ಮುನವಳ್ಳಿಯ ಪಂಚಮುಖಿ ಹನುಮಾನ ಮಂದಿರ.
ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಪಟ್ಟಣ ಪ್ರದೇಶ ಮುನವಳ್ಳಿ.ಇದು ದೇವಗಿರಿ ಯಾದವರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಪಂಚಲಿಂಗೇಶ್ವರ ದೇವಾಲಯ.ವಿಷ್ಣುತೀರ್ಥರ ಆಶ್ರಮ ಕಟ್ಟೆ, ಪ್ರಸಿದ್ದ ಮಲಪ್ರಭೆ ನದಿಯ ಪಾತ್ರದಲ್ಲಿರುವ ಮುನಿಗಳ ಹಳ್ಳಿ.ಇಲ್ಲಿ ಅನೇಕ ಮಠಮಾನ್ಯಗಳು ದೇವಾಲಯಗಳು ಪ್ರಸಿದ್ದಿ ಹೊಂದಿವೆ.ಸವದತ್ತಿಯಿಂದ ೧೬ ಕಿ.ಮೀ ಅಂತರದಲ್ಲಿರುವ ಈ ಗ್ರಾಮದಲ್ಲಿ ಬೆಟ್ಟದ ಮೇಲೆ ಶಿರಡಿ ಸಾಯಿಬಾಬಾ ಮಂದಿರದ ಹತ್ತಿರದಲ್ಲಿ ದಕ್ಷಿಣಾಭಿಮುಖವಾಗಿರುವ ಪಂಚಮುಖಿ ಹನುಮಾನ ಮಂದಿರವಿದೆ.
ಪಂಚಮುಖಿ ಹನುಮನ ಉದಯದ ಹಿನ್ನಲೆ
ರಾಮಾಯಣದಲ್ಲಿ ಬರುವ ವಿವರಣೆಯ ಪ್ರಕಾರ ರಾಮ ಮತ್ತು ರಾವಣರ ಹುದ್ದದ ಸಮಯದಲ್ಲಿ ರಾವಣನು ಮಹೀ ರಾವಣನ ಸಹಾಯ ಹಸ್ತವನ್ನು ಕೋರುತ್ತಾನೆ.ಪಾತಾಳ ಲೋಕಕ್ಕೆ ಅಧಿಪತಿಯಾಗಿರುವ ಮಹಿರಾವಣನು ಹನುಮಂತನು ರೂಪಿಸಿರುವಂತಹ ವಾನ ಶಯನ ಮಂದಿರ ಅಂದರೆ ಹನುಮಂತನ ಬಾಲದಿಂದ ರೂಪಿತವಾಗಿರುವ ಶ್ರೀ ರಾಮ ಲಕ್ಷ್ಮಣ ಶಯನ ಮಂದಿರದಿಂದ ಮಹೀ ರಾವಣನು ವಿಭೀಷಣನ ರೂಪದಲ್ಲಿ ಬಂದು ರಾಮ ಲಕ್ಷಣರಿಬ್ಬರನ್ನೂ ಅಪಹರಿಸುತ್ತಾನಂತೆ
ಹೀಗೆ ಅಪಹರಿಸಿಕೊಂಡು ಮಹೀ ರಾವಣನು ಶ್ರೀ ರಾಮ ಲಕ್ಷಂನರನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ.ಈ ವಿಷಯವನ್ನು ಅರಿತ ಹನುಮಂತನು ಪಾತಾಳಕ್ಕೆ ಜಿಗಿದು ಶ್ರೀ ರಾಮ ಲಕ್ಷಣರನ್ನು ಹುಡುಕಲು ಆರಂಭಿಸುತ್ತಾನೆ. ಪಾತಾಳ ಲೋಕದಲ್ಲಿ ಐದು ದಿಕ್ಕಿನಲ್ಲಿ ದೀಪಗಳನ್ನು ಒಂದೇ ಬಾರಿಗೆ ಛೇಧಿಸಿದರೆ ಮಾತ್ರವೇ ಮಹೀ ರಾವಣನ ಅವಸಾನ ಎಂದು ತಿಳಿದಿದ್ದ ಹನುಮಂತನು ಪಂಚಮುಖ ಆಂಜನೇಯ ಸ್ವಾಮಿಯಾಗಿ ಆವತರಿಸುತ್ತಾನೆ.
ಪಂಚಮುಖ ಆಂಜನೇಯನ(ಐದು ಮುಖಗಳು)ಅವತಾರದಲ್ಲಿ ಒಂದು ಮುಖ ಆಂಜನೇಯನದ್ದಾದರೆ ಇನ್ನುಳಿದ ನಾಲ್ಕು ಮುಖಗಳು ವರಾಹ,ನರಸಿಂಹ,ಗರುಡ,ಹಯಗ್ರೀವ.ಹೀಗೆ ಐದು ಮುಖಗಳಿಂದ ಹನುಮಂತನು ಪಂಚಮುಖಿ ಹನುಮಂತನಾಗಿ ಐದು ದೀಪಗಳನ್ನು ಒಂದೇ ಏಟಿಗೆ ಶಾಂತಗೊಳಿಸಿ ಮಹೀ ರಾವಣನ ವಧೆ ಮಾಡುತ್ತಾನೆ.
ಹಾಗೇ ಮಹೀ ರಾವಣನ ವಧೆಯ ನಂತರ ಹನುಮಂತನು ರಾಮ ಲಕ್ಷ್ಮಣರನ್ನು ತಬ್ಬಿ ಎರಡೂ ತೋಳುಗಳ ಮೇಲೆ ಕೂರಿಸಿಕೊಂಡು ಭೂಮಿಗೆ ತರುತ್ತಾನಂತೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
*ದೇವಾಲಯದ ಹಿನ್ನಲೆ*
ಹಲವು ವರ್ಷಗಳ ಹಿಂದೆ ಈಗಿರುವ ದೇವಾಲಯದ ಹತ್ತಿರ ಮಂಗವೊಂದರ ಸಾವು ಸಂಭವಿಸಿತು.ಆಗ ಅಲ್ಲಿದ್ದ ಹಿರಿಯರೆಲ್ಲ ಸೇರಿ ಅದನ್ನು ಈಗಿರುವ ದೇವಾಲಯವಿದ್ದ ಸ್ಥಳದಲ್ಲಿ ಸಂಸ್ಕಾರದಂತೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದರು.ಆಗ ಅವರಿಗೆ ಇಲ್ಲೊಂದು ಹನುಮಾನ ಮಂದಿರವನ್ನು ಏಕೆ ನಿರ್ಮಿಸಬಾರದು ಎಂಬ ಯೋಚನೆ ಮೂಡಿತು.ಹಾಗೆಯೇ ದೇವಸ್ಥಾನಕ್ಕೆ ಅನುಕೂಲವಾಗುವಷ್ಟು ಜಾಗೆಯನ್ನು ಪಡೆದುಕೊಂಡಿದ್ದು ಆಯಿತು.ದೇವಾಲಯಕ್ಕೆ ಸಮೀತಿಯೊಂದು ರಚನೆಯಾಯಿತು. ಆಗ ಅಧ್ಯಕ್ಷರಾಗಿ ಮಾರುತಿ ಬಾರಕೇರ,ಯಲ್ಲಪ್ಪ ಹೊಸಮನಿ. ಉಪಾಧ್ಯಕ್ಷರಾಗಿ,ಮಾರುತಿ ಬೆಹರೆ ಕಾರ್ಯದರ್ಶಿಯಾಗಿ ಶಾಂತವ್ವ ಹಟ್ಟಿ ಖಜಾಂಚಿಯಾಗಿ ಪಂಚಪ್ಪ ದೊಡಮನಿ.ಸಂಗಪ್ಪ ಕೊಟ್ಟರಶೆಟ್ಟರ.ಮಾರುತಿ ಕದಂ.ರವಿ ಹಡಪದ.ಪರಪ್ಪ ದೊಡವಾಡ.ಪಂಚಲಿಂಗೇಶ ಬಾರಕೇರ.ಮಲ್ಲಿಕಾರ್ಜುನ ಜಾಲಗಾರ.ಗುರುರಾಜ ನಡನಳ್ಳಿ.ಪೀರಪ್ಪ ತುಕ್ಕೋಜಿ. ಹೀಗೆ ಸದಸ್ಯರಿದ್ದ ಸಮೀತಿ ರಚನೆಯಾಯಿತು ಈ ದೇವಾಲಯಕ್ಕೆ ಜಾಗೆಯಿದ್ದ ಸಂದರ್ಭ ಶಿರಡಿ ಸಾಯಿಬಾಬಾ ಮಂದಿರಕ್ಕೆ ಹಿಮಾಲಯದಲ್ಲಿ ತಪಗೈದಿದ್ದ ಮಹಾತ್ಮರಾಗಿದ್ದ ಬೆಳ್ಳಿಕಟ್ಟಿ ಬಾಬಾರ ಆಗಮನವಾಗಿತ್ತು. ಆ ಸಂದರ್ಭ ಇಲ್ಲಿನ ಸಮೀತಿಯವರು ಈ ಸ್ಥಳದಲ್ಲಿ ಹನುಮಾನ ಮಂದಿರ ನಿರ್ಮಿಸಬೇಕೆಂದಿದ್ದೇವೆ ತಮ್ಮ ಸಲಹೆ ನೀಡಿ ಎಂದು ಕೋರಿಕೊಂಡರು.ಆಗ ಅವರು ಮುನವಳ್ಳಿಯಲ್ಲಿ “ಪಂಚಮುಖಿ ಹನುಮಾನ ಮಂದಿರ” ಮಾಡಿ ಅದು ದಕ್ಷಿಣಾಭಿಮುಖವಾಗಿರಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನುಡಿದರು.ಅಂದಿನಿಂದ ಎಲ್ಲ ಸಿದ್ದತೆಗಳು ಆರಂಭವಾಗತೊಡಗಿದವು.ಸಾರ್ವಜನಿಕರ ಸಹಕಾರದೊಂದಿಗೆ ಸಮೀತಿಯವರು ೨೦೧೮ ರಲ್ಲಿ ದೇವಾಲಯವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ದೇವಾಲಯದಲ್ಲಿ ಜರುಗುವ ಕಾರ್ಯಕ್ರಮಗಳು
ಮುನವಳ್ಳಿಯ ಅಂಚೆ ಇಲಾಖೆಯಲ್ಲಿ ಪೋಸ್ಟಮ್ಯಾನ್ ಆಗಿರುವ ರಾಜು ಹಟ್ಟಿ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಹೇಳುವ ಪ್ರಕಾರ ಪ್ರತಿ ಶನಿವಾರ ಈ ದೇವಾಲಯದಲ್ಲಿ ಸಂಜೆ ಹನುಮಾನ ಚಾಲೀಸಾ ಪಠಣ ಮಾಡುತ್ತಿದ್ದು ನಂತರ ಮಹಾಪ್ರಸಾದ ನಿರಂತರವಾಗಿ ನಡೆಯುತ್ತಿದ್ದು.ಭಕ್ತರ ಕೋರಿಕೆಯ ಮೇರೆ ಬುತ್ತಿ ಪೂಜೆ ಅಲಂಕಾರಿಕ ಪೂಜೆ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರಗುತ್ತ ಬಂದಿವೆ ಎಂದು ಭಕ್ತಿಯಿಂದ ನುಡಿಯುವರು.
*ಪಂಚಮುಖಿ ಹನುಮನ ಮಹಿಮೆ*
ಆಂಜನೇಯ ಸ್ವಾಮಿಯ ನಾಮಬಲ ಸ್ಮರಣೆ ಮಾತ್ರದಿಂದಲೇ ಬುದ್ಧಿಬಲ,ಯಶಸ್ಸು,ಧೈರ್ಯ ಸಂಕಪ್ಪ ಶಕ್ತಿ,ವಾಕ್ ಚಾತುರ್ಯ,ಮನೋಬಲ,ಜ್ಞಾನ ಮತ್ತು ಅಷ್ಟ ಸಿದ್ದಿಯ ಗುಣ ವೃದ್ಧಿಸುತ್ತದೆ ಎಂದು ಹೇಳುವರು.ನಾವು ನಿತ್ಯ ಹನುಮನ ಸ್ಮರಣೆ ಮಾಡಿದರೆ ಭೂತ ಪ್ರೇತದಂತಹ ನಕಾರಾತ್ಮ ಶಕ್ತಿಗಳು ಓಡಿ ಹೋಗುತ್ತವೆ.ಭಜರಂಗಿಯೂ ಪವನಸುತನೂ ಆದ ಹನುಮಂತನು ಶನೈಶ್ರವ ದೇವನ ಬಾಧೆಗಳನ್ನು ತೊಲಗಿಸುವನು.ಸಕಲ ಗ್ರಹ ದೋಷಗಳು ಪಂಚಮುಖಿ ಆಂಜನೇಯನ ಆರಾಧನೆಯಿಂದ ನಶಿಸಿ ಹೋಗುತ್ತವೆ. ಮುನವಳ್ಳಿ ಪಂಚಮುಖಿ ಆಂಜನೇಯನನ್ನು ಇಲ್ಲಿಯ ಭಕ್ತ ಜನರು ವಿಧವಿಧವಾಗಿ ಆರಾಧಿಸುತ್ತಿದ್ದು ಉತ್ತಮ ಫಲಗಳನ್ನು ಹೊಂದಿದ್ದು ಭಕ್ತಿಭಾವದಿಂದ ಸಡಗರದಿಂದ ಪೂಜೆ ಮಾಡುತ್ತಿರುವುದಕ್ಕೆ ಸಾಕ್ಷಿ.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೮೯೭೧೧೧೭೪೪೨ ೯೪೪೯೫೧೮೪೦೦