ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಅ.21 ರಂದು ಶಾಸಕ, ಸಚಿವರಿಗೆ ಸನ್ಮಾನ, ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರ ಮತ್ತು ಮಾಹಿತಿ ಹಕ್ಕು, ಸಿಸಿಎ ಅಧಿನಿಯಮ ಕುರಿತು ವಿಚಾರ ಸಂಕಿರಣ ಆಯೋಜನೆ
-ಎಸ್.ಎಫ್.ಸಿದ್ದನಗೌಡರ
ಧಾರವಾಡ ಅ.18: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಅಕ್ಟೋಬರ್ 21 ರಂದು ರಾಜ್ಯ ಸರಕಾರಿ ನೌಕರರಿಗೆ ಅಗತ್ಯವಿರುವ ಮಾಹಿತಿ ಹಕ್ಕು ಅಧಿನಿಯಮ ಮತ್ತು ಸಿಸಿಎ ನಿಯಮಾವಳಿಗಳ ಕುರಿತು ಕಾರ್ಯಾಗಾರ, ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಜಿಲ್ಲೆಯ ನೂತನ ಶಾಸಕ, ಸಚಿವರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹೇಳಿದರು.
ಅವರು ಇಂದು (ಅ.19) ಬೆಳಿಗ್ಗೆ ಸರಕಾರಿ ನೌಕರ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದರು.
ಸರಕಾರಿ ನೌಕರರ ಈ ಸಮಾರಂಭವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಘನ ಉಪಸ್ಥಿತರಿರುವರು. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹು-ಧಾ ಪಾಲಿಕೆ ಮಹಾಪೌರರು, ಸಂಘದ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಓ ಸ್ವರೂಪ ಟಿ.ಕೆ., ವೈಶುದೀಪ ಫೌಂಡೇಶನ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಉದ್ಯಮಿ ಚಂದ್ರಶೇಖರ ವಸ್ತ್ರದ ಉಪಸ್ಥಿತರಿರುವರು ಎಂದು ಎಸ್.ಎಫ್.ಸಿದ್ದನಗೌಡರ ಹೇಳಿದರು.
ಸಂಘದ ಸರ್ವ ಸದಸ್ಯರ ಪ್ರಸಕ್ತ ಸಾಲಿನ ಸಾಮಾನ್ಯ ಸಭೆ: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕದ ಪ್ರಸಕ್ತ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಮದ್ಯಾಹ್ನ 2-30 ಗಂಟೆಗೆ ಜರುಗಲಿದೆ. ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಭಾಗವಹಿಸಿ, ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಶೇ.90 ರಷ್ಟು ಸಾಧನೆ ಮಾಡಿದ ಸರಕಾರಿ ನೌಕರರ 173 ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಅಕ್ಟೋಬರ್ 21 ರ ಶನಿವಾರದಂದು ಧಾರವಾಡ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ 2022-23 ನೇ ಸಾಲಿನಲ್ಲಿ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಾ ಪುರಸ್ಕಾರಕ್ಕೆ ಜಿಲ್ಲೆಯ 73 ಪಿಯುಸಿ ವಿದ್ಯಾರ್ಥಿಗಳು ಮತ್ತು 100 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ಪ್ರತಿ ವಿದ್ಯಾರ್ಥಿಗೆ ಸಂಘದಿಂದ ರೂ 1,000/- ನಗದು ಬಹುಮಾನ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಶಾಲು, ಹಾರದೂಂದಿಗೆ ಗೌರವಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಆಮಂತ್ರಿತ ಗಣ್ಯವ್ಯಕ್ತಿಗಳಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಾಗಾರ: ಅಕ್ಟೋಬರ್ 21 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತದ ಸಹಯೋಗದಲ್ಲಿ ಎಲ್ಲ ಸರಕಾರಿ ನೌಕರರಿಗೆ ಪ್ರತಿದಿನದ ಕೆಲಸದಲ್ಲಿ ಸಹಾಯವಾಗಲು ಮತ್ತು ಅವರ ತಿಳುವಳಿಕೆ ಹೆಚ್ಚಿಸಲು ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಶೇಖರ ಡಿ. ಸಜ್ಜನರ ಅವರು ಮಾಹಿತಿ ಹಕ್ಕು ಅಧಿನಿಯಮ, ಪರಿಣಾಮಕಾರಿ ಬಳಕೆ, ಸರಕಾರಿ ನೌಕರರು ಅರ್ಥೈಸುವಿಕೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ಇಲಾಖಾ ವಿಚಾರಣೆಗಳ ಕಾನೂನು ಸಲಹೆಗಾರರಾದ ಬಿ. ನಾಗೇಂದ್ರ ಕುಮಾರ ಅವರು ಸಿಸಿಎ ನಿಯಮಾವಳಿಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕುರಿತು ಧಾರವಾಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಂಬಂಧಿಸಿದ ವಿಷಯ ನಿರ್ವಾಹಕರು ಕಾರ್ಯಾಗಾರಕ್ಕೆ ಹಾಜರಾಗಿ ಸದುಪಯೋಗಪಡಿಸಿಕೋಳ್ಳುವಂತೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಅವರು ಹೇಳಿದರು.
ಶಾಸಕರು, ಸಚಿವರಿಗೆ ಸನ್ಮಾನ: ಸರಕಾರಿ ನೌಕರರ ಕಾರ್ಯಕ್ರಮದಲ್ಲಿ ಜಿಲ್ಲೆಯ ಚುನಾಯಿತ ಶಾಸಕರಿಗೆ ಮತ್ತು ಸಚಿವರಿಗೆ ಗೌರವಿಸಿ, ಅಭಿನಂದನೆ ಸಲ್ಲಿಸಲಾಗುವುದು. ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರಿಗೆ, ರಾಜ್ಯ ಸರಕಾರಿ ನೌಕರ ಸಂಘದಿಂದ ಖುದ್ದಾಗಿ ಬೇಟಿಯಾಗಿ ಆಹ್ವಾನ ನೀಡಲಾಗಿದೆ ಎಂದು ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹೇಳಿದರು.
ಸೈಬರ್ ಹಾಸ್ಯ ಸಂಜೆ ಕಾರ್ಯಕ್ರಮ: ಶನಿವಾರ ಅ.21 ರಂದು ಸಂಜೆ CySeck ಸೈಬರ ಸೆಕುರಿಟಿ ಕರ್ನಾಟಕ ಸಂಸ್ಥೆಯ ಇವರ ಸಹಯೋಗದಲ್ಲಿ ಪ್ರಸಿದ್ದ ಹಾಸ್ಯ ಕಲಾವಿದರಿಂದ ಸೈಬರ್ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸದಾ ಒತ್ತಡ, ಉದ್ವೇಗದಲ್ಕಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಬಹುತೇಕ ನೌಕರರಿಗೆ ಪ್ರತ್ಯೇಕವಾಗಿ ಸಮಯ ಕಳೆಯುವಂತಹ ಖುಷಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಕಡಿಮೆ. ಆದ್ದರಿಂದ ಎಲ್ಲ ನೌಕರರನ್ನು ನಕ್ಕು, ನಗಿಸಲು ಹಾಸ್ಯ ಸಂಜೆ ಆಯೋಜಿಸಲಾಗಿದೆ. ಇದರಲ್ಲಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ಎಚ್.ದುಂಡಿರಾಜ, ಎಂ.ಎಸ್. ನರಸಿಂಹಮೂರ್ತಿ, ವೈ.ವಿ.ಗೂಂಡುರಾವ್ ಅವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲ ರಾಜ್ಯ ಸರಕಾರಿ ನೌಕರರು ಕುಟುಂಬ ಸಮೇತ ಬಂದು ಈ ಹಾಸ್ಯ ಸಂಜೆ ಕಾರ್ಯಕ್ರಮ ನೋಡಿ, ಕೇಳಿ ಆನಂದಿಸಬೇಕೆಂದು ಸಿದ್ದನಗೌಡರ ತಿಳಿಸಿದರು.
ನೌಕರ ಸಂಘದ ಎನ್.ಪಿ.ಎಸ್. ರದ್ದತಿಗೆ ಹೋರಾಟ ಮುಂದುವರಿಕೆ: ರಾಜ್ಯ ಸಂಘವು ಈಗಾಗಲೇ ಎನ್.ಪಿ.ಎಸ್. ರದ್ದತಿಗೆ ಒತ್ತಾಯಿಸಿದ್ದು, ಸರಕಾರವು ನಮ್ಮ ಮನವಿ ಪುರಸ್ಕರಿಸಿ, ಈಗಾಗಲೇ ಅಧ್ಯಯನಕ್ಜಾಗಿ ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಇದರ ವರದಿ ಬಂದ ತಕ್ಷಣ ಹೋರಾಟದ ರೂಪುರೇμÉಗಳನ್ನು ಸಿದ್ಧಗೊಳಿಸಲಾಗುವುದು. 7ನೇ ವೇತನ ಆಯೋಗ ಜಾರಿ ಮತ್ತು ಎನ್.ಪಿ.ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸಲು ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ತಿಳಿಸಿದರು.
ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಸ್ವಾಗತಿಸಿ, ಸುದ್ದಿಗೋಷ್ಠಿ ನಿರ್ವಹಿಸಿದರು.
ಸುದ್ಧಿಗೋಷ್ಟಿಯಲ್ಲಿ ಸಂಘದ ಜಿಲ್ಲಾ ಖಜಾಂಚಿ ರಾಜಶೇಖರ ಬಾಣದ, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಉಪಾಧ್ಯಕ್ಷ ಗಜಾನನ ಕಟಗಿ, ನೌಕರ ಭವನ ಕಾರ್ಯದರ್ಶಿ ಗಿರೀಶ ಚೌಡಕಿ, ಸಂಘದ ಜಂಟಿ ಕಾರ್ಯದರ್ಶಿ ಹಾಗೂ ಮಾಧ್ಯಮ ಸಂಯೋಜಕ ಡಾ.ಸುರೇಶ ಹಿರೇಮಠ, ಸಂಘದ ಆಂತರಿಕ ಲೆಕ್ಕಪರಿಶೋಧಕ ಮಂಜುನಾಥ ಚೌರಡ್ಡಿ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
***************