ಊಹಾಪೋಹಗಳಷ್ಟೇ
ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ಎಲ್ಲಾ ಪಕ್ಷಗಳು ಒಂದೇ. ಎಲ್ಲಾ ಪಕ್ಷದ ಪ್ರಮುಖರು ನನ್ನೊಂದಿಗೆ ಮಾತನಾಡಿದ್ದಾರೆ. ಅವೆಲ್ಲವನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ಇದನ್ನು ಬಹಿರಂಗಪಡಿಸುತ್ತೇನೆ ಎಂದರು.
ಯಾವುದಾದರೂ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಚಿಂತನೆ ಇಲ್ಲ. ಸದ್ಯಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಪಕ್ಷದಿಂದ ನಿಲ್ಲಬೇಕು ಎಂದರೆ ಅದನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಆದರೆ ಚುನಾವಣಾ ಅಖಾಡದಿಂದ ಹಿಂದೆ ಸರಿಯುವ ಮಾತಿಲ್ಲ. ಕಾಂಗ್ರೆಸ್ ಪಕ್ಷದವರು ಏನು ಚರ್ಚೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.