BEO-CRP ಲೋಕಾಯುಕ್ತ ಬಲೆಗೆ….
ಅಯ್ಯೋ ದೇವ್ರೆ ನೀವೂ ಅದೇ ಹಾದಿಯಲ್ಲಿ….?!?
ಚಾಮರಾಜನಗರ: ನಿವೃತ್ತ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ ಮಂಜೂರು ಮಾಡಲು 15 ಸಾವಿರ ಲಂಚ ಪಡೆಯುತ್ತಿದ್ದ ಹನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್ಪಿ ಮುನಿರಾಜು ಅವರು ಲೋಕಾ ಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ.
ತಾಲೂಕಿನ ತೋಮಿಯರ್ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ 139 ದಿನಗಳ ಗಳಿಕೆ ರಜೆಯ ಹಣ 3 ಲಕ್ಷ ಬರಬೇಕಾಗಿತ್ತು. ಗಳಿಕೆ ರಜೆ ಮಂಜೂರು ಮಾಡಲು ಶಿಕ್ಷಣಾಧಿಕಾರಿ ಶಿವರಾಜು ಮತ್ತು ಸಿಆರ್ಪಿ ಮುನಿ ರಾಜು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ನಿವೃತ್ತ ಶಿಕ್ಷಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನೂ ಬಂಧಿಸಿ, 15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.ತನಿಖೆ ಪ್ರಗತಿಯಲ್ಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಹಿರಿಯ ಶಿಕ್ಷಕರ ಗಳಿಕೆ ರಜೆಗೆ ಲಂಚ ಬೇಡಿದ್ದು ಅತ್ಯಂತ ಖೇದಕರ ಶಿಕ್ಷಣ ಇಲಾಖೆಯಲ್ಲಿಯೇ ಈ ರೀತಿ ನಡೆದರೆ ಮುಂದೆ ಗತಿ ಏನು ಹಾಗೂ ನಿವೃತ್ತ ಶಿಕ್ಷಕರ ದಿಟ್ಟತನ ಎಲ್ಲ ಸೇವಾ ನಿರತ ಶಿಕ್ಷಕರಲ್ಲೂ ಮೂಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಅಶೋಕ ಸಜ್ಜನ ಪ್ರತಿಕ್ರಿಯಿಸಿದ್ದಾರೆ.