ಗ್ರಾಮೀಣ ಭಾಗಗಳಲ್ಲಿ ಸಡಗರ ಮನೆಮಾಡಿದ ಯುಗಾದಿ ಸಂಭ್ರಮ
ಭಾರತೀಯರು ಸಾಂಪ್ರದಾಯವಾದಿಗಳು. ಅದರಲ್ಲೂ
ಗ್ರಾಮೀಣ ಭಾಗದ ಜನರು ಪ್ರತಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿ ಆಚರಣೆಯ ಹಿಂದೆ ಪೌರಾಣಿಕ ಕಥೆಗಳು, ಪುರಾಣಗಳು, ಐತಿಹ್ಯಗಳು ಒಳಗೊಂಡಿರುತ್ತವೆ. ಅವೆಲ್ಲವುಗಳು ನಮ್ಮ ಹುಟ್ಟಿಗೆ, ಹುಟ್ಟಿನ ಹಿಂದಿನ ಕಥೆಗೆ ಅಥವಾ ನಮ್ಮ ನಡುವಿನ ಸಾಂಸ್ಕೃತಿಕ ನಾಯಕನ ಚಹರೆಗೆ ಹಿಡಿದ ಕೈಗನ್ನಡಿಗಳಾಗಿರುತ್ತವೆ. ಪ್ರತಿ ಹಬ್ಬಗಳನ್ನು ಆಚರಿಸುವ ಸಂಧರ್ಭದಲ್ಲಿ ತಮ್ಮ ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವವನ್ನು ಇಂದಿಗೂ ಭಜನೆ, ಪುರಾಣ, ಹಾಡುಗಳು, ಕಥೆಗಳ ಮೂಲಕ ಸಾರುವ ಮತ್ತು ಹೇಳುವ ಕಾಯಕವನ್ನು ನೋಡಬಹುದು. ಇದೆಲ್ಲವೂ ನಮ್ಮ ಹಿಂದಿನಿಂದ ನಡೆದು ಬಂದ ಸಾಂಪ್ರದಾಯವನ್ನು ಮೆಲುಕು ಹಾಕುವ ಉದ್ದೇಶದಿಂದ ಮತ್ತು ಮುಂದಿನದವರು ಚಾಚು ತಪ್ಪದೆ ಆಚರಿಸಲಿ ಎಂಬ ಆಶಯದಿಂದ. ಇಂದಿಗೂ ಬಹುತೇಕ ಹಳ್ಳಿಗಳಿಂದ ದುಡಿಮೆಗಾಗಿ ಊರಿಂದ ಪರ ಊರಿಗೆ ತೆರಳಿದ್ದರು ಸಹ ಹಬ್ಬದ ಸಮಯಕ್ಕೆ ಅದೆಂತದ್ದೇ ಕೆಲಸಗಳಿದ್ದರು ಬಿಟ್ಟು ಮನೆಗಳಲ್ಲಿ ಒಂದಾಗುವ ಮನಗಳನ್ನು ಇಂದಿಗೂ ಹಳ್ಳಿಗರ ಮನೆಗಳಲ್ಲಿ ಕಾಣಬಹುದು. ಅಂತಹ ಹಬ್ಬಗಳಲ್ಲಿ ಯುಗಾದಿ ಹಬ್ಬವೂ ಒಂದಾಗಿದೆ.
ಯುಗಾದಿ ಕರ್ನಾಟಕದಾದ್ಯಂತ ಕನ್ನಡಿಗರು ಆಚರಿಸುವ ಹಬ್ಬವಾಗಿದೆ. ಯುಗ ಎಂದರೆ ವರುಷ ಆದಿ ಎಂದರೆ ಆರಂಭ ಹೊಸ ವರುಷದ ಆರಂಭ ಎಂದರ್ಥ. ಹಿಂದೂಗಳಿಗೆ ಇದು ಪವಿತ್ರ ಹಬ್ಬಗಳಲ್ಲಿ ಒಂದು. ಹಿಂದೂ ಪಂಚಾಗದ ಪ್ರಕಾರ ಹೊಸವರ್ಷದ ಆರಂಭ ಎಂದು ಹೇಳಬಹುದು.
ಯುಗಾದಿ ಆಚರಣೆಯ ಹಿನ್ನೆಲೆ
ಪ್ರತಿ ಹಬ್ಬ ಆಚರಣೆಗಳು ಅದರದ್ದೇ ಆದ ಹಿನ್ನೆಲೆಯನ್ನು ಹೊಂದಿರುತ್ತದೆ. ಅದರಂತೆ ಹಿಂದೂ ಪುರಾಣ ಹೇಳುವ ಪ್ರಕಾರ ಬ್ರಹ್ಮ ದೇವರು ಅದೆಷ್ಟೋ ಯುಗಗಳ ಹಿಂದೆ ಈ ದಿನದಂದು ಜಗತ್ತನ್ನು ಸೃಷ್ಟಿಸಿದ್ದನಂತೆ ಮತ್ತು ಆ ಹಿನ್ನೆಲೆಯಲ್ಲಿ ಜಗತ್ತು ಸೃಷ್ಟಿಯಾದ ದಿನವೇ ಹೊಸ ವರ್ಷ ಪ್ರಾರಂಭವಾಯ್ತು ಎಂದು ಯುಗಾದಿಯನ್ನು ಈ ದಿನದಂದು ಆಚರಿಸಲಾಗುತ್ತದೆ. ಯುಗಾದಿಯು ತನ್ನೊಂದಿಗೆ ಹೊಸ ಯುಗವನ್ನು ತರುತ್ತದೆ, ಹೊಸ ಚಿಗುರು ಮತ್ತು ವಸಂತ ಋತುವಿನ ಆರಂಭವನ್ನು ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಭಾರತದಾದ್ಯಂತ ಈ ಹಬ್ಬವನ್ನು ಆಚರಿಸಿದರು ಮುಖ್ಯವಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರು ಈ ದಿನವನ್ನು ವಿಶೇಷವಾಗಿ ಯುಗಾದಿ ಎಂದು ಆಚರಿಸುತ್ತಾರೆ ಮತ್ತು ಮಹಾರಾಷ್ಟ್ರ ಮತ್ತು ಗೋವಾ ಗುಡಿ ಪಾಡ್ವಾದೊಂದಿಗೆ ದಿನವನ್ನು ಆಚರಿಸುತ್ತಾರೆ . ಪಶ್ಚಿಮ ಬಂಗಾಳದಲ್ಲಿ ಪೊಯಿಲಾ ಬೊಯಿಶಾಕ್ ಎನ್ನುವ ಹೆಸರಿನಿಂದ ಈ ದಿನ ಆಚರಿಸುತ್ತಾರೆ. ಪ್ರಾದೇಶಿಕವಾಗಿ ಹೆಸರಿನ ಜೊತೆಗೆ ಹಬ್ಬದ ವೈಶಿಷ್ಟ್ಯ, ಆಚರಣೆಗಳು ಭಿನ್ನವಾಗಿಯೂ ಕೂಡಿರುತ್ತವೆ. ಪ್ರಾದೇಶಿಕವಾಗಿ ಹಬ್ಬಕ್ಕಿರುವ ಹೆಸರು ಭಿನ್ನವಾಗಿದ್ದರು ಆಯಾ ಪ್ರಾದೇಶಿಕ ಜನರಿಗೆ ಅದು ವರ್ಷದ ಆರಂಭವೇ ಆಗಿದ್ದು ಯುಗಾದಿ ಅಂದರೆ ಜಗದ ಆದಿ, ಆರಂಭ ಎಂದೇ ತಿಳಿಯಬೇಕಿದೆ. ಯುಗಾದಿ ಹಬ್ಬವು ಹೊಸ ಹರುಷವನ್ನು ತರುವ ಹಿನ್ನೆಲೆ ಎಂದರೆ ಜಗತ್ತು ಸೃಷ್ಟಿಯಾದ ದಿನವೆಂದು ತಿಳಿದು ಆಚರಿಸುತ್ತದೆ.
ಹಬ್ಬದ ಆಚರಣೆ
ಹಬ್ಬವು ಇನ್ನೂ ಒಂದು ವಾರ ಎನ್ನುವ ಮೊದಲೇ ಜನರು ತಮ್ಮ ಮನೆಗಳನ್ನು ಶುದ್ದೀಕರಿಸುತ್ತಾರೆ. ಹಬ್ಬಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಕರೀಧಿಸಿ ಹಬ್ಬದ ತಯಾರಿ ನಡೆಸುತ್ತಾರೆ. ಹಬ್ಬದ ಆಚರಣೆಯ ಮುನ್ನ ಬರುವ ಯುಗಾದಿ ಅಮಾವಾಸ್ಯೆ ಎಂದು ಕರೆಯುವ ಅಮಾವಾಸ್ಯೆಯ ದಿನದಂದು ಯಾರು ಎಲ್ಲಿಯೂ ಮನೆಯಿಂದ ಆಚೆ ಹೋಗಬಾರದು ಆ ದಿನ ದೇವರ ಜಪತಪ ಮಾಡಬೇಕು ಇದರಿಂದ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಅದರಲ್ಲೂ ಮನೆಗಳಲ್ಲಿ ಗರ್ಭಿಣಿ ಹೆಣ್ಣುಮಗಳಿದ್ದರಂತೂ ಗ್ರಹಣದ ಪರಿಣಾಮ ಮಗುವಿನ ಮೇಲೆ ಬೀರಬಹುದೆಂದು ಆ ಹೆಣ್ಣುಮಗಳನ್ನು ಆರೈಕೆ ಮಾಡುವ ವಿಧಾನವೂ ಇದೆ. ಏಕೆಂದರೆ ವರ್ಷದ ಆರಂಭದಲ್ಲಿ ಬರುವ ಅಮಾವಾಸ್ಯೆಯ ದಿನ ಗ್ರಹಣವು ಸಾಕಷ್ಟು ಕೆಟ್ಟದಾಗಿರುತ್ತದೆ ಹಾಗಾಗಿ ಅದರ ಪ್ರಖರವು ಯಾರ ಮೇಲು ಬೀರಬಾರದೆಂದು ದೇವರ ಪೂಜೆ, ಪುನಸ್ಕಾರಗಳನ್ನು ಆ ದಿನ ಮಾಡುವುದನ್ನು ಇಂದಿಗೂ ಕಾಣಬಹುದು. ಅದರಲ್ಲೂ ಹಳ್ಳಿಗಳಲ್ಲಿ ಒಳಿತು ಕೆಡುಕುಗಳ ಶಕುನ ನೋಡುವ ಕಾಲದ ಪರಿ ಇಂದಿಗೂ ಕಡಿಮೆಯಾಗಿಲ್ಲ, ಅದನ್ನು ಮೂಢನಂಬಿಕೆ ಎಂತಲೂ ಹೇಳಬಾರದು ಏಕೆಂದರೆ ಅದು ಅವರ ನಂಬಿಕೆಯಾಗಿದೆ. ಇಂತಹ ನಂಬಿಕೆಗಳು, ದೇವರು, ಪೂಜೆ, ಪುನಸ್ಕಾರಗಳು ಮತ್ತು ಕಲ್ಪನೆಗಳು ಸಹ ಆಗಾಗ ಜನರನ್ನು ಮಾನಸಿಕವಾಗಿ ಬದುಕುವಂತೆ ಪ್ರೇರೇಪಿಸುತ್ತವೆ ಎನಿಸುತ್ತದೆ. ನಂತರ ಊರ ಬುಡ್ಡೆಕಲ್ಲಿಗೆ ಚರಗ(ಮುಸುರೆನೀರು) ಹಾಕಿ ಊರ ಒಳಗೆ ಯಾವುದೇ ಕಾಯಿಲೆ, ರೋಗ-ರುಜನಿ, ಕೆಟ್ಟ ದೃಷ್ಟಿ ಬೀಳದಿರಲೆಂದು ಜನರು ಊರಬುಡ್ಡೆ ಕಲ್ಲಿಗೆ ಭಕ್ತಿಯಿಂದ ಬೇಡಿಕೊಂಡು ಬರುತ್ತಾರೆ. ಹೀಗೆ ಯುಗಾದಿ ಅಮಾವಾಸ್ಯೆಯ ದಿನದಿಂದಲೇ ಹಬ್ಬ ಶುರುವಾಗುತ್ತದೆ ಎಂಬ ನಂಬಿಕೆ ಜನರದು.
ಬೇವು-ಬೆಲ್ಲ
ಮರುದಿನ ಅಂದರೆ ಬೆಳಗ್ಗೆಯೇ ಮನೆಯ ಸದಸ್ಯರೆಲ್ಲ ಹರಿಶಿನ ಎಣ್ಣೆ ನೆತ್ತಿಗಚ್ಚಿ ಮೈಕೈಯೆಲ್ಲಾ ಎಣ್ಣೆ ಹಚ್ಚಿಕೊಂಡು ಮಾಡಿಯಿಂದ ಸ್ನಾನಾದಿಗಳನ್ನು ಮುಗಿಸಿಕೊಂಡು ಮನೆಯ ಮಂದಿಯೆಲ್ಲಾ ಒಟ್ಟುಗೂಡಿ ಕೆಲಸಗಳನ್ನು ಹಂಚಿಕೊಳ್ಳುತ್ತಾರೆ. ಪುರುಷರು ಬೇವಿನ ಸೊಪ್ಪು ಮತ್ತು ಮಾವಿನ ಎಲೆಯನ್ನು ತರಲು ಹೋರಾಡುತ್ತಾರೆ. ಮಹಿಳೆಯರೆಲ್ಲರೂ ಒಟ್ಟುಗೂಡಿ ಬೇವು-ಬೆಲ್ಲವನ್ನು ತಯಾರಿಸಿ ಸಿಹಿ ಖಾದ್ಯಗಳನ್ನು ಮತ್ತು ಅಡುಗೆಯನ್ನು ತಯಾರಿಸುತ್ತಾರೆ. ಮನೆಯ ಪುರುಷರು ತಳಿರು ತೋರಣಗಳಿಂದ ಮನೆಯನ್ನೆಲ್ಲ ಜಗಮಗಿಸುವಂತೆ ಶೃಂಗರಿಸುತ್ತಾರೆ. ನಂತರ ಪೂಜೆ ಮಾಡಿ, ದೇವಸ್ಥಾನಗಳಿಗೆಲ್ಲ ಹೋಗಿ ಬಂದು ದೇವರಿಗೆ ನೈವೇದ್ಯ ಮಾಡಿ ತಮ್ಮ ಮನೆಯ ಸ್ವಾಮಿ ಅಥವಾ ಜಂಗಮರು, ತಾವು ನೇಮಿಸಿಕೊಂಡು ಮನೆಗೆ ಕರೆಸುವ ಸ್ವಾಮಿಗಳನ್ನು ಆಹ್ವಾನಿಸುತ್ತಾರೆ. ಮನೆಯ ಸದಸ್ಯರೆಲ್ಲರೂ ಪೂಜೆ ಮಾಡಿ ನಂತರ ತಮ್ಮ ಮನೆಯ ಸ್ವಾಮಿಗೆ ಎಡೆ(ನೈವೇದ್ಯ, ಪ್ರಸಾದ)ಉಣಬಡಿಸಿ ಶರಣು ಶರಣಾರ್ಥಿ ಮಾಲಿಂಗೈಕ್ಯೆ ತೃಪ್ತಿಯಾಗಲಿ ಎಂದು ಆರತಿ ಮಾಡಿ ಶರಣಾರ್ಥಿ ಹೇಳುತ್ತಾರೆ. ತದ ನಂತರ ಎಲ್ಲರೂ ಸ್ವಾಮಿಗಳ ಪಾದಕ್ಕೆ ನಮಸ್ಕರಿಸಿ ಸ್ವಾಮಿಗಳನ್ನು ಕಳುಹಿಸಿಕೊಡುತ್ತಾರೆ. ಮನೆಯ ಸದಸ್ಯರೆಲ್ಲರೂ ಕುಳಿತು ಊಟ ಮಾಡುತ್ತಾರೆ. ನೀರು ಬೇವು ಮಾಡಿ ಎಲ್ಲರೂ ಹಂಚಿ ಸೇವಿಸುತ್ತಾರೆ. ಸಿಹಿಬೇವಿನ ಒಳಗೆ ಒಂದೆರಡು ಬೇವಿನ ಎಲೆಗಳನ್ನು ಹಾಕಿ ಜೀವನದಲ್ಲಿ ಬರುವ ಸಿಹಿ ಮತ್ತು ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವ ಮತ್ತು ಏನೇ ಬಂದರೂ ಅದನ್ನು ಸರಿದೂಗಿಕೊಂಡು ಹೋಗುವ ಶಕ್ತಿ ಕೊಡು ಭಗವಂತ ಎಂದು ಬೇಡುತ್ತಾರೆ. ಈ ಹಬ್ಬದಲ್ಲಿ ಸೋದರ ಮಾವ ಮತ್ತು ಸೋದರ ಅತ್ತೆ, ಮಾವ, ಸೊಸೆಯಾಗುವವರು ನೀರು ಎರಚಿಕೊಳ್ಳುವ ಆಟವನ್ನು ಆಡುವ ವಿಶಿಷ್ಟತೆಯೂ ಇದೆ.
ಯುಗಾದಿ ಮೊದ್ಲು ಮಾಡಿದ ಕೃಷಿ
ಬೇವು-ಬೆಲ್ಲ ಸವಿದ ನಂತರ ಗ್ರಾಮೀಣಿಗರು ತರಿಬೆ ಕುಂಟೆ ಎಂದು ಕರೆಯುವ ಹೊಲ ಶುಚಿಗೊಳಿಸುವ ಕುಂಟೆ ಊಡುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಕೃಷಿಯ ಮೊದಲು ಮಾಡಿದರೆ ಒಳಿತಾಗುತ್ತದೆ ಮತ್ತು ಮೊದಲ ಮಳೆಯು ಬೇವು ಸವಿದ ಐದು ದಿನದಲ್ಲಿ ಅಶ್ವಿನಿ ಮಳೆ ಪ್ರಾರಂಭವಾಗುತ್ತದೆ ಹಾಗಾಗಿ ಹೊಲದಲ್ಲಿನ ಮಣ್ಣನ್ನು ಮೇಲು ಮಾಡಬೇಕು ಇದರಿಂದ ಭೂಮಿತಾಯಿಯು ಮುಂಬರುವ ದಿನಗಳಲ್ಲಿ ಮಳೆಹನಿಯಿಂದ ತಣಿಯುವಳು ಎಂಬ ನಂಬಿಕೆ ಹಳ್ಳಿಗರದ್ದು. ಹೊಲಗಳಲ್ಲಿ ಎಲ್ಲರೂ ತೆರಳಿ ಕುಂಟೆ ಊಡಿ ತಮ್ಮ ಮನೆಯ ಮಗಳ ಕೈಯಿಂದ ಅಥವಾ ಸೊಸೆಯರಿಂದ ಕುಂಟೆ ಮತ್ತು ಎತ್ತುಗಳ ಪೂಜೆ ಮಾಡಿಸಿ ಎತ್ತುಗಳಿಗೆ ಪ್ರಸಾದ(ಎಡೆ)ನೀಡುತ್ತಾರೆ. ಎತ್ತುಗಳು ಭೂಮಿಯ ಮೇಲೆ ಕಷ್ಟಪಡುವ ರೈತರಿಗೆ ಹೆಗಲಾಗಿ ಇರು ಎಂದು ಶಿವ ಹೇಳಿದ ಸಲುವಾಗಿ ರೈತರಿಗೆ ಹೆಗಲಾಗಿ ದುಡಿಯುತ್ತಿರುವ ಎತ್ತುಗಳನ್ನು ಬಸವ ಎಂದು ಪೂಜಿಸುವ ಜನರು ಅವುಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ಕಾಣುತ್ತಾರೆ. ಜೊತೆಗೆ ಹೊಸ ವರ್ಷದ ವಸಂತದ ಹೊಸ್ತಿಲಲ್ಲಿ ಕೃಷಿಮೊದ್ಲ ಮಾಡುವುದರಿಂದ ಮುಂದೆ ಕೃಷಿಯಲ್ಲಿ ಇಳುವರಿ ಹೆಚ್ಚುತ್ತದೆ ಎಂಬ ನಂಬಿಕೆ ಹಳ್ಳಿಗರದ್ದು.
ಬೇವು-ಬೆಲ್ಲ ಹಂಚುವಿಕೆ
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾದ ಈ ಯುಗಾದಿ ಹಬ್ಬವು ತನ್ನದೇ ಆದ ಬಾಂಧವ್ಯಗಳನ್ನು ಬೆಸೆದಿದೆ. ಆಚರಣೆ,ಹಬ್ಬಗಳೆಲ್ಲವೂ ಸಹ ಸಿಹಿಸವಿಯುವ ಸಾಂಕೇತಿಕ ಹಬ್ಬವಾದರೂ ಎಲ್ಲರೂ ಒಂದೆಡೆ ಸೇರುವ ಸಂಭ್ರಮ ಮತ್ತೊಂದೆಡೆ ಎಂದು ಹೇಳಬಹುದು. ಹಬ್ಬಗಳು ಮತ್ತಷ್ಟು ಸಂಬಂಧಗಳು, ಬಾಂಧವ್ಯಗಳನ್ನು ಐಕ್ಯಗೊಳಿಸುತ್ತದೆ. ಬೇವು-ಬೆಲ್ಲದ ಈ ಯುಗಾದಿ ಹಬ್ಬವನ್ನು ಪರಂಪರಿಕವಾಗಿ ಕೆಲವರು ಆಚರಿಸುವುದಿಲ್ಲ, ಅದರ ಹಿಂದೆ ಒಂದಷ್ಟು ಕಥೆಗಳಿವೆ. ತಮ್ಮ ಮನೆಯ ಸದಸ್ಯರು ಬೇವು-ಮಾವು ತರಲು ಹೋದಾಗ ಮನೆಗೆ ಮರಳಿ ಬಂದಿರಲಿಲ್ಲ ಎಂದು ಮತ್ತಷ್ಟು ಜನರು ತಾವು ಮಾಡಿದ ಸಿಹಿ ಅಡುಗೆಯ ಪಾತ್ರೆಯ ಕೆಳಗೆ ಸರ್ಪ ಸಿಂಬೆ ಸುತ್ತಿತ್ತು ಎಂದು ಹೀಗೆ ನಾನಾ ಕಥೆಗಳಿವೆ ಹೀಗೆ ತಮ್ಮ ಪೂರ್ವಜರು ಕೆಲವು ಕಾರಣಗಳಿಂದ ಈ ಯುಗಾದಿಯನ್ನು ಮಾಡುವುದಿಲ್ಲ ಎನ್ನುವ ಕೆಲವು ಮನೆಗಳು ಇರುತ್ತವೆ. ಅಂತಹ ಮನೆಗಳಿಗೆ ಹಬ್ಬ ಆಚರಿಸುವ ಜನರು ಬೇವು ಹಂಚುತ್ತಾರೆ ಆ ಮೂಲಕ ತಮ್ಮ ಮನೆಗೆ ಸಿಹಿ ಊಟಕ್ಕೂ ಅವರನ್ನು ಆಹ್ವಾನಿಸುತ್ತಾರೆ. ಇದರಿಂದ ನೆರೆಹೊರೆಯ ಬಾಂಧವ್ಯವು ಹೆಚ್ಚುತ್ತದೆ ಮತ್ತು ಸಂಬಂಧಗಳ ಕೊಂಡಿ ಗಟ್ಟಿಗೊಳ್ಳುತ್ತದೆ ಎಂಬುದು ಜನರ ನಂಬಿಕೆ. ಬೇಡದ ವಿಷಯಗಳನ್ನು ಬೇವಿನಂತೆ ತ್ಯಜಿಸಿ, ಬದುಕಿಗೆ ಬೇಕಾದ ಸಂಗತಿಗಳನ್ನು ಬೆಲ್ಲದಂತೆ ಸವಿದು, ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳೋಣ ಎಂದು ಹೀಗೆ ಬೇವು-ಬೆಲ್ಲದ ಹಂಚುವಿಕೆಯನ್ನು ಜನರು ಇಂದಿಗೂ ತಮ್ಮ ಹಳ್ಳಿಗಳಲ್ಲಿ ಜೀವಂತಗೊಳಿಸಿದ್ದಾರೆ.
ಚಂದ್ರನ ನೋಡುವ ಮೊದಲು ಗಣಪನ ಪೂಜೆ
ಚಂದ್ರಮಾನ ಯುಗಾದಿ ನಂತರದ ದಿನ ಚಂದ್ರನನ್ನು ನೋಡುವ ದಿನ ಎಂದು ಆಚರಿಸುತ್ತಾರೆ. ಚಂದ್ರನನ್ನು ನೋಡುವ ಮೊದಲು ಗಣಪನ ಪೂಜೆ ಮಾಡಲಾಗುತ್ತದೆ ಇದರ ಹಿಂದೊಂದು ಕಥೆ ಇದೆ. ಒಮ್ಮೆ ಗಣಪನು ಭಕ್ತರ ಮನೆಯಲ್ಲಿ ಹೊಟ್ಟೆ ತುಂಬ ಉಂಡು ಹೊಟ್ಟೆ ಸವರುತ್ತಾ ಬರುವಾಗ ಚಂದ್ರನು ಗಣಪನನ್ನು ನೋಡಿ ನಿನ್ನ ಹೊಟ್ಟೆ ಹೊಡೆಯುತ್ತದೆ ಗಣೇಶ ಎಂದು ನಕ್ಕಿದ್ದನಂತೆ. ಅದಾದ ನಂತರ ಗಣೇಶನ ಕೋಪಗೊಂಡು ಅಲ್ಲೇ ಇದ್ದ ಒಂದು ಸರ್ಪವನ್ನು ತನ್ನ ಹೊಟ್ಟೆಗೆ ಸುತ್ತಿ ಗಂಟು ಹಾಕಿ, ಚಂದ್ರನ ಮೇಲಿನ ಕೋಪಕ್ಕೆ ತನ್ನ ಒಂದು ಸೊಂಡಲಿನ ಬಳಿಯ ದಂತವನ್ನು ಕಿತ್ತು ಚಂದ್ರನಿಗೆ ಎಸೆದನಂತೆ. ಚಂದ್ರನು ಗಣೇಶನ ಕೋಪಕ್ಕೆ ತತ್ತರಿಸಿ ಹೋಗಿ ತನಗೆಲ್ಲಿ ದಂತ ಚುಚ್ಚುತ್ತದೆಯೋ ಎಂದು ಮೋಡಗಳ ಮರೆಯಲ್ಲಿ ಅವಿತನಂತೆ. ಅಂದಿನ ದಿನ ಚಂದ್ರನು ಗಣೇಶ ನನ್ನನ್ನು ಕ್ಷಮಿಸು, ನಿನ್ನನ್ನು ಅಪಹಾಸ್ಯ ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಬೇಡಿಕೊಂಡನಂತೆ. ಆ ದಿನ ಗಣೇಶನು ಚಂದ್ರಮಾನ ಯುಗಾದಿ ದಿನದಂದು ನಿನ್ನನ್ನು ನೋಡುವ ಮೊದಲು ಜನರು ನನ್ನನ್ನು ನೋಡಬೇಕು ನನಗೆ ಮೊದಲ ಪೂಜೆ ಸಲ್ಲಿಸಿದ ನಂತರ ನಿನ್ನನ್ನು ನೋಡಬೇಕು ಇಲ್ಲದ ಹೊರತು ನಿನಗೂ ನಿನ್ನನ್ನು ನೋಡುಗರಿಗೂ ದೋಷ ತಗುಲಲಿ ಎಂದನಂತೆ. ಅದಾದ ಬಳಿಕ ಪ್ರತಿವರ್ಷವೂ ಚಂದ್ರಮಾನ ಯುಗಾದಿಯ ಮರುದಿನ ಚಂದ್ರನು ಹುಟ್ಟುತ್ತಾನೆಯಾದರು ಆ ದಿನ ಒಂದು ಗೆರೆ ಎಳೆದಂತೆ ಮಾತ್ರ ಕಾಣುತ್ತಾನೆ. ಆ ದಿನ ಚಂದ್ರನನ್ನು ನೋಡುವ ಮೊದಲು ಜನರು ಗಣೇಶನಿಗೆ ಪೂಜಿಸಿ, ತಮ್ಮ ಮನೆಯ ಅಂಗಳದಲ್ಲಿ ಸಗಣಿಯಿಂದ ನೆರಸಾರಿಸಿ, ತಮ್ಮ ಮನೆಯಲ್ಲಿ ಇರಿಸಿದ ಗಣೇಶನ ಮೂರ್ತಿಯನ್ನು ನೋಡಿ ನಂತರ ನೆಲದ ಮೇಲೆ ಸೂರ್ಯ ಚಂದ್ರರನ್ನು ಬಿಡಿಸಿ, ಚಂದ್ರ ಕಂಡ ಮರುಕ್ಷಣ ಚಂದ್ರನಿಗೆ ಪೂಜಿ ಸಲ್ಲಿಸಿ ತಮ್ಮ ಊರಿನ ದೇವಾಲಯಕ್ಕೆ ಹೋಗಿ ಬರುತ್ತಾರೆ. ನಂತರದಲ್ಲಿ ಬನ್ನಿ ಪತ್ರೆಯನ್ನು ಹಿರಿಯರ ಕೈಗೆ ಇಟ್ಟು ಚಂದ್ರನನ್ನು ನೋಡಿದಿರಾ ಎಂದು ಕೇಳಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಹೀಗೆ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
ಒಟ್ಟಾರೆಯಾಗಿ ಯುಗಾದಿ ಎಂಬುದು ಮನೆ ಮನಗಳನ್ನು ಬೆಸೆಯುವ ಹಬ್ಬವಾಗಿದೆ. ಅದೆಷ್ಟೇ ಯುಗಗಳು ಹುರುಳಿದರು ಮರಳಿ ಬರುವ ಯುಗಾದಿ ಹೊಸತನವನ್ನೇ ತರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಹೊಸ ವರ್ಷದ ವಸಂತದ ಹೊಸ್ತಿಲಲ್ಲಿ ನಿಮ್ಮೆಲ್ಲರ ಹೆಗಲಿಗೆ ಯಶಸ್ಸು ಹೆಗಲೇರಲಿ. ಬದುಕಿನಲ್ಲಿ ಬಂದವರು ಇಂದಾದರೂ ಬಿಸಿ ಹೋಳಿಗೆ ಬೇಯಿಸಿ ತಿನ್ನುವಂತಾಗಲಿ. ಕಹಿಯನ್ನೇ ಉಂಡವರ ಪಾಲಿಗೆ ಇನ್ನು ಮುಂದೆಯಾದರೂ ಸಿಹಿ ಉಣ್ಣುವಂತಾಗಲಿ. ಬೇವು ಬೆಲ್ಲ ಸಿಹಿ ಕಹಿಯ ಸಂಗಮವಾದರೂ ನಿಮ್ಮೆಲ್ಲರ ಬದುಕಲ್ಲಿ ಸಿಹಿಯೇ ತುಂಬಲಿ ಎಂದು ಹರಸುವೆ. ಎಲ್ಲೋ ಬದುಕುವ, ಬದುಕನ್ನು ಹರಸಿ ಹೋಗಿರುವ ಮನಗಳೆಲ್ಲ ಒಟ್ಟಾಗಿ ಮನೆಸೇರುವಂತೆ ಮಾಡುವ ಈ ಹಬ್ಬವು ಎಲ್ಲರ ಖಾಲಿ ಜೇಬನ್ನು ಸಿಹಿಯಿಂದ ಮತ್ತೆ ತುಂಬಿಕೊಳ್ಳುವಂತೆ ಮಾಡಲಿ. ಆಚರಣೆ, ಪಾರಂಪರಿಕ ಹಬ್ಬಗಳು, ಹರಿದಿನಗಳು ನಮ್ಮ ಭಾರತೀಯರ ಪಾಲಿಗೆ ಸದಾ ಭೂಲೋಕದ ನೆತ್ತಿಗೇರಿರುವ ಸುರಪಾನಗಳಿದ್ದಂತೆ. ಆ ಆಚರಣೆಗಳನ್ನು ಬಿಟ್ಟು ಬದುಕುವವರಲ್ಲ, ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಬಾಳಿದ ಜಾಯಮಾನವೇ ಅವರದ್ದಲ್ಲ, ಈ ಎಲ್ಲ ಆಚರಣೆ, ಸಂಭ್ರಮ, ಸಡಗರ ಒಂದು ರೀತಿ ಸರಪಣಿ ಇದ್ದಹಾಗೆ ಗಟ್ಟಿತನ ತುಂಬುವುದರೊಂದಿಗೆ ತನ್ನತ್ತ ಸೆಳೆದು ಬಾಂದವ್ಯ ಬೆಸೆಯುವ ಆಯಸ್ಕಾಂತಗಳಿದ್ದಂತೆ. Any way ಈ ಯುಗಾದಿ ಹಬ್ಬ ಎಲ್ಲರಲ್ಲೂ ಹೊಸ ಚೈತನ್ಯ, ಹೊಸತನ ತುಂಬಲಿ ಎಂದು ಆಶಿಸುವೆ.
✍🏻ಡಾ ಮೇಘನ ಜಿ
ಸಂಯೋಜಕರು ಮತ್ತು ಉಪನ್ಯಾಸಕರು
ಸಮಾಜಶಾಸ್ತ್ರ ಅಧ್ಯಯನ ವಿಭಾಗ
ರಾಯಚೂರು ವಿಶ್ವವಿದ್ಯಾಲಯ, ರಾಯಚೂರುf