ಬೆಂಗಳೂರು, ನ. ೭- ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ವೇತನ ಪಾವತಿಸಲು ಸರ್ಕಾರದ ಬಳಿ ಹಣ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೂರಿದ್ದಾರೆ.ಗ್ಯಾರಂಟಿ ಯೋಜನೆಗಳಿಗೆ, ಬರ ಎದುರಿಸಲು ಅಷ್ಟೇ ಏಕೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಈ ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರಿ ನೌಕರರ ೭ನೇ ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರವನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ ಎಂದು ಹರಿಹಾಯ್ದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕ ದೇಶದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಸ್ಥಗಿತಗೊಂಡಿದೆ. ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ ಎಂದರು.ಈ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೆ ಬಿಡಲು ಸಾಧ್ಯವಿಲ್ಲ. ನಮ್ಮ ಮುಖಂಡರ ಜತೆ ಚರ್ಚಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪುರೇಷೆಗಳನ್ನು ನಿರ್ಧರಿಸುತ್ತೇವೆ ಎಂದರು.