ಧಾರವಾಡದಲ್ಲಿ ಅಂತಾರಾಷ್ಟ್ರೀಯ ವೀರಶೈವ
ಜಂಗಮ ಸಂಶೋಧನಾ ಪ್ರತಿಷ್ಠಾನ ಅಸ್ತಿತ್ವಕ್ಕೆ
ಧಾರವಾಡ: ಕನ್ನಡ ವಾಙ್ಮಯ ವಿಹಾರದ ವಿದ್ಯಾನಗರಿ ಧಾರವಾಡವನ್ನು ಕೇಂದ್ರಸ್ಥಾನವಾಗಿಟ್ಟುಕೊಂಡು ನೂತನವಾಗಿ ‘ಅಂತಾರಾಷ್ಟ್ರೀಯ ವೀರಶೈವ ಜಂಗಮ ಸಂಶೋಧನಾ ಪ್ರತಿಷ್ಠಾನ’ (ಐವ್ಹಿಜೆಆರ್ಎಫ್) ಅಸ್ತಿತ್ವಕ್ಕೆ ಬಂದಿದೆ.
ಭಾರತದೆಲ್ಲೆಡೆ ಇರುವ ವೀರಶೈವ ಮಠ-ಪೀಠಗಳ ಚರಿತ್ರೆ, ಅವರ ಧರ್ಮ ಜಾಗೃತಿ ಕೈಂಕರ್ಯಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಸಾಧನೆಗಳ ಸೇವೆಗಳನ್ನು ವಿದ್ಯುನ್ಮಾನದ ಬಹುಮುಖಿ ಆವಿಷ್ಕಾರಗಳಲ್ಲಿ ದಾಖಲೀಕರಣ ಮಾಡುವುದು, ಭಾರತವೂ ಸೇರಿದಂತೆ ಜಾಗತಿಕವಾಗಿ ಹಂಚಿ ಹೋಗಿರುವ ವೀರಶೈವ ಜಂಗಮರ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಅವರಿಗೆ ‘ಜಂಗಮ ರತ್ನ’ ಪ್ರಶಸ್ತಿ ನೀಡಿ ಗೌರವಿಸುವುದು, ಪ್ರತಿಯೊಂದೂ ವೀರಶೈವ ಜಂಗಮ ಕುಟುಂಬದ ಚರಿತ್ರೆಯನ್ನು ಸಂಗ್ರಹಿಸಿ ದಾಖಲಿಸಲು ಆದ್ಯತೆ ಕೊಡುವುದು, ವೀರಶೈವ ಜಂಗಮರ ಕುರಿತು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ ಹಾಗೂ ವಿಶೇಷ ಉಪನ್ಯಾಸಗಳ ಆಯೋಜನೆ, ಬದುಕಿನ ಆಧುನಿಕ ಪರಿಸ್ಥಿತಿಯಲ್ಲಿ ವೀರಶೈವ ಜಂಗಮ ಸಮಾಜದ ಸಂಸ್ಕೃತಿ, ಪರಂಪರೆ, ನೀತಿ, ಮೌಲ್ಯಗಳು ಕ್ರಮೇಣ ಬದಲಾವಣೆಯಾಗುತ್ತಿರುವ ಹಿನ್ನೆಲೆ ಗಮನಿಸಿ ಹಲವಾರು ಮಹತ್ವದ ಆಶಯಗಳ ನೆಲೆಯಲ್ಲಿ ಈ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ.
ಪದಾಧಿಕಾರಿಗಳು: ನಗರದಲ್ಲಿ ಜರುಗಿದ ಪ್ರತಿಷ್ಠಾನದ ಮೊದಲ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕ.ವಿ.ವಿ. ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಡಾ. ಆರ್.ಎಂ. ಷಡಕ್ಷರಯ್ಯ (ಅಧ್ಯಕ್ಷ), ಕ.ವಿ.ವಿ. ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ.ಸುಭಾಸ ಹಿರೇಮಠ, ಡಾ.ಬಿ.ಕೆ. ಒಡೆಯರ ಹಾಗೂ ಡಾ.ಜೆ.ಎಂ.ನಾಗಯ್ಯ(ಎಲ್ಲರೂ ಉಪಾಧ್ಯಕ್ಷರು), ಬಾಗಲಕೋಟೆಯ ಶ್ರೀಬಸವೇಶ್ವರ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ (ಪ್ರಧಾನ ಕಾರ್ಯದರ್ಶಿ), ಕ.ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಬಿ. ಹಿರೇಮಠ (ಕಾರ್ಯದರ್ಶಿ), ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಇಂದುಮತಿ ಚಿನ್ಮಿಲಾ ಸಂಕದಮಠ (ಕೋಶಾಧಿಕಾರಿ), ಚಾರ್ಟೆಡೆ ಅಕೌಂಟಂಟ್ ಮೋಹನ ಹಿರೇಮಠ, ಕೆ.ಸಿ.ಡಿ. ನಿವೃತ್ತ ಪ್ರಿನ್ಸಿಪಾಲ್ ಡಾ. ರಾಜೇಶ್ವರಿ ಮಹೇಶ್ವರಯ್ಯ, ಶ್ರೀಸಿದ್ಧರಾಮೇಶ್ವರ ಬಿ.ಇಡಿ. ಕಾಲೇಜು ಪ್ರಾಚಾರ್ಯ ಡಾ. ಕುಮಾರ ಹಿರೇಮಠ, ಬೆಂಗಳೂರಿನ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಸಂಗಣ್ಣ ಪಾಟೀಲ, ಬೆಳಗಾವಿಯ ಪ್ರಾಧ್ಯಾಪಕ ಡಾ. ಎಸ್.ಎಂ. ಗಂಗಾಧರಯ್ಯ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಜಿ.ಕೆ. ಜಯದೇವ, ಬೆಂಗಳೂರಿನ ವಾಣಿಜ್ಯೋದ್ಯಮಿ ಟಿ.ಎಂ. ಮಂಜೇಶ್, ಹುಬ್ಬಳ್ಳಿಯ ಉದ್ಯಮಿ ಇಂದೂಧರ ಸಾಲಿ, ನಿಯತಕಾಲಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಬೆಳಗಾವಿಯ ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಶಶಿಧರ ಹಿರೇಮಠ (ಎಲ್ಲರೂ ಕಾರ್ಯಕಾರಿ ಮಂಡಳಿಯ ನಿರ್ದೇಶಕರು) ಆಯ್ಕೆಯಾಗಿದ್ದಾರೆಂದು ಪ್ರತಿಷ್ಠಾನದ ನೂತನ ಅಧ್ಯಕ್ಷ ಮತ್ತು ಸಂಶೋಧಕ ಡಾ.ಆರ್.ಎಂ. ಷಡಕ್ಷರಯ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.