ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್..
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಲಬುರ್ಗಿಯ ಕೆಲ ಲಂಚಬಾಕ ಅಧಿಕಾರಿಗಳನ್ನು ಅಮಾನತು ಮಾಡಿ ಲಂಚಕೋರತನವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ.
ಸದ್ಯ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸದಲ್ಲಿರುವ ಕಾರ್ಮಿಕ ಸಚಿವರು ಹಲವು ದಿನಗಳಿಂದ ತಮ್ಮ ಲಂಚಬಾಕತನದಿಂದ ಕಾರ್ಮಿಕರ ಜೀವ ಹಿಂಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಫಲಾನುಭವಿಗೆ ಮಂಜೂರಾದ 9 ಸಾವಿರ ಸಹಾಯಧನ ಬದಲಿಗೆ 90 ಸಾವಿರ ಹಣ ಮಂಜೂರು ಮಾಡಿದ ಆಪಾದನೆಯಲ್ಲಿ ರಮೇಶ್ ಸುಂಬಡ ಎಂಬ ಕಾರ್ಮಿಕ ಅಧಿಕಾರಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲು ಸಚಿವರು ಆದೇಶಿಸಿದ್ದಾರೆ. ಅಲ್ಲದೇ ಈತ ಅವಧಿ ಮೀರಿ ಸಲ್ಲಿಕೆಯಾದ ಮದುವೆ ಸಹಾಯಧನ ಅರ್ಜಿಗಳನ್ನು ಮಂಜೂರು ಮಾಡುತ್ತಿದ್ದದ್ದು ಸಹ ಪತ್ತೆಯಾಗಿದೆ. ಈತ ತನ್ನ ಸಂಬಂಧಿಯ ಸಿ ಎಸ್ ಸಿ ಸೆಂಟರ್ ಗಳಿಂದ ಸ್ವೀಕೃತವಾಗುವ ಅರ್ಜಿಗಳ ಜೇಷ್ಠತೆ ಪರಿಗಣಿಸದೇ ಅಪರಾಧ ಎಸಗುತ್ತಿದ್ದದ್ದು ಬೆಳಕಿಗೆ ಬಂದಿದೆ.
ಇನ್ನು ಜಿಲ್ಲೆಯ ಚಿತ್ತಾಪುರ ವೃತ್ತದ ಡಿಇಓ ಶರಣಬಸಪ್ಪ ಬೆಲ್ಲದ ಫಲಾನುಭವಿ ಒಬ್ಬರ ಅಂತ್ಯಕ್ರಿಯೆ ಸಹಾಯಧನ ಅರ್ಜಿಗಾಗಿ ಲಂಚ ಪಡೆದದ್ದು ಬೆಳಕಿಗೆ ಬಂದಿದ್ದು ಆತನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದಲೇ ಅಮಾನತು ಗೊಳಿಸುವಂತೆ ಸಂತೋಷ್ ಲಾಡ್ ಅವರು ಸೂಚಿಸಿದ್ದಾರೆ. ಅಲ್ಲದೇ ಇಂದೇ ಆತಮ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಮ್ಮ ಭ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಜಿಲ್ಲೆಯ ಕಾರ್ಮಿಕರನ್ನು ಕಂಗೆಡಿಸಿದ್ದ ಭ್ರಷ್ಟ ಅಧಿಕಾರಿಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೆಡೆಮುರಿ ಕಟ್ಟಿದ್ದು ಜಿಲ್ಲೆಯ ಕಾರ್ಮಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಮೂಲಕ ತಮ್ಮ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನೀಡಿದರೆ ಮಾತ್ರ ಉಳಿಗಾಲ ಎಂಬುದನ್ನು ಸಚಿವ ಲಾಡ್ ಮತ್ತೊಮ್ಮೆ ನಿರೂಪಿಸಿದ್ದಾರೆ.