ಭಾರತದ ಔನ್ನತ್ಯಕ್ಕೆ ಒಗ್ಗೂಡಿ ಶ್ರಮಿಸಲು ಕರೆ
ಅಮ್ಮಿನಬಾವಿ ಗ್ರಾಮದೇವಿ ದೇವಾಲಯದ ಕಾರ್ತಿಕ ದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ..
ಧಾರವಾಡ : ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ನೆಲದ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವಜ್ಞಾನ ಮತ್ತು ಮೇರು ಆದರ್ಶಗಳನ್ನು ಅರಿಯಬೇಕಾಗಿದೆ. ಅನಂತ ನೆಲೆಗಳಲ್ಲಿ ಹುದುಗಿರುವ ರಾಷ್ಟ್ರದ ಘನತೆಯನ್ನು ಮುಕ್ತವಾಗಿ ಪ್ರಚುರಪಡಿಸಿ ಎಲ್ಲರೂ ಭಾರತದ ಔನ್ನತ್ಯಕ್ಕೆ ಒಗ್ಗೂಡಿ ಶ್ರಮಿಸಬೇಕೆಂದು ಎಂದು ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಕರೆ ನೀಡಿದರು.
ಅವರು ಶುಕ್ರವಾರ ತಾಲೂಕಿನ ಅಮ್ಮಿನಬಾವಿಯ ಗ್ರಾಮದೇವಿ ದೇವಾಲಯದ ಕಾರ್ತಿಕ ದೀಪೋತ್ಸವದ ಅಂಗವಾಗಿ ‘ಗ್ರಾಮದೇವಿ ಯುವ ಮಿತ್ರ ಸೇವಾ ಬಳಗ’ ಹಮ್ಮಿಕೊಂಡಿದ್ದ 5 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಭಾರತದ ಪ್ರತೀ ಪ್ರಜೆಯೂ ದೇಶದ ಸಮಗ್ರತೆಯನ್ನು ಅರಿಯಬೇಕಾಗಿದೆ. ಸಾವಿರಾರು ವರ್ಷಗಳ ಭಾರತೀಯರ ಆಧ್ಯಾತ್ಮಿಕ ಅನುಸಂಧಾನವು ಅಖಂಡ ವಿಶ್ವದ ಗಮನವನ್ನೇ ಸೆಳೆದಿದೆ ಎಂದೂ ಅವರು ಹೇಳಿದರು.
ವಿಜಯಪೂರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಾಣಿಗೇರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕೃತಿಕ ಸ್ಪರ್ಧೆಗಳು ಪೂರಕವಾಗಿವೆ. ನಮ್ಮ ಮಕ್ಕಳು ರಾಷ್ಟ್ರದ ಶ್ರೇಷ್ಠ ಮಾನವ ಸಂಪನ್ಮೂಲವಾಗಿ ಬೆಳೆದು ಬರುವ ಅಗತ್ಯವಿದೆ ಎಂದರು.
ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಕಾಂತೇಶ ಬಡಿಗೇರ ಮಾತನಾಡಿ, ಮಕ್ಕಳ ಕಲಾತ್ಮಕ ಅಭಿವ್ಯಕ್ತಿಗೆ 5 ದಿನಗಳ ವಿಭಿನ್ನ ಸ್ಪರ್ಧೆಗಳು ವೇದಿಕೆ ಕಲ್ಪಿಸಿದ್ದು, ಶಾಲಾ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಚಟುವಟಿಕೆಗಳು ಸಶಕ್ತ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗಲಿವೆ ಎಂದರು.
ಜೈನ್ ಸಮಾಜದ ಯುವ ಮುಖಂಡ ಶ್ರೇಯಾಂಶ ದೇಸಾಯಿ ಮಾತನಾಡಿ, ಗ್ರಾಮದೇವಿ ಯುವ ಮಿತ್ರ ಸೇವಾ ಬಳಗವು ಸಾಂದರ್ಭಿಕವಾಗಿ ವಿಭಿನ್ನ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿರುವುದು ಖುಷಿ ತಂದಿದೆ ಎಂದರು. ಡಾ.ದಾಕ್ಷಾಯಣಿ ರಾಮನಗೌಡರ, ಸುಜಾತಾ ಆರಾಧ್ಯಮಠ, ನವೀನ ಪದಕಿ, ಗಿರೀಶ ಪೂಜಾರ, ಅನಿಲ ಧಾರವಾಡ, ಚೆನ್ನಬಸಮ್ಮ ಕುಸೂಗಲ್ಲ, ರಾಜು ಮುಂದಿನಮನಿ, ಸಮೀರ ದೇಶಪಾಂಡೆ, ಈರಣ್ಣ ಪಾಟೀಲ, ರಾಮಚಂದ್ರ ದೇಶಪಾಂಡೆ ಇದ್ದರು.
ಡಿ.5 ರವರೆಗೆ ದೇಶಭಕ್ತಿ ಗೀತೆ, ಜಾನಪದ ಗೀತೆ ಹಾಗೂ ಭಕ್ತಿ ಗೀತೆಗಳ ಹಾಡುಗಾರಿಕೆ, ಚಿತ್ರಕಲೆ, ದೇಶಭಕ್ತರ ಛದ್ಮವೇಷ, ಏಕಾಪಾತ್ರಾಭಿಭಿನಯ, ಭಾಷಣ, ರಸಪ್ರಶ್ನೆ, ರಂಗೋಲಿ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಬಸವರಾಜ ಕುಸೂಗಲ್ಲ ಸ್ವಾಗತಿಸಿದರು. ಕಾವ್ಯಾ ಪದಕಿ ನಿರೂಪಿಸಿದರು. ಶಿವಾನಂದ ತೋಟಿಗೇರ ವಂದಿಸಿದರು.
—————————————-