7ನೇ ವೇತನ ಆಯೋಗದ ಅವಧಿಯನ್ನು ವಿಸ್ತರಿಸಿರುವುದನ್ನು ಖಂಡಿಸಿ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಕೂಡಲೇ ಶೇ. 40 ರಷ್ಟು ವೇತನ ಪರಿಷ್ಕರಣೆ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ…
ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಎರಡನೇ ಬಾರಿಗೆ 6 ತಿಂಗಳ ಕಾಲ ದಿನಾಂಕ: 15.03.2024ರವರೆಗೆ ವಿಸ್ತರಿಸಿರುವುದು ನೌಕರರಲ್ಲಿ ತೀವ್ರ ನಿರಾಶ ಮತ್ತು ಆಕ್ರೋಶ ಮೂಡಿಸಿದೆ. ವಾಸ್ತವವಾಗಿ ರಾಜ್ಯ ಸರ್ಕಾರಿ ನೌಕರರಿಗೆ 2022ರ ಜುಲೈನಿಂದಲೇ 7ನೇ ವೇತನ ಪರಿಷ್ಕರಿಸಿ ಜಾರಿಯಾಗಬೇಕಿದ್ದಿತು. ಆದರೆ, ಹಿಂದಿನ ಬಿಜೆಪಿ ಸರ್ಕಾರವು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನೌಕರರ ಮುಷ್ಕರದ ಒತ್ತಡದ ಹಿನ್ನೆಲೆಯಲ್ಲಿ ಶೇ. 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿ ಜಾರಿಕೊಂಡಿತು. ನಂತರ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಿಸಿತ್ತು.
ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳ, ಶಾಲಾ ಶುಲ್ಕ ಮತ್ತು ಆರೋಗ್ಯ ಸಂಬಂಧಿತ ವೆಚ್ಚಗಳು ನೌಕರರನ್ನು ಹಿಂಡಿ ಹಿಪ್ಪ ಮಾಡುತ್ತಿವೆ. ಮಂಜೂರಾದ 7.70 ಲಕ್ಷ ಹುದ್ದೆಗಳ ಪೈಕಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಅವುಗಳ ಹೊರೆಯನ್ನೂ ಸಹ ಕಾರ್ಯನಿರತ ನೌಕರರು ಹೊರುತ್ತಿದ್ದು, ಅಧಿಕ ಕೆಲಸದೊತ್ತಡದಿಂದ ಹಲವು ಕಾಯಿಲೆಗಳೊಂದಿಗೆ ಹೆಣಗುವಂತಾಗಿದೆ. ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರಿ ಆಧಾರದಲ್ಲಿ ಕಡಿಮೆ ವೇತನ ನೀಡಿ ಸರ್ಕಾರವೇ ಶೋಷಣೆ ಮಾಡುತ್ತಿದ್ದು, ವೇತನ ಆಯೋಗದ ವ್ಯಾಪ್ತಿಯಿಂದ ಈ ವರ್ಗದ ನೌಕರರನ್ನು ಹೊರಗಿಡಲಾಗಿದೆ. ಆದರೆ, ಜನಪ್ರತಿನಿಧಿಗಳ ವೇತನ ಸೌಲಭ್ಯಗಳನ್ನು ಯಾವುದೇ ಚರ್ಚೆಯಿಲ್ಲದೇ ಅಧಿವೇಶನದಲ್ಲಿ ಹೆಚ್ಚಿಸಿಕೊಳ್ಳಲಾಗಿದೆ.
ಸರ್ಕಾರಗಳ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಜನರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸರ್ಕಾರಿ ನೌಕರರನ್ನು ಕಡೆಗಣಿಸುವುದು ಅಭಿವೃದ್ಧಿಯನ್ನೇ ಕಡೆಗಣಿಸಿದಂತೆ, ದೇಶದಲ್ಲಿಯೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿರುವ ಕೇರಳ ರಾಜ್ಯವು ತನ್ನ ನೌಕರರಿಗೆ ದೇಶಕ್ಕೇ ಮಾದರಿಯಾದ ವೇತನ ಸೌಲಭ್ಯಗಳನ್ನು ನೀಡುತ್ತಿದೆ ಎನ್ನುವುದನ್ನು ಗಮನಿಸಬೇಕು. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಸರ್ಕಾರಿ ವಲಯ ಎಂಬುದನ್ನು ಮರೆಯಬಾರದು.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು 2ನೇ ಬಾರಿಗೆ ವಿಸ್ತರಿಸಿರುವುದನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಖಂಡಿಸುತ್ತದೆ ಹಾಗೂ ಸದರಿ ಆದೇಶವನ್ನು ಹಿಂಪಡೆದು ನೌಕರರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಶೇ. 40ರಷ್ಟು ವೇತನ ಪರಿಷ್ಕರಣೆಯನ್ನು ಕೂಡಲೇ ನೀಡಿ ಆದೇಶ ಹೊರಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆಂದು ಒಕ್ಕೂಟವು ಹೇಳಬಯಸುತ್ತದೆ.
(ಹೆಚ್.ಎಸ್. ಜೈಕುಮಾರ್) ರಾಜ್ಯಾಧ್ಯಕ್ಷರು
– (ಎನ್.ಶೋಭಾಲೋಕನಾಗಣ್ಣ) ಕಾರ್ಯಾಧ್ಯಕ್ಷರು