PST ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯಕ್ಕಾಗಿ ಕರೆದ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಭೆ…
ಇಂದು ದಿನಾಂಕ 20-10-2023 ರ ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಜಿಲ್ಲಾ ಘಟಕ, ವಿಜಯಪುರ ವತಿಯಿಂದ ಗುರುಭವನದಲ್ಲಿ PST ಶಿಕ್ಷಕರ ಸಮಸ್ಯೆಗಳ ಕುರಿತು ಚರ್ಚಿಸಲು ಜಿಲ್ಲೆಯ ಸರ್ವ ಸದಸ್ಯರು ಹಾಗೂ ಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ PST ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ತುರ್ತಾಗಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು. 2016 ಕ್ಕಿಂತ ಮುಂಚೆ 1-7/8 ನೇ ತರಗತಿಗಳಿಗೆ ಸಹ ಶಿಕ್ಷಕ ಎಂದು ನೇಮಕವಾಗಿದ್ದ PST ಶಿಕ್ಷಕರು BA, B Ed, MA, MSc, M Phil, Ph D ನಂತಹ ಉನ್ನತ ವಿದ್ಯಾರ್ಹತೆ ಹೊಂದಿದ್ದು 6ರಿಂದ8 ನೇ ತರಗತಿಗಳಿಗೆ ನಿರಂತರವಾಗಿ 20-25 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ. NCTE ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಮತ್ತು ಬೋಧನಾ ಅನುಭವ ಹೊಂದಿದ ಶಿಕ್ಷಕರನ್ನು ಪರಿಗಣಿಸದೇ PST ಎಂದು ಪದನಾಮೀಕರಿಸಿ 1-5 ನೇ ತರಗತಿಗಳಿಗೆ ಸೀಮಿತಗೊಳಿಸಿ ಸಾಮಾಜಿಕ ತಾರತಮ್ಯವನ್ನು ಎಸಗಲಾಗಿದೆ.
ವಿದ್ಯಾರ್ಹತೆ ಹಾಗೂ ಸೇವಾನುಭವ ಹೊಂದಿದ ಅರ್ಹ PST ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ GPT ವೃಂದದಲ್ಲಿ ವಿಲೀನ ಮಾಡುವ ಕುರಿತು ಸರ್ಕಾರದ ಜೊತೆ ಕೂಡಲೇ ಮಾತುಕತೆ ನಡೆಸಿ C & R ನ್ನು ಪುನರ್ ರಚನೆಗಾಗಿ ಒತ್ತಾಯಿಸಬೇಕು. ಒಂದು ವೇಳೆ ಸರಕಾರ ಖಚಿತ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಶಾಲಾ ತರಗತಿಗಳನ್ನು ಬಹಿಷ್ಕರಿಸಿ ಹೋರಾಟಕ್ಕಿಳಿಯುವುದರ ಜೊತೆಗೆ ರಾಜ್ಯಮಟ್ಟದಲ್ಲಿ ವಿವಿಧ ಹಂತದ ಹೋರಾಟಕ್ಕೆ ಕರೆ ನೀಡಲು ಒಕ್ಕೊರಲಿನ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕ ರಾ ಪ್ರಾ ಶಾ ಶಿ ಸಂಘ ಜಿಲ್ಲಾ ಘಟಕ, ವಿಜಯಪುರ ಅಧ್ಯಕ್ಷರಾದ ಶ್ರೀ ಜಿ ಎಸ್ ಬೇವನೂರ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರ್ಜುನ ಲಮಾಣಿ, ರಾಜ್ಯ ಕೋಶಾಧ್ಯಕ್ಷರಾದ ಸುರೇಶ್ ಶೇಡಶ್ಯಾಳ,ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಂ ವಾಲಿಕಾರ ಹಾಗೂ ಎಲ್ಲ ತಾಲೂಕಾ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು