ಏಕಾಗ್ರತೆಯ ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ’..
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಡಾ. ಕರಡೋಣಿ
ಧಾರವಾಡ: ವಿಧದ ಕ್ರೀಡಾ ಸಾಧಕರ ಸಾಧನೆಯಿಂದಾಗಿ ಭಾರತದ ಗೌರವ ಮತ್ತಷ್ಟು ಅಧಿಕವಾಗಿದೆ. ಕ್ರೀಡಾ ಪಟುಗಳು ರೂಢಿಸಿಕೊಳ್ಳುವ ಏಕಾಗ್ರತೆಯ ಕಠಿಣ ಪರಿಶ್ರಮದಿಂದ ಅವರು ವಿಶ್ವದೆತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನಗರದ ಪ್ರತಿಷ್ಠಿತ ಕರ್ನಾಟಕ ಕಲಾ ಕಾಲೇಜು(ಕೆಸಿಡಿ) ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ ಹೇಳಿದರು.
ಅವರು ಇಲ್ಲಿಯ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಕ್ರೀಡೆಗಳ ಮೂಲಕ ಬಹು ಮುಖ್ಯವಾಗಿ ದೈಹಿಕ ಆರೋಗ್ಯ ಸಂವರ್ಧನೆಗೊಳ್ಳುತ್ತದೆ. ಜೊತೆಗೆ ಸ್ಪರ್ಧಾ ಮನೋಭಾವ, ಕಷ್ಟ ಸಹಿಷ್ಣುತೆ, ತಾಳ್ಮೆ, ಎಂತಹುದೇ ಪರಿಸ್ಥಿತಿಯನ್ನಾದರೂ ನಿಭಾಯಿಸುವ ಛಲ ಸೇರಿದಂತೆ ಅನೇಕ ಗುಣಾತ್ಮಕ ಸಂಗತಿಗಳು ವಿದ್ಯಾರ್ಥಿಗಳಲ್ಲಿ ಅಂಕುರಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿದಿನ ವಿವಿಧ ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಸಂಸ್ಥಾಪಕ ಅರುಣ ಚರಂತಿಮಠ ಅವರು ಶಾಲಾ ಚಟುವಟಿಕೆಗಳಲ್ಲಿ ಕ್ರೀಡೆ, ವಿಜ್ಞಾನ-ತಂತ್ರಜ್ಞಾನ, ಸಾಹಿತ್ಯ, ಸಂಗೀತ, ಕಲೆ ಸೇರಿದಂತೆ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂಗತಿಗಳಿಗೆ ಆದ್ಯತೆ ನೀಡಿರುವುದು ಶಿಕ್ಷಣ ಚಿಂತಕರ ಗಮನಸೆಳೆದಿದೆ ಎಂದೂ ಡಾ. ಕರಡೋಣಿ ಶ್ಲ್ಯಾಘಿಸಿದರು.
ಕೆಸಿಡಿ ಪ್ರಿನ್ಸಿಪಾಲ್ ಡಾ.ಡಿ.ಬಿ.ಕರಡೋಣಿ ಅವರನ್ನು ಗೌರವಿಸಿ ಮಾತನಾಡಿದ ಎಆರ್‌ಸಿ ಫೌಂಡೇಶನ್ ಅಧ್ಯಕ್ಷ ಅರುಣ ಚರಂತಿಮಠ, ಹತ್ತಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ ಅತ್ಯುತ್ತಮ ಲೇಖಕ, ವಾಗ್ಮಿ, ಕನ್ನಡದ ಏಳಿಗೆಗಾಗಿ ಹಲವಾರು ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ.ಕರಡೋಣಿ ಅವರು ಉತ್ತಮ ಆಡಳಿತಗಾರರೂ ಆಗಿದ್ದಾರೆ ಎಂದರು.
ಶಾಲೆಯ ಪ್ರಿನ್ಸಿಪಾಲ್ ಅಶ್ವಿನಿ ಚಿಕ್ಕಬಳ್ಳಾಪುರ ಮಾತನಾಡಿ ಶಾಲೆಯು ಭಾರತರತ್ನ ಸಿಎನ್‌ಆರ್ ರಾವ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎ.ಎಸ್.ಕಿರಣಕುಮಾರ್ ಅವರಂತಹ ಮೇಧಾವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ ಎಂದರು.
ಕ್ರೀಡಾ ಜ್ಯೋತಿಯೊಂದಿಗೆ ನಡೆದ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಗಮನಸೆಳೆಯಿತು. ಅತ್ಯುತ್ತಮ ಪಾರಿತೋಷಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆಯ ಆಡಳಿತ ಮಂಡಳಿ ಸದಸ್ಯರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.