ದಸರೀಘಟ್ಟದ ಚೌಡೇಶ್ವರಿ ದೇವಿ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರೀಘಟ್ಟ ಎನ್ನುವ ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯವಿದೆ.ಬೆಂಗಳೂರಿನಿಂದ ತುಮಕೂರು ೭೨ ಕಿ.ಮೀ ಅಂತರ ಅಲ್ಲಿಂದ ತಿಪಟೂರಿಗೆ ಬರಬೇಕು ಬೆಂಗಳೂರಿನಿಂದ ತಿಪಟೂರು ೧೪೫ ಕಿ.ಮೀ ಅಂತರವಾಗುತ್ತದೆ. ಅಲ್ಲಿಂದ ೧೦ ಕಿಲೋ ಮೀಟರ ಅಂತರದಲ್ಲಿ ಇರುವುದು ದಸರೀಘಟ್ಟ.ಇಲ್ಲಿ ಕಳಸದ ಮೂಲಕ ಅಕ್ಕಿಯ ಮೇಲೆ ಬರೆಯುವ ಮೂಲಕ ಭವಿಷ್ಯವನ್ನು ಹೇಳುವ ಪದ್ಧತಿಯನ್ನು ಕಾಣಬಹುದಾಗಿದೆ. ನನ್ನ ಸಹೋದರಿಯ ಮಗಳು ಅಶ್ವಿನಿ ಒಂದು ಸಲ ತನ್ನ ಗೆಳತಿಯೊಂದಿಗೆ ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿ ಬಂದು ತನಗೆ ಉದ್ಯೋಗ ದೊರೆಯುವಂತೆ ದೇವಿಯಲ್ಲಿ ಪ್ರಾರ್ಥಿಸಿ ಬಂದಿದ್ದಳಂತೆ.ನಂತರ ಅವಳ ವಿದ್ಯಾಭ್ಯಾಸ ಪೂರ್ಣಗೊಂಡ ಕೆಲವೇ ತಿಂಗಳುಗಳಲ್ಲಿ ಅವಳಿಗೆ ಉದ್ಯೋಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ದೊರೆಯಿತು.ಅದಕ್ಕೆ ಅವಳು ನನಗೂ ಕೂಡ ದಸರೀಘಟ್ಟಕ್ಕೆ ಬರುವಂತೆ ಹೇಳಿದಳು.
ಕಳೆದ ವರ್ಷ ಒಂದು ಭಾನುವಾರ ಮನೆಯವರೆಲ್ಲ ಅಲ್ಲಿಗೆ ಹೋಗಿ ಬಂದೆವು. ಆ ಕುರಿತು ನನಗೆ ಬರಹ ರೂಪಿಸಲಾಗಿರಲಿಲ್ಲ.ಈಗ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆ ದೇವಾಲಯದ ಕುರಿತು ಬರಹ ರೂಪಿಸಲು ಮಾಹಿತಿಯನ್ನು ಕಲೆ ಹಾಕಿದೆ. ಈ ದಸರೀಘಟ್ಟ ಇರುವುದು ತಿಪಟೂರಿನಿಂದ ಹತ್ತು ಕಿಲೋ ಮೀಟರ ಅಂತರದಲ್ಲಿ .ಶ್ರೀ ಮಾತೆ ಆದಿಶಕ್ತಿಯ ಅವತಾರವಾಗಿರುವ ಚೌಡೇಶ್ವರಿ ಪೂಜೆಯನ್ನು ಈ ನವರಾತ್ರಿ ಸಂದರ್ಭದಲ್ಲಿ ಕೈಗೊಳ್ಳಲು ನಾಡಿನ ಎಲ್ಲೆಡೆಯಿಂದ ಭಕ್ತ ಜನ ಆಗಮಿಸುವರು. ಇಲ್ಲಿ ವಸತಿ ವ್ಯವಸ್ಥೆ ಕೂಡ ಆದಿಚುಂಚನಗಿರಿ ಮಠದ ಶಾಖಾ ಮಠ ಇದ್ದು ಅನ್ನ ಪ್ರಸಾದ ಕೂಡ ಇಲ್ಲಿ ಇರುವುದು.
ಇಲ್ಲಿ ಒಂದು ಹಲಗೆಯ ಮೇಲೆ ರಂಗೋಲಿಯ ರೂಪದಲ್ಲಿ ಅಕ್ಕಿಯನ್ನು ಹಾಕಿರುವರು.ಅಲ್ಲಿ ಇಬ್ಬರು ದೇವಿಯ ಕಳಸವನ್ನು ಹೊತ್ತು ನಿಮ್ಮ ಮನಸ್ಸಿನ ಆಲೋಚನೆಗಳಿಗೆ ಅಕ್ಕಿಯ ಮೇಲೆ ಸಂಕಲ್ಪದ ಮೂಲಕ ಬರೆದು ಅದರ ವಿವರವನ್ನು ನೀಡುತ್ತಾರೆ. ನಂತರ ತಾವು ಅಲ್ಲಿ ಹರಕೆಯ ಮೂಲಕ ಸಂಕಲ್ಪ ಮಾಡಿ ತಮ್ಮ ಇಷ್ಟಾರ್ಥ ಸಿದ್ದಿ ಕುರಿತು ಸಂಕಲ್ಪಿಸಿ ಬಂದರೆ ಸಿದ್ದಿಯಾಗುತ್ತದೆ ಎಂಬುದು ನಂಬಿಕೆ.
ದೇಗುಲ ಕುರಿತು ಕಥೆ
ಈ ಭಾಗದಲ್ಲಿ ಹಿಂದೆ ಜಸವಂತರಾಯ ಎಂಬ ಪಾಳೇಗಾರ ಆಳ್ವಿಕೆ ನಡೆಸುತ್ತಿದ್ದನಂತೆ.ಅವನಿಗೆ ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂಬ ಇಚ್ಚೆಯುಂಟಾಗಿ ಆತ ದೇವಿಯ ಪ್ರಾರ್ಥನೆಯಲ್ಲಿ ತೊಡಗಿದನಂತೆ. ಆತನ ಪ್ರಾರ್ಥನೆಗೆ ದೇವಿ ಪ್ರತ್ಯಕ್ಷಳಾಗಿ ಏನು ಬೇಕು ಎಂದು ಕೇಳಲು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದನಂತೆ. ಆಯಿತು.ಆದರೆ ತಾನು ಅವನ ಸಾಮ್ರಾಜ್ಯದ ತನಗಿಷ್ಟವಾದ ಸ್ಥಳದಲ್ಲಿ ನೆಲೆನಿಂತಾಗ ಅವಳಿಗೆ ನಿತ್ಯವೂ ಪೂಜಾದಿ ಕಾರ್ಯವನ್ನು ಸಾಂಗವಾಗಿ ನೆರವೇರಿಸಲು ತಿಳಿಸಿ ದೇವಿಯು ಅವನ ಸಾಮ್ರಾಜ್ಯದ ದಟ್ಟವಾದ ಹಸಿರಿನಿಂದ ಕೂಡಿದ ಈ ಸ್ಥಳದಲ್ಲಿ ನೆಲೆನಿಂತಳಂತೆ.ಅಲ್ಲಿ ದೇವಾಲಯ ನಿರ್ಮಿಸಿದ ಜಸವಂತರಾಯ ತನ್ನ ಆಳ್ವಿಕೆಯನ್ನು ಈ ಭಾಗದಲ್ಲಿ ದೇವಿಯ ಅನುಗ್ರಹಕ್ಕೆ ಪಾತ್ರವಾಗಿ ಜೀವಿಸಿದನೆಂದು ಪ್ರತೀತಿ.ಹೀಗೆ ಚೌಡೇಶ್ವರಿ ನೆಲೆನಿಂತ ಈ ತಾಣ ಜಸವಂತರಾಯ ಪಟ್ಟಣ ಎಂದು ಕರೆಯಲ್ಪಟ್ಟಿತು.ಕಾಲಾನಂತರದಲ್ಲಿ ದಸರೀಘಟ್ಟವಾಗಿದೆ.
ಇನ್ನೊಂದು ಐತಿಹ್ಯ
ಈ ಭಾಗದಲ್ಲಿ ರಾಯಚೂರು ಜಿಲ್ಲೆಯ ತುಂಗಾ ನದಿ ತೀರದಲ್ಲಿ ನಂದವರ ಎಂಬ ಸಾಮ್ರಾಜ್ಯವಿತ್ತಂತೆ.ಇಲ್ಲಿನ ರಾಜ್ಯ ಶಕ್ತಿ ದೇವರ ಉಪಾಸಕನಾಗಿದ್ದನಂತೆ.ಆತನಿಗೆ ಅನೇಕ ಮಂತ್ರವಿದ್ಯೆಗಳು ಕರಗತವಾಗಿದ್ದವಂತೆ.ತನ್ನ ಮಂತ್ರಶಕ್ತಿಯಿಂದ ಅವನು ಪ್ರತಿದಿನ ನಸುಕಿನ ೪ ಗಂಟೆ ಸಮಯದಲ್ಲಿ ಎದ್ದು ಕಾಶಿಗೆ ಹೋಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಂದು ದೇವಿ ಅರ್ಚನೆಯಲ್ಲಿ ತೊಡಗುತ್ತಿದ್ದನಂತೆ.ಒಂದು ದಿನ ರಾಣಿ ಬೆಳಿಗ್ಗೆ ಬೇಗ ಎದ್ದು ರಾಜನು ಅರಮನೆಯಲ್ಲಿ ಇಲ್ಲದಿರುವುದನ್ನು ಕಂಡು ಸಂಶಯಗೊಂಡು ಆತ ಬಂದ ನಂತರ ಇಷ್ಡು ಹೊತ್ತು ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಿದಾಗ ರಾಣಿಗೆ ನೈಜ ಸಂಗತಿಯನ್ನು ರಾಜ ತಿಳಿಸಿದನಂತೆ.ಆಗ ಅವಳಿಗೆ ಕುತೂಹಲ ಹಾಗೂ ಅದನ್ನು ಪರೀಕ್ಷಿಸಬೇಕು ಎಂಬ ಇಚ್ಚೆಯಾಗಿ ತನ್ನನ್ನು ಕರೆದುಕೊಂಡು ಹೋಗುವಂತೆ ಕೋರಿದಳು.ಅವಳ ಇಚ್ಚೆ ಈಡೇರಿಸಲು ರಾಜ ಅವಳನ್ನು ಕೂಡ ಕರೆದುಕೊಂಡು ಹೋಗಿಯೇ ಬಿಟ್ಟ.ಆದರೆ ಆ ದಿನ ಅವಳು ಮಾಸಿಕ ಋತುಚಕ್ರದ ದಿನದಲ್ಲಿ ಇದ್ದಳು,. ಇದರಿಂದ ರಾಜ ತನ್ನ ಮಂತ್ರಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು.
ಇದರಿಂದ ವಿಚಲಿತನಾದ ರಾಜ ಗಂಗಾ ನದಿ ತೀರದಲ್ಲಿ ಅಲೆಯುತ್ತಿರಲು ಅಲ್ಲಿ ಬ್ರಾಹ್ಮಣರ ಗುಂಪೊಂದು ಚಂಡಿಯಾಗ ಮಾಡುತ್ತಿರುವುದನ್ನು ಗಮನಿಸಿದ.ಅವರ ಹತ್ತಿರ ಹೋಗಿ ತನಗಾದ ಸಂಗತಿಯನ್ನು ತಿಳಿಸಿದನು.ಆಗ ಅವರು ಅದನ್ನು ಪರಿಹರಿಸುವುದಾಗಿಯೂ ಜೊತೆಗೆ ತಮಗೆ ಕಷ್ಟ ಕಾಲದಲ್ಲಿ ರಾಜನ ಬಳಿ ಬಂದು ಸಹಾಯ ಕೋರಿದಾಗ ಸಹಾಯ ಮಾಡುವಂತೆಯೂ ತಿಳಿಸಿದಾಗ ರಾಜ ಅದಕ್ಕೆ ಸಮ್ಮತಿಸಿದನು. ಬ್ರಾಹ್ಮಣರು ಈ ಸಮಸ್ಯಗೆ ಪರಿಹಾರ ನೀಡಿ ಮತ್ತೆ ರಾಜ ತನ್ನ ಮಂತ್ರಶಕ್ತಿಯನ್ನು ಪಡೆಯಲು ಸಹಕರಿಸಿದರು.
ಆಗ ರಾಜ ರಾಣಿಯೊಡನೆ ತನ್ನ ಆಸ್ಥಾನಕ್ಕೆ ಹಿಂತಿರುಗಿ ದೇವಿ ಉಪಾಸನೆಯಲ್ಲಿ ಕಾಲ ಕಳೆಯತೊಡಗಿದನು.ಆದರೆ ಮೊದಲಿನಂತೆ ತನ್ನ ಮಂತ್ರಶಕ್ತಿಯನ್ನು ಪ್ರಯೋಗಿಸದೇ ದೇವಿಯ ಆರಾಧನೆಯಲ್ಲಿ ತೊಡಗಿ ಸುಖ ಸಂತೋಷದಿಂದ ಕಾಲಕಳೆಯತೊಡಗಿದನು. ಒಮ್ಮೆ ಕಾಶಿಯಲ್ಲಿ ಘೋರ ಬರಗಾಲ ಬಂದಿತು. ಆಗ ಈ ಬ್ರಾಹ್ಮಣರಿಗೆ ಕಷ್ಟ ಕಾರ್ಪಣ್ಯಗಳು ಒದಗಿ ಬಂದವು.ಆಗ ಅವರಿಗೆ ಈ ರಾಜನ ನೆನಪಾಗಿ ಈತನ ಆಸ್ಥಾನಕ್ಕೆ ಆಗಮಿಸಿದರು.ಆದರೆ ರಾಜ ತನಗೆ ಅವರಿಂದ ಈ ಹಿಂದೆ ಒದಗಿ ಬಂದಿದ್ದ ಸಹಾಯವನ್ನು ಮರೆತು ಬಿಟ್ಟಿದ್ದ. ಜೊತೆಗೆ ಆ ಕ್ಷಣ ಅವರ ಮನಸ್ಸಿಗೆ ನೋವಾಗುವಂತೆ ವರ್ತಿಸಿದನು.ಆಗ ಅವರು ರಾಜನಿಗೆ ಶಾಪವನ್ನು ನೀಡಿದರು.ನಂತರದ ದಿನಗಳಲ್ಲಿ ರಾಜನು ಏನೇ ಕಾರ್ಯ ಕೈಗೊಂಡರು ಅವು ಭಗ್ನವಾಗತೊಡಗಿದವು.
ಈ ಕುರಿತು ರಾಜ ಚಿಂತಿತನಾದ.ತನ್ನ ತಪ್ಪಿನ ಅರಿವಾಗಿ ಬ್ರಾಹ್ಮಣರಲ್ಲಿ ಮೊರೆ ಹೋದ.ಅವರು ಚೌಡೇಶ್ವರಿ ದೇವಿಯ ಉಪಾಸಕನಾಗಿದ್ದ ರಾಜನಿಗೆ ಈ ಸ್ಥಳಕ್ಕೆ ದೇವಿ ಬಂದು ಅನುಗ್ರಹಿಸಿ ನೆಲೆ ನಿಲ್ಲಬೇಕು.ದೇವಿ ಉಪಾಸನೆ ಇಲ್ಲಿ ನಿರಂತರವಾಗಿ ಜರುಗತೊಡಗಬೇಕು ಎನ್ನಲು.ರಾಜ ಮತ್ತೆ ರಾಜ ತನ್ನ ಸುಖ ಸಮೃದ್ಧಿಯನ್ನು ಪಡೆಯುವಂತಾಗುವುದು ಎಂದು ಸಂಕಲ್ಪಿಸಿದರು.ಅದರಂತೆ ದೇವಿಯ ಅನುಗ್ರಹ ಈ ಸ್ಥಳದಲ್ಲಿ ಆಯಿತು. ಮುಂದೆ ಆ ಬ್ರಾಹ್ಮಣರು ಕೂಡ ಈ ದೇವಿಯ ಉಪಾಸಕ ಅರ್ಚಕರಾಗಿ ನೆಲೆಸಿದರೆಂದು ಪ್ರತೀತಿ.
ಹೀಗೆ ಚೌಡೇಶ್ವರಿ ದೇವಿಯ ಅನುಗ್ರಹ ಈ ನೆಲದಲ್ಲಿ ಜರುಗಿದ್ದು ಇಂದಿಗೂ ಕೂಡ ಕರ್ನಾಟಕವಷ್ಟೇ ಅಲ್ಲ ದೇಶದ ವಿವಿಧ ಮೂಲೆ ಮೂಲೆಗಳಿಂದ ಭಕ್ತಿಯಿಂದ ಜನರು ಇಲ್ಲಿಗೆ ಬಂದು ಪೂಜೆ ಪುನಸ್ಕಾರಗಳನ್ನು ಕೈಗೊಂಡು ತೆರಳುವರು.ಶ್ರೀ ಮಾತೆ ಆದಿಶಕ್ತಿಯ ಅವತಾರತವಾಗಿದ್ದು.ಈ ಕ್ಷೇತ್ರ ಇಷ್ಟಾರ್ಥ ಸಿದ್ದಿಯ ಕ್ಷೇತ್ರ ಎಂದು ಹೆಸರುವಾಸಿಯಾಗಿದೆ.ಇಲ್ಲಿಗೆ ಬಂದು ಯಾರು ಏನಾದರೂ ಸಂಕಲ್ಪ ಮಾಡಿ ಕೇಳಿಕೊಂಡರೆ ಅವರ ಸಂಕಲ್ಪ ಸಿದ್ದಿಯಾಗುತ್ತದೆ ಎಂದು ಪ್ರತೀತಿ.ಮೈಸೂರು ಅರಸು ಮನೆತನದವರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರಂತೆ.ಸಾಮಾನ್ಯ ಜನರಷ್ಟೇ ಅಲ್ಲ ರಾಜಕಾರಣಿಗಳು ಸಿನಿಮಾ ನಟ ನಟಿಯರು ಕೂಡ ಇಲ್ಲಿಗೆ ಬಂದು ಹೋಗುತ್ತಾರಂತೆ.,ಅಷ್ಟೇ ಏಕೆ ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿಗೆ ಬಂದು ಹೋಗಿದ್ದರಂತೆ. ಅವರಿಗೆ ಪ್ರಧಾನಿ ಆಗುವ ಯೋಗ ಕುರಿತು ತಿಳಿದುಕೊಂಡಿದ್ದರಂತೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ಭಕ್ತಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವರು.ದೇವಿಯ ಕಳಸದ ಬರಹದ ಭವಿಷ್ಯವಾಣಿಯನ್ನು ಕೇಳಿಕೊಂಡು ಸಂಕಲ್ಪ ಮಾಡಿಕೊಂಡು ಹೋಗುವರು. ಹೀಗಾಗಿ ಸರತಿಗಾಗಿ ಕಾರ್ಯಾಲಯದಲ್ಲಿ ನಾವು ಮೊದಲು ಇಲ್ಲಿ ಚೀಟಿ ಪಡೆಯಬೇಕು.ನಂತರ ಒಬ್ಬೊಬ್ಬರಂತೆ ಕಳಸದ ಬರಹ ರಚಿಸುವ ಕೊಠಡಿಗೆ ಕಳಿಸುವರು.ಅಲ್ಲಿ ನಮ್ಮ ಮನಸ್ಸಿನ ವಿಚಾರಗಳನ್ನು ಪ್ರಸ್ತಾಪಿಸಿ ಬರಹದ ವಿವರ ಪಡೆದು ಏನಾದರೂ ಹರಕೆ ಸಂಕಲ್ಪ ಮಾಡಿಕೊಳ್ಳುವುದಾದಲ್ಲಿ ಮಾಡಿಕೊಂಡು ಬರುವುದು ವಾಡಿಕೆ.ನಂತರ ನಿಮ್ಮ ಹರಕೆ ಪೂರೈಸಿದರೆ ಅದನ್ನು ತೀರಿಸುವುದು ಕೂಡ ಅಷ್ಟೇ ಮಹತ್ವದ್ದು.ಹೀಗಾಗಿ ಪ್ರತಿದಿನಗಳಿಗಿಂತ ಹೆಚ್ಚು ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ಜನಸಂದಣಿ ಹೆಚ್ಚಿಗೆ ಇರುತ್ತದೆ.
ಈಗ ನವರಾತ್ರಿ ಪ್ರತಿ ದಿನ ಇಲ್ಲಿ ವಿಶೇಷ ಪೂಜೆ ಜರಗುತ್ತಿದ್ದು ದೇವಿಯ ಅಲಂಕಾರ ಪೂಜೆಯನ್ನು ಕಣ್ತುಂಬಿಕೊಳ್ಳಲು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿರಿ.
ಒಟ್ಟಾರೆ ವರ್ಷದ ಯಾವುದೇ ದಿನಗಳಲ್ಲಿ ಕೂಡ ನೀವು ಬಂದು ಈ ದೇವಾಲಯದ ದರ್ಶನ ಪಡೆಯಬಹುದಾಗಿದೆ.ಹೆಚ್ಚಿನ ವಿಶೇಷ ದಿನಗಳು ಮಂಗಳವಾರ ಮತ್ತು ಶುಕ್ರವಾರ. ಇಲ್ಲಿ ವಸತಿಗೆ ಕೊಠಡಿಗಳ ವ್ಯವಸ್ಥೆ ಇದ್ದು ನಿತ್ಯವೂ ಅನ್ನದಾಸೋಹ ಕೂಡ ವ್ಯವಸ್ಥೆ ಇರುವುದು.ಬಸ್ ವ್ಯವಸ್ಥೆ ಜೊತೆಗೆ ಆಟೋ ಸಂಚಾರ ವ್ಯವಸ್ಥೆ ಲಭ್ಯವಿರುವ ಕಾರಣ ಇಲ್ಲಿ ಸುಲಭವಾಗಿ ಬಂದು ಹೋಗಬಹುದು.
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು.ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨