ಶಾಲೆಗಳಿಗೆ ದಸರಾ ರಜೆ ವಿಸ್ತರಣೆ ಮಾಡಿ:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಒತ್ತಾಯ..
ದಸರಾ ರಜೆ ಏಕೆ ವಿಸ್ತರಣೆ ಮಾಡಬೇಕು? ಅಂತ ಇಲ್ಲಿದೆ ನೋಡಿ ಕಾರಣ…
ಬೆಂಗಳೂರು: ರಾಜ್ಯದ ಶಾಲೆಗಳಿಗೆ ನೀಡಿರುವ ದಸರಾ ರಜೆಯನ್ನು ಪರಿಷ್ಕರಿಸಿ ಅ. 31ರ ವರೆಗೆ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯನ್ನು ಒತ್ತಾಯಿಸಿದೆ.
ಶಾಲಾ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಅವರು, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಅನಂತರದಲ್ಲಿ ಶಾಲೆಗಳಿಗೆ ದಸರಾ ರಜೆಯನ್ನು ಅ.3ರಿಂದ 31ರ ವರೆಗೆ (29 ದಿನ) ನೀಡುವ ಮೂಲಕ ದಸರಾ ಸೇರಿದಂತೆ ನಾಡಿನ ಪರಂಪರೆ, ಆಚರಣೆಗಳನ್ನು ತಿಳಿಯಲು ಮಕ್ಕಳಿಗೆ ಅವಕಾಶ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ದಸರಾ ರಜೆ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡಿ 14- 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಇದರಿಂದ ಮಕ್ಕಳು ಹಾಗೂ ಶಿಕ್ಷಕರಿಗಿದ್ದ 230 ಶಾಲಾ ದಿನಗಳು ಈಗ 260 ದಿನಗಳಿಗೆ ಏರಿಕೆಯಾಗಿದ್ದು ಇಬ್ಬರ ಮೇಲೂ ಶೈಕ್ಷಣಿಕ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ದಸರಾ ರಜೆಯನ್ನು ಪುನರ್ ಪರಿಶೀಲಿಸಿ ಅ. 31ರ ವರೆಗೆ ರಜೆ ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಅವರು ಕೋರಿದ್ದಾರೆ.