ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ (ಪಿ.ಎಸ್.ಟಿ.) ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ವೃಂದಕ್ಕೆ ಸೇವಾ ಜೇಷ್ಠತೆಯೊಂದಿಗೆ ವಿಲೀನಗೊಳಿಸಬೇಕು’ ಎಂದು ಒತ್ತಾಯಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಶಿಕ್ಷಕರು ಇಲ್ಲಿ ಬುಧವಾರ ಮನವಿ ಸಲ್ಲಿಸಿದರು.
ಮೈಸೂರು:
ಸಾಂವಿಧಾನಿಕ ನಿಯಮಗಳ ಪ್ರಕಾರ ಒಂದೇ ವೃಂದದಲ್ಲಿ ಹೊಸ ವೃಂದಗಳನ್ನು ಸೃಜಿಸುವಾಗ ಸೇವಾನಿರತ ಅರ್ಹ ವಿದ್ಯಾರ್ಹತೆಯುಳ್ಳ ನೌಕರರನ್ನು ಪರಿಗಣಿಸಿ, ಕೊರತೆಯಾದಲ್ಲಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವುದು ನಿಯಮ ಹಾಗೂ ಸಾಮಾಜಿಕ ನ್ಯಾಯ. ಆದರೆ, ರಾಜ್ಯ ಸರ್ಕಾರ 2017ರಲ್ಲಿ ಹೊಸ ಸಿ ಅಂಡ್ ಆರ್ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದ್ದು, ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಪಿ.ಎಸ್.ಟಿ. (1ರಿಂದ 5ನೇ ತರಗತಿ), ಜಿಪಿಟಿ (6ರಿಂದ 8ನೇ ತರಗತಿ) ಎಂಬ ಶಿಕ್ಷಕರ ಎರಡು ವೃಂದಗಳನ್ನು ಸೃಜಿಸಿದೆ. 6ರಿಂದ 8 ನೇ ತರಗತಿಗಳಿಗೆ ಜಿಪಿಟಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಪಿ.ಎಸ್.ಟಿ. ಶಿಕ್ಷಕರಿಗೆ ಭಾರೀ ಅನ್ಯಾಯವಾಗಿದೆ’ ಎಂದು ತಿಳಿಸಿದರು.
‘2016ಕ್ಕಿಂತ ಮುಂಚೆ ನೇಮಕಾತಿ ನಿಯಮಗಳ ಅನ್ವಯ 1ರಿಂದ 7ನೇ ತರಗತಿ ಅಥವಾ 8ನೇ ತರಗತಿಗಳಿಗೆ ಸಹ ಶಿಕ್ಷಕರೆಂದು ನೇಮಕವಾಗಿರುವ 1,12,467 ಶಿಕ್ಷಕರು ರಾಜ್ಯದಲ್ಲಿದ್ದಾರೆ. ಇದರಲ್ಲಿ 80ಸಾವಿರ ಶಿಕ್ಷಕರು ಬಿಎ, ಎಂಎ, ಎಂ.ಎಸ್ಸಿ., ಬಿ.ಇಡಿ., ಎಂ.ಫಿಲ್., ಪಿಎಚ್ಡಿಯಂತಹ ಉನ್ನತ ವಿದ್ಯಾರ್ಹತೆ ಹೊಂದಿದ್ದು, 6ರಿಂದ 8ನೇ ತರಗತಿಗಳಿಗೆ ನಿರಂತರವಾಗಿ 15, 20, 25 ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಎನ್.ಸಿ.ಟಿ.ಇ. ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಮತ್ತು ಬೋಧನೆಯ ಅನುಭವ ಇರುವ ಶಿಕ್ಷಕರನ್ನು 6-8ನೇ ತರಗತಿಗೆ ಬೋಧನೆಗೆ ಪರಿಗಣಿಸದೆ ಪಿ.ಎಸ್.ಟಿ. (1ರಿಂದ 5) ಎಂದು ಪದನಾಮೀಕರಿಸಿ ಸಾಮೂಹಿಕ ಹಿಂಬಡ್ತಿ ನೀಡಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗದಲ್ಲಿಯೇ ಸಾಮಾಜಿಕ ತಾರತಮ್ಯ ಎಸಗಲಾಗಿದೆ. ಇದರಿಂದಾಗಿ ಸೇವಾ ನಿರತ ಶಿಕ್ಷಕರ ಸೇವಾನುಭವ ಮತ್ತು ವೃತ್ತಿ ಘನತೆಗೆ ಕುಂದುಂಟಾಗಿದೆ. ಶಿಕ್ಷಕರು ಕೀಳರಿಮೆ ಮತ್ತು ಖಿನ್ನತೆಗೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
‘2016ಕ್ಕಿಂತ ಮುಂಚೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ಹಕ್ಕುಗಳನ್ನು ರಕ್ಷಿಸಲು 2017ರ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ತಿದ್ದುಪಡಿ ನಿಯಮ 2021ನ್ನು ಪುನರ್ ರಚಿಸಿ ಉನ್ನತ ವಿದ್ಯಾರ್ಹತೆ ಹಾಗೂ ಸುದೀರ್ಘ ಸೇವಾನುಭವ ಹೊಂದಿರುವಂತಹ ಅರ್ಹ ಸರ್ಕಾರಿ ಪ್ರಾಥಮಿಕ ಶಿಕ್ಷಕರನ್ನು ಯಾವುದೇ ಆರ್ಥಿಕ ನಷ್ಟವಾಗದಂತೆ 6ರಿಂದ 8ನೇ ತರಗತಿಯ ವೃಂದದಲ್ಲಿ ಸೇವಾ ಜೇಷ್ಠತೆಯೊಂದಿಗೆ ವಿಲೀನಗೊಳಿಸಿ ಎಲ್ಲ ಶಿಕ್ಷಕರಿಗೂ ನ್ಯಾಯ ಒದಗಿಸಬೇಕು’ ಎಂದು ಕೋರಿದರು.
ಶಾಸಕ ಕೆ. ಹರೀಶ್ ಗೌಡ, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಕಾರ್ಯದರ್ಶಿ ಎಂ.ಎಸ್. ಧನು, ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾಲಂಗಿ ಸುರೇಶ್, ನಿರ್ದೇಶಕ ಟಿ. ಸತೀಶ್ ಜವರೇಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಮಹದೇವ, ಸಿ.ಆರ್.ಪಿ. ಮಹದೇವಸ್ವಾಮಿ ಇದ್ದರು.