ನೋವು ನಲಿವಿನಲ್ಲಿ ಹಜ್ಜೆ ಹಾಕುವ ಹೊತ್ತು
ಎಲ್ಲಿಂದಲೋ ಬಂದು
ಇಲ್ಲಿ ಅಂಗಳದಲ್ಲಿ
ತಾವರೆ ಹೂವೊಂದು ಅರಳಿತಲ್ಲ.
ಈ ಹಾಡು ಚಿಕ್ಕ ಉಳ್ಳೀಗೇರಿಯ ಶಾಲಾ ಆವರಣದಲ್ಲಿ ದಿನಾಂಕ ೩೦-೯-೨೦೨೩ ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಶ್ರೀ ಎಸ್ ಜಿ ಗೂಳಪ್ಪನವರರವರ ವಯೋನಿವೃತ್ತಿ ಬೀಳ್ಕೊಡುವ ಸಮಾರಂಭ ಕ್ಷಣಗಳನ್ನು ಕಂಡಾಗ ಈ ಹಾಡಿನ ಸಾಲುಗಳು ಮಾರ್ದನಿಸತೊಡಗಿದವು. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ವಿದಾಯ ಸಹಜ.ವರ್ಗಾವಣೆ ಇರಬಹುದು ನಿವೃತ್ತಿ ಇರಬಹುದು. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಉನ್ನತ ತರಗತಿ ಕಲಿಯಲು ಹೋಗುವ ಸಮಯ ಇರಬಹುದು. ಈ ಎಲ್ಲ ಕ್ಷಣಗಳು ಅಟೋಗ್ರಾಫ್ ರೀತಿ ನಮ್ಮ ಜೀವನದಲ್ಲಿ ಮರೆಯದೇ ಉಳಿಯುತ್ತವೆ.
ಚಿಕ್ಕ ಉಳ್ಳಿಗೇರಿಯ ಶಾಲೆ ಆ ದಿನ ಸಡಗರ ಸಂಭ್ರಮದಿಂದ ನವ ವಧುವಿನಂತೆ ಕಂಗೊಳಿಸತೊಡಗಿತ್ತು. ಶಾಲಾ ಆವರಣದಲ್ಲಿ ಹಾಕಿದ ರಂಗಸಜ್ಜಿಕೆ ಅಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗಾಗಿ ಸಿಂಗಾರಗೊಂಡಿತ್ತು.ಶಾಲೆಯ ಮುಖ್ಯ ದ್ವಾರದಿಂದ ಮಕ್ಕಳ ವಾದ್ಯಮೇಳದೊಂದಿಗೆ ನಿವೃತ್ತ ಗುರುಗಳನ್ನು ಮುಖ್ಯ ವೇದಿಕೆಗೆ ಶಿಕ್ಷಕ ವೃಂದ ಕರೆ ತರುವ ಮೂಲಕ ಬೀಳ್ಕೊಡುವ ಸಮಾರಂಭ ಜರುಗಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಅಕ್ಷರ ದಾಸೋಹ ಸಹಾಯಕ ನಿದೇರ್ಶಕರಾದ ಮೈತ್ರಾದೇವಿ ವಸ್ತ್ರದ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಕಿರಣ ಕುರಿ.ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಹೊಂಗಲ ಎ.ಜಿ.ಚಂದರಗಿ.ಸೇರಿದಂತೆ ಕರ್ನಾಟಕ ರಾಜ್ಯ ನೌಕರರ ಸಂಘದ ಸವದತ್ತಿ ತಾಲೂಕಿನ ಪದಾಧಿಕಾರಿಗಳಾದ ಸಂಗಮೇಶ ಖನ್ನಿನಾಯ್ಕರ ಬಿ.ಆರ್.ಸಿಯ ಸಿಬ್ಬಂಧಿಯವರಾದ ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ. ವೈ.ಬಿ.ಕಡಕೋಳ.ವೀರಯ್ಯ ಹಿರೇಮಠ.ರತ್ನಾ ಸೇತಸನದಿ.ವಿನೋದ ಹೊಂಗಲ.ಮಲ್ಲಿಕಾರ್ಜುನ ಹೂಲಿ.ಜೆ.ಎಸ್.ಸಿದ್ದಲಿಂಗನವರ. ಮತ್ತು ಬಿ.ಇ.ಓ ಕಾರ್ಯಾಲಯದ ಸಿಬ್ಬಂಧಿ ಪ್ರಶಾಂತ.ಮೋಟೆಕರ.ವಗೆನ್ನವರ, ಮುಜಾವರ.ಬಾಬಾಜಾನ್ ಮಾಳಗಿ.ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು.ಎಸ್.ಡಿ.ಎಂ.ಸಿಯವರು.ಗ್ರಾಮೀಣ ಶಿಕ್ಷಕರ ಸಂಘದ ಟಿ.ರ ಏಗನಗೌಡರ. ಮುಖ್ಯೋಪಾಧ್ಯಾಯರ ಸಂಘದ ತುಕಾರಾಮ ಏಗನಗೌಡರ ಸದರಿ ಶಾಲೆಯ ಸಿಬ್ಬಂಧಿ ಊರಿನ ಹಿರಿಯರು.ಗೂಳಪ್ಪನವರ ಕುಟುಂಬದ ಸದಸ್ಯರು ಸಿ.ಆರ್.ಪಿ. ಎಂ.ಎಸ್.ಗಡೇಕಾರ. ಸೇರಿದಂತೆ ಶಾಲೆಯ ಮಕ್ಕಳು ಈ ಕ್ಷಣಗಳಿಗೆ ಸಾಕ್ಷಿಯಾದರು.
ಶ್ರೀ ಸೋಮಪ್ಪ ಗುಳ್ಳಪ್ಪ ಗೂಳಪ್ಪನವರ್ ಅವರು ಕಾಯಕವೇ ಕೈಲಾಸವೆಂದು ಸೇವೆ ಸಲ್ಲಿಸಿದ, ಇವರಿಗೆ ಅತ್ಯಂತ ಅದ್ದೂರಿ ವಯೋನಿವೃತ್ತಿ ಮತ್ತು ಶಾಲಾ ಗೌರವಸನ್ಮಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬಂತೆ ವೃತ್ತಿಗಳಲ್ಲಿ ಅತ್ಯಂತ ಪವಿತ್ರ ವೃತ್ತಿಯಾದ ಶಿಕ್ಷಕ ವೃತ್ತಿಯನ್ನು ಅತ್ಯಂತ ದಕ್ಷ-ಪ್ರಾಮಾಣಿಕತೆ ಸಮಯಪಾಲನೆಯೊಂದಿಗೆ ಕಾರ್ಯನಿರ್ವಹಿಸಿ, ದಿನಾಂಕ ೩೦-೯-೨೦೨೩ ರಂದು ಸುದೀರ್ಘ ೩೦ ವರ್ಷಗಳ ಸೇವಾ ಬದುಕಿಗೆ ವಿದಾಯ ತಿಳಿಸಿ, ವಿಶ್ರಾಂತ ಜೀವನಕ್ಕೆ ಕಾಲಿಟ್ಟರು.
ಪ್ರಾರಂಭಿಕ ಜೀವನ..
ಶ್ರೀ ಸೋಮಪ್ಪ ಗೂಳಪ್ಪ ಗೂಳಪ್ಪನವರ ಅವರು ಉಡುಕೇರಿಯಲ್ಲಿ ಸೆಪ್ಟೆಂಬರ್ ೨೫ ನೇ ೧೯೬೩ ರಂದು,ಅವಿಭಕ್ತ ಕುಟುಂಬದಲ್ಲಿ ಜನಿಸಿದರು, ತಂದೆ ಗೂಳಪ್ಪ ಮತ್ತು ತಾಯಿ ಗಂಗಮ್ಮ. ಈ ಶರಣ ದಂಪತಿಗಳ ಆರು ಜನ ಮಕ್ಕಳಲ್ಲಿ ನಾಲ್ಕು ಜನ ಗಂಡು ಎರಡು ಹೆಣ್ಣು ಮಕ್ಕಳು.ಇವರಲ್ಲಿ ಸೋಮಪ್ಪನವರುಎರಡನೇ ಮಗ. ಒಕ್ಕಲುತನ ಮನೆತನದ ರೈತಾಪಿ ಕುಟುಂಬ ಇವರದು. ಶರಣ ದಂಪತಿ ತಂದೆ ತಾಯಿಯವರು ಎಲ್ಲ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ವಿದ್ಯಾಭ್ಯಾಸದೊಂದಿಗೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆಗೆ ಸೇರಿಸುವ ಸಾಧನೆ ಮಾಡುವಂತೆ ಮಾಡಿದ ಕೀರ್ತಿವಂತರು. ಇವರ ಕುಟುಂಬದಲ್ಲಿ ಪಿ.ಎಸ್.ಐ ಹುದ್ದೆ ಇಬ್ಬರು ಇದ್ದರೆ.ಇಂಜನೀಯರಿಂಗ ವಿಭಾಗ ವಾಣಿಜ್ಯ ವಿಭಾಗದಲ್ಲಿ ಹಲವರು ಇರುವರು.ಅವಿಭಕ್ತ ಕುಟುಂಬದಲ್ಲಿ ಇಂದಿಗೂ ಕೂಡ ಎಲ್ಲರೂ ಒಗ್ಗಟ್ಟಿನಿಂದ ಬದುಕನ್ನು ನಡೆಸುತ್ತಿರುವುದು ಒಂದು ಮಾದರಿ.
ಶಿಕ್ಷಣ
ಗೂಳಪ್ಪನವರ ಗುರುಗಳು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಉಡುಕೇರಿಯಲ್ಲಿ ಪಡೆದರು. ನಂತರ ವೀರರಾಣಿ ಮಲ್ಲಮ್ಮ ಮೆಮೋರಿಯಲ್ ಪ್ರೌಢಶಾಲೆ ಬೆಳವಡಿಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಕಿತ್ತೂರ ರಾಣಿ ಚೆನ್ನಮ್ಮ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯು ಪದವಿ ಹಾಗೂ ಬಿ ಎಸ್ ಸಿ ಪದವಿಯನ್ನು ಪಡೆದರು.
ಸೇನೆಗೆ ಸೇರುವ ಉತ್ಕಟ ಇಚ್ಚೆ ಶಿಕ್ಷಕರಾಗುವಂತಾಗಿದ್ದು
ಪಿಯು ಪದವಿ ನಂತರ ಸೇನೆಗೆ ಸೇರಬೇಕೆಂಬ ಇವರು ತಮ್ಮ ದೈನಂದಿನ ಪ್ರಯತ್ನದಲ್ಲಿ ದೇಹದಾರ್ಡ್ಯತೆ ಹೊಂದಿ ದೈಹಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣರಾದರೂ ಕೂಡ, ಇವರ ಅಂಕಪಟ್ಟಿಗಳ ತಪಾಸಣೆ ಸಂದರ್ಭದಲ್ಲಿ ಅವರ ಎಲ್ಲಾ ಅಂಕಪಟ್ಟಿಗಳು ಕಳೆದು ಹೋಗಿದ್ದು,ಅಂಕಪಟ್ಟಿಗಳು ಮರಳಿ ಪಡೆಯುವಷ್ಟರಲ್ಲಿ ಅವರ ಸೇನೆ ಸೇರುವ ಕನಸು ಕನಸಾಗಿ ಉಳಿಯಿತು.
ನಂತರದ ದಿನಗಳಲ್ಲಿ ಅನಿವಾರ್ಯವಾಗಿ ಬಾಸೆಲ್ ಮಿಷನ್ ಮಹಾವಿದ್ಯಾಲಯ ಧಾರವಾಡದಲ್ಲಿ ಟಿಸಿಎಚ್ ಪದವಿಯನ್ನು ಪಡೆಯುವಂತಾಯಿತು. ಅದು ಶಿಕ್ಷಕ ವೃತ್ತಿಗೆ ಅವಕಾಶ ಒದಗಿಸಿತು.೧೯೯೨ ಮೇ ೩೦ರಂದು ಉಡಕೇರಿಯ ಕುಮಾರಿ ಶ್ರೀದೇವಿ ಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಕೌಟುಂಬಿಕ ಬದುಕು..
ಇವರ ಪತ್ನಿ ಶ್ರೀದೇವಿ. ಮನೆಯ ಗೃಹಿಣಿಯಾಗಿ ಪತಿಯ ನೌಕರಿ ಬದುಕಲ್ಲಿ ಮನೆಯಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವರು.ಈ ದಾಂಪತ್ಯ ಬದುಕಿಗೆ ಮೂರು ಜನ ಮಕ್ಕಳು ಹಿರಿಯ ಸುಪುತ್ರ ವಿನೋದ್.ಇಂಜನೀಯರಿಂಗ ವ್ಯಾಸಂಗ ಪೂರೈಸಿ ಬೆಂಗಳೂರಿನಲ್ಲಿ ಉನ್ನತ ಹುದ್ದೆಗೆ ಕೋಚಿಂಗ ಪಡೆಯುತ್ತಿರುವನು. ಮಗಳು ವಿಜಯಲಕ್ಷ್ಮೀ ಇವಳು ಪದವಿ ವ್ಯಾಸಂಗ ಪೂರೈಸಿ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿರುವಳು.ಮೂರನೆಯವಳು ವಿದ್ಯಾ. ಬಿ.ಸ್.ಸಿ ಪದವಿ ವ್ಯಾಸಂಗ ಮಾಡಿ ಸದ್ಯ ಮುನವಳ್ಳಿಯಲ್ಲಿ ಬಿ.ಈಡಿ ವ್ಯಾಸಂಗ ಮಾಡುತ್ತಿರುವಳು.
ಶಿಕ್ಷಕ ವೃತ್ತಿಯಂದ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ
೧೯೯೩ರ ಅಗಸ್ಟ್ ೧೨ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ೧೯೯೫ರ ಆಗಸ್ಟ್ ೧೪ರಂದು ಕರಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿಂದ ಮುಂದೆ ಸವದತ್ತಿ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆ ನಂ ೫ ಶಾಲೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿದರು. ತದನಂತರ ೨೦೦೯ ರಿಂದ ೨೦೧೦ರ ವರೆಗೆ ತಾಲೂಕು ಪಂಚಾಯಿತಿನಲ್ಲಿ ಸ್ವಚ್ಛತೆಯ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೨೦೧೦ ಜೂನ್ ೧ರಂದು ಸವದತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುವಿನಹಳ್ಳಿ ನಂಬರ್ ೧೦ ಶಾಲೆಗೆ ವರ್ಗಾವಣೆಗೊಂಡರು. ೨೦೧೯ ಅಕ್ಟೋಬರ್ ೫ ಕ್ಕೆ ಸವದತ್ತಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಕಬಾಳದಲ್ಲಿ ವರ್ಗಾವಣೆಗೊಂಡು ಪ್ರಭಾರಿ ಪ್ರಧಾನ ಗುರುಗಳ ಹುದ್ದೆ ನಿಭಾಯಿಸಿ, ಅಂತಿಮವಾಗಿ ಮೇ ೯ ೨೦೨೨ ರಂದು ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಉಳ್ಳಿಗೇರಿ ಇಲ್ಲಿಗೆ ಬಂದು ಮುಖ್ಯ ಶಿಕ್ಷಕರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.
ಮುಖ್ಯ ಶಿಕ್ಷಕರಾಗಿ ನಿಭಾಯಿಸಿದ ಪ್ರಮುಖ ಸಾಧನೆಗಳು
ಇವರು ಮುಖ್ಯ ಶಿಕ್ಷಕರಾಗಿ ಶಾಲೆಗೆ ಹಾಜರಾದ ತಕ್ಷಣ ಶಾಲೆಯ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಪ್ರಾರಂಭಿಸಿದರು. ೨೦೨೨-೨೩ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಮೊದಲ ಬಾರಿಗೆ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ಶಾಲಾ ಎಸ್ ಡಿ ಎಂ ಸಿ ಸಹಕಾರದಿಂದ ಸಂಘಟಿಸಿ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಇನಾಮಹೊಂಗಲ ಮತ್ತು ತಾಲೂಕು ಪಂಚಾಯತ ಸವದತ್ತಿ ಇವರ ಮೂಲಕ ಅನೇಕ ಕಾಮಗಾರಿಗಳು ಈ ಶಾಲೆಯಲ್ಲಿ ನಡೆದಾಗ ಸೂಕ್ತ ಸಲಹೆ ಸೂಚನೆಯ ಮೇರೆಗೆ ಶಾಲೆಗೆ ಎತ್ತರದ ಗೋಡೆ ನಿರ್ಮಾಣ, ಕೋಕೋ, ಕಬಡ್ಡಿ, ವಾಲಿಬಾಲ್ ಮೈದಾನ ನಿರ್ಮಾಣ ಹಾಗೂ ಶಾಲಾ ಫೆವರ್ಸ್ ಹಂತದ ಕಾಮಗಾರಿಗಳನ್ನು ಶಾಲೆಗೆ ತಕ್ಕಂತೆ ನಿರ್ಮಿಸಲು ಅವಕಾಶ ಮಾಡಿಕೊಂಡರು. ಶಾಲೆಯ ಆವರಣದಲ್ಲಿ ೩೦ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಹಸಿರು ಮೈದಾನಕ್ಕೆ ನಾಂದಿ ಇಟ್ಟರು. ಶಾಲೆಯ ೪ ತರಗತಿಯ ಶಿಥಿಲಗೊಂಡ ಹಳೆ ಕಟ್ಟಡವನ್ನು ನೆಲಸಮಗೊಳಿಸುವ ಮೂಲಕ ಯಾವುದೇ ತೊಂದರೆ ಇಲ್ಲದಂತೆ ನಿಭಾಯಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಮನ್ವಯದೊಂದಿಗೆ ಕಾರ್ಯಪೂರ್ಣಗೊಂಡಿತು. ಮುಂದಿನ ಹಂತದಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಕಾರ್ಯವನ್ನು ಹಾಗೂ ಅವುಗಳ ಮೇಲೆ ಉಕ್ತಿಗಳನ್ನು ಬರೆಸುವುದರೊಂದಿಗೆ ಅತ್ಯಂತ ಸುಂದರ ಶಾಲೆ ಕಾಣುವ ಹಾಗೆ ಸಹ ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಸೌಂದರ್ಯಿಕರಣಕ್ಕೆ ಒತ್ತು ನೀಡಿದರು.
ಶಾಲೆಯ ಮುಂಭಾಗದ ಗೋಡೆಯ ಮೇಲೆ ಸುಂದರವಾದಂತಹ ಪ್ರಧಾನ ಮಂತ್ರಿ ಪೋಶನ್ ಅಭಿಯಾನ, ಕ್ಷೀರ ಭಾಗ್ಯ ಯೋಜನೆ, ಮೊಟ್ಟೆ ಚಕ್ಕಿ ಯೋಜನೆ, ಕರ್ನಾಟಕದ ವೈಭವದ ಚಿತ್ರಗಳನ್ನು ಹಾಗೂ ಕ್ರೀಡಾ ವಿನೋದ ಚಿತ್ರಗಳನ್ನು ಕಾಣಬಹುದಾಗಿದೆ. ಶಾಲೆಯ ಸಿಬ್ಬಂದಿ ವರ್ಗದ ಸಮನ್ವಯ ಸಾಧಿಸಿ ಯಾವುದೇ ಶಾಲಾ ಆಡಳಿತಕ್ಕೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು. ಶಾಲಾ ಅನುದಾನ ಮತ್ತು ಸಂಪನ್ಮೂಲಗಳ ಸರಿಯಾದ ಸದುಪಯೋಗವನ್ನು ಪಡೆದುಕೊಂಡು ಇಂದು ಶಾಲೆ ತಾಲೂಕಿನಲ್ಲಿ ಮಾದರಿಯಾಗುವಂತೆ ಮಾಡಿದ್ದಾರೆ. ಇವರು ಬಂದ ನಂತರ ಶಾಲೆಯಲ್ಲಿ ಬುಧವಾರ ಹಾಗೂ ಶನಿವಾರದಂದು ಟ್ರ್ಯಾಕ್ ಸೂಟ್ ವ್ಯವಸ್ಥೆಯನ್ನು ಶಾಲಾ ಮಕ್ಕಳಿಗೆ ಮಾಡಿಸಲಾಯಿತು.ಮುಖ್ಯ ಶಿಕ್ಷಕರ ಕೊಠಡಿಗೆ ಹೊಸ ಆಯಾಮ ನೀಡಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಇಂತಹ ಸಾಧಕರಿಗೆ ವಯೋನಿವೃತ್ತಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಾಲಾ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಚಿಕ್ಕಉಳ್ಳಿಗೇರಿ ಗ್ರಾಮದ ಎಲ್ಲ ಹಿರಿಯರು ಅತ್ಯಂತ ಅದ್ದೂರಿಯಾಗಿ ನಡೆಸಿಕೊಟ್ಟರು.
ವೈಶಿಷ್ಟಪೂರ್ಣ ಬೀಳ್ಕೊಡುಗೆ.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ಅಧಿಕಾರಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಮೋಹನ ದಂಡಿನ ಹಾಗೂ ಪಿಎಮ್ ಪೋಷಣ ಅಭಿಯಾನದ ಸಹಾಯಕ ನಿರ್ದೇಶಕಿ ಶ್ರೀಮತಿ ಮೈತ್ರಾದೇವಿ ವಸ್ತ್ರದರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕರಾದ ಶ್ರೀ ಪವನ ಅಮಠೆ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಮುಖ್ಯ ಶಿಕ್ಷಕರ ಪರಿಚಯವನ್ನು ಶ್ರೀಮತಿ ವಿಜಯಲಕ್ಷ್ಮಿ ಕೆಂಗುಂಟಿ ಗುರುಮಾತೆಯರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಿಕಟಪೂರ್ವ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀ ಶ್ರೀಶೈಲ ಕರಿಕಟ್ಟಿ ಅವರು “ತಮ್ಮ ಬಾಲ್ಯದ ನೆನಪುಗಳೊಂದಿಗೆ ಇಬ್ಬರೂ ಸಹಪಾಠಿಗಳಾಗಿ ಓದಿದ ನೆನಪನ್ನು ಹಾಗೂ ಸೋಮಪ್ಪನವರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.ನಿವೃತ್ತಿ ನಂತರ ತಮ್ಮ ತೋಟಕ್ಕೆ ಸ್ನೇಹಿತ ಬರಲಿ.ಸ್ನೇಹಿತನ ಹೊಲಗದ್ದೆಗೆ ನಾನು ಹೋಗುವೆ.ಭೂ ತಾಯಿಯ ಮಡಿಲಲ್ಲಿ ನಮ್ಮ ಅನುಭವಗಳು ಇನ್ಮುಂದೆ ಮೇಳೈಸಲಿ”ಎಂದು ತಮ್ಮ ಬದುಕಿನ ಕ್ಷಣಗಳನ್ನು ಹಂಚಿಕೊಂಡರು. ಶಾಲಾ ಪ್ರಧಾನ ಗುರುಗಳ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಡಿ ಬಿ ಏಗನಗೌಡ್ರು ರವರು ಸೋಮಪ್ಪನವರ “ದಕ್ಷ ಆಡಳಿತ ಮತ್ತು ಪ್ರಾಮಾಣಿಕತೆ ಬಗ್ಗೆ ಗ್ರಾಮೀಣ ಸಂಘದ ರಚನೆಯಲ್ಲಿ ಅವರ ಪಾತ್ರವನ್ನು” ಕುರಿತು ಮಾತನಾಡಿದರು. ಇನ್ನು ಕೊನೆಯದಾಗಿ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿದ ಶ್ರೀಯುತ ಮೋಹನ ದಂಡಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು “ಗುರು ಎಂದರೆ ಹೇಗಿರಬೇಕು,ನಿವೃತ್ತಿಯ ನಂತರ ಕೂಡ ಶಿಕ್ಷಣ ಇಲಾಖೆಗೆ ತಮ್ಮ ಸೇವೆ ಇರಲಿ. ಈ ವೃತ್ತಿಯ ಪವಿತ್ರತೆ ಮಹತ್ವದ ಮೌಲ್ಯವನ್ನು ಸಮಗ್ರವಾಗಿ ತಿಳಿಸುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು ಈ ಸಂದರ್ಭದಲ್ಲಿ ಶ್ರೀ ಸೋಮಪ್ಪ ಗೂಳಪ್ಪನವರ ಗುರುಗಳು ತಮ್ಮ ವಿದಾಯದ ಅನುಭವವನ್ನು ಹಾಗೂ ವೃತ್ತಿಯಲ್ಲಿ ಅನುಭವಿಸಿದ ಸಿಹಿ ಕಹಿ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಕೂಡ ಗೂಳಪ್ಪನವರ ಗುರುಗಳ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು. ಹಲವು ವರ್ಷಗಳ ಬಾಂಧವ್ಯದ ಅಗಲಿಕೆಯ ಆ ಕ್ಷಣ ಮರ್ಕಟ ಮನಸ್ಸು ಕಣ್ಣಂಚಲ್ಲಿ ನೀರು ತರಿಸಿತ್ತು.
ನಿವೃತ್ತಿ ಬದುಕು ಮುಂದಿನ ಭವಿಷ್ಯದ ಮುನ್ನುಡಿ ಬರೆಯುವ ಕ್ಷಣಗಳು.ಹಿಂದಿನ ದಿನಗಳ ನನಪಿನ ಪುಟದೊಳಗೆ ಅಟೋಗ್ರಾಫ್ ನಂತೆ ಎಲ್ಲರೂ ವೇದಿಕೆಯಲ್ಲಿ ಸನ್ಮಾನ ಮಾಡುವ ಪೋಟೊ ತಗೆಸಿಕೊಳ್ಳುವ ಸಂದರ್ಭಗಳು ಈ ಕ್ಷಣಗಳಿಗೆ ಸಾಕ್ಷಿಯಾದವು.ಈ ಸಂದರ್ಭದಲ್ಲಿ ಚಿಕ್ಕಉಳ್ಳಿಗೇರಿ, ಕರಿಕಟ್ಟಿ, ಸುತಗಟ್ಟಿ, ಅಸುಂಡಿ,ನಡುವಿನಹಳ್ಳಿ, ಜಕಬಾಳ ಮತ್ತು ಸವದತ್ತಿ ಹೀಗೆ ನಾನಾ ಕಡೆಯಿಂದ ಗುರು ವೃಂದ ಹಾಗೂ ಗ್ರಾಮದ ಹಿರಿಯರು ಗೌರವ ಸಲ್ಲಿಸುವುದರ ಮೂಲಕ ಅದ್ದೂರಿ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ ನೀಡಲಾಯಿತು.ಸವಿ ನೆನಪುಗಳು ಬೇಕು ಸವಿಯಲು ಬದುಕು ಎಂಬಂತೆ ಮರೆಯದ ಸೇವೆಯ ಸ್ಮರಣೆಯೊಂದಿಗೆ ಬೀಳ್ಕೊಡುಗೆ ಜರುಗಿತು.ಕೊನೆಯಲ್ಲಿ ಶಿಕ್ಷಕ ಜೆ.ಎ.ನವಲೆ ವಂದಿಸಿದರು.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕ. ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨