ಓಪಿಎಸ್ ಜಾರಿಗಾಗಿ ಹೋರಾಟಕ್ಕೆ ಸಿದ್ದ :ಸಿಎಸ್ ಷಡಾಕ್ಷರಿ
ನಮ್ಮ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಮಾನ್ಯ ಡಿಸಿಎಮ್ ನೀಡಿದ್ದ ಹೇಳಿಕೆಗೆ ಬದ್ದವಾಗಬೇಕು: ಬಸವರಾಜ ಹೊರಟ್ಟಿ..
ಬಹಿರಂಗವಾಗಿ ವೇದಿಕೆ ಮೇಲೆ ಚರ್ಚೆಯಾಯಿತು ಏಳನೇ ವೇತನ ಅಯೋಗ ಜಾರಿ ಕುರಿತಂತೆ ಚರ್ಚೆ….
ನೌಕರರ ಬೇಡಿಕೆ ಈಡೆರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ; ಸರಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಿದ ಸರಕಾರಿ ನೌಕರರಿಗೆ ಕೃತಜ್ಞತೆಗಳು : ಸಚಿವ ಸಂತೋಷ ಲಾಡ
ಧಾರವಾಡ :ರಾಜ್ಯ ಸರಕಾರದ ಜನಪರ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಹಕಾರ ನೀಡಿ, ಶ್ರಮಿಸಿದ ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ರಾಜ್ಯ ಸರಕಾರದ ಪರವಾಗಿ ಧನ್ಯವಾದಗಳು. ಆಡಳಿತ ವ್ಯವಸ್ಥೆಯಲ್ಲಿನ ಲೋಪ, ದೋಷಗಳನ್ನು ಸರಿಪಡಿಸಲು ಸರ್ಕಾರಿ ನೌಕರರ ಸಹಕಾರವು ಅಗತ್ಯವಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಘಟಕ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಿದ್ದ ನೂತನ ಶಾಸಕರ ಮತ್ತು ಸಚಿವರ ಅಭಿನಂದನಾ ಸಮಾರಂಭ ಹಾಗೂ 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಾಮಾನ್ಯಸಭೆ ಉದ್ಘಾಟಿಸಿ, ಮಾತನಾಡಿದರು.
ರಾಜ್ಯ ಸರ್ಕಾರವು ರಾಷ್ಟ್ರಕ್ಕೆ ಮಾದರಿಯಾಗುವ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳ್ಳಿಸಿದೆ. ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಇಂದು 1.16 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಾಧನೆಗೆ ಸರ್ವರ ಸಹಕಾರವೂ ಮುಖ್ಯ ಎಂದು ಅವರು ಹೇಳಿದರು.
ಸರಕಾರವು ಅಭಿವೃದ್ಧಿ ಕಾರ್ಯಗಳೊಂದಿಗೆ ಸರಕಾರಿ ನೌಕರರ ಬೇಡಿಕೆ ಈಡೆರಿಸುವ ಬದ್ದವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರಕಾರ ಕ್ರಮವಹಿಸಲಿದೆ. ಹಸಿವಿನ ಸೂಚಾಂಕದಲ್ಲಿ ನಮ್ಮ ದೇಶ ಕೆಳಗೆ ಬರುತ್ತಿದೆ. ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಆದರೆ ಅದು ಸಮಾಜದಲ್ಲಿ ಕಾಣುತ್ತಿಲ್ಲ ಎಂದರು.
ಸರಕಾರಿ ನೌಕರರು ಸೇರಿದಂತೆ ಎಲ್ಲರೂ ಬದ್ದತೆ, ಪಾರದರ್ಶಕತೆಯಿಂದ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ನೌಕರರು ಉದಾರತೆಯಿಂದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ನೌಕರ ಸಂಘದ ಜಿಲ್ಲಾ ಘಟಕವು ಸಲ್ಲಿಸಿರುವ ಬೇಡಿಕೆಗಳಿಗೆ ತಾವು ನೆರವು ನೀಡುವುದಾಗಿ ಮತ್ತು ಸಭಾಗಂಣ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು. ಎನ್ಪಿಎಸ್ ರದ್ದತಿ ಬಗ್ಗೆ ಸರಕಾರಕ್ಕೆ ತಮ್ಮ ಮನವಿಯನ್ನು ತಲುಪಿಸುವುದಾಗಿ ಸಚಿವರು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಮಾಹಿತಿ ಹಕ್ಕು ಅಧಿನಿಯಮ ಮತ್ತು, ಸಿಸಿಎ ನಿಯಮ, ಕೆಸಿಎಸ್ ನಿಯಮ ಸರಕಾರಿ ನೌಕರನ ಕೈಕಾಲುಗಳಿದ್ದಂತೆ. ಇವುಗಳ ಸರಿಯಾದ ತಿಳುವಳಿಕೆ ಇದ್ದರೆ ಮಾತ್ರ, ಉತ್ತಮವಾಗಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಾಗಾರಗಳ ಅಗತ್ಯವಿದೆ ಎಂದು ಅವರು ಹೇಳಿದರು.
ನೌಕರರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಪರಿಶೀಲಿಸಿ, ಕ್ರಮವಹಿಸಬೇಕು. ಹೊಸ ಪಿಂಚಣಿ ರದ್ದು ಪಡಿಸುವ ಕುರಿತು ಇಂದಿನ ಸರಕಾರದ ಮುಖ್ಯಸ್ಥರು, ಸಚಿವರು ಈ ಹಿಂದೆ ತಮ್ಮ ಸಹಮತ ವ್ಯಕ್ತಪಡಿಸಿ, ಹೇಳಿಕೆ ನೀಡಿದ್ದಾರೆ. ಈಗ ಈಡೆರಿಸುವ ಕೆಲಸ ಆಗಬೇಕು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ, ರಾಜ್ಯ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ರದ್ದುಗೊಳೊಸುವ ಭರವಸೆಯನ್ನು ನೀಡಿದೆ. ಅದನ್ನು ಈಡೆರಿಸುವ ಕಾಲ ಬಂದಿದೆ. ಮಾನ್ಯ ಉಪ ಮುಖ್ಯಮಂತ್ರಿಯವರು ಸದನದಲ್ಲಿ ನೀಡಿದ ಮಾತು ನಿಜಗೊಳಿಸಬೇಕು ಎಂದರು.
ಧಾರವಾಡದಲ್ಲಿ ಸರಕಾರಿ ನೌಕರ ಸಂಘದ ನೂತನ ಸಭಾಭವನ, ಅಡಿಟೋರಿಯಂ ನಿರ್ಮಾಣಕ್ಕೆ ಶಾಸಕರ ಅನುದಾನ ನೀಡುವದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಸಂಘವು ಸರಕಾರಿ ನೌಕರ ಹಿತ ಕಾಯಲು ಅನೇಕ ಜನಪರ ಕಾರ್ಯಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದೆ. ಸರಕಾರದೊಂದಿಗೆ ಸಂಘರ್ಷ ಮಾಡುವ ಪ್ರಶ್ನೆ ಇಲ್ಲ. ಸರಕಾರವು ನೌಕರರ ನ್ಯಾಯುತ ಬೇಡಿಕೆಗಳನ್ನು ಸಹನೆಯಿಂದ ಪರಿಶೀಲಿಸಿ, ಈಡೇರಿಸಬೇಕು ಎಂದರು.
ಎನ್.ಪಿ.ಎಸ್ ರದ್ದು ಮಾಡುವ ಕುರಿತು ರಾಜ್ಯ ಸರಕಾರಿ ನೌಕರ ಸಂಘವು ಸರಕಾರ ಮಟ್ಟದಲ್ಲಿ ಒತ್ತಾಯ ಮಾಡಿ, ಹೋರಾಟಕ್ಕೆ ಸಿದ್ದವಾಗಿದೆ. ರಾಜ್ಯ ಸರಕಾರ ಓಪಿಎಸ್ ಜಾರಿಗೊಳಿಸಬೇಕು. ನಗದು ರಹಿತ ಆರೋಗ್ಯ ವಿಮೆ ಜಾರಿ ಆಗಬೇಕು ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ಸರಕಾರಿ ನೌಕರರ ವರ್ಗಾವಣೆಯಲ್ಲಿ ಉತ್ತಮ ರೀತಿಯ ನಿಯಮ ರೂಪಿಸಬೇಕು. ಸರಕಾರ ನಿಗಧಿಪಡಿಸಿದ ವರ್ಗಾವಣೆ ಸಮಯ ಮುಗಿದ ಮೇಲೆ ವರ್ಗಾವಣೆ ಮಾಡುವುದರಿಂದ ನೌಕರನ ಇಡೀ ಕುಟುಂಬ ತೊಂದರೆ ಅನುಭವಿಸಬೇಕಾಗುತ್ತದೆ. ಎನ್.ಪಿ.ಎಸ್. ರದ್ದುಪಡಿಸಿ ಓಪಿಸಿ ಜಾರಿಗೊಳಿಸಲು ಸರಕಾರ ಮುಙದಾಗಬೇಕು. 7ನೇ ವೇತನ ಆಯೋಗ ಆದಷ್ಟು ಬೇಗ ಜಾರಿ ಆಗಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ದನಗೌಡರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮಾಹಿತಿ ಆಯೋಗದ ಮಾಜಿ ಮಾಹಿತಿ ಆಯುಕ್ತ ಡಾ.ಶೇಖರ ಡಿ.ಸಜ್ಜನರ, ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದ್ರೆ, ನೌಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ಎಮ್.ವ್ಹಿ.ರುದ್ರಪ್ಪ, ಎಸ್.ಬಸವರಾಜು, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಖಜಾಂಚಿ ರಾಜಶೇಖರ ಬಾಣದ, ನೌಕರಭವನದ ಕಾರ್ಯದರ್ಶಿ ಗಿರೀಶ ಚೌಡಕಿ, ತಾಲೂಕು ಅಧ್ಯಕ್ಷರಾದ ಎ.ಬಿಕೊಪ್ಪದ,ವ್ಹಿ.ಎಪ್. ಚುಳಕಿ, ಡಾ.ಪ್ರಲ್ಹಾದ ಗೆಜ್ಜಿ, ಆರ್.ಎಂ.ಹೊಲ್ತಿಕೋಟಿ,ಎಸ್.ಎನ್. ಅರಳಿಕಟ್ಟಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಜಯಲಕ್ಷ್ಮಿ ಎಚ್. ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಸರಕಾರಿ ನೌಕರರು ಭಾಗವಹಿಸಿದ್ದರು.
ಯಶಸ್ವಿಯಾಗಿ ಜರುಗಿದ ಮಾಹಿತಿ ಹಕ್ಕು ಕಾರ್ಯಾಗಾರ: ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಇಂದು ಬೆಳಿಗ್ಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾರ್ಯಾಗಾರ ಮತ್ತು ಸಿಸಿಎ ನಿಯಮಾವಳಿಗಳ ವಿಶೇಷ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಶಾಸಕ ಎನ್.ಎಚ್.ಕೊನರಡ್ಡಿ ಅವರು ಕಾರ್ಯಾಗಾರ ಉದ್ಘಾಟಿಸಿ, ಪ್ರತಿಯೊಬ್ಬ ಸರಕಾರಿ ನೌಕರನಿಗೆ ಮಾಹಿತಿ ಹಕ್ಕು ಅಧಿನಿಯಮದ ತಿಳುವಳಿಕೆ ಅಗತ್ಯವಾಗಿದೆ. ಕೆಲವು ಜನರು ಆರ್ಟಿಐ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದೆ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಅಂತವರಿಗೆ ಸರಿಯಾದ ಉತ್ತರ ನೀಡಲು ಆರ್ಟಿಐ ತಿಳುವಳಿಕೆ ಅಗತ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ಧನಗೌಡರ ವೇದಿಕೆಯಲ್ಲಿದ್ದರು. ಕರ್ನಾಟಕ ಮಾಹಿತಿ ಆಯೋಗದ ಮಾಜಿ ಆಯುಕ್ತರಾದ ಡಾ.ಶೇಖರ ಡಿ.ಸಜ್ಜನರ ಅವರು ಮಾಹಿತಿ ಹಕ್ಕು ಅಧಿನಿಯಮ 2005 ಕುರಿತು ವಿಶೇಷ ಉಪನ್ಯಾಸ ನೀಡಿ, ಸರಕಾರಿ ನೌಕರರೊಂದಿಗೆ ಆರ್ಟಿಐ ಕಲಂಗಳ ಕುರಿತು ಸಂವಾದ ಮಾಡಿದರು.
ಇಲಾಖಾ ವಿಚಾರಣೆಗಳ ಕಾನೂನು ಸಲಹೆಗಾರರಾದ ಬಿ.ನಾಗೇಂದ್ರ ಕುಮಾರ ಅವರು ಸಿಸಿಎ ನಿಯಮಾವಳಿಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರತ್ಯಕ್ಷಿಕೆ ಮೂಲಕ ವಿವರಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರಾಜ್ಯ ಸರಕಾರಿ ನೌಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಸರಕಾರಿ ನೌಕರರು ಭಾಗವಹಿಸಿದ್ದರು.
ಶಿಕ್ಷಕ ಎಫ್.ವ್ಹಿ.ಮಂಜನ್ನವರ ಅವರು ಸ್ವಾಗತಿಸಿ, ಕಾರ್ಯಗಾರ ನಿರ್ವಹಿಸಿದರು.