ಮಕ್ಕಳ ದಿನಾಚರಣೆ
ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ನವೆಂಬರ್ ೧೪,ರಂದು ಆಚರಿಸುತ್ತೇವೆ.೨೦ನೇ ನವೆಂಬರ್ ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.ನವೆಂಬರ್ ೨೦ ನ್ನು ವಿಶ್ವ ಮಕ್ಕಳ ದಿನಾಚರಣೆ ಆಚರಿಸಲು ಕಾರಣ ಅದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು ೧೯೫೯ ರಲ್ಲಿ ಅಂಗೀಕರಿಸಿದ ದಿನ. ಮಕ್ಕಳ ಹಕ್ಕುಗಳ ಸಮಾವೇಶವು ೧೯೮೯ ರಲ್ಲಿ ಅದಕ್ಕೆ ಸಹಿ ಮಾಡಿತು.೧೯೧ ದೇಶಗಳು ಇದನ್ನು ಒಪ್ಪಿವೆ. ಮಕ್ಕಳ ದಿನಾಚರಣೆಯನ್ನು ವಿಶ್ವದಾದ್ಯಂತ ೧೯೫೩ ಅಕ್ಟೋಬರದಲ್ಲಿ ಆಚರಿಸಲಾಯಿತು.ಇದನ್ನು ಜಿನೇವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮೀತಿಯು ಆಯೋಜಿಸಲಾಗಿತ್ತು. ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ ಕೃಷ್ಣ ಮನೆನ್ ಅವರಿಂದ ಸೂಚಿತವಾಗಿತ್ತು. ೧೯೫೪ ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅನುಮೋದಿಸಿತು.ಪ್ರಪಂಚದ ಎಲ್ಲ ರಾಷ್ಟ್ರಗಳು ೧೯೫೪ ರಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು ಪ್ರೋತ್ಸಾಹಿಸಲಾಯಿತು.
ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮ ದಿನದ ಅಂಗವಾಗಿ ನವೆಂಬರ್ ೧೪ ರಂದು ಆಚರಿಸಲಾಗುತ್ತಿದೆ.ನೆಹರೂ ಅವರಿಗೆ ಮಕ್ಕಳ ಬಗೆಗಿರುವ ಅಪಾರ ಪ್ರೀತಿ ಮತ್ತು ಕಾಳಜಿ.ಪ್ರಧಾನಿಯಾದ ನಂತರವೂ ಕೂಡ ಅವರು ಎಲ್ಲೇ ಹೋಗಿರಲಿ ಅಲ್ಲಿ ಮಕ್ಕಳನ್ನು ಕಂಡರೆ ಸಾಕು ಅವರೊಡನೆ ಆಟದಲ್ಲಿ ನಿರತರಾಗುತ್ತಿದ್ದರು.ಈ ಕುರಿತು ಅವರ ತಂಗಿ ವಿಜಯಲಕ್ಷ್ಮೀ ಪಂಡಿತ ಈ ರೀತಿ ಹೇಳಿರುವರು “ನಿಜವಾದ ಜವಾಹರರನ್ನು ನೀವು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು.ಆಗ ಅವರು ಮಕ್ಕಳಂತೆಯೇ ಆಟವಾಡಿ ನಲಿದು ಆನಂದಪಡುತ್ತಾರೆ” ಎಂದು.ಮಕ್ಕಳು ಕೂಡ ಅವರನ್ನು “ಚಾಚಾ” ಎಂದೇ ಸಂಭೋದಿಸುತ್ತಿದ್ದರು.ಜವಹರಲಾಲ್ ನೆಹರೂ ಹುಟ್ಟಿದ್ದು ೧೮೮೯ ನೇ ನವೆಂಬರ್ ೧೪ ರಂದು.ತಾಯಿ ಸ್ವರೂಪರಾಣಿ.ತಂದೆ ಮೋತಿಲಾಲ್ ನೆಹರೂ.
ಮೋತಿಲಾಲರಿಗೆ ಸಿಟ್ಟಿನ ಸ್ವಭಾವ.ನೆಹರೂರವರು ಕೂಡ ತಂದೆಯನ್ನು ಕಂಡ ಭಯಪಡುತ್ತಿದ್ದರು. ಅವರ ಬಾಲ್ಯದ ಘಟನೆಯನ್ನು ಅವರು ಪುನಃ ಪುನಃ ನೆನಪಿಸಿಕೊಳ್ಳುತ್ತಿದ್ದರು.
ಒಂದು ಸಲ ಮೋತಿಲಾಲರ ಕೊಠಡಿಯಲ್ಲಿ ಮೇಜಿನ ಮೇಲಿದ್ದ ಎರಡು ಪೆನ್ ಗಳನ್ನು ನೆಹರೂ ಕಂಡಿದ್ದರು.ಆಗ ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ ಎಂದುಕೊಂಡು ಅದರಲ್ಲಿನ ಒಂದು ಪೆನ್ನನ್ನು ತಗೆದುಕೊಂಡರು.ತಂದೆ ಮೇಜಿನ ಮೇಲೆ ಒಂದು ಪೆನ್ನು ಕಾಣದಿದ್ದಾಗ ಮನೆಯವರನ್ನೆಲ್ಲ ವಿಚಾರಿಸಿ ನೆಹರೂ ರವರನ್ನು ಕೂಡ ಕೇಳಲು ನಾನು ತಗೆದುಕೊಂಡಿಲ್ಲವೆಂದರು.ಆದರೆ ಆ ಪೆನ್ನು ಇವರ ಬಳಿ ಸಿಕ್ಕಾಗ ಚನ್ನಾಗಿ ಏಟು ಕೊಟ್ಟರಂತೆ.ಈ ಘಟನೆ ಎಂತಹ ಸಂದರ್ಭ ಬಂದರೂ ಸುಳ್ಳು ಹೇಳಬಾರದೆಂಬುದಕ್ಕೆ ಸಾಕ್ಷಿ.ತಂದೆಯು ಎಷ್ಟು ಸಿಟ್ಟಿನ ವ್ಯಕ್ತಿಯಾಗಿದ್ದರೋ ಅಷ್ಟೇ ನೆಹರೂರವರ ಮೇಲೆ ಪ್ರೀತಿ ಹೊಂದಿದ್ದರು.ಪರ್ಡಿನಂಡ್ ಬ್ರುಕ್ಷ ಇವರ ಬಾಲ್ಯದ ಶಿಕ್ಷಕರಾಗಿದ್ದರು.ಅವರು ಜವಾಹರಲಾಲ್ ನೆಹರೂರವರಿಗೆ ಪುಸ್ತಕ ಓದುವ ರುಚಿಯನ್ನು ಹಚ್ಚಿದವರು.ಅವರ ಕಾಕಾ ಇವರಿಗೆ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರಂತೆ ಹೀಗೆ ತಮ್ಮ ಬಾಲ್ಯದ ದಿನಗಳನ್ನು ನೆಹರೂ ನೆನೆಯುತ್ತಿದ್ದರು.ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ನೆಹರೂ ರವರು ಭಾರತಕ್ಕೆ ಮರಳಿದಾಗ ತಂದೆಯ ಜೊತೆಗೆ ವಕೀಲಿ ವೃತ್ತಿಯನ್ನು ನಡೆಸಿದರು.ಅವರು ವಕೀಲಿ ವೃತ್ತಿ ನಡೆಸಿದಾಗ ಮೊದಲ ಪ್ರಕರಣಕ್ಕೆ ತಗೆದುಕೊಂಡ ಶುಲ್ಕ ೫೦೦ ರೂ ಗಳು.
೧೯೧೬ ಪೆಬ್ರುವರಿ ೮ ರಂದು ನೆಹರೂರವರು ಕಮಲಾಳನ್ನು ವಿವಾಹವಾದರು.ಪತಿ ಪತ್ನಿ ಇಬ್ಬರೂ ಸ್ವಾತಂತ್ರö್ಯ ಹೋರಾಟದಲ್ಲಿ ತಮ್ಮನ್ನು ಅರ್ಪಿಸಿಕೊಂಡರು.ಭಾರತವನ್ನು ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ೩೨ ತಿಂಗಳು ಕಾರಾಗೃಹವಾಸ ಅನುಭವಿಸಿದರು.ಇವರ ಮಗಳು ಇಂದಿರಾ ಪ್ರಿಯದರ್ಶಿನಿ. ಸ್ವತಂತ್ರ ಭಾರತಕ್ಕೆ ಮೊದಲ ಪ್ರಧಾನಿಯಾದ ನೆಹರೂರವರು ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿದ್ದರು.ನಮ್ಮ ದೇಶದ ಉನ್ನತಿಗಾಗಿ ಅವರು ಕೊಟ್ಟ ಮಂತ್ರವೆಂದರೆ “ಅರಾಮ್ ಹರಾಮ್ ಹೈ”ಎಂಬುದು.ಪಂಡಿತ್ ಜವಹರಲಾಲ್ ನೆಹರೂರವರು ಅಗಸ್ಟ ೧೪ ರ ಮಧ್ಯರಾತ್ರಿ ಸಂಸತ್ತನ್ನುದ್ದೇಶಿಸಿ ಮಾಡಿದ “ ಎ ಟ್ರಿಸ್ಟ ಡೆಸ್ಟಿನಿ ಭಾಷಣದ ಕನ್ನಡ ಅನುವಾದ ಹೀಗಿದೆ “ ಹಿಂದೊಮ್ಮೆ ನಾವು ವಿಧಿಗೊಂದು ಮಾತೆತ್ತಿದ್ದೆವು.ಆ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ.ಈ ನಡು ರಾತ್ರಿಯ ವಿಸೇಷ ಘಳಿಗೆಯಲ್ಲಿ ಇಡೀ ವಿಶ್ವ ನಿದ್ರಿಸುತ್ತಿರುವಾಗ ಭಾರತ ಸ್ವಾತಂತ್ರಂತ್ರ್ಯವನ್ನು ಮೈದಳೆದು ಮೇಲೇಳಲಿದೆ.ಹಳತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿಗಳೆವ ಈ ಘಳಿಗೆ,ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು.ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆಯ ಸತ್ಪ್ರಜೆಗಳ ಸೇವೆಗಾಗಿ,ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ” ಎಂದು ಭಾಷಣದಲ್ಲಿ ದೇಶವನ್ನು ಕುರಿತು ಹೇಳಿದ್ದರು.
ನೆಹರೂರವರು ಸ್ವತಃ ಸಾಹಿತಿಯಾಗಿದ್ದರು.ಅವರು ಪ್ರತಿದಿನ ಎಷ್ಟೇ ಕೆಲಸದಲ್ಲಿ ನಿರತರಾಗಿದ್ದರೂ ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಪುಸ್ತಕ ಓದುತ್ತಿದ್ದರು.ಗ್ಲಿಂಪ್ಸ ಆಪ್ ವರ್ಲ್ಡ ಹಿಸ್ಟರಿ.ಡಿಸ್ಕವರಿ ಆಪ್ ಇಂಡಿಯ.ಇವರ ಪ್ರಸಿದ್ದ ಪುಸ್ತPಗಳು. ಇವರ ಕವಿತೆಯೊಂದರ ಸಾಲುಗಳು ಇಂತಿವೆ
ಕಾಡೂ ಸುದರವಾಗಿದೆ
ದಟ್ಟ ಕತ್ತಲೆಯಿಂದ ಕೂಡಿದೆ
ಆದರೆ ನಾನು ಮಾತುಗಳನ್ನು
ಉಳಿಸಿಕೊಳ್ಳಬೇಕಿದೆ.
ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೇ
ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.
ಇವರಿಗೆ ಭಾರತದ ಉನ್ನತ ಪ್ರಶಸ್ತಿಯಾದ “ಭಾರತರತ್ನ”ಪ್ರಶಸ್ತಿಯನ್ನು ೧೯೫೫ ರಲ್ಲಿ ದೇಶದ ಪರವಾಗಿ ರಾಷ್ಟ್ರಪತಿಯವರು ವಿತರಿಸಿದರು. ೧೯೬೪ ಮೇ ೨೭ ರಂದು ನೆಹರೂ ನಿಧನರಾದರು.
ಮಕ್ಕಳ ದಿನವನ್ನು ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರಿಕರನ್ನಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ ಆಚರಿಸಲಾಗುತ್ತಿದೆ.ನೆಹರೂರವರು ಮಕ್ಕಳ ಕುರಿತು ಈ ರೀತಿ ಹೇಳಿರುವರು. “ ಮಕ್ಕಳನ್ನು ತುಂಬಾ ಪ್ರೀತಿಸಿ.ಉತ್ತಮ ಶಿಕ್ಷಣ ಕೊಡಿ.ಅವರು ದೇಶದ ಭವಿಷ್ಯ.ಮತ್ತು ನಾಳಿನ ಜವಾಬ್ದಾರಿಯುತ ಪ್ರಜೆಗಳು, ಮಕ್ಕಳೇ ದೇಶದ ನಿಜವಾದ ಶಕ್ತಿ. ಹೆಣ್ಣು ಗಂಡು ಎಂಬ ಭೇದಭಾವ ಮಾಡದೇ ಉಭಯರಿಗೂ ಸಮಾನ ಅವಕಾಶ ಕೊಡಬೇಕು” ಎಂದು ಹೇಳುತ್ತಿದ್ದರು.ಅವರು ಮಕ್ಕಳಿಗೆ ಗುಲಾಬಿ ಹೂವನ್ನು ಕೊಡುವ ಮೂಲಕ ಗುಲಾಬಿಯ ಪ್ರೀತಿಯನ್ನು ಅವರಲ್ಲಿ ಕಾಣುತ್ತಿದ್ದರು.ಮಕ್ಕಳ ದಿನಾಚರಣೆಯನ್ನು ನೆಹರೂರವರ ನೆನಪಿನ ಜೊತೆಗೆ ಆಚರಿಸುವ ನಾವೆಲ್ಲ.ಮಕ್ಕಳಿಗಾಗಿ ಇರುವ ಹಕ್ಕುಗಳ ಬಗ್ಗೆಯೂ ಇಂದು ಜಾಗೃತಿ ಮೂಡಿಸುವಲ್ಲಿ ಪ್ರಮುಖಪಾತ್ರ ವಹಿಸಬೇಕಾಗಿದೆ.ಬದುಕುವ ಹಕ್ಕು.ಅಭಿವೃದ್ದಿಯ ಹಕ್ಕು.ರಕ್ಷಣೆಯ ಹಕ್ಕು..ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಸಂಬಂಧಪಟ್ಟಂತೆ ವಿಧಿಗಳನ್ನು ಹೊಂದಿರುವ ಮಕ್ಕಳ ಹಕ್ಕುಗಳನ್ನು ಇಂದು ಎಲ್ಲರೂ ಅರಿತುಕೊಂಡು ಮಗುವಿನ ಲಾಲಣೆ ಪೋಷಣೆ ಮಾಡುವ ಮೂಲಕ ಅವರನ್ನು ನಾಡಿನ ಸತ್ಪ್ರಜೆಗಳನ್ನಾಗಿ ಮಾಡಿದರೆ ಇಂಥ ಮಕ್ಕಳ ದಿನಾಚರಣೆಗಳನ್ನು ಆಚರಿಸುವುದರಲ್ಲಿ ಸಾರ್ಥಕತೆ ಅಡಗಿದೆ.
ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ತಾಲೂಕ ಃ ಸವದತ್ತಿ ಜಿಲ್ಲೆಃಬೆಳಗಾವಿ
೯೪೪೯೫೧೮೪೦೦
Adbhuta baraha sir dhanyavadagalu