ಹಟ್ಟಿ ಹಬ್ಬ..
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು.ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು ಈ ಹಬ್ಬವನ್ನು ಸಡಗರದಿಂದ ಆಚರಿಸುವರು. ಈ ಹಬ್ಬಕ್ಕೆ ಪ್ರಣತಿ ಹಬ್ಬ, ಹಟ್ಟಿ ಹಬ್ಬ, ದೀವಳಿಗೆ ಹಬ್ಬ ಎಂತಲೂ ಕರೆಯುವರು. ಜಗತ್ತಿನ ಜನರ ಜೀವನದಲ್ಲಿ ಜ್ಯೋತಿಗೆ ಅತ್ಯಂತ ಮಹತ್ವದ ಸ್ಥಾನವಿದೆ.ಶ್ರೀರಾಮನು ಲಂಕೆಯನ್ನು ಗೆದ್ದು ಸೀತೆಯೊಡನೆ ಪಟ್ಟಾಭಿಷೇಕವಾದ ದಿನವೇ ದೀಪಾವಳಿ ಎಂಬ ನಂಬಿಕೆ.ಬಲಿಚಕ್ರವರ್ತಿಯನ್ನು ವಿಷ್ಣುವು ವಾಮನ ಅವತಾರದಿಂದ ಪಾತಾಳಕ್ಕೆ ತುಳಿದ ದಿನದ ಉತ್ಸವದ ಆಚರಣೆಗಾಗಿ ಈ ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.
ವಿಜಯದಶಮಿ ಸಂದರ್ಭದಲ್ಲಿ ಆಯುಧಪೂಜೆ.ಲಕ್ಷ್ಮೀ ಪೂಜೆ ಆಚರಿಸುವ ಉತ್ತರ ಕರ್ನಾಟಕದ ಜನರು ಸಾಲು ಸಾಲು ಹಬ್ಬಗಳ ಸಡಗರದಲ್ಲಿ ಸೀಗೆ ಹುಣ್ಣಿಮೆಯ ಚರಗ ಭೂ ತಾಯಿಗೆ ಅರ್ಪಿಸಿ ಬಂದು ತಮ್ಮ ಒಕ್ಕಲುತನದ ಕಾರ್ಯ ಚಟುವಟಿಕೆಗಳಲ್ಲಿ ಸ್ವಲ್ಪ ಬಿಡುವ ಹೊಂದಿರುವ ಸಮಯದಲ್ಲಿ ಮಹಾನವಮಿ ಘಟ್ಟದಲ್ಲಿ ಆರಂಭಗೊಂಡಿದ್ದ ಮಳೆ,ಈ ಸಂದರ್ಭದಲ್ಲಿಯೂ ಕೂಡ ಸದ್ದಿಲ್ಲದೇ ಆಗಾಗ ಬಂದು ಹೋಗುವ ಮೂಲಕ ರೈತರ ಮುಖದಲ್ಲಿ ಮಂದಹಾಸ ನೀಡಿರುತ್ತದೆ ಇಂಥ ಸಮಯದಲ್ಲಿ ದೀಪಾವಳಿಯ ಆಗಮನವಾಗುತ್ತದೆ. ಹಬ್ಬದ ನಾಲ್ಕನೇ ದಿನ ಬಲಿ ಪ್ರತಿಪದ ಕಾರ್ತೀಕ ಮಾಸದ ಆಗಮನವಾಗುತ್ತದೆ. ಕೊನೆಯದಾಗಿ ಪಾಂಡವರ ಪೂಜೆಯಲ್ಲಿ ಮುಗಿಯುತ್ತದೆ. ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಲಕ್ಷ್ಮೀ ಪೂಜೆ ಹೀಗೆ ಮೂರು ದಿನಗಳು ನಂತರ ಬಲಿಪ್ರತಿಪದ,ಹಟ್ಟಿಹಬ್ಬ ಹೀಗೆ ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ.
ಹಿಂಗಾರು ಮಳೆಯು ಪ್ರಾರಂಭವಾಗಿ ಬಿತ್ತನೆಗಳೆಲ್ಲ ಮುಗಿದು ಸಸಿಗಳು ತಲೆ ಎತ್ತಿ ಗರಿಬಿಡುತ್ತಿರುವ ಸಂದರ್ಭದಲ್ಲಿ ಬರುವ ದೊಡ್ಡ ಸಂಪ್ರದಾಯದ ಹಬ್ಬ ದೀಪಾವಳಿಯಾಗಿದ್ದು, ಮುಂಗಾರು ಧಾನ್ಯಗಳ ರಾಶಿಯ ಕರ್ಯ ಆರಂಭವಾಗಿರುವು-ನವಣೆ-ಅಲಸಂದಿ, ಹೆಸರು ಹವೀಜ ಬೀಜದಂತಹ ಅಕ್ಕಡಿ ಕಾಳುಗಳನ್ನು ಒಕ್ಕಲು ಮಾಡಿರುತ್ತಾರೆ. ಈ ಖುಷಿಯಲ್ಲಿಯೇ ಕಾರ್ತೀಕ ಮಾಸವನ್ನು ಬರಮಾಡಿಕೊಳ್ಳುವರು.ಈ ಸಂದರ್ಭದಲ್ಲಿ ತಮ್ಮ ಹಟ್ಟಿಯನ್ನು ಸ್ವಚ್ಚಗೊಳಿಸಿಕೊಳ್ಳುವರು
.
ಹಟ್ಟಿ ಎಂದರೆ ಗೋವು-ದನಕರುಗಳನ್ನು ಕಟ್ಟುವ ಕೊಟ್ಟಿಗೆ.ಹಟ್ಟಿ ಎಂದರೆ ಗೋ ಶಾಲೆ. ಗೋಪಾಲರ ವಾಸಸ್ಥಳ ಅಂತ ಅರ್ಥ. ಪಶುಗಳನ್ನು, ಪಶುಪಾಲಕರನ್ನು ಗೌರವಿಸುವ ದೃಷ್ಟಿಯಿಂದ ಹಟ್ಟಿಗೆ ಮಹತ್ವ ಕೊಟ್ಟು ಆಚರಿಸುವ ದಿನ ಇದು.ಇವು ಉತ್ತರ ಕರ್ನಾಟಕದ ಕೆಲವು ಒಕ್ಕಲುತನದ ಮನೆಗಳಲ್ಲಿ ವೈವಿಧ್ಯಮಯವಾಗಿವೆ.ತೇಗಿನ ಕಟ್ಟಿಗೆಯಿಂದ ಎರಡು ಕಡೆಗಳಲ್ಲಿ ಜಾನುವಾರು ಕಟ್ಟಲು ಸ್ಥಳಾವಕಾಶ ಹೊಂದಿದ್ದು.ನಡುವಿನ ಹೊಂಡದ ರೀತಿಯ ಸ್ಥಳದಲ್ಲಿ ಅವುಗಳಿಗೆ ಮೇವು ಹಾಕಲು ಅವಕಾಶ ಕಲ್ಪಿಸಿರುತ್ತಾರೆ ಕೊಟ್ಟಿಗೆಯ ಎರಡು ಬದಿಯಲ್ಲಿ ಒಂದೊಂದು ನೀರಿನ ಹೊಂಡ ಕಲ್ಲಿನಿಂದ ನಿರ್ಮಾಣ ಮಾಡಿದವುಗಳನ್ನು ಇಡಲಾಗಿರುತ್ತದೆ.ಅಂದರೆ ದನ-ಕರುಗಳು ಮೇವು ತಿಂದು ಅಲ್ಲಿ ನೀರು ಕುಡಿಯಲಿ ಎಂಬ ಉದ್ದೇಶದಿಂದ ಮಾಡಿರುತ್ತಾರೆ.
ಒಕ್ಕಲುತನ ಮಾಡುವ ರೈತರ ಹಟ್ಟಿಗಳ ವಿವಿಧತೆಯನ್ನು ಕಾಣಬೇಕೆಂದರೆ ನಾವು ಗ್ರಾಮೀಣ ಪ್ರದೇಶದ ಕೆಲವು ಹಳ್ಳಿಗಳ ಮನೆಗಳನ್ನು ನೋಡಬೇಕು.ಅಧುನಿಕತೆಯ ಬರಾಟೆಯಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಳೆಯ ಕಾಲದ ಕೊಟ್ಟಿಗೆಗಳನ್ನು ತಗೆಯಿಸಿ ಹೊಸ ರೀತಿಯ ಕಾಂಕ್ರೀಟ್ ಹಟ್ಟಿಗಳ ನಿರ್ಮಾಣ ಕೂಡ ಆಗುತ್ತಿವೆ.ಅಂದರೆ ನಮ್ಮ ಜನಸಂಖ್ಯೆಗೆ ಅನುಕೂಲವಾಗುವಂತೆ ಮನೆಯ ಸ್ಥಳಾವಕಾಶ ಹುಡುಕುತ್ತಿರುವ ರೈತ ಜನರು ಹಟ್ಟಿಗಳಲ್ಲಿಯೂ ಆಧುನಿಕತೆಯ ಸ್ಫರ್ಶ ನೀಡುತ್ತಿರುವರು.ಏನೇ ಇರಲಿ ಉತ್ತರ ಕರ್ನಾಟಕದ ಜನ ಹಟ್ಟಿ ಹಬ್ಬವನ್ನು ಆಚರಿಸುವ ರೀತಿ ಮಾತ್ರ ವಿಭಿನ್ನ ಇದು ಬೇರೆಡೆ ಎಲ್ಲಿಯೂ ಕಾಣ ಸಿಗದು.
ಹಟ್ಟಿ ಹಬ್ಬದಾಚರಣೆಯ ನಂಬಿಕೆಗಳು
ಈ ಹಬ್ಬಕ್ಕೂ ಮಹಾಭಾರತದಲ್ಲಿ ಜರುಗಿದ ಘಟನೆಗೂ ಹೋಲಿಕೆಯುಂಟು ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸ ಕಳೆಯುತ್ತಿದ್ದ ಪಾಂಡವರು ವಿರಾಟನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಬಂದಿರುವ ನೆನಪಿನಲ್ಲಿ ಅಂದರೆ ಪಾಂಡವರು ಇದೇ ದಿನ ತಮ್ಮ ಅಜ್ಞಾತವಾಸ ಮುಗಿಸಿ ತಮ್ಮ ಗೋವುಗಳೊಂದಿಗೆ ಪುರಪ್ರವೇಶ ಮಾಡಿದರೆಂಬ ನಂಬಿಕೆಯಿಂದಾಗಿ ಈ ದಿನ ಹಟ್ಟೆವ್ವ ಇಡುವ ಸಂಪ್ರದಾಯವಿದೆ. ಈ ಕರ್ಯಕ್ಕಾಗಿ ಹಟ್ಟಿಯನ್ನು ಸ್ವಚ್ಚಗೊಳಿಸುವ ಜೊತೆಗೆ ದಿನವಿಡೀ ತಮ್ಮ ದನಕರುಗಳು ಹಾಕಿದ ಸಗಣಿಯನ್ನು ತಿಪ್ಪೆಗುಂಡಿಗೆ ಹಾಕದೇ ಮಡಿಯಿಂದ ಒಂದೆಡೆ ತಗೆದಿರಿಸುತ್ತಾರೆ.ಏಕೆಂದರೆ ತಮಗೆ ಎರಡು ಮೂರು ದಿನ ಇಡಲು ಬೇಕಾಗುವ ಪಾಂಡವರ ಮೂರ್ತಿಗಳಿಗೆ ಬಳಸಲು ಸಗಣಿಯ ಅವಶ್ಯಕತೆಯಿದೆ.
ಸಗಣಿಯಿಂದ ಹಟ್ಟೆವ್ವನನ್ನು ಮತ್ತು ಪಾಂಡವರನ್ನು ಮಾಡಿ ಉತ್ತರಾಣಿ ಕಡ್ಡಿ, ಹೊನ್ನಾರಿ ಹೂವು ಹಾಗೂ ಇನ್ನಿತರ ಹಲವು ವಿಧದ ಹೂವುಗಳಿಂದ ಅಲಂಕರಿಸಿ ಶ್ಯಾವಿಗೆ ಹಾಗೂ ಅನ್ನವನ್ನು ಮಾಡಿ ಎಡೆ ಹಿಡಿಯುವರು.ಈ ದಿನಗಳಲ್ಲಿ ಶ್ಯಾವಿಗೆ ಊಟ ಮಾಡುವರು.ಸಕ್ಕರೆ ಶ್ಯಾವಿಗೆ ಬೆಲ್ಲದ ಶ್ಯಾವಿಗೆ ಹಾಲು ಹಾಕಿ ಊಟಕ್ಕೆ ಹೆಚ್ಚು ಬಳಕೆ ಮಾಡುವರು.ಇದನ್ನು ಹಟ್ಟಿ ಹಬ್ಬದ ವಿಶೇಷ ಸಿಹಿ ಅಡುಗೆ ಅಂತಾ ಪರಿಗಣಿಸಲಾಗಿದೆ.
ದನಗಳ ಮೈ ತೊಳೆದು ಗಲೀಫಾ ಹಾಕಿ, ಕೋಡಿಗೆ ಬಣ್ಣ ಹಚ್ಚಿ ಸಿಂಗರಿಸುವರು.ಪಾಂಡವರೊಂದಿಗೆ ಗೋವುಗಳು ವಿರಾಟನ ರಾಜ್ಯಕ್ಕೆ ಮರಳಿದವೆಂಬ ಪ್ರತೀತಿಯಿಂದ ಇಲ್ಲಿ ಪಾಂಡವರನ್ನು ಮತ್ತು ಹಟ್ಟೆವ್ವನನ್ನು ಇಟ್ಟಿರುವ ಸ್ಥಳದವರೆಗೂ ಆಕಳ ಹೆಜ್ಜೆಗಳನ್ನು ತಮ್ಮ ಕೈ ಮುಟಗೀ ಮಾಡಿ ಅದಕ್ಕೆ ಕೆಮ್ಮಣ್ಣು ಮತ್ತು ಬಿಳಿ ಸುಣ್ಣವನ್ನು ಬಳಸಿ ಹೆಜ್ಜೆ ಮೂಡಿಸುತ್ತಾರೆ. ಹಿತ್ತಲದಾಗ ಕುಂಬಳಿ ಬಳ್ಳಿ ಹತ್ತಿರ ಹಟ್ಟೆವ್ವನನ್ನು ಅಂದರೆ ಲಕ್ಷ್ಮೀ ಮೂರ್ತಿಮಾಡಿ ಇಡುತ್ತಾರೆ. ಉತ್ತರಾಣಿ ಕಡ್ಡಿ ಚುಚ್ಚೋದು, ಜೋಳದ ದಂಟು ಅಥವಾ ಕಬ್ಬಿನ ಗಣಿಕೆಯ ನಡುವೆ ಹಟ್ಟೆವ್ವನನ್ನು ಅಲಂಕರಿಸಿ ಪೂಜೆಗೈಯುತ್ತಾರೆ.ಇಲ್ಲಿ ಹಟ್ಟೆವ್ವ ಅಂದರೆ ತಾಯಿಯ ಸ್ವರೂಪ ಆಕೆಯ ಮಕ್ಕಳ ಸ್ವರೂಪದಲ್ಲಿ ಚಿಕ್ಕ ಚಿಕ್ಕ ಆಕಾರದಲ್ಲಿ ಪಾಂಡವರನ್ನು ಸಗಣಿಯಿಂದ ತಯಾರಿಸುತ್ತಾರೆ.ಈ ರೀತಿ ಕೆಲವು ಮನೆಯವರು ಈ ಹಬ್ಬವನ್ನು ಐದು ದಿನ ಮೂರು ದಿನ ಒಂದು ದಿನ ಹೀಗೆ ತಮ್ಮ ತಮ್ಮ ಮನೆಯಲ್ಲಿ ಎಷ್ಟು ದಿನ ಇಡುವ ಸಂಪ್ರದಾಯವಿದೆಯೋ ಅಷ್ಟು ದಿನ ಇಡುವ ಮೂಲಕ ಕೊನೆಯ ದಿನ ತಮ್ಮ ಮನೆಗಳ ಮಾಳಿಗೆಯ ಕುಂಬಿಯ ಮೇಲೆ ಸಾಲಾಗಿ ಜೋಡಿಸಿ ಎಡ ಮತ್ತು ಬಲ ಬದಿಗಳಲ್ಲಿ ಜೋಳದ ದಂಟು ಇರಿಸಿ ದಾರದಿಂದ ಸುತ್ತು ಹಾಕುವ ಮೂಲಕ ಈ ಹಬ್ಬದ ಆಚರಣೆ ಕೊನೆಗೊಳ್ಳುವುದು.ಮಾಳಿಗೆಯ ಕುಂಬಿಯ ಮೇಲೆ ಇಡುವಾಗಲೂ ಸಹ ಹಟ್ಟೆವ್ವ ಅಂತಾ ಮಾಡಿದ ದೊಡ್ಡ ಮೂರ್ತಿಯನ್ನು ನಡುವೆಯೇ ಬರುವಂತೆ ನೋಡಿಕೊಳ್ಳುವರು.
ಭೂ ತಾಯಿ ನಮ್ಮನ್ನೆಲ್ಲ ಹೇಗೆ ಕಾಪಾಡುವಳೋ ಹಾಗೆಯೇ ಮಾತೃ ಸ್ವರೂಪದ ಹಟ್ಟೆವ್ವ ನಮ್ಮ ಬದುಕಿನಲ್ಲಿ ನಮ್ಮನ್ನು ಕಾಪಡುವಳು ಎಂಬ ಮಾತೃ ಸ್ವರೂಪದ ದೇವತೆಯನ್ನಾಗಿ ಹಟ್ಟೆವ್ವಳಿಗೆ ಆದ್ಯತೆ ಒದಗಿಸುವ ಜೊತೆಗೆ ಪಾಂಡವರು ಗೋವುಗಳನ್ನು ರಕ್ಷಣೆ ಮಾಡುವ ಮೂಲಕ ಗೋವುಗಳ ಪೂಜೆಗೈಯುವ ದಿನವಾಗಿ ಹಟ್ಟಿ ಹಬ್ಬವನ್ನು ಉತ್ತರ ಕರ್ನಾಟಕದ ಜನರು ದೀಪಾವಳಿ ಸಂದರ್ಭದಲ್ಲಿ ಆಚರಿಸುವರು. ಇದನ್ನು ಹಟ್ಟಿ ಹಬ್ಬ ಎಂದು ಕರೆಯುವರು.
ಈ ಹಬ್ಬದಾಚರಣೆಗೆ ಇನ್ನೂ ಒಂದು ದೃಷ್ಟಾಂತ ನೀಡುವರು.ಅದು ಹೈಮ ಮಹಾರಾಜನ ಮಗನ ಕಥೆ.ಹಿಂದೆ ಹೈಮ ಎಂಬ ಮಹಾರಾಜನಿದ್ದ. ಅವನಿಗೆ ಒಬ್ಬ ಮಗನಿದ್ದ. ಅವನಿಗೆ ಮದುವೆಯಾದ ನಾಲ್ಕನೇ ದಿನ ಸರ್ಪದೋಷದಿಂದ ಮೃತನಾದ. ಆತನ ಪತ್ನಿ ತನ್ನ ಪತಿಯ ಅಕಾಲ ಮರಣದಿಂದ ದುಃಖಿತಳಾಗಿ ಪರಿ-ಪರಿಯಿಂದ ಗೋಳಾಡಿ ಅಳುತ್ತಾಳೆ. ಆಕೆಯ ದುಃಖವನ್ನು ನೋಡಲಾರದೆ ಯಮಧರ್ಮ ದೀವಳಿಗೆ ಹಬ್ಬದೊಳಗೆ ಧನ ತ್ರಯೋದಶಿಯಿಂದ ಐದು ದಿನಗಳವರೆಗೆ ಯಾರ ಮನೆಯಲ್ಲಿ ಸಾಲು ದೀಪಗಳು ಬೆಳಗುವುವೋ ಅಂಥವರಿಗೆ ಅಪಮೃತ್ಯುವಿಲ್ಲ ಎಂಬುದಾಗಿ ಹೇಳಿದ. ಕಾರಣ ಸಾಲು ದೀವಿಗೆ ಹಚ್ಚಿ ಮನೆಗಳ ಮುಂದೆ ಇಡುವ ಆಚರಣೆ ರೂಢಿಯಲ್ಲಿ ಬಂದಿತೆನ್ನಬಹುದಾಗಿದೆ.
ಒಟ್ಟಿನಲ್ಲಿ ಭೂ ತಾಯಿಗೆ ನಮಿಸುವುದು.ನಮ್ಮೊಡನೆ ನಮಗೆ ಆಧಾರಸ್ಥಂಭವಾಗಿರುವ ಗೋವುಗಳ ರಕ್ಷಣೆಯ ಮಾಡುವುದು ಇವುಗಳನ್ನು ಹಬ್ಬಗಳ ಆಚರಣೆಯ ಮೂಲಕ ನಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬರುವ ಮೂಲಕ ಹಬ್ಬಗಳು ಇಂದಿಗೂ ಮನೆಮನೆಗಳಲ್ಲಿ ಜರುಗುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿವೆ.
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.ಮುನವಳ್ಳಿ
ಮುನವಳ್ಳಿ-೫೯೧೧೧೭
ತಾಃ ಸವದತ್ತಿ ಜಿಲ್ಲೆಃ ಬೆಳಗಾವಿ
೮೯೭೧೧೧೭೪೪೨ ೯೪೪೯೫೧೮೪೦೦