ಮಹಾನವಮಿ ಘಟಸ್ಥಾಪನೆ
ನವರಾತ್ರಿ ಹಿಂದೂಗಳಿಗೆ ವಿಶೀಷವಾದ ಹಬ್ಬ.ಪ್ರತಿ ವರ್ಷ ಅಶ್ವಯುಜ ಮಾಸದ ಶುಕ್ಲಪಕ್ಷ ಪಾಡ್ಯದಿಂದ ದಶಮಿಯವರೆಗೆ ಈ ಹಬ್ಬದ ಆಚರಣೆ ನಡೆಯುತ್ತದೆ.ಕೌಟುಂಬಿಕವಾಗಿಯೂ ಮತ್ತು ಸಾಮೂಹಿಕವಾಗಿಯೂ ಈ ಹಬ್ಬವನ್ನು ದೇವೀ ಆರಾಧನೆಯೊಂದಿಗೆ ನಡೆಸುವರು.ಈ ನವರಾತ್ರಿಯನ್ನು ದುರ್ಗಾಪೂಜೆ.ದೀವೀಪೂಜಾ.ರಾಮಲೀಲಾ.ನಾಡಹಬ್ಬ ಎಂಬ ಹೆಸರಿನಿಂದಲೂ ಕರೆಯುವರು.ದುರ್ಗೆ.ಭದ್ರಕಾಳಿ.ಜಗದಂಬೆ.ಅನ್ನಪೂರ್ಣೆ.ಸರ್ವಮಂಗಳೆ.ಭೈರವಿ.ಚಂಡಿಕೆ.ಲಲಿತಾ.ಭವಾನಿ.ಇವು ಒಂಬತ್ತು ಹೆಸರುಗಳಿಂದ ಪೂಜಿಸಲ್ಪಡುವ ದುರ್ಗೆಯ ಹೆಸರುಗಳು.
ಗ್ರಾಮೀಣ ಜನರು ಇಂದಿಗೂ ತಮ್ಮ ಮನೆಗಳಲ್ಲಿ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಘಟಸ್ಥಾಪನೆ ಮಾಡುವ ಮೂಲಕ ಈ ಹಬ್ಬವನ್ನು ಸಡಗರದಿಂದ ಭಕ್ತಿ ಶೃದ್ದೆಯಿಂದ ಆಚರಿಸುವರು.ಮುಂಚಿತವಾಗಿ ಮನೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ.ಬಟ್ಟೆಬರೆ.ಹಾಸಿಗೆ ಹೊದಿಕೆಗಳನ್ನು ಸ್ವಚ್ಚಗೊಳಿಸಿ ಮಡಿ ಮಾಡುತ್ತಾರೆ.ಘಟ್ಟ ಹಾಕಲು ಒಳ್ಳೆಣ್ಣೆ ತುಪ್ಪ ಕುಂಬಾರ ಮನೆಯಿಂದ ಹಣತೆ ಖರೀದಿಸಿ ಮನೆಗೆ ಈ ಒಂಬತ್ತು ದಿನಗಳಿಗೆ ಪೂಜೆಗೆ ಅವಶ್ಯವೆನಿಸುವ ಸಾಮಗ್ರಿಗಳನ್ನು ತಂದುಕೊಳ್ಳುವ ಮೂಲಕ ಘಟ್ಟ ಹಾಕುವ ಸಂಪ್ರದಾಯವಿದೆ.
ಘಟಸ್ಥಾಪನೆ…
ಮಹಾನವಮಿಯ ಅಮವಾಸೆಯ ಮರುದಿನ ಪಾಡ್ಯ.ಅಂದು ಬೆಳಿಗ್ಗೆ ಹೊಲದಿಂದ ಮಣ್ಣನ್ನು ತಂದು ಅದನ್ನು ತಟ್ಟೆಯಾಕಾರದ ಮಣ್ಣಿನ ಪರಿಯಾಣದಲ್ಲಿ ಇಟ್ಟು ನವಧಾನ್ಯಗಳ ಬೀಜಗಳನ್ನು ಹಾಕಿ ನೀರು ಹಾಕುವರು.ಈ ಪರಿಯಾಣ ಹಾಗೂ ಮಡಿಕೆಗೆ ಸುಣ್ಣ ಹಚ್ಚಿ ದೀಪ ಹಚ್ಚುವ ಪಣತೆ ಇಟ್ಟು.ಕರಿ ಕಂಬಳಿ ಹಾಸಿ ಗದ್ದುಗೆ ಮಾಡಿ ದೇವರ ಕೊಠಡಿಯಲ್ಲಿ ದೇವಿಯ ಭಾವಚಿತ್ರವಿರಿಸಿ ಅದರ ಅಕ್ಕಪಕ್ಕದಲ್ಲಿ ಎರಡು ಹಣತೆಗಳನ್ನಿಟ್ಟು ಮಣ್ಣಿನ ಸಸಿಗಳನ್ನು ಹಾಕಿದ ಪರಿಯಾಣವನ್ನಿಟ್ಟು ಪೂಜೆ ಮಾಡಿ ಒಂದು ದೀಪವನ್ನು ಘಟ್ಟದ ದೀಪವೆಂದು ನವರಾತ್ರಿಯ ಹತ್ತನೇ ದಿನದವರೆಗೂ ಅದು ಆರದಂತೆ ಕಾಯುವ ಮೂಲಕ ಘಟಸ್ಥಾಪನೆಯ ಕಾರ್ಯವನ್ನು ಜರುಗಿಸುವ ಪದ್ದತಿ ಇಂದಿಗೂ ಉಳಿದು ಬಂದಿದೆ.
ಈ ಒಂಬತ್ತು ದಿನಗಳು ಮಡಿಯಿಂದ ಇರುವ ಜೊತೆಗೆ ದೇವಿ ಪುರಾಣವನ್ನು ಓದುವರು.ಇದನ್ನು ಮನೆಗಳಲ್ಲಿ ಅಷ್ಟೇ ಅಲ್ಲ ದೇವಾಲಯಗಳಲ್ಲಿಯೂ ಕೂಡ ಆಚರಿಸುವರು.ದೇವಾಲಯಗಳಲ್ಲಿ ಘಟಸ್ಥಾಪನೆ ಮಾಡಿ ದೇವಿ ಪುರಾಣ ಆರಂಭಿಸಿ ಕೊನೆಯ ದಿನ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಂಡೇ ಪೂಜೆ ಅಂದರೆ ಆಯುಧ ಪೂಜೆ ಎಂದರ್ಥ ರೈತರು ತಮ್ಮ ಮನೆಯ ವ್ಯವಸಾಯದ ವಸ್ತುಗಳನ್ನು ಖುರ್ಚಿಗೆ.ಒನಕೆ.ಸೇರು.ಮಕ್ಕಳ ಪಾಟಿಪುಸ್ತಕ.ಪೆನ್ನು.ತಕ್ಕಡಿ.ಮನೆಯಲ್ಲಿ ಕತ್ತಿ.ಖಡ್ಗವಿದ್ದರೆ ಅವುಗಳನ್ನು ಪೋಲಿಸರು ತಮ್ಮ ಬಂದೂಕುಗಳನ್ನು.ವ್ಯಾಪಾರಸ್ಥರು ತಮ್ಮ ತಕ್ಕಡಿಗಳನ್ನು ಖಾತೆ ಕಿರ್ದಿ ಪುಸ್ತಕಗಳನ್ನು ಕರಿ ಕಂಬಳಿ ಹಾಸಿ ಅದರ ಮೇಲಿಟ್ಟು ಒಂದೆಡೆ ಬನ್ನಿ ಮರದ ಎಲೆಗಳನ್ನು ಹೂ ಪತ್ರಿ ಏರಿಸಿ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ನಾಣ್ಯಗಳನ್ನು ಒಂದು ತಾಟಿನಲ್ಲಿಟ್ಟು ಐದು ಜೋಳದ ದಂಟುಗಳನ್ನು ಮಂಟಪದ ರೀತಿಯಲ್ಲಿ ಇಟ್ಟು ಪೂಜಿಸುವರು.ತಮ್ಮ ಮನೆಯಲ್ಲಿನ ವಾಹನಗಳಿಗೂ ಕೂಡ ಜೋಳದ ದಂಟು ಕಟ್ಟಿ ಬನ್ನಿ ಎಲೆಗಳನ್ನು ಹೂ ಪತ್ರಿ ಏರಿಸಿ ಶೃಂಗರಿಸಿ ಪೂಜಿಸುವ ಸಂಪ್ರದಾಯವಿದೆ.ಈ ರೀತಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಅಣಿಯಾಗುವ ಘಟಸ್ಥಾಪನೆ ಮತ್ತು ವಿಜಯದಶಮಿ ಹಬ್ಬದ ಆಚರಣೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಉಳಿದು ಬಂದಿದೆ.
ಈ ನವರಾತ್ರಿಯ ಎಲ್ಲ ದಿನಗಳೂ ಘಟ್ಟ ಹಾಕಿದ ಮನೆಗೆ ಒಳ ಪ್ರವೇಶಕ್ಕೂ ಮೊದಲು ಕೈಕಾಲು ತೊಳೆದುಕೊಳ್ಳಲು ಬಾಗಿಲ ಬಳಿ ನೀರು ಇಟ್ಟಿರುತ್ತಾರೆ ಒಳ ಬರುವವರು ಹಾಗೆಯೇ ಬರುವಂತಿಲ್ಲ.ಅಷ್ಟೇ ಅಲ್ಲ ಘಟ್ಟಕ್ಕೆಂದು ಇಟ್ಟಿರುವ ಹಣತೆಯನ್ನು ಹಗಲಿರುಳು ನಂದದಂತೆ ಕಾಯುವರು.ಮನೆಯ ಕುಟುಂಬದಲ್ಲಿ ಒಬ್ಬ ಸದಸ್ಯರು ದೇವಿ ಪಾರಾಯಣ ಮತ್ತು ಎರಡು ಹೊತ್ತು ಪೂಜೆ ಸಲ್ಲಿಸುವ ಜವಾಬ್ದಾರಿಯನ್ನು ಈ ದಿನಗಳಲ್ಲಿ ಹೊತ್ತಿರುತ್ತಾರೆ.ಒಟ್ಟಾರೆ ಘಟ್ಟ ಹಾಕಿದ ಮನೆಯವರೆಲ್ಲ ಮಡಿಯಿಂದ ಪೂಜೆ ಸಲ್ಲಿಸುವ ಆ ಮನೆಯಲ್ಲಿ ಮಡಿಯಿಂದ ಎಲ್ಲ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನವರಾತ್ರಿ.ವಿಜಯದಶಮಿ ಹಬ್ಬವನ್ನು ಆಚರಿಸುವರು.
ಸಮಗ್ರ ಭರತಖಂಡದಲ್ಲಿ ದುರ್ಗಾ ಪೂಜೆಗೆ ವಿಶಿಷ್ಟ ಸ್ಥಾನವಿದೆ.ರಾಮಾಯಣ ಮಹಾಭಾರತ ಕಾಲದಿಂದಲೂ ದುರ್ಗಾ ಪೂಜೆ ಕುರಿತ ಉಲ್ಲೇಖಗಳು ವೇದಗಳಲ್ಲಿಯೂ ಕೂಡ ದುರ್ಗೆಯ ಬಗ್ಗೆ ವಿವರಗಳಿವೆ.ಪಶ್ಚಿಮ ಬಂಗಾಳ,ಬಿಹಾರ.ಉತ್ತರಪ್ರದೇಶ.ದೆಹಲಿ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ “ದುರ್ಗಾಪೂಜೆ” ಗುಜರಾತ್.ಮಹಾರಾಷ್ಟ್ರ.ಪಂಜಾಬ್ಲ್ಲಿ”ನವರಾತ್ರಿ ಪೂಜಾ”ಆಂದ್ರಪದೇಶ.ಕೇರಳ.ತಮಿಳುನಾಡಿನಲ್ಲಿ”ಬೊಮ್ಮೈಕೋಲು.ವಿದ್ಯಾರಂಭ.ಸೀಮೋಲಂಘನ”.
ಹಿಮಾಚಲ ಪ್ರದೇಶದಲ್ಲಿ”ಕುಲ್ಲೂ ದಸಹರಾ” ಕಾಶ್ಮೀರದಲ್ಲಿ “ಸೇರಾವಾಲೀ ಮಾ ದುರ್ಗಾ”ಎಂದು ಈ ಹಬ್ಬವನ್ನು ಆಚರಿಸುವರು. ಕರ್ನಾಟಕದಲ್ಲಿ ಮೈಸೂರು ದಸರಾ.ನಾಡಹಬ್ಬ.ವಿಜಯದಶಮಿ ಎಂದೆಲ್ಲ ಆಚರಿಸುವರು.ಪಂಚಪೀಠಾಧೀಶರು ದಸರಾ ದರ್ಬಾರ ಆಚರಿಸಿದರೆ.ಕರ್ನಾಟಕದ ಅನೇಕ ಕಡೆ ನಾಡಹಬ್ಬವನ್ನು ನೂರು ವರ್ಷಗಳಿಂದಲೂ ಆಚರಿಸಿಕೊಂಡು ಬಂದಿರುವ ಸ್ಥಳಗಳಿವೆ.ಉತ್ತರ ಕರ್ನಾಟಕದಲ್ಲಿ ಘಟಸ್ಥಾಪನೆಗೆ ವಿಶೇಷ ಮಹತ್ವವಿದ್ದು ಉಪವಾಸ ಕೈಗೊಳ್ಳುವ ಮೂಲಕ ಭಕ್ತಿ ಶೃದ್ದೆಯಿಂದ ಆಚರಿಸುವರು.
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿಬಡಾವಣೆ
ಶಿಂದೋಗಿ ಕ್ರಾಸ್ ಮುನವಳ್ಳಿ-೫೯೧೧೧೭
ತಾಲೂಕ: ಸವದತ್ತಿ ಜಿಲ್ಲೆ;ಬೆಳಗಾವಿ
೯೪೪೯೫೧೮೪೦೦ ೮೯೭೧೧೧೭೪೪೨