ಬೆಣಚಿ, ಕಡಬಗಟ್ಟಿ, ಅರವಟಿಗಿ ಗ್ರಾಮಗಳಲ್ಲಿ ಸಾರ್ವಜನಿಕ ಕುಂದು-ಕೊರತೆ ಸಭೆ..
ಬೇಜವಾಬ್ದಾರಿ ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ತೀವ್ರ ತರಾಟೆ..
ಜನರ ಅಹವಾಲು ಕಾಲಮಿತಿಯಲ್ಲಿ ಪರಿಹರಿಸುವಂತೆ ಸೂಚನೆ
ಧಾರವಾಡ, ನ.18: ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಣಚಿ, ಕಡಬಗಟ್ಟಿ ಮತ್ತು ಅರವಟಿಗಿ ಗ್ರಾಮಗಳಿಗೆ ಶನಿವಾರ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಅಲಿಸಿದರು.
ಮೊದಲಿಗೆ ಅಳ್ನಾವರ ತಾಲ್ಲೂಕಿನ ಬೆಣಚಿ ಗ್ರಾಮಕ್ಕೆ ಭೇಟಿ ಕೊಟ್ಟ ಸಚಿವರನ್ನು ಜನರು ಬಹಳ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಾರ್ವಜನಿಕ ಕುಂದು-ಕೊರತೆಗಳ ಸಭೆ ನಡೆಸಿದರು. ಈ ವೇಳೆ ಜನರಿಂದ ಅಹವಾಲು ಸ್ವೀಕರಿಸಿ, ಕಾಲಮಿತಿಯಲ್ಲಿ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಇನ್ನೂ ದೊರೆಯದ ಬಗ್ಗೆ ಕೆಲ ಮಹಿಳೆಯರು ಸಚಿವರ ಗಮನ ಸೆಳೆದರು. ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ, ಬೇಜವಾಬ್ದಾರಿ ತೋರಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಬೆಣಚಿ ಗ್ರಾಮದಲ್ಲಿ ಮಕ್ಕಳು, ಮಹಿಳೆಯರು ತಮ್ಮ ತೊಂದರೆ ತಾಪತ್ರಗಳನ್ನು ಸಚಿವರಲ್ಲಿ ನಿವೇದಿಸಿಕೊಂಡರು. ಈ ವೇಳೆ ಸಚಿವರು, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ತಂದೆ ತಾಯಿ ಇಲ್ಲದ ಮಕ್ಕಳಿಗೆ ಓದಿಸುವ ಭರವಸೆ ನೀಡಿದ ಸಚಿವರು, ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಕಡಬಗಟ್ಟಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಸಚಿವರು, ಅಕ್ರಮವಾಗಿ ಸಾರಾಯಿ ಮಾರುವವರನ್ನು ಹಿಡೆಮಾಡಿ ಕಟ್ಟುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಕ್ಕಳಿಗೆ ಐಸ್ ಕ್ರಿಮ್ ಕೊಡಿಸಿ ಸಚಿವರು ಸಂಭ್ರಮಿಸಿದರು.
ನಂತರ ಅರವಟಿಗಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅಹವಾಲು ಸ್ವೀಕರಿಸಲಾಯಿತು. ವಿವಿಧ ಸಮಸ್ಯೆಗಳಿಗೆ ಪರಿಹಾರ ಕೋರಿ ಬಂದಿದ್ದ ಜನರ ಮನವಿಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರಕ್ಕೆ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಸಚಿವರು ಕೆಲ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಸಲುವಾಗಿ ಧನ ಸಹಾಯ ಮಾಡಿದರು.