ನೌಕರರಿಗೆ ಘೋರ ಅನ್ಯಾಯ ಎಸಗಿದ 7ನೇ ವೇತನ ಶಿಫಾರಸ್ಸುಗಳು..
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ
ಬೆಂಗಳೂರು:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ ಉತ್ಸಾಹ ಕಳೆದುಕೊಂಡು ನಿರಾಶರಾಗುತ್ತಿದ್ದ ಈ ಹೊತ್ತಿನಲ್ಲಿ, ಎರಡು ಬಾರಿ ಅವಧಿ ವಿಸ್ತರಣೆ ಪಡೆದ ಆಯೋಗವು ಅಂತಿಮವಾಗಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕೇವಲ 3 ತಿಂಗಳಲ್ಲೇ ಸಿದ್ದಪಡಿಸಬಹುದಾದ ವೇತನ ಆಯೋಗದ ವರದಿಯನ್ನು ಸಿದ್ದಪಡಿಸಲು ವೇತನ ಆಯೋಗವು ಮತ್ತು ಸಿದ್ದವಾಗಿರುವ ವರದಿಯನ್ನು ಸ್ವೀಕರಿಸಲು ರಾಜ್ಯ ಸರ್ಕಾರಗಳ ವಿಳಂಬ ಧೋರಣೆ ಎಲ್ಲರಿಗೂ ಗೊತ್ತಿರುವ ಸಂಗತಿ.
7ನೇ ವೇತನ ಆಯೋಗದ ಶಿಫಾರಸ್ಸುಗಳು ನೌಕರರ ವೇತನ ಪ್ರಮಾಣವನ್ನು ಇನ್ನಿಲ್ಲದಂತೆ ಕಡಿತಗೊಳಿಸುವ ರೀತಿಯಿಂದ ಕೂಡಿವೆ. ದಿನಾಂಕ 1.07.2022 ರಿಂದ ಅನ್ವಯಾಗುವಂತೆ ಶೇ. 40 ರಷ್ಟು ವೇತನ ಹೆಚ್ಚಳ ಮಾಡಬೇಕೆಂಬ ಕೋರಿಕೆಗೆ ಎದುರಾಗಿ 7ನೇ ವೇತನ ಆಯೋಗವು ಕೇವಲ ಶೇ. 27.5 ರಷ್ಟು ಹೆಚ್ಚಳವನ್ನು 1.4.2024 ರಿಂದ ಅನ್ವಯವಾಗುವಂತೆ ಶಿಫಾರಸ್ಸು (ಪು.ಸಂ. 122) ಮಾಡಿರುವುದು ನೌಕರರಿಗೆ ಎಸಗಿದ ಘೋರ ಅನ್ಯಾಯವಲ್ಲದೇ ಮತ್ತಿನ್ನೇನಲ್ಲ. ಇದಲ್ಲದೇ, ಮೂಲ ವೇತನಕ್ಕೆ ವಿಲೀನಗೊಳಿಸಬಹುದಾದ ತುಟ್ಟಿಭತ್ಯೆಯನ್ನು ದಿನಾಂಕ: 1.07.2022 ರಲ್ಲಿದ್ದ ಶೇ. 31 ನ್ನು ಪರಿಗಣಿಸಿದ್ದು, ವೇತನ ಪರಿಷ್ಕರಣೆಯನ್ನು ದಿನಾಂಕ: 1.04.2024 ರಿಂದ ಅನ್ವಯವಾಗುವಂತೆ ನೀಡಬೇಕೆಂದು ವೈಜ್ಞಾನಿಕ ಸಮರ್ಥನೆಯಿಲ್ಲದೆ ತಿಳಿಸಲಾಗಿರುತ್ತದೆ.
ಮನೆ ಬಾಡಿಗೆ ಭತ್ಯೆಯನ್ನು ‘ಎ’ ಗುಂಪಿನ ನಗರಗಳಿಗೆ ಪ್ರಸ್ತುತ ಇರುವ ಶೇ. 24 ರಿಂದ ಶೇ.20ಕ್ಕೆ ಇಳಿಸಲು ಹಾಗೂ ಇನ್ನಿತರ ನಗರಗಳಿಗೂ ಕಡಿಮೆಗೊಳಿಸಲು ಶಿಫಾರಸ್ಸು ಮಾಡಲಾಗಿದೆ.
ವಿವಿಧ ಇಲಾಖೆಗಳಲ್ಲಿ 68,000 ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆಂದು ಅಧಿಕೃತವಾಗಿ ದಾಖಲುಗೊಳಿಸಿರುವ ಆಯೋಗವು ಅವರ ಜೀವನಾವಶ್ಯಕ ಮಟ್ಟದ ವೇತನ ಸೌಲಭ್ಯ ಮತ್ತು ಕೆಲಸದ ಭದ್ರತೆ ಬಗ್ಗೆ ಚಕಾರವೆತ್ತಿಲ್ಲ.
ವರದಿಯುದ್ದಕ್ಕೂ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ನೆಪವೊಡ್ಡುತ್ತಾ ನೌಕರರ ವೇತನ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಶಿಫಾರಸ್ಸು ಮಾಡುವಲ್ಲಿ ಆಯೋಗವು ಸೋತಿದೆ ಎಂದರೆ ತಪ್ಪಾಗಲಾರದು.
ನೌಕರ-ವಿರೋಧಿಯಾದ ಈ ಅವೈಜ್ಞಾನಿಕ ಶಿಫಾರಸ್ಸುಗಳನ್ನು ಬದಿಗಿಟ್ಟು ರಾಜ್ಯ ಸರ್ಕಾರವು ದಿನಾಂಕ: 1.07.2022 ರಿಂದ ಅನ್ವಯವಾಗುವಂತೆ ಶೇ. 40 ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಒಕ್ಕೂಟವು ಆಗ್ರಹಿಸುತ್ತದೆ.
ತಮ್ಮ ವಿಶ್ವಾಸಿ
ಜೈಕುಮಾರ್.ಹೆಚ್.ಎಸ್
ರಾಜ್ಯಾಧ್ಯಕ್ಷರು ಮೊ: 9620464215
ಶೋಭಾಲೋಕನಾಗಣ್ಣ
ಪ್ರಧಾನ ಕಾರ್ಯದರ್ಶಿ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ