ಮುಖ್ಯ ಶಿಕ್ಷಕರೊಬ್ಬರ ಗಿಂಬಳದ ಮಾರ್ಗ ನೋಡಿ….⁉️
ನೀವೇ ದಂಗಾಗ್ತೀರಿ…..⁉️
ಸರ್ಕಾರಿ ಶಾಲೆ ಬಾಡಿಗೆ ಕೊಟ್ಟು, ಮರದ ಕೆಳಗೆ ಮಕ್ಕಳಿಗೆ ಪಾಠ; ಯಾದಗಿರಿ ಮುಖ್ಯ ಶಿಕ್ಷಕನ ಮಹಾ ಎಡವಟ್ಟು!
ಸರ್ಕಾರಿ ಶಾಲೆಯ ಕೊಠಡಿಯನ್ನು ಕಾರ್ಮಿಕರಿಗೆ ಬಾಡಿಗೆ ನೀಡಿ, ಮಕ್ಕಳನ್ನು ಮರದ ಕೆಳಗೆ ಕೂರಿಸಿ ಪಾಠ ಮಾಡಡುತ್ತಿರುವುದು ಬೆಳಕಿಗೆ ಬಂದಿದೆ..
ಯಾದಗಿರಿ (ಮಾ.18): ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ಶಿಕ್ಷಕ ವೃತ್ತಿಯಲ್ಲಿಯೂ ಇಲ್ಲೊಬ್ಬ ಶಿಕ್ಷಕ ಗಿಂಬಳದ ಹಾದಿಯನ್ನು ಕಂಡುಕೊಂಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯ ಕೆಲಸ ಮಾಡಲು ಬಂದ ಕಾರ್ಮಿಕರಿಗೆ ಶಾಲಾ ಕೊಠಡಿಗಳನ್ನು ಬಾಡಿಗೆ ನೀಡಿ, ಮಕ್ಕಳನ್ನು ಮರದ ಕೆಳಗೆ ಕೂರಿಸಿ ಪಾಠ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ
ರಾಜ್ಯ ಸರ್ಕಾರದ ನೌಕರನಾಗಿದ್ದರೂ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ವೃತ್ತಿ ಎಂದರೆ ಶಿಕ್ಷಕರ ವೃತ್ತಿ ಎಂದು ಹೇಳುತ್ತಿದ್ದರು. ಹೀಗಾಗಿ, ಶಿಕ್ಷಕರಿಗೆ ಬಡ ಮೇಷ್ಟ್ರು ಎಂದೇ ಹೇಳುತ್ತಾರೆ. ಆದರೆ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಈಗ ತಮ್ಮ ಶಾಲಾ ಕಟ್ಟಡವನ್ನೇ ಬಾಡಿಗೆಗೆ ಕೊಟ್ಟಿದ್ದಾರೆ. ಸರ್ಕಾರಿ ಕಟ್ಟಡ ಬಾಡಿಗೆಗೆ, ಮಕ್ಕಳಿಗೆ ಅಪೂರ್ಣಗೊಂಡ ಕೊಠಡಿಯಲ್ಲಿ ಹಾಗೂ ಮರದ ಕೆಳಗೆ ಮಕ್ಕಳನ್ನು ಕೂಡಿಸಿ ಪಾಠ ಮಾಡುತ್ತಿರುವುದು ಕಂಡುಬಂದಿದೆ. ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನ ಮಹಾ ಎಡವಟ್ಟು ಈಗ ಗ್ರಾಮಕ್ಕೆ ಗೊತ್ತಾಗಿದೆ.
ಇನ್ನು ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದ ಶಾಲೆಯಲ್ಲಿ. ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಮಾಡಲು ಬಂದ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿದೆ. ಎಡವಟ್ಟು ಮಾಡಿಕೊಂಡ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಆಗಿದ್ದಾರೆ. ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನೇ ಬಾಡಿಗೆಗೆ ನೀಡಲಾಗಿದ್ದು, ನಲಿ-ಕಲಿ ಓದುತ್ತಿರುವ ಮಕ್ಕಳಿಗೆ ಶಾಲೆಯ ಕಟ್ಟೆ ಹಾಗೂ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.
ಇನ್ನು ಜಲಜೀವನ್ ಮಿಷನ್ ಕಾರ್ಮಿಕರು ಶಾಲೆ ಕಟ್ಟಡ ಬಾಡಿಗೆ ಪಡೆದು ರಾಜಾರೋಷವಾಗಿ ಬೈಕ್ ನಿಲ್ಲಿಸಿದ್ದಾರೆ. ಶಾಲಾ ಕಟ್ಟಡದ ಒಳಗೆ ಬೈಕ್ ಹಾಗೂ ಅಡುಗೆ ಸಾಮಾನು ಇಟ್ಟುಕೊಂಡು, ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಶಾಲೆ ಕೋಣೆಗೆ ಬೀಗ ಹಾಕಿಕೊಂಡು ಹೋಗುತ್ತಾರೆ. ಇದನ್ನು ನೋಡಿದ ಗ್ರಾಮಸ್ಥರು ಈಗ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.