ಬೆಂಗಳೂರು:
ಉದ್ದೇಶಪೂರ್ವಕ, ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಶಾಲಾ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡುವ ಬದಲು ವಜಾಗೊಳಿಸ ಬೇಕಾಗುತ್ತದೆ. ಹಾಗೆಯೇ, ಶಿಕ್ಷರನ್ನು ವಜಾ ಗೊಳಿಸದೆ ವಿಳಂಬಧೋರಣೆ ಅನುಸರಿಸುವ ಜಿಲ್ಲಾ ಉಪನಿರ್ದೇಶಕರ ಮೇಲೂ ಶಿಸ್ತುಕ್ರಮ ಜರುಗಿಸಲಾ ಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ
ಕೆಲ ಶಿಕ್ಷಕರು ವರ್ಗಾವಣೆಗೆ ಪರ್ಯಾಯವಾಗಿ ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿ ನಂತರ ಅಮಾನತುಗೊಂಡು ಬಳಿಕ ತಮಗೆ ಅನುಕೂಲಕರವಾದ ಶಾಲೆಗೆ ಸ್ಥಳನಿಯುಕ್ತಿಗೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ರಾಜ್ಯದ ಕೆಲ ಉಪ ನಿರ್ದೇಶಕರು (ಡಿಡಿಪಿಐ) ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಶಿಕ್ಷಕರನ್ನು ಅಮಾನತುಗೊಳಿಸಿ ಜಿಲ್ಲೆಯೊಳಗೆ ಒಂದೇ ತಾಲ್ಲೂಕಿನಿಂದ ಮತ್ತೊಂದು ತಾಲೂಕಿಗೆ ವರ್ಗಾವಣೆ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಕಾಯ್ದೆ-2020ರ ಪ್ರಕಾರ ಅಮಾನತು ತೆರವುಗೊಳಿಸಿದ ನಂತರ ಕಡ್ಡಾಯವಾಗಿ ‘ಸಿ’ ವಲಯದ ಶಾಲೆಗೆ ಸ್ಥಳ ನಿಯುಕ್ತಿಗೊಳಿಸಬೇಕು. ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕಿಗೆ ಸ್ಥಳ ನಿಯುಕ್ತಿಗೊಳಿಸಬೇಕಾಗುತ್ತದೆ. ಆದರೆ, ಕೆಲವು ಡಿಡಿಪಿಐಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಿಯಮಬಾಹಿರವಾಗಿ ಶಿಕ್ಷಕರ ಸ್ಥಳ ನಿಯುಕ್ತಿಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಈ ವಿಚಾರವನ್ನು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.
ಅಮಾನತುಗೊಳಿಸಿದೆ ಆರ್ಥಿಕ ನಷ್ಟ: ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗುವ ಅವಧಿಯಲ್ಲಿ ಅಂತಹ ನೌಕರರಿಗೆ ವೇತನ ಪಾವತಿಸಲಾಗುವುದಿಲ್ಲ. ಒಂದು ವೇಳೆ ಅನಧಿಕೃತ ಗೈರು ಹಾಜರಾದ ಶಿಕ್ಷಕರನ್ನು ಸಿಸಿಎ ನಿಯಮ-10ರಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಿದ್ದಲ್ಲಿ ನೌಕರನಿಗೆ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಅನಿವಾರ್ಯವಾಗಿ ಪಾವತಿಸಬೇಕು. ಈ ಕಾರಣದಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಹೀಗಿದ್ದರೂ ನಿಯಮ ಉಲ್ಲಂಘಿಸಿ ಅಮಾನತುಗೊಳಿಸಿದ್ದೇ ಆದಲ್ಲಿ ಅಂತಹ ಶಿಕ್ಷಕರಿಗೆ ಪಾವತಿಸಲಾಗುವ ಜೀವನಾಧಾರ ಭತ್ಯೆಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ವಸೂಲಿ ಮಾಡಲು ಕ್ರಮಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಶಿಸ್ತುಕ್ರಮ ಕೈಗೊಳ್ಳಲು ಮಾರ್ಗಸೂಚಿ: ಸರ್ಕಾರಿ ನೌಕರರು 4 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಅನಧಿಕೃತ ವಾಗಿ ಸೇವೆಗೆ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರರನ್ನು ಕೆಪಿಎಸ್ಆರ್ ನಿಯಮ 108ರ ಅನ್ವಯ ಸೇವೆಯಿಂದ ವಜಾ ಗೊಳಿಸುವ ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಗೈರು ಹಾಜರಾದ ನೌಕರರನ್ನು ಅಮಾನತುಗೊಳಿಸದೆಯೇ ಕರ್ನಾಟಕ ಸಿವಿಲ್ ಸೇವೆಗಳು ನಿಯಮ-1957ರ ನಿಯಮ-11ರ ಅನ್ವಯ ಶಿಸ್ತುಕ್ರಮ ಜರುಗಿಸಬೇಕು. ಇದರಿಂದಾಗಿ ಅನಧಿಕೃತವಾಗಿ ಗೈರು ಹಾಜರಾದ ಸರ್ಕಾರಿ ನೌಕರರಿಗೆ ನಿಲಂಬನಾ ಭತ್ಯೆಯನ್ನು ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಹಾಗೂ ಅಂಥ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದೇ ಪರಿಗಣಿಸಬೇಕಾಗುತ್ತದೆ. ಜತೆಗೆ, ಆಪಾದನೆ ಸಾಬೀತಾದಲ್ಲಿ ಸೇವೆಯಿಂದ ವಜಾಗೊಳಿಸಬಹುದಾಗಿದೆ.
9 ತಿಂಗಳೊಳಗೆ ವಿಚಾರಣೆ ಮುಗಿಸಿ: ಸಾಮಾನ್ಯವಾಗಿ ವಿಚಾರಣೆ ನಡೆಸಲು ಮತ್ತು ಶಿಸ್ತುಕ್ರಮವನ್ನು ಅಂತಿಮಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಸರ್ಕಾರಿ ನೌಕರರು ಸಕ್ಷಮ ಪ್ರಾಧಿಕಾರದ ಸೂಚನೆಗಳು/ಆದೇಶಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಅಗತ್ಯ ವಿಚಾರಣೆ ನಡೆಸಬಹುದಾಗಿದೆ. ಅನಧಿಕೃತ ಗೈರು ಹಾಜರಿ ಆರೋಪ ಸಾಬೀತಾದಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕುವ ಅಥವಾ ವಜಾಗೊಳಿಸುವ ಅಂತಿಮ ಆದೇಶವನ್ನು ಜಾರಿಗೊಳಿಸುವುದು ಪ್ರಾಧಿಕಾರದ ಕರ್ತವ್ಯವಾಗಿದೆ. ಪ್ರಕರಣವನ್ನು ಶಿಸ್ತು ಪ್ರಾಧಿಕಾರದ ಗಮನಕ್ಕೆ ತಂದ ನಂತರ ಗರಿಷ್ಠ 9 ತಿಂಗಳ ಒಳಗಾಗಿ ಶಿಸ್ತುಕ್ರಮದ ಅಂತಿಮ ಆದೇಶ ಹೊರಡಿಸಲು ಕಾಲಮಿತಿ ನಿಗದಿಪಡಿಸಿದೆ.