ದೇಶದ ಅಭಿವೃದ್ಧಿ ಯುವಕರಿಂದ ಸಾಧ್ಯ…
ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು. ಒಂದು ದಿನ ಊರಿಗೆ ಹೋಗುತ್ತಾ ಇದ್ದೆ. ಬಸ್ಸಿನಲ್ಲಿ ಕುಳಿತುಕೊಳ್ಳಲು ಸೀಟು ಸಿಗದೆ ಇದ್ದಾಗ ನಿಂತುಕೊಂಡೆ ಪ್ರಯಾಣ ಮಾಡುತ್ತಾ ಇದ್ದೆ…ಅಲ್ಲಿಯೆ ಕಾಣಿಸಿಕೊಂಡ ಒಬ್ಬ ಹುಡುಗ, ಮೇಡಂ ಈ ಕಡೆ ಬನ್ನಿ ನಿಮಗಾಗಿ ಸೀಟು ಹಿಡಿದ್ದಿದ್ದಿನಿ ಅಂತ ಹೇಳಿದ್ದು ಕಂಡುಬಂತು. ಅವನು ನನ್ನ ವಿದ್ಯಾರ್ಥಿ ಅಂತ ತಿಳಿದು ಬಂತು…ನನ್ನ ಹಿರಿಯ ವಿದ್ಯಾರ್ಥಿ ಕುಳಿತುಕೊಳ್ಳಲು ಸೀಟು ಕೊಟ್ಟ, ಕುಳಿತೆನು. ಯಾವಾಗಲೂ ನಗು ಮುಖ, ಮುಗ್ಧ ಮನಸ್ಸಿನ ನಾಚಿಕೆ ಸ್ವಭಾವದ ನನ್ನ ವಿದ್ಯಾರ್ಥಿಯ ಜೊತೆ ಮಾತನಾಡಲು ಪ್ರಾರಂಭಿಸಿದೆ. ಮುಂದೆ ಅವನನ್ನು ಮಾತಾಡಿಸಲು ಪ್ರಾರಂಭ ಮಾಡಿದ್ದೆ….ಎಲ್ಲಿಯವರೆಗೂ ಬಂತು ನಿನ್ನ ವಿದ್ಯಾಭ್ಯಾಸ.? ಅಂತ ಕೇಳಿದಾಗ, ಮೃದುವಾದ ಧ್ವನಿಯಲ್ಲಿ 9 ನೇಯ ತರಗತಿಯ ವರೆಗೆ ಮಾತ್ರ ಓದಿ ಶಾಲೆ ಬಿಟ್ಟಿದ್ದಿನಿ ಮೇಡಂ ಅಂತ ಹೇಳಿದನು.
ಕೇವಲ ಒಂಬತ್ತನೇ ತರಗತಿ ಕನಿಷ್ಟ ಎಸೆಸೆಲ್ಸಿ ಯಾದರೂ ಮುಗಿಸಬಾರದೆ ಎಂದು ಸ್ವಲ್ಪ ಕೋಪ ಮಾಡಿದಾಗ, ಇಲ್ಲ ಮೇಡಂ ನಮ್ಮ ಮನೆಯಲ್ಲಿ ಅಪ್ಪ ಅಮ್ಮನ ಮೇಲೆ ತುಂಬಾ ಸಾಲದ ಹೊರೆ ಇತ್ತು… ಅದಕ್ಕೆ ನಾನು ನಮ್ಮ ಹಾಗೂ ಸಂಬಂಧಿಕರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ. ಅಷ್ಟೇ ಏಕೆ ಮೇಡಮ ನನ್ನ ಸಹೋದರ ನರ್ಸಿಂಗ್ ಓದು ಓದುತ್ತಿದ್ದಾನೆ, ಸಹೋದರಿಯರು ಕೂಡಾ ಚೆನ್ನಾಗಿ ಓದುತ್ತಿದ್ದಾರೆ ಅಂತ ಹೇಳಿದಾಗ ನನಗೆ ತುಂಬಾ ಕೋಪ ಬಂತು, ಏನಯ್ಯ ಎಲ್ಲರು ಓದುತ್ತಿರುವಾಗ ನೀನ್ಯಾಕೆ ಹೀಗೆ ಮಾಡಿದೆ ಅಂತ ಕೇಳಿದಾಗ.
ಅಪ್ಪನ ಸಾಲದ ಹೊರೆ ಅವರು ಅನುಭವಿಸಿದ ದುಃಖ ನನ್ನಿಂದ ನೋಡಲು ಆಗೋದಿಲ್ಲ ಮೇಡಂಜಿ, ಅದಕ್ಕೆ ನಾನು ಅಪ್ಪನೊಂದಿಗೆ ಕೆಲಸದಲ್ಲಿ ಕೈಜೋಡಿಸಿದೆ ಎನ್ನುವಾಗ ನನಗೆ ಸ್ವಲ್ಪ ನೋವು ಆಯಿತು. ನಾನು ಮತ್ತೆ ಕೇಳಿದೆ, ಅವರೆಲ್ಲ ಚನ್ನಾಗಿ ಓದಿ ಮುಂದೆ ಒಳ್ಳೆಯ ಬದುಕು ಕಟ್ಟಿಕೊಳ್ಳುತ್ತಾರೆ, ನೀನು ಮುಗ್ಧ ನಿನ್ನ ಜೀವನ ಹೇಗೆ? ಅಂತ…… ಮೇಡಂಜಿ ನಾನು ನೌಕರಸ್ಥರಿಗಿಂತ ಹೆಚ್ಚು ಹಣವನ್ನು ಮಾಡಿಕೊಳ್ಳುತ್ತಿದ್ದೇನೆ. ಈಗ ನಾನು ಒಳ್ಳೆಯ ಜೀವನ ಸಾಗಿಸುತ್ತಿದ್ದೇನೆ ಅಂತ ಹೇಳುವಾಗ ಅವನ ಮುಖದಲ್ಲಿ ಉಲ್ಲಾಸ ಉತ್ಸಾಹ ನೋಡಿ ನನಗೆ ಬಹಳ ಖುಷಿ ಆಗಿತ್ತು.
ಇದೆಲ್ಲ ಹೇಗೆ ಸಾಧ್ಯ? ಎಂದು ನಾನು ಅವನಿಗೆ ಕೇಳಿದೆ. ಆವಾಗ ಅವನು ಹೇಳಿದ, ಅಪ್ಪನೊಂದಿಗೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಲ ಗದ್ದೆಗಳಲ್ಲಿ ಚೆನ್ನಾಗಿ ಬೆಳೆ ಬೆಳೆಯುತ್ತೇವೆ. ಹಣ್ಣು ತರಕಾರಿಗಳನ್ನು ಬೆಳೆಸುವುದು ಇದರಿಂದ ಬಂದ ಹಣದಿಂದ. ದಿನನಿತ್ಯದ ಖರ್ಚು ವೆಚ್ಚಗಳನ್ನು ಮಾಡಿಕೊಳ್ಳುತ್ತೇವೆ. ನಮ್ಮ ಗದ್ದೆಯಲ್ಲಿ ಕುರಿ ಸಾಕಾಣಿಕೆ ಹಾಗೂ ಕುರಿಗಾಯಿ ಕೆಲಸ ಕೂಡ ಮಾಡುವುದರಿಂದ ಪ್ರತಿ 3 ತಿಂಗಳಿಗೊಮ್ಮೆ ಎಲ್ಲ ಖರ್ಚು ವೆಚ್ಚಗಳನ್ನು ತೆಗೆದು 40 ರಿಂದ 60 ಸಾವಿರ ರೂಪಾಯಿಗಳ ಹಣ ಸಂಪಾದನೆ ಮಾಡಿಕೊಳ್ಳುತ್ತೇವೆ. ಇಷ್ಟೆಲ್ಲ ಹೇಳುವಾಗ ನನಗೆ ಎಲ್ಲಿಲ್ಲದ ಖುಷಿ ಆಯಿತು.
ಮೇಡಂಜೀ, ಈಗ ನಾವು ವಾಹನಗಳನ್ನೂ ಖರೀದಿ ಮಾಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಖರೀದಿಸಿ ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇವೆ ಎಂದು ಹೇಳುವಾಗ ಮುಗ್ಧ ಮನಸ್ಸಿನ ವಿದ್ಯಾರ್ಥಿಯ ಸಾಧನೆ ಕೇಳಿ ತುಂಬಾ ಆನಂದ ಆಯಿತು.. ಇಷ್ಟೆಲ್ಲ ಕೇಳಿದ ಮೇಲೆ ನನ್ನ ವಿದ್ಯಾರ್ಥಿ ಜೊತೆ ಕೆಲವೊಂದು ವಿಚಾರ ಹಂಚಿಕೊಂಡೆ. ನೋಡಿ ಶಿಕ್ಷಣ ನಮಗೆ ಪ್ರಪಂಚದ ಜೊತೆ ವ್ಯವಹಾರ ಮಾಡಲು ಹಾಗೂ ಜ್ಞಾನಾರ್ಜನೆಗೆ ಬೇಕು.
100ಕ್ಕೆ ಶೇಕಡಾ 99 ಜನರು ಶಿಕ್ಷಣವನ್ನು ಉದ್ಯೋಗಕ್ಕಾಗಿ ನೌಕರಿಗಾಗಿ ಎನ್ನುವ ಮನೋಧೋರಣೆಯಿಂದ ಓದುತ್ತಿದ್ದು, ಶಿಕ್ಷಣ ಮುಗಿಸಿದ ನಂತರ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಅರ್ಧ ಜೀವನ ವ್ಯರ್ಥ ಮಾಡಿಕೊಳ್ಳಬಾರದು. ಸುಮ್ಮನೆ ಕಾಲ ವ್ಯರ್ಥ ಮಾಡಿಕೊಂಡು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿಗೆ ಮಾಡುವ ಕಾರ್ಯಕ್ಕೆ ಕೈ ಹಾಕಬಾರದು . ಮಾನವ ಸಂಪನ್ಮೂಲ ವ್ಯರ್ಥ ಮಾಡಿಕೊಂಡು ನಿರುತ್ಸಾಹ ಜೀವನ ಮಾಡುತ್ತಿರುವುದು
ಎಷ್ಟರ ಮಟ್ಟಿಗೆ ಸರಿ?
ಕಾಯಕವೇ ಕೈಲಾಸ.. ಏನ್ನುವಂತೆ
ಕೆಲಸ ಮಾಡಲು ಸಿದ್ದನಿರುವ ವ್ಯಕ್ತಿಗೆ ನೂರಾರು ಉದ್ಯೋಗಗಳಿದ್ದಾವೆ..
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈಗಿನ ಯುವಕರ ಕೂಗು ಕೂಡ ಒಂದೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಯಾವ ಸರಕಾರದ ಅಜೆಂಡಾದಲ್ಲಿ ಇರುತ್ತದೋ ಆ ಸರಕಾರದ ಮೇಲೆ ನಿರೀಕ್ಷೆ ಇಟ್ಟು ಮತದಾನ ಮಾಡುವಷ್ಟು ಯೋಚನೆ ಮಾಡಿ, ಇಂದಿನ ಯುವ ಜನಾಂಗ ತಮ್ಮ ಶಿಕ್ಷಣ, ಶ್ರಮ ಹಾಗೂ ಕಾಲವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ದುಃಖದ ಸಂಗತಿ.
ಶ್ರದ್ಧೆ, ಭಕ್ತಿ, ಸ್ವಪ್ರಯತ್ನ,ಪರಿಶ್ರಮದಿಂದ ಯಾವ ಉದ್ಯೋಗವನ್ನಾದರೂ ಮಾಡಲು ಮುಂದುವರೆದಿದ್ದೆಯಾದರೆ
ನಿಜವಾದ ಮಾನವ ಸಂಪನ್ಮೂಲದ ಉಪಯೋಗವಾಗಿ ದೇಶದ ಪ್ರಗತಿ ಖಂಡಿತ ಸಾಧ್ಯ…..ಇಷ್ಟೆಲ್ಲ ನನ್ನ ಮಾತುಗಳನ್ನು ಆಲಿಸಿದ ಅವನು, ಮುಂದಿನ ದಿನಗಳಲ್ಲಿ ನಾನು ಇನ್ನೂ ಅನೇಕ ಸಾಧನೆ ಮಾಡುವೆ ಎನ್ನುವ ಮಾತು ಹೇಳಿದ. ನನ್ನ ಊರು ಬಂದಾಗ ನಾನು ಇಳಿದುಕೊಂಡೆ. ಅವನು ಪ್ರೀತಿಯಿಂದ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.. ನನ್ನ ವಿದ್ಯಾರ್ಥಿ ನನ್ನ ಮಗ ಇದ್ದ ಹಾಗೆ, ಅವನಿಗೆ ಆಶೀರ್ವಾದ ಮಾಡಿ ಮುಂದೆ ಹೊರಟೆ.
*ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ*..’ ಎಂಬ ಮಾತನ್ನು ಹೇಳಿ ಅದು ಯುವಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡುವಂಥದ್ದು. ನನ್ನ ವಿದ್ಯಾರ್ಥಿಯ ಈ ಕಾರ್ಯ ವಿವೇಕಾನಂದರ ಈ ಮಾತನ್ನು ನೆನಪಿಸಿತು.
ವಿವೇಕಾನಂದರ ಜಯಂತಿಯಾದ ಇಂದಿನ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸುತ್ತಾರೆ.
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ ಎಂಬ ವಿವೇಕಾನಂದರ ಮಾತು ನನ್ನ ವಿದ್ಯಾರ್ಥಿಯ ಬದುಕಿನಲ್ಲಿ ನಿಜವಾಗಿದೆ.
ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು ಎಂಬುದನ್ನು ಇವತ್ತಿನ ಯುವ ಜನತೆ ಅರಿಯಬೇಕು.
ವಿವೇಕಾನಂದರ ಜಯಂತಿ ಸಂದರ್ಭದಲ್ಲಿ ನಾವು ನಮ್ಮ ಮುಂದಿನ ಇಂದಿನ ಪೀಳಿಗೆಗೆ ನೈಜವಾದ ಉದಾಹರಣೆ ಗಳನ್ನು ನೀಡುವ ಮೂಲಕ ಅವರ ಬದುಕನ್ನು ರೂಪಿಸಿಕೊಂಡ ಇಂತಹ ಅನೇಕ ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ವಿವೇಕಾನಂದರ ಆದರ್ಶಗಳನ್ನು ತಿಳಿಸಿದರೆ ಸಾರ್ಥಕ.
ಸ್ವಾತಂತ್ರ್ಯವೇ ಬೆಳವಣಿಗೆಯ ಮೂಲಭೂತ ಆವಶ್ಯಕತೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸ್ವಾಮೀಜಿ ಹೇಳುತ್ತಾರೆ: ”ನೀವು ಮಕ್ಕಳಿಗೆ ಶಿಕ್ಷಣವನ್ನು ನೀಡುವಾಗ ಈ ಅಂಶವನ್ನು ಗಮನದಲ್ಲಿಡಬೇಕು- ಅವರು ಸ್ವತಂತ್ರವಾಗಿ ಆಲೋಚಿಸಲು ಪ್ರೋತ್ಸಾಹ ನೀಡಬೇಕು. ಸ್ವತಂತ್ರ ಆಲೋಚನೆಯ ಅಭಾವವೇ ಇಂದಿನ ಭಾರತದ ಅವನತಿಯ ಮೂಲಕಾರಣ. ಯಾರೂ ಮತ್ತೊಬ್ಬರಿಗೆ ಕಲಿಸಲಾರರು. ನೀವೇ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡು ನಿಮ್ಮ ಸ್ವಭಾವಕ್ಕೆ ಅನುಗುಣವಾಗಿ ಅದನ್ನು ವ್ಯಕ್ತಪಡಿಸಬೇಕಾಗಿದೆ. ಪ್ರತಿಯೊಬ್ಬರೂ ಒಂದು ವ್ಯಕ್ತಿಯಾಗಲು ಪ್ರಯತ್ನಿಸಬೇಕು. ಬಲಿಷ್ಠರಾಗಿ, ನಿಮ್ಮ ಕಾಲಿನ ಮೇಲೆ ನೀವೇ ನಿಂತುಕೊಂಡು, ನಿಮ್ಮ ಭಾವನೆಗಳನ್ನು ನೀವೇ ಯೋಚಿಸುವಂತೆ ಆಗಬೇಕು.” ”ಆತ್ಮ ಶ್ರದ್ಧೆಯ ಆದರ್ಶ ನಮಗೆ ಬಹಳ ಸಹಕಾರಿ. ನಮ್ಮಲ್ಲಿ ನಮಗೆ ನಂಬಿಕೆಯನ್ನು ಹೆಚ್ಚು ಬೋಧಿಸಿದ್ದಿದ್ದರೆ, ಅದನ್ನು ಅನುಷ್ಠಾನಕ್ಕೆ ತಂದಿದ್ದರೆ, ನಮ್ಮಲ್ಲಿರುವ ಅನೇಕ ದೋಷಗಳು ಮತ್ತು ದುಃಖದ ಬಹುಭಾಗ ಮಾಯವಾಗುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ.” ಈ ಮಾತುಗಳು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿವೇಕಾನಂದರ ಆದರ್ಶ ಗಳನ್ನು ಪಾಲಿಸಲು ನಾವು ಇತರರಿಗೆ ಮಾದರಿಯಾದರೆ ಸಾರ್ಥಕ
ನಂದಿನಿ ಸನಬಾಲ್
ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ
ಕಲಬುರಗಿ ಜಿಲ್ಲೆ
ರೇಖಾಚಿತ್ರ:ರೇಖಾ ಮೊರಬ
ಚಿತ್ರ ಕಲಾ ಶಿಕ್ಷಕಿ
ಹುಬ್ಬಳ್ಳಿ