ಗ್ರಾಮೀಣ ಶಿಕ್ಷಕರ ಶಕ್ತಿ ಅಶೋಕ ಸಜ್ಜನ
೨೦೨೧ ನೆಯ ಇಸ್ವಿ ಅಕ್ಟೋಬರ್ ರಜೆಯ ದಿನ ಅಶೋಕ ಸಜ್ಜನರು ಹೆಬ್ಬಳ್ಳಿಗೆ ಲಕ್ಕಮ್ಮನವರ ಗುರುಗಳ ಮನೆಗೆ ಬಂದಿದ್ದರು.ಅದೇ ದಿನ ನಾನು ನನ್ನ ಮಾವ ಲಕ್ಕಮ್ಮನವರ ಮನೆಗೆ ಹೋಗಿದ್ದೆ. ಸಜ್ಜನ ಗುರುಗಳು ನನ್ನನ್ನು ನೋಡಿದ ತಕ್ಷಣ ಬೀಗರೇ ಹೇಗಿದ್ದೀರಾ.? ಎಂದರು.ನಾನು ಕ್ಷೇಮ ಸರ್. ನೀವು ಹೇಗಿರುವಿರಿ.? ಗ್ರಾಮೀಣ ಶಿಕ್ಷಕರ ಸಂಘದ ಹೋರಾಟದ ರೂಪರೇಷೆಗಳು ಹೇಗೆ ಸಾಗಿವೆ.? ಇತ್ಯಾದಿ ಮಾಹಿತಿ ಕೇಳಿದೆ.
ನಮ್ಮ ಹತ್ತಿರದ ಸಂಬಂಧಿಗಳಾದ ಸಜ್ಜನ ಗುರುಗಳು ಹೋರಾಟದ ಹಾದಿಯಲ್ಲಿ ಹಿನ್ನಲೆಯಾಗಿ ಅವರ ಹಲವು ವರದಿಗಳನ್ನು ನನಗೆ ಗೊತ್ತಿರುವ ವರದಿಗಾರರ ಮೂಲಕ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನದೇ ಆದ ಪ್ರೋತ್ಸಾಹ ಮಾಡುತ್ತ ಅವರ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತ ಬಂದವನು ನಾನು.ಇದು ಸಂಬಂಧದ ನಂಟಿನ ಜೊತೆಗೆ ಹೋರಾಟಕ್ಕೆ ಸ್ಪೂರ್ತಿ ತುಂಬಲು ಸಹಕಾರ ನೀಡುವುದಾಗಿತ್ತು.
ಸಜ್ಜನ ಗುರುಗಳು ಬೆಂಗಳೂರಿಗೆ ಹೋರಾಟ ನಿಮಿತ್ತ ಹೊರಟ ಸಂದರ್ಭದಲ್ಲಿ ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸುತ್ತಿದ್ದರು.ಬೆಂಗಳೂರಿನಿಂದ ಬರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಭೇಟಿ ಮಾಡಿದ ಅಧಿಕಾರಿಗಳು ಮಂತ್ರಿ ಮಹೋದಯರ ಜೊತೆಗೆ ಆಗಿರುವ ಚರ್ಚೆ ಅದರ ಫಲಶ್ರುತಿ ಕುರಿತು ನನ್ನೊಂದಿಗೆ ದೂರವಾಣಿ ಕರೆಯ ಮೂಲಕ ಹಂಚಿಕೊಳ್ಳುತ್ತಿದ್ದರು. ಗ್ರಾಮೀಣ ಶಿಕ್ಷಕರ ರಾಜ್ಯ ಮಟ್ಟದ ಕಾರ್ಯಕ್ರಮ ಮೈಸೂರಿನಲ್ಲಿ ಜರುಗಿದಾಗ ನನ್ನ ಪುಸ್ತಕ ಅಮೃತಧಾರೆ ಆ ವೇದಿಕೆಯಲ್ಲಿ ಬಿಡುಗಡೆಗೊಳಿಸಿದ್ದರು. ಸವದತ್ತಿ ತಾಲೂಕ ಗ್ರಾಮೀಣ ಶಿಕ್ಷಕರ ಸಂಘ ಉದ್ಘಾಟನೆ ಸಂದರ್ಭದಲ್ಲಿ ನನ್ನ ಪುಸ್ತಕ ಬಿಡುಗಡೆ ಮಾಡಿದ್ದರು.ಬಹಳ ಜನಕ್ಕೆ ನಾವು ಹತ್ತಿರದ ಸಂಬಂಧಿಗಳು ಎಂಬ ವಿಷಯ ಗೊತ್ತಿರಲಿಕ್ಕಿಲ್ಲ.
ಆ ದಿನ ಹೆಬ್ಬಳ್ಳಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಅವರು ಹೆಬ್ಬಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ನಾನು ಕೂಡ ಧಾರವಾಡಕ್ಕೆ ಹೊರಡಲು ಅವರ ಜೊತೆ ಬಂದೆನು. ಬಸ್ ಬರುವ ಸಮಯದವರೆಗೂ ಹಲವು ವಿಚಾರಗಳನ್ನು ಒಬ್ಬರನೊಬ್ಬರು ಹಂಚಿಕೊಳ್ಳುತ್ತ ನಿವೃತ್ತಿಯ ಕಡೆಗೆ ವಿಚಾರಧಾರೆ ಹರಿಯಿತು. ಆವಾಗ ೨೦೨೪ ರ ಜನೇವರಿ ನಿವೃತ್ತಿ ಎಂಬ ಸಂಗತಿ ಹೇಳಿದರು,ಆಗ ನಾನು ಹೇಳಿದ ಮಾತು “ಎಲ್ಲರಂತೆ ಬರೀ ನಿವೃತ್ತಿ ಬೇಡ ಅದೊಂದು ವಿಭಿನ್ನ ಕಾರ್ಯ ಜರಗುವ ಮೂಲಕ ಆಗಲಿ.”ಎಂದಾಗ.
ಅದಕ್ಕವರು ಬೀಗರೇ ನೀವು ಆ ಸಂದರ್ಭದಲ್ಲಿ ನನ್ನ ಬಗ್ಗೆ ಒಂದು ಪುಸ್ತಕ ಮಾಡಬೇಕು ಎಂದರು.ನಾನದಕ್ಕೆ ನೋಡೋಣ ಎಂದಷ್ಟೇ ಹೇಳಲು. “ಅಲ್ಲಾ ಎಷ್ಟೆಲ್ಲ ಸಾಹಿತ್ಯ ಬರೆಯುವ ನೀವು ಬೀಗರ ಪುಸ್ತಕ ಮಾಡಲಾಗುವುದಿಲ್ಲವೇ.?” ಎಂದಾಗ “ಅದಕ್ಕೇಕೆ ಹೀಗಂತೀರಾ ಅದೊಂದು ವಿಭಿನ್ನ ರೀತಿಯ ಪುಸ್ತಕವಾಗಲಿ ಸಂಬಂಧಕ್ಕೆ ಬರೀ ಪುಸ್ತಕವೇನು.? ಸಜ್ಜನ ಎಂಬ ಪದಕ್ಕೆ ವಿಶಿಷ್ಟ ರೂಪ ಬರುವಂಥಹ ಕಾರ್ಯಕ್ರಮವಾಗಲಿ”ಎಂದು ನಕ್ಕಾಗ ಬೀಗರ ಹಾರೈಕೆ ನೋಡೋಣ ಎನ್ನುವಷ್ಟರಲ್ಲಿ ಹುಬ್ಬಳ್ಳಿ ಬಸ್ ಬಂದಿತ್ತು.
ಅವರು ಹುಬ್ಬಳ್ಳಿ ಬಸ್ ಹತ್ತಿ ಹೊರಟು ಹೋದರು.ಲಕ್ಕಮ್ಮನವರ ಗುರುಗಳು ನನ್ನ ತಾಯಿಯ ಸಹೋದರ,ನನ್ನ ತಂಗಿಯ ಗಂಡ.ನನ್ನ ಸಾಹಿತ್ಯಕ್ಕೆ ಸ್ಪೂರ್ತಿದಾತ.ನಾವಿಬ್ಬರೂ ಒಟ್ಟಿಗೆ ಪಿ.ಯು.ಸಿ ಓದಿದ್ದರೂ ಅಳಿಯ ಮಾವ ಎನ್ನುವುದು ಬಹಳ ಜನರಿಗೆ ಗೊತ್ತಾಗದಂತೆ ಸ್ನೇಹಿತರಂತೆ ಇದ್ದವರು.ಆಗ ಲಕ್ಕಮ್ಮನವರ ಗುರುಗಳು “ಸಜ್ಜನ ಅವರ ಪುಸ್ತಕ ವಿಭಿನ್ನವಾಗಿ ಮಾಡೋಣ.ಅವರ ನಿವೃತ್ತಿ ಸಂದರ್ಭದಲ್ಲಿ ವಿಶೇಷ ಪುಸ್ತಕ ಹೊರತರೋಣ’ಎಂದು ಹೇಳಿದರು.
ನಾನು ಧಾರವಾಡ ಬಸ್ ಹತ್ತಿ ನಮ್ಮೂರ ಕಡೆಗೆ ಪಯಣ ಬೆಳೆಸಿದೆ.ಈ ನಡುವೆ ನನ್ನ ಬರವಣಿಗೆ ವೃತ್ತಿ ಎರಡೂ ಜತೆಜತೆಯಾಗಿ ಸಾಗಿದವು.
ಇಷ್ಟೆಲ್ಲ ಹೇಳಲು ಕಾರಣ ಇಂದು ಅಶೋಕ ಪಥ ಎಂಬ ಕೃತಿ ಹೊರಬರುವ ಮೊದಲು ಎರಡು ವರ್ಷಗಳ ಹಿಂದೆ ಮಾತನಾಡಿದ ಸನ್ನಿವೇಶ ನೆನಪಿಸಿದಾಗ ೨೦೨೩ ಡಿಸೆಂಬರ್ ತಿಂಗಳಲ್ಲಿ ಹಲವಾರು ಚರ್ಚೆಗಳು ಈ ಕೃತಿ ಮಾಡುವ ಬಗ್ಗೆ ಹಿನ್ನಲೆಯಾಗಿ ಜರುಗಿದ ಬಗ್ಗೆ ಲಕ್ಕಮ್ಮನವರ ಗುರುಗಳು ನನಗೆ ತಿಳಿಸುವ ಹಲವು ಘಟನೆಗಳನ್ನು ನೆನೆದಾಗ “ಯಾವ ವ್ಯಕ್ತಿಯ ಹಣೆಯ ಬರಹದಲ್ಲಿ ಏನು ಬರೆದಿದೆಯೋ ಅದು ಜರುಗಿಯೇ ಜರಗುತ್ತದೆ.ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ”ಎಂಬ ಮಾತಿಗೆ ‘ಅಶೋಕ ಪಥ’ಕ್ಕೆ ಸಾಕ್ಷಿ.
ಬಾಲ್ಯದ ದಿನಗಳು ಹಾಗೂ ಶಿಕ್ಷಣ
ಸಜ್ಜನ ಅವರ ಬಾಲ್ಯದ ಕುರಿತು ಎರಡು ಮಾತು ಹೇಳಲೇಬೇಕು.ಶರಣ ದಂಪತಿಗಳಾದ ಮಲ್ಲಪ್ಪ ಶಾಂತಮ್ಮ ಅವರ ಉದರದಲ್ಲಿ ಜನೇವರಿ ೨೦ ೧೯೬೪ ರಲ್ಲಿ ತಾಯಿಯ ತವರು ಮನೆ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನಲ್ಲಿ ಜನಿಸಿದರು.ಮನೆಯಲ್ಲಿ ಆಗ ಎತ್ತಿನ ಗಾಣದ ಮೂಲಕ ಗಾಣದೆಣ್ಣಿಯನ್ನು ತಗೆಯುವ ಕಾಯಕ ಜೊತೆಗೆ ಕೃಷಿ ವೃತ್ತಿ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ಅಶೋಕ ಅವರು ತಂದೆಯ ಜೊತೆಗೆ ಅವರ ವೃತ್ತಿ ಇರುವ ಶಾಲೆಗಳಲ್ಲಿ ಅಂದರೆ ನವಲಗುಂದ ತಾಲೂಕಿನ ಇಬ್ರಾಹಿಂಪುರ. ನಂತರ ಬೆಳಹಾರ.ಚಿಲಕವಾಡ ನಂತರ ನವಲಗುಂದದಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು.ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಲಕ್ಷ್ಮೇಶ್ವರದಲ್ಲಿ.ಪಿ.ಯು.ಸಿ ಪ್ರಥಮ ವರ್ಷವನ್ನು ನರೇಗಲ್ಲದ ಅನ್ನದಾನೇಶ್ವರ ಕಾಲೇಜಿನಲ್ಲಿ.ಪಿ.ಯು.ಸಿ ದ್ವಿತೀಯ ವರ್ಷವನ್ನು ಎಚ್.ಎಸ್.ಕೋತಂಬ್ರಿ ಕಾಲೇಜ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದರು.ನಂತರ ಟಿ.ಸಿ.ಎಚ್ ಹುಬ್ಬಳ್ಳಿಯ ಕೆ.ಎಲ್.ಇ ಯ ಕಾಲೇಜಿನಲ್ಲಿ ಪದವಿಯನ್ನು ನೆಹರು ಪದವಿ ಮಹಾವಿದ್ಯಾಲಯದಲ್ಲಿ ವ್ಯಾಸಂಗಗೈದರು.
ಕೃಷಿ ಕಾಯಕದ ಕಷ್ಟದ ದಿನಗಳು
ಪದವಿ ಓದಿದ ಸಜ್ಜನರು ತಮ್ಮ ಸ್ವಂತ ಊರು ಇಂಗಳಹಳ್ಳಿಗೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿದರು.ಸಹೋದರಿಯೊಡನೆ ಪ್ರತಿನಿತ್ಯ ತಮ್ಮ ಕೃಷಿ ಜಮೀನಿಗೆ ಹೋಗುವುದು ಅಲ್ಲಿ ಕೃಷಿ ಕಾರ್ಯದ ಜೊತೆಗೆ ಜಾನುವಾರುಗಳನ್ನು ಮೇಯಿಸುವುದು ಸಾಯಂಕಾಲವಾಗುತ್ತಲೇ ದನಕರುಗಳನ್ನು ಮನೆಯ ಕಡೆಗೆ ಕರೆದುಕೊಂಡು ಹೋಗಿ ಅಲ್ಲಿ ಹಾಲು ಕರೆಯುವುದು ಗಾಣದ ಕೆಲಸ ಏನಾದರೂ ಇದ್ದರೆ ಅದನ್ನು ಮಾಡುವ ಮೂಲಕ ತಮ್ಮ ದೈನಂದಿನ ಬದುಕನ್ನು ಕಳೆಯತೊಡಗಿದರು.
ಇಂತಹ ಸಂದರ್ಭದಲ್ಲಿ ಒಂದು ಘಟನೆ ಅವರು ನೆನೆಯುತ್ತಾರೆ. ಒಂದು ಸಲ ಅವರು ತಮ್ಮ ಕೃಷಿ ಭೂಮಿಗೆ ಜಾನುವಾರುಗಳೊಂದಿಗೆ ಹೋಗಿರುವ ಸಂದರ್ಭದಲ್ಲಿ ದಿಡೀರನೇ ಮಳೆ ಆಗಮನವಾಗುತ್ತದೆ.ತಮ್ಮ ಕೃಷಿ ಜಮೀನಿನ ಮೇಲ್ಬಾಗದಲ್ಲಿನ ಒಡ್ಡೊಂದು ಒಡೆದು ನೀರು ಪೋಲಾಗಿ ನಿಂತುಕೊಳ್ಳಲು ಕೂಡ ಸ್ಥಳವಿಲ್ಲದಂತಾದ ಸಂದರ್ಭದಲ್ಲಿ ತಮ್ಮ ಜೀವ ಹಂಗು ತೊರೆದು ತಮ್ಮ ಜಾನುವಾರಗಳ ಬಾಲವನ್ನು ಹಿಡಿದುಕೊಂಡು ಈಜು ಬರದಿದ್ದರೂ ದೈರ್ಯದಿಂದ ಪಾರಾಗಿ ಬಂದಿರುವ ಸಂಗತಿಯನ್ನು ನೆನೆಯುವಾಗ ಅವರ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.ಅಂದರೆ ಧೈರ್ಯ ಇಲ್ಲದೇ ಹೋಗಿದ್ದರೆ ಈ ಅಶೋಕ ನಿಮ್ಮ ಮುಂದೆ ಇರುತ್ತಿರಲಿಲ್ಲ.ನಮ್ಮಲ್ಲಿನ ಧೈರ್ಯ ಮತ್ತು ದೇವರ ಬಗ್ಗೆ ಹೊಂದಿದ್ದ ಅಚಲ ಭಕ್ತಿ ತಮ್ಮನ್ನು ಮತ್ತು ಸಹೋದರಿಯನ್ನು ಜಾನುವಾರಗಳ ಸಹಾಯದಿಂದ ಪಾರಾಗುವಂತೆ ಮಾಡಿತು ಎಂಬ ಸಂಗತಿಯನ್ನು ಅಶೋಕ ಅವರು ನೆನೆಯುತ್ತಾರೆ.ಮನೆಯ ಹಿರಿಯ ಮಗನಾದ ಕಾರಣ ಇವರ ಮೇಲೆ ಮನೆತನದ ಜವಾಬ್ದಾರಿ ಇತ್ತು ಜೊತೆಗೆ ತಂದೆ ತಾಯಿಯ ಮಾರ್ಗದರ್ಶನ ಸಾಗಿತ್ತು ಎಂಬುದನ್ನು ಇವರು ನೆನೆಯುವರು.ಇವರು ಹಿರಿಯರು.ಎರಡನೇಯವರು ಸಹೋದರಿ ಅನ್ನಪೂರ್ಣ ಮೂರನೇಯವರು ಸಹೋದರ ಹುಲಿಯಪ್ಪ (ಮುತ್ತಪ್ಪ) ನಾಲ್ಕನೇಯವರು ಸಹೋದರಿ ಸುಚೇತಾ..ಐದನೇಯವರು..ಸಹೋದರಿ..ರೇಣುಕಾ..
ಸರ್ಕಾರಿ ಸೇವೆಯ ದಿನಗಳು
ಇವರು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಸೇವೆಗೆ ಸೇರಿದ ದಿನಾಂಕ…೭-೨-೧೯೯೦..ಅಖಂಡ ಜಿಲ್ಲೆ ದ.ಕ.ಕುಂದಾಪೂರ ತಾ.ಕಂಬದಕೋಣೆ ಗ್ರಾ.ಪಂ.ಕಾಲ್ತೋಡು ಅಂಚೆ..ಕಬ್ಸೆ ದಕ್ಷಿಣದ ಸ.ಕಿ.ಪ್ರಾ.ಶಾಲೆಗೆ ಸೇರ್ಪಡೆ ಇಲ್ಲಿ ಎರಡು ವರ್ಷ ಹತ್ತು ತಿಂಗಳು ಸಲ್ಲಿಸಿದ ಸೇವೆ ಅವಿಸ್ಮರಣೀಯ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ದಟ್ಟಾರಣ್ಯದಲ್ಲಿ ಶಾಲೆ ಅಂದಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೇ ನೆರಳು ನೀಡಿದರು.೨೩ ಮಕ್ಕಳಿದ್ದ ಶಾಲೆ ೬೨ ಮಕ್ಕಳಿಗೆ ಹೆಚ್ಚಿಸಿದ್ದು ಇವರ ಸಾಧನೆಗಳಲ್ಲೊಂದು. ಒಂದು ದಿನ ಇವರು ಉಳಿದುಕೊಂಡಿದ್ದ ಕೋಣೆಯಲ್ಲಿ ಹಾವೊಂದು ಕಟ್ಟಿಗೆಯ ತೊಲೆಯ ಮೇಲೆ ನೇತಾಡುತ್ತಿತ್ತಂತೆ ಭಯದಿಂದ ತಮ್ಮ ಕೊಠಡಿಯಿಂದ ಹೊರಬರಲು ಅಲ್ಲಿನ ಜನ ಹಾವು ಬಂದಿದ್ದು ಒಳ್ಳೆಯದಾಯಿತು..ಅದು ಶುಭ ಸೂಚಕ ಎಂದು ನುಡಿದರಂತೆ. ಅಂದರೆ ಸುಬ್ರಮಣ್ಯ ಸ್ವಾಮಿಯ ಆರಾಧಕರು ಹಾವು ಕಂಡರೆ ಶುಭ ಸೂಚಕ ಎಂದು ಹೇಳುವುದನ್ನು ನೆನೆಯುವ ಇವರು ಅಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಇವರಿಗೆ ತಮ್ಮ ಮನೆಯ ಮಗನ ರೀತಿ ನೋಡಿಕೊಂಡದ್ದನ್ನು ನೆನೆಯುವರು.ನಂತರ ಇವರು ವರ್ಗಗೊಂಡಿದ್ದು ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಸ.ಹಿ.ಪ್ರಾ.ಶಾಲೆಗೆ. ೨೧-೧೨-೧೯೯೨ ರಂದು ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಸ.ಹಿ.ಪ್ರಾ.ಶಾಲೆಗೆ ಕೋರಿಕೆ ವರ್ಗಾವಣೆಗೊಂಡು ಹಾಜರಾಗುವ ಮೊದಲು ಮೊದಲಿನ ಶಾಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರು ಇವರನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಟ್ಟುಕೊಟ್ಟ ಬಗ್ಗೆ ಭಾವುಕರಾಗಿ ನುಡಿಯುವರು.ಆದರೆ ವರ್ಗಾವಣೆಗೊಂಡ ಶಾಲೆ ತಮ್ಮ ಸ್ವಂತ ಸ್ಥಳ ಇಂಗಳಹಳ್ಳಿಯಿಂದ ಹತ್ತಿರವಿದ್ದ ಕಾರಣ ನಿತ್ಯವೂ ಇಂಗಳಹಳ್ಳಿಯಿಂದ ಹೆಬಸೂರಿಗೆ ಕಾಲ್ನಡಿಗೆಯಲ್ಲಿ ಒಂದು ಬದಿ ನಾಲ್ಕು ಮೈಲು ನಡೆದುಕೊಂಡು ಹೋಗಿ ಬರುತ್ತಿರುವ ಜೊತೆಗೆ ಅಲ್ಲಿಯ ಹಿರಿಯ ಗುರುಗಳು ಹಿರಿಯ ಗುರುಮಾತೆಯರು ಇವರನ್ನು ಮನೆ ತಮ್ಮ ಮಗನಂತೆ ನೋಡಿಕೊಂಡರು ಎಂದು ನೆನೆಯುವರು.
ಆ ಶಾಲೆಯಲ್ಲಿ ಇವರ ಕರ್ತವ್ಯ ಕ್ರಿಯಾಶೀಲತೆ ಕಂಡು ಅಂದಿನ ಪ್ರಪ್ರಥಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಶ್ರೀ ವಿ.ಎಮ್ ಪಾಟೀಲರವರು ಸಾಕ್ಷರದೀಪ ಸಮಿತಿಯ ಕ್ಷೇತ್ರ ಸಂಯೋಜಕರಾಗಿ ೧೯೯೪ ರಲ್ಲಿ ಇವರನ್ನು ನೇಮಿಸಿದರು.ಮುಂದುವರೆದು ಸಾಕ್ಷರೋತ್ತರ ಕಾರ್ಯಕ್ರಮದಲ್ಲಿಯೂ ೧೯೯೬ ರವರೆಗೆ ಕಾರ್ಯನಿರ್ವಹಿಸಿದರಂತೆ.ಆಗ ತಾಲೂಕಿನ ೧೯ ಗ್ರಾ.ಪಂ.ಗಳ ೪೮ ಗ್ರಾಮಗಳಲ್ಲಿ೧೧೬ ಶಾಲೆಗಳಲ್ಲಿ ಕಲಾ ಜಾಥಾ ಸಮೀಕ್ಷೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಇವರ ನೇತೃತ್ವದ ತಂಡದೊಂದಿಗೆ ನಡೆಸಿಕೊಟ್ಟಿದ್ದು ಸಾಕ್ಷರತಾ ಕೆಲಸದಲ್ಲಿ ಉತ್ತಮ ಕಾರ್ಯ ಜರುಗಿರುವುದನ್ನು ನೆನಪಿಸುವರು.ಮುಂದೆ ಒಂದು ವರ್ಷ ಸ.ಮಾ.ಹಿ.ಪ್ರಾ.ಶಾಲೆ ಇಂಗಳಹಳ್ಳಿಯಲ್ಲಿ ಮತ್ತು ಸ.ಮಾ.ಹಿ.ಪ್ರಾ.ಶಾಲೆ.ಶಿರಗುಪ್ಪಿಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸಿದರು.
ಕ್ಲಸ್ಟರ್ ಸಂಯೋಜಕರಾಗಿ
ಅಂದಿನ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ದಿ.ಶ್ರೀ ಎಸ್.ಆರ್.ಬೊಮ್ಮಾಯಿಯವರು ಜಾರಿಗೆ ತಂದ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ -೨.(DPEP-೨) ರಲ್ಲಿ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ *ಕ್ಲಸ್ಟರ್ ಸಂಯೋಜಕರಾಗಿ* ೭-೧೧-೧೯೯೭ ರಲ್ಲಿ ನೇಮಕಗೊಂಡು ಮುಂದುವರೆದು ಸರ್ವ ಶಿಕ್ಷಣ ಅಭಿಯಾನ ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ (ಸಿ.ಆರ್.ಪಿ.ಯಾಗಿ ) ೨೧-೭-೨೦೧೨ ರವರೆಗೆ .ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಕೋಳಿವಾಡ ಇಂಗಳಹಳ್ಳಿ ಮಂಟೂರ ಈ ನಾಲ್ಕು ಅಂದಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಿರಗುಪ್ಪಿ ಇಂಗಳಹಳ್ಳಿ ಕೋಳಿವಾಡ ಮಲ್ಲಿಗವಾಡ ಉಮಚಗಿ ಮಂಟೂರು ಭಂಡಿವಾಡ ನಾಗರಹಳ್ಳಿ ಈ ಎಂಟು ಗ್ರಾಮಗಳ ಇಪ್ಪತ್ತೊಂದು ಶಾಲೆಗಳ ಅಭ್ಯುದಯಕ್ಕಾಗಿ ರಾಜ್ಯಕ್ಕೆ ಮಾದರಿ ಕ್ಲಸ್ಟರ್ ಎನ್ನುವಂತೆ ಸಮಾಲೋಚನೆ ಸಭೆಗಳನ್ನು ತರಬೇತಿಗಳನ್ನು ಚಿಣ್ಣರ ಮೇಳಗಳನ್ನು ಸಮಗ್ರ ಮಕ್ಕಳ ಗಣತಿ ಪ್ರತಿಭಾ ಕಾರಂಜಿ ದಾಖಲಾತಿ ಹಾಜರಾತಿ ಉತ್ಸವ ಮೆಟ್ರಿಕ್ ಮೇಳ ಸಂತೆ ಮೇಳ ಕಾರ್ಯಾಗಾರ ಎಸ್.ಡಿ.ಎಮ್.ಸಿ.ಮೇಳ ಜೊತೆಗೆ ಒಂದನೂರ ನಾಲ್ಕಕ್ಕೂ ಅಧಿಕ ತರಬೇತಿಗಳನ್ನು ರಾಜ್ಯ ವಿಭಾಗ ಜಿಲ್ಲಾ ತಾಲೂಕ ಮಟ್ಟಗಳಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಪಡೆದುಕೊಂಡು ಅಷ್ಟೇ ತರಬೇತಿಗಳನ್ನು ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿದರು ಸಿ.ಆರ್.ಪಿ.ಯಾಗಿ ಹದಿನಾಲ್ಕು ವರ್ಷ ಎಂಟು ತಿಂಗಳು ಸತತವಾಗಿ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸೇವೇಗೈದ ಆ ದಿನಗಳು ಇವರ ಸೇವಾ ಕ್ಷೇತ್ರದ ಅವಿಸ್ಮರಣೀಯ ದಿನಗಳು ಸಾರ್ಥಕ ಸೇವೆ ಎನಿಸಿವೆ ಎಂಬುದನ್ನು ಹೇಳುವರು.
ಸಮೂಹ ಸಂಪನ್ಮೂಲ ವ್ಯಕ್ತಿಯಿಂದ ಮತ್ತೆ ಶಿಕ್ಷಕ ಬದುಕಿನತ್ತ
೨೨-೭-೨೦೧೨ ರಂದು ಸ.ಹಿ.ಪ್ರಾ.ಶಾಲೆ ಸಾಯಿನಗರ ಉಣಕಲ್ಲ ಹುಬ್ಬಳ್ಳಿ ತಾಲೂಕ ಈ ಶಾಲೆಗೆ ಸಿ.ಆರ್.ಪಿ.ಹುದ್ದೆಯಿಂದ ಸ್ಥಳ ನಿಯುಕ್ತಿಗೊಂಡು ಎರಡು ವರ್ಷ ಸೇವೆ ಸಲ್ಲಿಸುತ್ತಿದ್ದಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡಿ.ಪಿ.ಇ.ಪಿ.ಕುಸುಗಲ್ಲ ಹುಬ್ಬಳ್ಳಿ ತಾಲೂಕ ಇಲ್ಲಿ ನಿಯೋಜನೆಗೊಂಡು ಮುಖ್ಯೋಪಾಧ್ಯಾಯ ಹುದ್ದೆಯಲ್ಲಿ ಸದರಿ ಶಾಲೆಯನ್ನು ಎಸ್.ಡಿ.ಎಮ್.ಸಿ.ಪದಾಧಿಕಾರಿಗಳ ಊರ ಪ್ರಮುಖರ ಅಧಿಕಾರಿಗಳ ಸಹಕಾರದೊಂದಿಗೆ ಏಳನೇ ತರಗತಿವರೆಗೆ ಉನ್ನತೀಕರಿಸಿ ಈಗ ಈ ಶಾಲೆಯಲ್ಲಿ ನಾಲ್ಕು ಶಿಕ್ಷಕರಿಂದ ಎಂಟು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾg ಎಂದು ಹಮ್ಮೆಯಿಂದ ನುಡಿಯುವರು.ಮುಂದೆ ಇವರು ತಮ್ಮ ಧರ್ಮ ಪತ್ನಿಗೆ ಸ.ಹಿ.ಪ್ರಾ.ಶಾ. ಸಾಯಿನಗರ ಶಾಲೆಯಿಂದ ಹೆಬಸೂರಿನ ಸ.ಹಿ.ಪ್ರಾ.ಕ.ಹೆ.ಶಾಲೆಗೆ ಪರಸ್ಪರ ವರ್ಗಾವಣ್ಮೆವಕಾಶ ಒದಗಿಸಿದರು.ಈ ಹೆಬಸೂರ ಹೆಣ್ಣು ಮಕ್ಕಳ ಶಾಲೆಗೆ ಸೇರಿ ತರಗತಿ ಪ್ರವೇಶಿಸಿದಾಗ ಹೊಸದಾಗಿ ನೇಮಕಗೊಂಡವರಂತೆ ಇವರಲ್ಲಿನ ಉತ್ಸಾಹ ಉಲ್ಲಾಸ ಚಟುವಟಿಕೆಗಳು ನೂರ್ಮಡಿಗೊಂಡು ಮಕ್ಕಳ ಲೋಕದಲ್ಲಿ ತನ್ಮಯರಾಗಿ ಕಾರ್ಯ ನಿರ್ವಹಿಸಿದರು. ಕೋಮಲ ಮನಸಿನ ಕುಸುಮದಂತಿದ್ದ ಬಾಲೆಯರ ಸೃಜನಶೀಲತೆ ಇವರಲ್ಲಿ ಕೂಡ ಮೇಳೈಸಿದ್ದು ಜೀವನ ಪಾವನ ಸಾರ್ಥಕ ಸೇವೆ ಎಂದೆನಿಸಿತು.
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ವಿದ್ಯಾರ್ಥಿ
ಸಜ್ಜನ ಗುರುಗಳ ಪತ್ನಿಗೆ ಅನಾರೋಗ್ಯ ನಿಮಿತ್ತ ಮುಂಬೈ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಬೇಕಾಗಿ ಬಂತು. ಆಗಿನ ದಿನಗಳಲ್ಲಿ ಮುಂಬೈ ನಗರದಲ್ಲಿ ಇದ್ದು ಬರುವುದು ತುಂಬಾ ಕಷ್ಟ ಸಾಧ್ಯವಾಗಿತ್ತು. ಹುಬ್ಬಳ್ಳಿ ವೈದ್ಯರು ಸೂಚಿಸಿದ ಮುಂಬೈ ಆಸ್ಪತ್ರೆಯ ವಿಳಾಸದೊಂದಿಗೆ ಸಜ್ಜನ ಗುರುಗಳು ತಮ್ಮ ಪತ್ನಿಯೊಂದಿಗೆ ಹೋದರು.ಒಂದು ದಿನ ಆಸ್ಪತ್ರೆಯ ಕೊಠಡಿಯಲ್ಲಿ ತಂಗಿದರು.ವೈದ್ಯರು ಬರೆದುಕೊಟ್ಟ ಔಷಧಿ ತರಲು ತಾವಿದ್ದ ಕೊಠಡಿಯಿಂದ ಔಷಧವಿರುವ ಅಂಗಡಿಗೆ ತೆರಳಿದರು. ಔಷಧಿ ತಗೆದುಕೊಂಡು ಇನ್ನೇನು ಟೀ ಕುಡಿದು ಹೊರಡಬೇಕು ಎಂದು ಹತ್ತಿರ ಟೀ ಅಂಗಡಿ ಎಲ್ಲಿಯಾದರೂ ಸಿಗಬಹುದೇ ಎಂದು ಸುತ್ತಲೂ ಕಣ್ಣಾಡಿಸಿದರು.ಆಸ್ಪತ್ರೆಗೆ ಹತ್ತಿರದ ಸ್ಥಳದಲ್ಲಿ ಉಡುಪಿ ಹೊಟೇಲ್ ಒಂದು ಕಣ್ಣಿಗೆ ಬಿತ್ತು. ಅಲ್ಲಿಗೆ ಹೋಗಿ ತಿನ್ನಲು ತಿಂಡಿ ಹೇಳಿ ಪತ್ನಿಗೂ ಪಾರ್ಸಲ್ ಹೇಳಿದರು.ಅಂಗಡಿಯ ಮಾಲೀಕ ಇವರನ್ನೇ ದಿಟ್ಟಿಸುತ್ತಿದ್ದ. ಇವರಿಗೆ ಆಶ್ಚರ್ಯ ಇವರು ನನ್ನನ್ನೇಕೆ ನೋಡುತ್ತಿರುವರು.? ಎಂದು. ಆಗ ಆತ ಇವರ ಬಳಿ ಬಂದು ನೀವು ಸಜ್ಜನ ಗುರುಗಳಲ್ಲವೇ.? ಎಂದ ಆಗ ಇವರು ಹೌದು ಎಂದರು ತಕ್ಷಣ ಆತ ಇವರ ಕಾಲಿಗೆ ನಮಸ್ಕರಿಸಿ ಇವರು ನೌಕರಿ ಪ್ರಾರಂಭಿಸಿದ ದಿನಗಳ ಕುಂದಾಪುರ ತಾಲೂಕಿನ ಶಾಲೆಯ ವಿದ್ಯಾರ್ಥಿ ಎಂದು ತನ್ನ ಪರಿಚಯಿಸಿಕೊಂಡನು.
ಆಗ ಇಬ್ಬರಲ್ಲೂ ಆನಂದಭಾಷ್ಪ. ಯಾಕೆ ಸರ್ ತಾವು ಮುಂಬೈಗೆ ಬಂದಿದ್ದು ಎಂದು ಕೇಳಿದಾಗ ತಮ್ಮ ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದಿರುವ ಸಂಗತಿ ಇವರು ತಿಳಿಸಿದರು.ಇವರು ಹೇಳಿದ ಪಾರ್ಸಲ್ ಸಹಿತವಾಗಿ ಆತ ಆಸ್ಪತ್ರೆಯ ಇವರಿದ್ದ ಕೋಣೆಗೆ ಬಂದು ಇವರ ಪತ್ನಿಯ ಯೋಗಕ್ಷೇಮ ವಿಚಾರಿಸಿ ದೈರ್ಯದಿಂದ ಇರಲು ತಿಳಿಸಿ ನಂತರ ಸಜ್ಜನ ಗುರುಗಳಿಗೆ ನೀವಿನ್ನು ಹೊಟೇಲ್ವರೆಗೂ ಬರಬೇಡಿ ನಮ್ಮ ಹೊಟೇಲ್ ಕೆಲಸಗಾರರು ಬೆಳಿಗ್ಗೆ ತಿಂಡಿ ಚಹಾ ಮದ್ಯಾಹ್ನ ಮತ್ತು ರಾತ್ರಿ ಇಲ್ಲಿಗೆ ತಂದು ಕೊಡುವರು.ತಮಗೇನಾದರೂ ಹಣದ ಅವಶ್ಯಕತೆ ಎನಿಸಿದರೆ ತಿಳಿಸಿ ಎಂದು ಗುರುಗಳಿಗೆ ಕೈ ಮುಗಿದು ತಿಳಿಸಿ ಹೋದನು.ಅದರಂತೆ ಒಂದು ವಾರಗಳ ಕಾಲ ತನ್ನ ಹೊಟೇಲ್ನಿಂದ ಟೀ ಟಿಫಿನ್ ಊಟ ಎಲ್ಲ ಏರ್ಪಾಟು ಮಾಡುವ ಜೊತೆಗೆ ಇವರು ಆಸ್ಪತ್ರೆಯಿಂದ ಡಿಸ್ ಚಾರ್ಜ ಆಗುವಾಗ ಬಂದು ಅಟೋ ಮಾಡಿಕೊಟ್ಟು ನಮಸ್ಕರಿಸಿ ಹೋಗುವಾಗ ವಿದ್ಯಾರ್ಥಿ ಗುರುಗಳ ಬಾಂಧವ್ಯಕ್ಕೆ ಇದಕ್ಕಿಂತ ನಿದರ್ಶನ ಬೇರೆ ಯಾವ ಪ್ರಶಸ್ತಿಯಲ್ಲೂ ಸಿಗುವುದಿಲ್ಲ ಎಂಬ ಇವರ ಅಂತಃಕರಣ ನುಡಿಯುತ್ತಿರುವ ಸಂದರ್ಭದಲ್ಲಿ ಕಣ್ಣಂಚಲ್ಲಿ ತನ್ನಷ್ಟಕ್ಕೆ ತಾನೇ ಆನಂದ ಭಾಷ್ಪಗಳು ಹರಿದು ಬರುತ್ತಿದ್ದವು. ಮತ್ತೇನಾದರೂ ಕಾರ್ಯ ನಿಮಿತ್ತ ಮುಂಬೈಗೆ ಬಂದರೆ ತಪ್ಪದೇ ತಮ್ಮ ಹೊಟೇಲ್ ಗೆ ಬರುವಂತೆ ಕೂಡ ಆ ವಿದ್ಯಾರ್ಥಿ ವಿನಂತಿಸಿದ್ದನ್ನು ಸಜ್ಜನ ಗುರುಗಳು ನನಗೆ ಹೇಳುವಾಗ ಇಂದಿಗೂ ಕೂಡ ಗುರು ಶಿಷ್ಯ ಸಂಬಂಧ ನನ್ನೊಡನೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರ ಕಣ್ಣಂಚಲ್ಲಿ ನೀರು ಜಿನುಗುತ್ತಿರುವುದನ್ನು ಕಂಡೆನು.ಅಂತಹ ಹೃದಯವಂತರು ನಮ್ಮ ಸಜ್ಜನ ಗುರುಗಳು
ವಿಶಿಷ್ಟ ಕಾರ್ಯಕ್ಕೆ ಪ್ರೋತ್ಸಾಹ
ಹೆಬಸೂರ ಶಾಲೆಯ ಪಕ್ಕಕ್ಕೆ ನಿಗದಿ ಹಳ್ಳ ಹಾಗೂ ಬೆಣ್ಣಿ ಹಳ್ಳ ಸಂಗಮವಿದ್ದು ಮೂರು ವರ್ಷಗಳಲ್ಲಿ ಆರು ಸಾರಿ ಹಳ್ಳದ ನೀರು ಉಕ್ಕೇರಿ ಹೊರಚೆಲ್ಲಿ ಎಲ್ಲಾ ಕೊಠಡಿಗಳಲ್ಲಿ ಪ್ರವಾಹದ ನೀರು ಹರಿದು ಮಕ್ಕಳ ಕಲಿಕೆಗೆ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಯಿತು.ಇಷ್ಟೇ ಅಲ್ಲ ಸಿಮೆಂಟ ತಗಡಿನ ಸೀಟುಗಳ ಆರೇಳು ಕೊಠಡಿಗಳು ಪೂರ್ಣ ಸಿಥಿಲಗೊಂಡವು.ಆಗ ಗ್ರಾಮಸ್ಥರ ಬೃಹತ್ ಸಭೆ ಕರೆದು ಒಕ್ಕೊರಲಿನ ಧ್ವನಿಯಾಗಿ ಸಚಿವರುಗಳ ಅಧಿಕಾರಿಗಳ ದುಂಬಾಲುಬಿದ್ದು ಯಶಸ್ವಿಯಾಗಿ ವಿವೇಕ ಶಾಲೆ ಯೋಜನೆಯಲ್ಲಿ ಮೂರು ಕೊಠಡಿಗಳನ್ನು ಹಾಗೂ ಸಿ.ಎಸ್.ಆರ್.ಯೋಜನೆಯಲ್ಲಿ ನಾಲ್ಕು ಕೊಠಡಿಗಳನ್ನು ಎಸ್.ಡಿ.ಎಮ್.ಸಿ.ಯವರು ಶಿಕ್ಷಕರು ಪಾಲಕರೊಡಗೂಡಿ ಮಂಜೂರಾಗಲು ಊರವರ ಸಹಕಾರ ಜೊತೆಗೆ ಸೇವೆ ಸಲ್ಲಿಸುವ ವೃತ್ತಿಬಾಂಧವರ ಸಹಕಾರ ಮರೆಯಲಾಗದ್ದು .ಇದು ನನ್ನ ಸೇವಾ ಪಥದಲ್ಲಿ ನಿವೃತ್ತಿ ಅಂಚಿನಲ್ಲಿ ಒಂದು ಸುವರ್ಣ ಸಮಯವೆನಿಸಿತು.ಈಗ ಇದೇ ಶಾಲೆಗೆ ದಾನಿಗಳ ಸಹಕಾರದಿಂದ ನಮ್ಮ ಕನಸಿನ ಶಾಲೆ ಎಂದು ಬೃಹತ್ ಕ್ರಿಯಾಯೋಜನೆ ಹಾಕಿಕೊಂಡಿದ್ದೇವೆ.೩೧-೦೧-೨೦೨೪ ರಂದು ನಿವೃತ್ತಿಯಾಗಿ ಗ್ರಾಮಸ್ಥರನ್ನು ಶಾಲೆಯನ್ನು ವಿದ್ಯಾರ್ಥಿನಿಯರನ್ನು ಗೌರವಾನ್ವಿತ ವೃತ್ತಿ ಬಾಂಧವರನ್ನು ಬಿಟ್ಟು ಬರುವುದು ಬಿಟ್ಟು ಇರುವುದು ನನಗೆ ಕಷ್ಟ ಕಷ್ಟ ತುಂಬಾ ಕಷ್ಟ ಭಾವ ಪರವಶನಾಗಿದ್ದೇನೆ.ಶಿಕ್ಷಣವೇ ಶಕ್ತಿ.ಶಿಕ್ಷಣವೇ ಯುಕ್ತಿ ಶಿಕ್ಷಣವೇ ಆಸ್ತಿ ಮಕ್ಕಳು ದೇವರ ತೋಟದ ಸುಂದರ ಪುಷ್ಪಗಳು ಮಕ್ಕಳೆಮಗೆ ಬದುಕು ಮಕ್ಕಳು ನಾಡಿನ ನಾಡಿ ಯಾರೂ ಕದಿಯದ ಆಸ್ತಿ ಶಿಕ್ಷಣ ಆದರೂ ಒಂದು ಸಂದರ್ಭದಲ್ಲಿ ಹಿರಿಯರು ಹೇಳಿದ ಉಲ್ಲೇಖಿತ ನಾಣ್ಣುಡಿ …ಸೈನಿಕರಿಗೆ ಸಾವಿಲ್ಲ …ಶಿಕ್ಷಕರಿಗೆ ನಿವೃತ್ತಿಯಿಲ್ಲ….ಎಂದೆಂದಿಗೂ ಅಮರ ……ಎಂದು ಭಾವುಕರಾಗುವ ಸಜ್ಜನ ಗುರುಗಳ ನಿವೃತ್ತಿ ಸಮಾರಂಭವನ್ನು ಶಾಲೆಯಲ್ಲಿ ಊರಿನ ಜನ ಹಬ್ಬದಂತೆ ಬೀಳ್ಕೊಡುವ ಸಮಾರಂಭ ಜರುಗಿಸಿದ್ದನ್ನು ನೋಡಿದರೆ ಶಿಕ್ಷಕ ವೃತ್ತಿ ಧನ್ಯ ಎಂದು ಓರ್ವ ಸಂಪಾದಕನಾಗಿ ನಾನು ಹೇಳಬಲ್ಲೆ.ಅಂತಹ ಕಾರ್ಯಕ್ರಮ ಆ ದಿನ ಆಯೋಜನೆಗೊಂಡು ಬೀಳ್ಕೊಡುವ ಸಮಾರಂಭದ ಕ್ಷಣ ಚಿತ್ರಗಳನ್ನು ಗುರುಗಳು ನನಗೆ ಕಳಿಸಿದ್ದನ್ನು ನೋಡಿ ಇವರ ಬದುಕು ಸಾರ್ಥಕ ಎಂದು ಅಭಿನಂದಿಸಿದೆ.ಇಂತಹ ಗುರುಗಳಿಗೆ ಅಶೋಕ ಪಥ ಓರ್ವ ಸಂಪಾದಕನಾಗಿ ನಾನು ಸಮರ್ಪಿಸುತ್ತಿರುವುದು ನನ್ನ ಹೆಮ್ಮೆ.
ಪ್ರೇಮಿಗಳಿಗೆ ಸ್ಪೂರ್ತಿದಾತ
ನಾವು ಜಾತಿ ಅನ್ನೋ ಪದವನ್ನು ಯಾವತ್ತೂ ನಮ್ಮ ಜೀವನದಲ್ಲಿ ಪ್ರಯೋಗಿಸಲಬಾರದು ಎಂಬುದಕ್ಕೆ ನಿದರ್ಶನ ನಮ್ಮ ಈ ಸಜ್ಜನ ಗುರುಗಳು ಅದು ಮನೆಯಲ್ಲಾಗಲಿ ಹೊರಗೆ ಆಗಲಿ ನಮ್ಮ ಕನಸು ಮನಸಿನಲ್ಲಿ ಬರಬಾರದು ಎಂದು ಹೇಳುವ ಇವರು ತಮ್ಮ ಅಳಿಯ ಬೆಂಗಳೂರಿನಲ್ಲಿ ಕಾರ್ಯ ಮಾಡುತ್ತಿರುವಾಗ ಸಹೋದರಿ ಮದುವೆಯ ಏರ್ಪಾಡು ಮಾಡಲು ತೊಡಗುತ್ತಾರೆ. ಬೆಂಗಳೂರಿನಲ್ಲಿ ಅಳಿಯ ತನ್ನೊಂದಿಗೆ ಕೆಲಸ ನಿರ್ವಸುತ್ತಿರುವ ತಮ್ಮದೇ ಆಫೀಸಿನ ಯುವತಿಯನ್ನು ಪ್ರೀತಿಸುತ್ತಿರುವನು.ಆಗ ಅಳಿಯ ಬಂದು ಮಾವನವರಾದ ಅಶೋಕ ಅವರಲ್ಲಿ ಈ ವಿಷಯ ತಿಳಿಸುತ್ತಾನೆ.ಅದು ಬೇರೆ ಸಂಬಂಧವಾಗುತ್ತದಲ್ಲ ಎಂಬುದನ್ನು ಅರಿತ ಸಜ್ಜನ ಗುರುಗಳು ತಮ್ಮ ಅಕ್ಕನೊಂದಿಗೆ ಮಾತುಕತೆಯಲ್ಲಿ ತೊಡಗುತ್ತಾರೆ.ದೇವರು ಸೃಷ್ಟಿ ಮಾಡಿದ್ದು ಹೆಣ್ಣು ಗಂಡು ಎರಡು ಜಾತಿ ಇದಕ್ಕೆ ನಾವು ನೂರೆಂಟು ಪದಗಳನ್ನು ಹೇಳುತ್ತೇವೆ.ತಾನು ಮೆಚ್ಚಿದ ಯುವತಿಯೊಂದಿಗೆ ಅಳಿಯ ಮದುವೆ ಆದರ ಜೀವನ ಪರ್ಯಂತ ಸುಖದಿಂದ ಬಾಳಬಲ್ಲನು ಎಂದೆಲ್ಲ ಅಕ್ಕನಿಗೆ ಹೇಳಿದಾಗ ಕನ್ಯೆ ನೋಡಲು ತೊಡಗಿದ್ದ ಅಕ್ಕ ತಮ್ಮನ ಮಾತಿಗೆ ಆಯಿತು ಎಂದಾಗ ಬೆಂಗಳೂರಿಗೆ ಹೋಗಿ ಯುವತಿಯ ಮನೆಯವರನ್ನು ಒಪ್ಪಿಸಿ ವಿವಾಹ ಮಾಡಿಸುತ್ತಾರೆ.ಈ ಕುಟುಂಬ ಇಂದು ತಮ್ಮ ಮಕ್ಕಳೊಂದಿಗೆ ಸುಖ ಜೀವನ ಸಾಗಿಸುತ್ತಿರುವುದನ್ನು ಕಂಡಾಗ ಅವರ ಅಳಿಯನ ಪ್ರೀತಿ ಆ ಯುವತಿಯ ಕಾಳಜಿ ಯಾರಿಗೂ ಸಿಗದು ಎಂಬ ಭಾವ ವ್ಯಕ್ತಪಡಿಸುತ್ತಾರೆ.ಅಂದರೆ ಸಜ್ಜನ ಗುರುಗಳಿಗೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಒಂದು ಹೃದಯ ಮತ್ತೊಂದು ಹೃದಯದಲ್ಲಿ ಬೆರೆತಾಗ ಅವರನ್ನು ಒಗ್ಗೂಡಿಸುವ ಮನೋಭಾವ ಇದೆಯಲ್ಲ ಅದು ಮನುಷ್ಯರಾದ ನಮ್ಮಲ್ಲಿ ಇರಬೇಕು.ಅವರ ಅಳಿಯನಂತೂ ಮಾವನ ಬಗ್ಗೆ ಬಹಳ ಪ್ರೀತಿಯಿಂದ ಹೇಳುವ ಮಾತು “ನಮ್ಮ ಮಾವ ಅಂದು ಮಧ್ಯಸ್ಥಿಕೆ ವಹಿಸದೇ ಹೋಗಿದ್ದರೆ ಇಂದು ನಮ್ಮ ದಾಂಪತ್ಯದ ಬದುಕು ಸುಖದಿಂದ ಇರುತ್ತಿರಲಿಲ್ಲ” ಎನ್ನುವ ಮೂಲಕ ಮಾವನಿಗೆ ಕೃತಜ್ಞತೆ ಸಲ್ಲಿಸುತ್ತಿರುವನು.
ಅರಸಿ ಬಂದ ಪುರಸ್ಕಾರಗಳು
೧) ೧೯೯೭ ರಲ್ಲಿ ಅತ್ಯುತ್ತಮ ಸಾಕ್ಷರತಾ ಕಾರ್ಯಕ್ರಮ ಸಂಯೋಜಕ
೨) ೨೦೦೩ ರಲ್ಲಿ ತಾಲೂಕಾ ಅತ್ಯುತ್ತಮ ಸಿ.ಆರ್.ಪಿ.ಪ್ರಶಸ್ತಿ
೩) ೨೦೦೪ ಪರಿವಾರ ಸಂಸ್ಥೆ ಧಾರವಾಡ ಇವರಿಂದ ವರ್ಷದ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ
೪) ೨೦೦೫ ರಲ್ಲಿ ಜಿಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
೫) ೨೦೧೯ ರಲ್ಲಿ ಚೆನ್ನಬಸವ ಶ್ರೀ ಎಜುಕೇಶನ್ ರೂರಲ್ ಸೊಸಾಯಿಟಿ ರಿ.ಇವರಿಂದ ಚೆನ್ನಬಸವ ಶ್ತೀ ರಾಜ್ಯ ಪ್ರಶಸ್ತಿ
೬) ೨೦೨೨ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ. ಹಾಗೂ ಅಕ್ಷರ ತಾಯಿ ಲೂಸಿ ಸಾಲ್ಡಾನಾರವರ ಸೇವಾ ಸಂಸ್ಥೆ ಧಾರವಾಡ ಇವರಿಂದ ರಾಜ್ಯ ಮಟ್ಟದ ಶಿಕ್ಷಕ ರತ್ನ
ಅಭಿನಂದನಾ ಸಮಾರಂಭ
ಪೆಬ್ರುವರಿ ೧೧ ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಿವೃತ್ತಿ ನಿಮಿತ್ತ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಅಶೋಕ ಪಥಕ್ಕೆ ಇವರ ಒಡನಾಡಿಗಳು.ವಿದ್ಯಾರ್ಥಿಗಳು ಇವರ ಜೊತೆಗೆ ಸೇವೆಯನ್ನು ನೆನೆದು ಬರಹ ಕವನಗಳನ್ನು ನೀಡಿದ್ದು ಅವುಗಳನ್ನು ಈ ಕೃತಿಯಲ್ಲಿ ಅಳವಡಿಸಿರುವೆನು.ಈ ಕೃತಿಯಲ್ಲಿ ಮೂಡಿ ಬಂದ ಬರಹಗಳು ಕವನಗಳು ರಚಿಸಿದ ಎಲ್ಲ ವೃತ್ತಿ ಬಾಂಧವರಿಗೆ ಸಜ್ಜನ ಕುಟುಂಬದ ಪರವಾಗಿ ಓರ್ವ ಸಂಪಾದಕನಾಗಿ ಧನ್ಯವಾದಗಳನ್ನು ಅರ್ಪಿಸುವೆ.ವಿದ್ಯಾರ್ಥಿಗಳು ಕೂಡ ಗುರುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಗುರುಗಳ ಆಶೀರ್ವಾದ ಅವರೆಲ್ಲರ ಮೇಲಿರಲಿ ಎಂದು ಆಶಿಸುವೆನು.ಈ ಕೃತಿಯಲ್ಲಿ ಸಜ್ಜನರವರ ಬದುಕಿನ ಚಿತ್ರಪುಟಗಳನ್ನು ಅಳವಡಿಸಿರುವೆ.ಅವುಗಳು ಅವರ ವೃತ್ತಿ ಜೊತೆಗೆ ಕುಟುಂಬದ ಕ್ಷಣಗಳು ಕೂಡ ಒಳಗೊಂಡಿವೆ.ಅವುಗಳನ್ನು ಅವರ ಅಲ್ಬಂನಿಂದ ತೆಗೆದುಕೊಂಡಿರುವೆ.ಇದು ಒಂದು ಬದುಕಿನ ಕ್ಷಣಗಳನ್ನು ಅವಲೋಕನ ಮಾಡುವ ನೆನಪಿನ ಬುತ್ತಿ. ಈ ಎಲ್ಲದರ ಹಿಂದೆ ಅವರ ಪತ್ನಿಯವರ ಸಹಕಾರ ಇರುವುದು.ಅವರಿಗೂ ಸಹೋದರ ಸಹೋದರಿಯರಿಗೂ ಸಜ್ಜನ ಮತ್ತು ಹೊಸಗಾಣಿಗೇರ ಸಮಸ್ತ ಪರಿವಾರದವರಿಗೂ. ಗ್ರಾಮೀಣ ಶಿಕ್ಷಕರ ಸಂಘಟನೆಯ ರಾಜ್ಯ ಜಿಲ್ಲೆ ತಾಲೂಕುಗಳ ಎಲ್ಲ ಪದಾಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸುವೆ.
ಈ ಕೃತಿ ರೂಪುಗೊಳ್ಳಲು ಬೆನ್ನುಡಿ ನೀಡಿದ ಉಪ್ಪಿನ ಗುರುಗಳಿಗೂ ಪುಟ ವಿನ್ಯಾಸದ ಸಂದರ್ಭದಲ್ಲಿ ಸಹಕರಿಸಿದ ಎಲ್.ಐ.ಲಕ್ಕಮ್ಮನವರ ಗುರುಗಳಿಗೂ ಬಿಜಿ ಪ್ರಿಂಟರ್ಸ ಧಾರವಾಡದ ಬಿಜಿ ಪ್ರಿಂಟರ್ಸ ಮಾಲೀಕರಿಗೂ ಮುಖಪುಟ ವಿನ್ಯಾಸ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆಗೈದು ನಿವೃತ್ತರಾಗಿರುವ ಮುಖಪುಟ ವಿನ್ಯಾಸ ಕಲಾವಿದರಾದ ಕೆ.ಕೆ.ಮಕಾಳಿಯವರಿಗೂ.ಅಭಿನಂದನಾ ಸಮೀತಿಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ವಿವಿಧ ಸಮೀತಿಗಳನ್ನು ರಚಿಸಲಾಗಿದ್ದು ಆ ಸಮೀತಿಯ ಎಲ್ಲ ಸಹೃದಯ ವೃತ್ತಿ ಬಾಂಧವರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವೆ.
ವೈ.ಬಿ.ಕಡಕೋಳ
ಸಂಪಾದಕರು
ಅಶೋಕ ಪಥ
ಅಭಿನಂದನಾ ಗ್ರಂಥ
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ