ಮಾ.15- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿ ಸಿದ್ಧಗೊಂಡಿದ್ದು, ಅದನ್ನು ಸ್ವೀಕರಿಸಲು ರಾಜ್ಯಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 7ನೇ ರಾಜ್ಯ ವೇತನ ಆಯೋಗದ ಅವ ಇಂದಿಗೆ ಮುಕ್ತಾಯಗೊಳ್ಳುತ್ತಿದೆ.
ಉನ್ನತ ಮೂಲಗಳ ಪ್ರಕಾರ, ಸಿದ್ಧವಾಗಿರುವ ವರದಿ ಸಲ್ಲಿಸಲು ಆಯೋಗ ತಯಾರಿದೆ. ಆದರೆ ಸರ್ಕಾರವೇ ಹಿಂದೇಟು ಹಾಕುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಪಂಚಖಾತ್ರಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಬಳಕೆ ಸೇರಿದಂತೆ ಒಟ್ಟು ಯೋಜನಾ ವೆಚ್ಚಕ್ಕೆ 1.20 ಲಕ್ಷ ಕೋಟಿ ರೂ.ಗಳನ್ನು ನಿಗದಿ ಮಾಡಿರುವ ಸರ್ಕಾರಕ್ಕೆ ರಾಜ್ಯಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹಣಕಾಸಿನ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವರದಿಯನ್ನು ಸ್ವೀಕರಿಸುವ ಬದಲು ಮತ್ತಷ್ಟು ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲೇ ಈಗಾಗಲೇ 2 ಬಾರಿ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಿದ್ಧಪಡಿಸಲಾಗಿರುವ ಆಯೋಗದ ವರದಿಯಲ್ಲಿ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಹೆಚ್ಚು ಮಾಡಬೇಕು ಎಂಬ ಶಿಫಾರಸ್ಸುಗಳಿವೆ ಎನ್ನಲಾಗಿದೆ. ಈಗಾಗಲೇ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳವನ್ನು ಹಿಂದಿನ ಸರ್ಕಾರವೇ ಜಾರಿ ಮಾಡಿತ್ತು.
ಚುನಾವಣಾ ಪ್ರಣಾಳಿಕೆಯಲ್ಲಿಯೇ 7ನೇ ವೇತನ ಆಯೋಗದ ವರದಿ ಜಾರಿಯ ಭರವಸೆ ಕಾಂಗ್ರೆಸ್ ನೀಡಿತ್ತು. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರ ಕ್ಕೆ ಬಂದ ಬಳಿಕ ಪಂಚಖಾತ್ರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ.
ಇಂದು ಆಯೋಗದ ಅವಧಿ ಮುಗಿಯುತ್ತಿದೆ. ನಾಳೆ ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆಗಳಿವೆ. ಅಷ್ಟರೊಳಗಾಗಿ ವರದಿ ಸ್ವೀಕರಿಸಬೇಕು. ಇಲ್ಲವೇ ಆಯೋಗದ ಅವಧಿಯನ್ನು ವಿಸ್ತರಿಸಬೇಕಿದೆ.
ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, ಸರ್ಕಾರವು ಯಾವುದೇ ಹೊಸ ಯೋಜನೆ ಅಥವಾ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಸಹಜವಾಗಿಯೇ ಗೊಂದಲಕ್ಕೆ ಒಳಗಾಗಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ವೇತನ ಪರಿಷ್ಕರಣೆಯಾಗುವ ಸಾಧ್ಯತೆ ತೀರಾ ವಿರಳವಾದಂತಾಗಿದೆ.
ಎರಡು ಬಾರಿ ಅವಧಿ ವಿಸ್ತರಣೆ:
ಸುಧಾಕರ್ ರಾವ್ ನೇತೃತ್ವದಲ್ಲಿ ರಾಜ್ಯಸರ್ಕಾರ 2022 ರ ನವೆಂಬರ್ 19 ರಂದು ಆಯೋಗವನ್ನು ರಚಿಸಿ ಆರು ತಿಂಗಳಲ್ಲಿ ವರದಿ ನೀಡುವ ಗಡುವು ನೀಡಿತ್ತು. ಆನಂತರ 2023 ರ ಮೇ 15 ರಂದು ಮತ್ತೆ ಆರು ತಿಂಗಳ ಅವಧಿಗೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ 2023 ರ ನವೆಂಬರ್ 6 ರಂದು ಆಯೋಗದ ಅವಧಿಯನ್ನು ಇಂದಿನವರೆಗೆ ವಿಸ್ತರಿಸಿ ಆದೇಶಿಸಲಾಗಿತ್ತು.
ಈ ಕುರಿತಂತೆ ಪಬ್ಲೀಕಟುಡೆಯೊಂದಿಗೆ ಮಾತನಾಡಿದ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ,ಇವತ್ತು ಸಿಎಮ್ ಅವರು ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ವೇತನ ಆಯೋಗದ ವರದಿಯನ್ನು ತೆಗೆದುಕೊಳ್ಳುವುದಿಲ್ಲವೆಂದು ತಿಳಿದು ಬಂದಿದೆ. ನಾಳೆಯಿಂದ ನೀತಿ ಸಂಹಿತೆ ಜಾರಿಯಾಗಲಿದೆ. ವೇತನ ಆಯೋಗ ತನ್ನ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೀಡಲಿದೆ.
ಲೊಕಸಭೆ ಚುನಾವಣೆ ಮುಗಿದ ನಂತರ ವರದಿ ಸ್ಚೀಕಾರವಾಗಲಿದೆ..
ಸರ್ಕಾರ ಚುನಾವಣೆಗೂ ಮೋದಲೆ ಏಳನೇ ವೇತನ ಆಯೋಗ ವರದಿ ಜಾರಿ ಮಾಡಲಿದೆ ಎಂದು ಹೇಳಲಾಗುತ್ತಿತ್ತು..ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು..