ಕೆಇಎ ಪರೀಕ್ಷೆ ಅಕ್ರಮ: ಶಿಕ್ಷಕನ ಬಂಧನ:ಆರೋಪಿಗಳನ್ನು. ನ್ಯಾಯಾಲಯಕ್ಕೆ ಹಾಜರು..
50 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು..
ಪ್ರಕರಣದ ಕುರಿಮತೆ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ..
ಕಲಬುರಗಿ: ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ ಕೆಇಎ ಪರೀಕ್ಷೆ ಬರೆಯಲು ಮುಂದಾಗಿ ಬಂಧಿತರಾದವರ ಪೈಕಿ ಒಬ್ಬ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಮಾಸಿಕ ₹ 80 ಸಾವಿರ ವೇತನ ಪಡೆಯುತ್ತಿದ್ದ.ಬೀದರ್ ಮೂಲದ ಆಕಾಶ ಮಂಠಾಳೆ(30) ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದಾನೆ.ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಕೆಇಎ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಲು ಯತ್ನಿಸಿದ್ದ. ಬ್ಲೂಟೂತ್ ಮೂಲಕ ಉತ್ತರ ಹೇಳಿಸಿಕೊಳ್ಳಲು ತನ್ನ ಮಾವ ವಿಜಯಕುಮಾರ ಬಿರಾದಾರನನ್ನು ಹುಮನಾಬಾದ್ನಿಂದ ಕರೆಯಿಸಿಕೊಂಡಿದ್ದ. ಈಗ ಇಬ್ಬರೂ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.
ಸಂತೋಷ ಬಂಡೆಪ್ಪ ಯಾಳಗಿಗೆ (30) ಉತ್ತರ ಹೇಳಲು ಬಂದಿದ್ದ ಖಾಸಗಿ ಶಾಲೆಯ ಶಿಕ್ಷಕ ಬಾಪು ಗುತ್ತಪ್ಪ ಯಾಳಗಿ (42) ಬಂಧಿತರಾಗಿದ್ದಾರೆ. ಅಂಗಿ ಕಾಲರ್ನಲ್ಲಿ ಬ್ಲೂಟೂತ್ ಇರಿಸಿಕೊಂಡ ಆಕಾಶ ಮತ್ತು ಸಂತೋಷ ತಪಾಸಣೆಯಲ್ಲಿ ಸಿಕ್ಕಿ ಬಿದ್ದರೆ, ಭಯದಿಂದ ಓಡಿ ಹೋದ ಅಭ್ಯರ್ಥಿ ಬಾಬು ಚಾಂದಶೇಖ್ನನ್ನು ಪೊಲೀಸರು ಬೆನ್ನಟ್ಟಿ ಹಿಡಿದರು.
ಈ ಅಕ್ರಮದ ಸಂಬಂಧ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್.ಡಿ. ಪಾಟೀಲ ಮತ್ತು ಆಸೀಫ್ ಪರಾರಿಯಾಗಿದ್ದಾರೆ. 7 ಜನರ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್ಐ ಹಗರಣದ ಮಾದರಿಯಲ್ಲಿ ಅಫಜಲಪುರದಲ್ಲಿ ಬ್ಲೂಟೂತ್ ಬಳಕೆ ಆಗಲಿದೆ ಎಂದು ಸ್ಥಳೀಯ ಬಾತ್ಮಿದಾರರು ಮಾಹಿತಿ ನೀಡಿದ್ದರು. ಪರೀಕ್ಷಾ ಕೇಂದ್ರದ ಸುತ್ತ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದರು.
ಅಭ್ಯರ್ಥಿಗಳು ಮೊದಲ ಬಾರಿಗೆ ಇಂತಹ ಕೃತ್ಯಕ್ಕೆ ಕೈಹಾಕಿದ್ದರಿಂದ ಬ್ಲೂಟೂತ್ ಸಮೇತ ಪರೀಕ್ಷಾ ಕೇಂದ್ರದ ಒಳ ಹೋಗಲು ಆಗಲಿಲ್ಲ. ಪರೀಕ್ಷೆ ಆರಂಭದ ಕೆಲ ನಿಮಿಷಗಳು ಇರುವಂತೆ ಒಳಹೋದರೆ ಪೊಲೀಸರು ತಪಾಸಣೆ ಮಾಡದೆ ಒಳ ಬಿಡುತ್ತಾರೆ. ಮೆಟಲ್ ಡಿಟೆಕ್ಟರ್ನಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದರು. ಆದರೆ, ಪೊಲೀಸರು ಅಂತಹುದಕ್ಕೆ ಎಡೆಮಾಡಿಕೊಡದೆ ಎಚ್ಚೆತ್ತುಕೊಂಡು ಮೂವರ ಅಭ್ಯರ್ಥಿಗಳನ್ನು ಬಂಧಿಸಿದರು. ಬಳಿಕ ಉತ್ತರ ಹೇಳಲು ಬಂದಿದ್ದವರು ಹಾಗೂ ಅಕ್ರಮದ ಪ್ರಮುಖರ ಮಾಹಿತಿ ಕಲೆಹಾಕಿದರು ಎಂಬುದು ಗೊತ್ತಾಗಿದೆ.
ಹಗರಣದಲ್ಲಿ ಶಾಮೀಲಾಗಿರುವ ಆರ್.ಡಿ. ಪಾಟೀಲ, ಪರೀಕ್ಷೆಯ ಹಿಂದಿನ ದಿನವೇ ಜಿಲ್ಲೆಯನ್ನು ತೊರೆದು ನೆರೆಯ ಮಹಾರಾಷ್ಟ್ರಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇದೆ. ವಿಶೇಷ ತಂಡ ರಚಿಸಿ ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನಷ್ಟು ಅಭ್ಯರ್ಥಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಾನುವಾರ ನಡೆದ ಪರೀಕ್ಷೆಗೆ ಅಭ್ಯರ್ಥಿಗಳನ್ನು ಪೊಲೀಸರು ವಿವಿಧ ಹಂತಗಳಲ್ಲಿ ತಪಾಸಣೆ ಮಾಡಿ ಒಳಗೆ ಬಿಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
₹21 ಲಕ್ಷ ಪಡೆದಿದ್ದ ಆರ್.ಡಿ. ಪಾಟೀಲ
ಪ್ರಮುಖ ಆರೋಪಿ ಅಫಜಲಪುರದ ಆರ್.ಡಿ. ಪಾಟೀಲ ಬ್ಲೂಟೂತ್ ಪೂರೈಸಿ ಉತ್ತರ ಹೇಳಲು ಮೂವರು ಅಭ್ಯರ್ಥಿಗಳೊಂದಿಗೆ ₹ 53 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡು, ₹21 ಲಕ್ಷ ಮುಂಗಡವಾಗಿ ಪಡೆದಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತೋಷ ಯಾಳಗಿ ತನ್ನ ತಂದೆಯೊಂದಿಗೆ ಕಲಬುರಗಿ ನಗರದ ಮನೆಯಲ್ಲಿ ಆರ್.ಡಿ ಪಾಟೀಲನನ್ನು ಭೇಟಿಯಾಗಿ, ₹ 20 ಲಕ್ಷ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ ₹ 8 ಲಕ್ಷ ನೀಡಿದ್ದ. ಆ ಬಳಿಕ ಇತನ ಪರಿಚಯಸ್ಥರಾದ ಬಾಬು ಮತ್ತು ಆಕಾಶ್ನಿಂದ ಹಣ ಪಡೆದು, ಬ್ಲೂಟೂತ್ ಪೂರೈಸಿದ್ದ.
ಬಾಬು ಚಾಂದಶೇಖ್ ₹ 10 ಲಕ್ಷದ ಪೈಕಿ ₹ 5 ಲಕ್ಷ ಮುಂಗಡ ಕೊಟ್ಟಿದ್ದ. ಬೀದರ್ನಲ್ಲಿ ಆಕಾಶನನ್ನು ಭೇಟಿಯಾದ ಪಾಟೀಲ, ₹ 20 ಲಕ್ಷ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ₹8 ಲಕ್ಷ ಪಡೆದಿದ್ದ ಎಂಬುದು ಗೊತ್ತಾಗಿದೆ.
ನ್ಯಾಯಾಲಯಕ್ಕೆ ಹಾಜರು
ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಮಂಡಳಿಗಳ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಅಕ್ರಮವಾಗಿ ಬ್ಲೂಟೂತ್ ಬಳಕೆ ಮಾಡಿದ ಆರೋಪದ ಮೇರೆಗೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಂದ 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವೈದ್ಯಕೀಯ ತಪಾಸಣೆ, ಸ್ಥಳ ಮಹಜರು ಮಾಡಿ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.