ಭೂಮಿ ಹುಣ್ಣಿಮೆ..
ಸೀಗಿಯ ಹುಣ್ಣಿಮೆ ಬೇಗನೆ ನೀನೇಳು
ತಾಗುವ ಮೊದಲೆ ರವಿಬೆಳಗು//ನನಮಡದಿ
ಬಾಗಿಲು ರಂಗೋಲಿ ನೀಹಾಕು/1
ಹಟ್ಟಿಯ ಗುಡಿಸುತ ಬುಟ್ಟಿಯ ತುಂಬುತ
ಮುಟ್ಟಿ ಮೈತೊಳೆನೀ ಬಸವನ // ನನರಾಯ
ಗಟ್ಟಿ ಬಂಗಾರದ ಜೋಡೆತ್ತ/2
ಕರಿದ ಕರ್ಚಿಕಾಯಿ ಹುರಿದಕ್ಕಿಯ ಹೋಳಿಗಿ
ಮುರಿದ ಚೌಳಿ ಎಣ್ಣೆಗಾಯಿ ಪಲ್ಲೆ//ನನಮಡದಿ
ಕುರುಕಲು ರೊಟ್ಟಿ ನೀ ಮಾಡ/3
ಮಾವಿನ ತೋರಣ ಬೇವಿನ ಗೊಂಚಲು
ಹೂವಿನ ಮಾಲೆಯ ನೀ ಕಟ್ಟಿ//ನನರಾಯ
ದೇವಮಹದೇವನ ಬಂಡಿಗೆ/4
ಕೆಂಪು ಮೆಣಸಿನ ಹಿಂಡಿ ತಂಪ ಗಟ್ಟಿ ಮೊಸರು
ಸೊಂಪಾಗಿ ಕಟಿದ ಮಜ್ಜಿಗೆ// ನನಮಡದಿ
ಕಂಪಿನ ತುಪ್ಪ ನೀ ತಾರ/5
ಮುತ್ತಿನ ಹೊಸ ಜೂಲ ಮತ್ತೆ ಕೋಡೆಣಸು
ಸುತ್ತು ಕೊರಳಿಗೆ ಕಿರಿ ಗಂಟೆಯ/ನನರಾಯ
ಎತ್ತಿನ ಗಾಡಿಯ ಸಿಂಗರಿಸ/6
ಕಟ್ಟಿನ ಸಿಹಿ ಸಾರ ಸುಟ್ಟಿರುವ ಹಪ್ಪಳ
ತಟ್ಟಿದ ಎಳ್ಳಿನ ರೊಟ್ಟಿಯ //ನನಮಡದಿ
ಬುಟ್ಟಿಯ ತುಂಬ ಚೆಂದದಿ/7
ನೆರೆಮನೆಯ ನೀಲಕ್ಕ ಗಿರಿಜಕ್ಕ ನೀಬಾರ
ಕರೆಯುತಿರುವೆ ನಾ ನಮಹೊಲಕ//ನನರಾಯ
ಕಟ್ಯಾನ ಚೆಂದದಿ ಬಂಡಿಯ/8
ಉಸಿರು ನೀಡುವ ತಾಯಿ ಹಸಿರು ಭೂಮಿ ಪೂಜೆ
ಹಸಿವು ನೀಗಿಸವ್ವ ಭೂತಾಯಿ//ಮಹಾದೇವ
ಹೆಸರೇಳಿ ಕೈಯ ಮುಗಿದೇವ/9
ಶ್ರೀಮತಿ ಬಸಮ್ಮ ಏಗನಗೌಡ್ರ