ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್ ಆದೇಶ..
ನವದೆಹಲಿ: ಖಾಸಗಿ ಶಾಲೆಗಳು ಆರನೇ ಮತ್ತು ಏಳನೇ ಕೇಂದ್ರ ವೇತನ ಆಯೋಗಗಳ (CPC) ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ತಮ್ಮ ಬೋಧಕ, ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ವೇತನ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ (Delhi HighCourt) ಆದೇಶಿಸಿದೆ.
ರಾಷ್ಟ್ರ ರಾಜಧಾನಿಯ ವಿವಿಧ ಖಾಸಗಿ ಶಾಲೆಗಳ (Private Schools) ಬೋಧಕ ಮತ್ತು ಬೋಧಕೇತರ ಉದ್ಯೋಗಿಗಳು 6ನೇ ಮತ್ತು 7ನೇ ವೇತನ ಆಯೋಗಗಳ ಪ್ರಯೋಜನಗಳನ್ನು ಮತ್ತು ಬಡ್ಡಿಯೊಂದಿಗೆ ತಮ್ಮ ಬಾಕಿಗಳ ಪಾವತಿಸುವಂತೆ ಮತ್ತು ಇತರ ಪ್ರಯೋಜನಗಳನ್ನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ವೇತನ ಆಯೋಗಗಳ (Planning Commission of India) ಶಿಫಾರಸಿನ ಪ್ರಕಾರ ಖಾಸಗಿ ಶಾಲೆಗಳ ನೌಕರರು ವೇತನ ಪಡೆಯುವ ಹಕ್ಕನ್ನು ಹೊಂದಿದ್ದಾರೆ, ಶಾಲೆಗಳು ತಮ್ಮ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ನಿರಾಕರಿಸಲು ಹಣದ ಕೊರತೆಯ ನೆಪವನ್ನು ಉಲ್ಲೇಖಿಸಬಾರದು ಎಂದು ತಾಕೀತು ಮಾಡಿದೆ.
ವೇತನ ಆಯೋಗಗಳ ಶಿಫಾರಸುಗಳ ಪ್ರಕಾರ ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳು ಸಹ ತಮ್ಮ ಉದ್ಯೋಗಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿ ಸಿಂಗ್ ಸ್ಪಷ್ಟಪಡಿಸಿದರು. 6ನೇ ಮತ್ತು 7ನೇ ವೇತನ ಆಯೋಗಗಳು ಸೂಚಿಸಿದ ಶಿಫಾರಸುಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಉನ್ನತ ಅಧಿಕಾರದ ಸಮಿತಿಗಳನ್ನು (ಎಚ್ಪಿಸಿ) ರಚಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಎಚ್ಪಿಸಿ ರಚನೆಯಾಗಲಿದೆ. ಕೇಂದ್ರ ಸಮಿತಿಯು ದೆಹಲಿಯ ಶಿಕ್ಷಣ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಅಲ್ಲದೇ ಅದರ ಸದಸ್ಯರಲ್ಲಿ ಶಾಲೆಗಳ ಒಬ್ಬ ಪ್ರತಿನಿಧಿಯನ್ನು ಸಹ ಹೊಂದಿರುತ್ತದೆ. ವಲಯ ಸಮಿತಿಯು ವಲಯ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿದ್ದು, ಇದು ಶುಲ್ಕ ಹೆಚ್ಚಳ, ವೇತನಗಳು ಮತ್ತು ಇತರ ಪ್ರಯೋಜನಗಳ ಸಮಸ್ಯೆಯನ್ನು ಬಗೆಹರಿಸುತ್ತದೆ. ಈ ಸಮಿತಿಯು ತನ್ನ ಸಂಶೋಧನೆಗಳನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡುತ್ತದೆ.
ವಿಚಾರಣೆ ವೇಳೆ ಖಾಸಗಿ ಶಾಲೆಗಳ ಮಾಲೀಕರು ವೇತನ ಆಯೋಗಗಳ ಶಿಫಾರಸಿನ ಪ್ರಕಾರ ಅರ್ಜಿದಾರರು ವೇತನ ಮತ್ತು ವೇತನಕ್ಕೆ ಅರ್ಹರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ಹಣದ ಕೊರತೆಯಿಂದಾಗಿ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ಶಾಲೆಗಳು ಶಿಕ್ಷಣ ಇಲಾಖೆಗೆ ಕಳುಹಿಸಿದ್ದರೂ ಅದನ್ನು ತಿರಸ್ಕರಿಸಲಾಗಿದೆ ಎಂದು ವಾದಿಸಲಾಯಿತು. ಶುಲ್ಕ ಹೆಚ್ಚಿಸಲು ಅನುಮತಿ ನೀಡುವವರೆಗೆ ಶಿಕ್ಷಕರಿಗೆ, ಸಿಬ್ಬಂದಿಗೆ ಪರಿಷ್ಕೃತ ವೇತನ ನೀಡುವುದಿಲ್ಲ ಎಂದು ಅವರು ವಾದಿಸಿದರು. ಆದಾಗ್ಯೂ, ನ್ಯಾಯಾಲಯವು ಈ ವಾದಗಳನ್ನು ತಿರಸ್ಕರಿಸಿತು.