ಕಲಕೇರಿಯಲ್ಲಿ ದೊರೆತದ್ದು ಶ್ರೀರಾಮ ಶಿಲ್ಪವಲ್ಲ;
ಅದು ವೀರಮಹಾಸತಿ ಕಲ್ಲು : ಡಾ.ಷಡಕ್ಷರಯ್ಯ
ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ದೊರೆತಿರುವ ಶಿಲ್ಪವು ಶ್ರೀರಾಮ-ಲಕ್ಷ್ಮಣರ ಶಿಲ್ಪವಲ್ಲ, ಅದು ವೀರ ಮಹಾಸತಿ ಕಲ್ಲು ಎಂದು ಕ.ವಿ.ವಿ. ಕನ್ನಡ ಸಂಶೋಧನ ಸಂಸ್ಥೆಯ ಇತಿಹಾಸ ಮತ್ತು ಪುರಾತತ್ವದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ಎಂ. ಷಡಕ್ಷರಯ್ಯ ಹೇಳಿದ್ದಾರೆ.
ಶಿಲ್ಪದ ವಿವರಣೆ ಹೀಗಿದೆ :ಶಿಲ್ಪದಲ್ಲಿ ಮೂರು ಫಲಕಗಳಿದ್ದು ಕೆಳಗಿನಿಂದ ಮೊದಲನೇ ಫಲಕದಲ್ಲಿ ವೀರನ ಹೋರಾಟದ ದೃಶ್ಯವಿದೆ. ಅದು ತುಂಬಾ ಅಳಿಸಿಹೋಗಿ ಅಸ್ಪಷ್ಟವಾಗಿದ್ದು, ಅದು ಒಂದು ಯುದ್ಧದ ಚಿತ್ರಣವಾಗಿದೆ. ನಡುವಿನ ಫಲಕದಲ್ಲಿ 4 ನಿಂತ ಸ್ತ್ರೀ – ಪುರುಷರ ಚಿತ್ರಗಳಿವೆ. ಮಧ್ಯದಲ್ಲಿ ಇಬ್ಬರು ವೀರರಿದ್ದು, ಅವರಿಬ್ಬರೂ ತಮ್ಮ ಎಡಗೈಗಳಲ್ಲಿ ಬಿಲ್ಲನ್ನು ಹಿಡಿದು ನಿಂತಿದ್ದಾರೆ. ಅವರ ಕೊರಳಲ್ಲಿ ಮಣಿಗಳ ಸರಗಳಿವೆ. ಸೊಂಟಕ್ಕೆ ಅನುಕೂಲವಾಗುವಷ್ಟು ವಸ್ತ್ರವನ್ನು ಧರಿಸಿದ್ದಾರೆ. ಹೊಟ್ಟೆಯ ಮೇಲೆ ಅಡ್ಡವಾಗಿ ಬಾಣ ಕಟ್ಟಿದ್ದಾರೆ. ಕಾಲುಗಳಲ್ಲಿ ಕಡಗಗಳನ್ನು ಹಾಕಿಕೊಂಡಿದ್ದಾರೆ. ತಲೆಗೂದಲನ್ನು ಮೇಲೆ ಸುತ್ತಿ ತುರುಬು ಕಟ್ಟಿದ್ದಾರೆ. ಮೀಸೆ, ದುಂಡು ಕಣ್ಣು, ಹುಬ್ಬು, ಉದ್ದನೆಯ ಮೂಗು ಎದ್ದುಕಾಣುವಂತೆ ತೋರಿಸಲಾಗಿದೆ. ಇವರೀರ್ವರೂ ಯೋಧರೆಂದು ಸುಲಭವಾಗಿ ಗುರುತಿಸಬಹುದು. ಇವರು ಯುದ್ಧದಲ್ಲಿ ವೀರಮರಣವನ್ನಪ್ಪಿದ್ದಿರಬಹುದೆಂದು ವಿಶ್ಲೇಷಿಸಬಹುದಾಗಿದೆ.
ಈ ಇಬ್ಬರೂ ಯೋಧರು ಯುದ್ಧಭೂಮಿಯಲ್ಲಿ ವೀರಮರಣವನ್ನಪ್ಪಿದಾಗ ಅವರ ಧರ್ಮಪತ್ನಿಯರು ಚಿತೆಗೆ ಹಾರಿ ತಮ್ಮ ಪತಿಯೊಂದಿಗೆ ಸಹಗಮನ ಮಾಡುತ್ತಿದ್ದರು. ಈ ಯೋಧರ ಇಬ್ಬರೂ ಪತ್ನಿಯರಲ್ಲಿ ಶಿಲ್ಪದ ಬಲಭಾಗದಲ್ಲಿ ನಿಂತವಳ ವೇಷದಲ್ಲಿ ಲಂಗ ಧರಿಸಿದ್ದು, ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದ್ದಾಳೆ. ವಸ್ತ್ರಾಭರಣ ಧಾರಿಯಾಗಿರುವ ಇವಳು ತನ್ನ ಕೇಶಗಳನ್ನು ವಿಶೇಷವಾಗಿ ಮೇಲೆ ಸುತ್ತಿ ತುರುಬು ಕಟ್ಟಿದ್ದಾಳೆ. ಎಡಗಡೆ ನಿಂತವಳು ಬಲಗೈ ಮೇಲಕ್ಕೆ ಎತ್ತಿದ್ದು ಕೈಯಲ್ಲಿ ಕಮಲದ ಮೊಗ್ಗನ್ನು ಹಿಡಿದಂತಿದೆ. ತನ್ನ ಪಾದದ ವರೆಗೆ ಉಡಿಗೆ ಉಟ್ಟುಕೊಂಡಿದ್ದು, ಸಾಮಾನ್ಯ ರೀತಿಯ ಕೇಶಗಳಿವೆ.
ಮೇಲಿನ ಮೂರನೇ ಫಲಕದಲ್ಲಿ ಎಡಕ್ಕೆ ಕುಳಿತ ನಂದಿ ಇರುವುದರಿಂದ ಅದು ಶಿವನ ಸಾನ್ನಿಧ್ಯ. ವೀರ ಮರಣವನ್ನಪ್ಪಿದ ಯೋಧನು ಮತ್ತು ಚಿತೆಗೆ ಹಾರಿ ಸಹಗಮನ ಮಾಡಿ ಮಡಿದ ತನ್ನ ಪತ್ನಿ ಇಬ್ಬರೂ ಶಿವಸಾಯುಜ್ಯ ಪದವಿ ಪಡೆದು ಕೈಮುಗಿದು ಕುಳಿತಿರುವರು. ದೇಹಾಂಗ, ವಸ್ತ್ರ ಮತ್ತು ಆಭರಣಗಳ ಲಕ್ಷಣಗಳಿಂದ ಈ ಶಿಲ್ಪದ ಕಾಲಮಾನವು ಸುಮಾರು ಕ್ರಿ ಶ. 14 ರಿಂದ 15ನೇ ಶತಮಾನ ಇರಬಹುದೆಂದು ತರ್ಕಿಸಲಾಗಿದೆ. ಇಂತಹ ವೀರಗಲ್ಲುಗಳು ಹಾಗೂ ವೀರ ಮಹಾಸತಿ ಕಲ್ಲುಗಳು ನಾಡಿನಾಧ್ಯಂತ ಅನೇಕ ಕಡೆಗಳಲ್ಲಿವೆ ಎಂದು ಪ್ರಸ್ತುತ ಜರ್ಮನ್ ದೇಶದ ಪ್ರವಾಸದಲ್ಲಿರುವ ಡಾ. ರು. ಮ. ಷಡಕ್ಷರಯ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ಕಲಕೇರಿ ಗ್ರಾಮದಲ್ಲಿ ಲಭ್ಯವಾದ ಶಿಲ್ಪದ ಚಿತ್ರವನ್ನು ವೀಕ್ಷಿಸಿ ಅದರ ವಿಶ್ಲೇಷಣೆ ಮಾಡಿದ್ದಾರೆಂದು ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.