5,8 ಹಾಗೂ 9 ನೇ ತರಗತಿ ವಿದ್ಯಾರ್ಥಿಗಳ ಬೊರ್ಡ್ ಪರೀಕ್ಷೆ ಕುರಿತು ಕೊನೆಗು ಮೌನ ಮುರಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ..
NEP ಕುರಿತು ಇಲಾಖೆಯ ನಿರ್ಧಾರವನ್ನು ಸ್ಪಷ್ಟ ಪಡಿಸಿದ ಸಚಿವ ಮಧು ಬಂಗಾರಪ್ಪ..
ಬೆಂಗಳೂರು: ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಎನ್ಇಪಿಗೆ ವಿರೋಧವನ್ನು ಪ್ರಕಟಿಸಿದ್ದೆವು. ನಾವು 3 ಪರೀಕ್ಷೆಗಳನ್ನು ಮಾಡುತ್ತೇವೆ ಎಂದೆವು. ಕೇಂದ್ರ ಈಗ 2 ಪರೀಕ್ಷೆ ಮಾಡಲು ಮುಂದಾಗಿದೆ. ಕೇಂದ್ರವೂ ನಮ್ಮ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿದೆ ಎನ್ನುವುದೇ ನಾವು ಸರಿದಾರಿಯಲ್ಲಿದ್ದೇವೆ ಎನ್ನುವುದಕ್ಕೆ ಕುರುಹು ಎಂದರು.
ಪಠ್ಯಪುಸ್ತಕ ಬದಲಾಗುತ್ತದೆ. ಕಾಂಗ್ರೆಸ್ ಪಠ್ಯ, ಬಿಜೆಪಿ ಪಠ್ಯ ಎಂದಲ್ಲ. ಮಕ್ಕಳಿಗೆ ಯಾವುದು ಬೇಕೋ ಅದನ್ನು ನೀಡುತ್ತೇವೆ. 5, 8, 9 ತರಗತಿ ಬೋರ್ಡ್ ಪರೀಕ್ಷೆ ಕುರಿತು ಗೊಂದಲ ಇದೆ. ಹೈಕೋರ್ಟ್ ಏನು ತೀರ್ಪು ನೀಡಲಿದೆಯೋ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ನಾವು ಪರೀಕ್ಷೆ ನಡೆಸಲು ಮುಂದಾದಾಗ ಸಂಘ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಪರೀಕ್ಷೆ ನಡೆಸದಂತೆ ಕೋರ್ಟ್ ಸೂಚಿಸಿದ ಕಾರಣ ಯಥಾಸ್ಥಿತಿ ಇರಲಿದೆ ಎಂದರು.
ರಾಜ್ಯದ ಮೂರನೆಯ ಒಂದಂಶದ ಜನ ನನ್ನ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಕಳೆದ ಬಾರಿ 37 ಸಾವಿರ ಕೋ.ರೂ.ಬಜೆಟ್ ಇದ್ದರೆ ಈ ಬಾರಿ ನನ್ನ ಇಲಾಖೆಗೆ 44,500 ಕೋ.ರೂ. ಬಜೆಟ್ ನೀಡಲಾಗಿದೆ ಎಂದರು. ಶಾಲೆಗಳಿಗೆ 10 ವರ್ಷಗಳಿಗೆ ಅನುಮತಿ ನೀಡಲಾಗುತ್ತಿದೆ. ಸುರಕ್ಷೆ ಕುರಿತು ಆಯಾ ಇಲಾಖೆಗಳೇ ಪ್ರಮಾಣಪತ್ರ ನೀಡಬೇಕು. ತಪ್ಪಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.