ಇನ್ಮುಂದೆ ಯಾವುದೇ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛತೆ ಮಾಡಿಸುವಂತಿಲ್ಲ. ಒಂದು ವೇಳೆ ಮಾಡಿದಂತ ಘಟನೆಗಳು ವರದಿಯಾದ್ರೇ, ಆ ಶಾಲೆಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಅಂತ ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇನ್ನು ಮುಂದೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬಳಿ ಶೌಚಾಲಯಗಳನ್ನು ಸ್ವಚ್ಛತೆ ಮಾಡಿಸುವಂತಿಲ್ಲ. ಮಾಡಿಸಿದಲ್ಲಿ ಸಂಬಂಧಪಟ್ಟ ಶಾಲಾ ಪ್ರಮುಖರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಸ್ವಚ್ಛತೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳೋದಕ್ಕೆ ಗಮನ ಕೊಡಲಾಗುತ್ತದೆ.ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 50 ಮಕ್ಕಳಿಗಿಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಿಗೆ ವಾರ್ಷಿಕ 10 ಸಾವಿರ ರೂ.ಗಳನ್ನು ಸರ್ಕಾರ ಸ್ವಚ್ಛತೆಗಾಗಿ ನೀಡುತ್ತಿತ್ತು. ಅದು ತುಂಬಾ ಕಡಿಮೆ ಎಂಬ ಅರಿವು ನಮಗಿದೆ. ಅದನ್ನು ಮುಖ್ಯಮಂತ್ರಿಗಳು 20 ಸಾವಿರ ರೂ.ಗೆ ಹೆಚ್ಚಳ ಮಾಡೋ ಚಿಂತನೆ ಮಾಡಿದ್ದಾರೆ ಅಂತ ಹೇಳಿದರು.
ನ.23ರಿಂದ ಮಕ್ಕಳಿಗೆ ಮೊಟ್ಟೆ ಜೊತೆಗೆ ವಿಶೇಷ ಪೌಷ್ಠಿಕ ಆಹಾರ ವಿತರಿಸೋ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ತಿಳಿಸಿದ್ದಾರೆ.