ಶಿವರಾಮ ಕಾರಂತರ ನೆನಪು ಕೋಟಾದ ಥೀಮ್ ಪಾರ್ಕ್
ಕಾರಂತರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಶಿವರಾಮ ಕಾರಂತ ಪ್ರಶಸ್ತಿ ಪ್ರತಿಷ್ಟಾನ ನಿಜಕ್ಕೂ ಅಭಿನಂದನಾರ್ಹ. ಪ್ರತಿ ವರ್ಷ ಅಕ್ಟೊಬರ್ ೧೦ ಬಂದರೆ ಶಿವರಾಮ ಕಾರಂತರ ನೆನಪಿನ ಕೋಟದಲ್ಲಿ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನ ಜಂಟಿಯಾಗಿ ಕಾರಂತ ಹುಟ್ಟೂರ ಪ್ರಶಸ್ತಿ ಕೊಡಮಾಡುತ್ತಿದ್ದು. ೨೦೦೫ ರಿಂದ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದ್ದು. ಈ ಸಂದರ್ಭ ಕಾರಂತರ ಹೆಸರಿನ ಕೋಟದ ಥೀಮ್ ಪಾರ್ಕ ನವವಧುವಿನಂತೆ ಕಂಗೊಳಿಸತೊಡಗುತ್ತದೆ.ಸಾಹಿತಿಯೋರ್ವರ ಸವಿನೆನಪಿನ ಚಿತ್ರಗಳು ಈ ದಿನದಲ್ಲಿ ಎಲ್ಲರ ಸ್ಮೃತಿಪಟಲದಲ್ಲಿ ಹರಿದಾಡತೊಡಗುತ್ತವೆ.ಹಾಗಂತ ಇದು ಈ ದಿನಕ್ಕೆ ಮಾತ್ರ ಸೀಮಿತವಲ್ಲ.ಥೀಮ್ ಪಾರ್ಕ ಪ್ರವಾಸೀ ತಾಣವಾಗಿ ವಿವಿಧ ಚಟುವಟಿಕೆಗಳಿಂದ ವರ್ಷವಿಡೀ ತೊಡಗಿರುತ್ತದೆ.ನನಗಂತೂ ಈ ಸ್ಥಳದ ನೆನಪು ಅಜರಾಮರವಾಗಿ ಉಳಿದಿದೆ. ೨೦೧೯ ರಲ್ಲಿ ನಾನು ಈ ಸ್ಥಳಕ್ಕೆ ಭೇಟಿ ನೀಡಿದ್ದರೂ ಕೂಡ ಪ್ರತಿ ವರ್ಷ ಕಾರಂತರ ಜನ್ಮ ದಿನದ ಸಂದರ್ಭದಲ್ಲಿ ಹಳೆಯ ನೆನಪುಗಳು ಮರುಕಳಿಸಿ ಬರಹ ರೂಪಕ್ಕೆ ಅಣಿಯಾಗುವೆ.
ಉಡುಪಿ ಜಿಲ್ಲೆ ಸುಂದರ ಕಡಲ ಕಿನಾರೆಯ ರಮ್ಯತಾಣಗಳನ್ನು ಒಳಗೊಂಡ ಜಿಲ್ಲೆ ಈ ಜಿಲ್ಲೆಯ ಕುಂದಾಪುರಕ್ಕೆ ಹೊರಡುವ ಮಾರ್ಗದಲ್ಲಿರುವುದು ಕೋಟ ಎಂಬ ಊರು. ಊರು ಚಿಕ್ಕದಾದರೂ ಇಲ್ಲಿನ ನಿಸರ್ಗ ಹಾಗೂ ಪ್ರವಾಸ ತಾಣವಾದ ಕಡಲ ತೀರದ ಬಾರ್ಗವರೆನಿಸಿದ ಶಿವರಾಮ ಕಾರೆಂತರ ಹೆಸರಿನ ಥೀಮ್ ಪಾರ್ಕ ಎಲ್ಲರ ಗಮನ ಸೆಳೆಯುತ್ತದೆ ಬೆಂಗಳೂರಿನಿಂದ ಉಡುಪಿಯು ೩೬೩ ಕಿಮೀ ಇದ್ದು ಉಡುಪಿಯಿಂದ ೨೩ ಕಿ.ಮೀ ಕುಂದಾಪುರದಿಂದ ೧೪ ಕಿ.ಮೀ ಅಂತರದಲ್ಲಿ ಇರುವ ಕೋಟಾ ತನ್ನ ಹತ್ತಿರದಲ್ಲಿ ಅನೇಕ ಪ್ರವಾಸಿ ತಾಣಗಳು ಇರುವ ಸ್ಥಳ ಜೊತೆಗೆ ಕಡಲ ಕಿನಾರೆ ಅರಬ್ಬಿ ಸಮುದ್ರವೂ ಕೂಡ ಹತ್ತಿರವಿರುವ ಕಾರಣ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕೋಟ ಹೆಸರುವಾಸಿಯಾಗಿದೆ. ಉಡುಪಿ ಕಾರ್ಕಳ ಕೊಲ್ಲೂರು ಕೊಡಚಾದ್ರಿ ಕುಂದಾಪುರ ಆಗುಂಬೆಯಂತಹ ಪ್ರವಾಸಿ ತಾಣಗಳು ಕೋಟ ಗ್ರಾಮಕ್ಕೆ ಹತ್ತಿರವಿದ್ದು. ಮುಲ್ಕಿ ಹಾಗೂ ಮಂಗಳೂರು ರೈಲು ನಿಲ್ದಾಣಗಳ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋಟವನ್ನು ಸುಲಭವಾಗಿ ತಲುಪಬಹುದು.
ನಿಜಕ್ಕೂ ಕೋಟ ಒಂದು ಅದ್ಭುತ ತಾಣವಾಗಿದೆ. ಇಲ್ಲಿನ ನಿಲ್ದಾಣದಲ್ಲಿ ಇಳಿದು ಅಲ್ಲಿ ನಿಂತಿರುವ ಅಟೋ ಹಿಡಿದು ಕೇಳಿದರೆ ಸಾಕು ಥೀಮ್ ಪಾರ್ಕಗೆ ಕರೆದುಕೊಂಡು ಬರುವರು ನಡೆದುಕೊಂಡು ಬಂದರೂ ಕೂಡ ಇದು ದೂರವೆನಲ್ಲ. ಶಿವರಾಮ ಕಾರಂತ ಥೀಮ್ ಪಾರ್ಕ ರಸ್ತೆ ಫಲಕ ಮಾರ್ಗದಲ್ಲಿ ನಡೆದುಕೊಂಡು ಬರುವಾಗ ಕಾರಂತರ ನೆನಪುಗಳು ಕಣ್ಮುಂದೆ ಸುಳಿಯತೊಡಗುತ್ತವೆ. ದೂರದಿಂದಲೇ ಕೆಂಪು ಬಣ್ಣದ ಸುಂದರ ಕಟ್ಟಡ ಅದರ ಸುತ್ತುಗೋಡೆಯ ಅಲಂಕೃತ ಚಿತ್ತಾರೆ ಗೋಡೆಯ ಎಡಬಲಗಳಲ್ಲಿ ಸಾಂಸ್ಕೃತಿಕ ಉಬ್ಬು ಕಲಾಕೃತಿಗಳು ಗಮನ ಸೆಳೆಯುತ್ತವೆ.ಮಹಾದ್ವಾರ ದಾಟಿ ಒಳಬಂದರೆ ಸಾಕು ಹಸಿರು ಹಾಸಿನ ಮಧ್ಯದ ಕೊಳವೊಂದರ ನಡುವೆ ನಿಂತ ಕಾರಂತರ ಮೂರ್ತಿ ಇದು ಐದು ಅಡಿ ಕಂಚಿನ ಪ್ರತಿಮೆ.ಇದನ್ನು ನೋಡುತ್ತಲೆ ಕೈ ಎತ್ತಿ ಮುಗಿಯಬೇಕು ಎನ್ನುವ ಭಾವ ನಿಮ್ಮ ಮನದಲ್ಲಿ ಬಾರದಿರದು.ಒಂದೆಡೆ ಗಿಡದ ಕೆಳಗೆ ಹಸಿರು ಹುಲ್ಲು ಹಾಸಿನ ನಡುವೆ ಕಟ್ಟೆಯ ಮೇಲೆ ಮಕ್ಕಳಿಗೆ ಪಾಠ ಮಾಡುತ್ತಿರುವ ಪ್ರತಿಕೃತಿಗಳು ಸುತ್ತಲೂ ಆವರಣದ ಗೋಡೆಯ ಮೇಲೆ ಬಿಡಿಸಿರುವ ನೃತ್ಯ ಶಾಲೆಯ ಚಿತ್ರಣಗಳು ಗಮನಸೆಳೆಯುತ್ತವೆ.
ಕಡಲ ತೀರದ ಭಾರ್ಗವ ನಡೆದಾಡುವ ವಿಶ್ವಕೋಶ ಎದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ ಕವಿ ಕಾದಂಬರಿಕಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಕಾರಂತರ ಹುಟ್ಟೂರಲ್ಲಿ ಅವರ ಹೆಸರಿನ ಥೀಮ್ ಪಾರ್ಕ ಗಮನ ಸೆಳೆಯುತ್ತದೆ.ಶಿವರಾಮ್ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨ ಅಕ್ಟೋಬರ್ ೧೦ ರಂದು ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಸಾಹಿತಿಯಾಗಿ ಅಷ್ಟೇ ಅಲ್ಲ ಇತರೆ ಕ್ಷೇತ್ರಗಳಲ್ಲೂ ಕೂಡ ಸಾಧನೆ ಮಾಡಿದವರು ಕಾರಂತರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು ಬ್ಯಾಲೆಯಲ್ಲಿಯೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.ಮಕ್ಕಳಲ್ಲಿದ್ದ ಪ್ರತಿಭೆಯನ್ನು ಅರಳಿಸಲು ಪುತ್ತೂರಿನಲ್ಲಿ ಬಾಲವನ ತೆರೆದಿದ್ದರು.ನಿರತರ ಪ್ರಯೋಗಶೀಲರಾಗಿದ್ದ ಕಾರಂತರು ಕನ್ನಡ ಚಿತ್ರರಂಗದಲ್ಲಿ ಮೂಕಿ ಚಿತ್ರ ನಿರ್ಮಾಣಕ್ಕೆ ಕೈ ಹಾಕುವ ಮೂಲಕ ಡೊಮಿಂಗೋ(೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ ಅಭಿನಯಿಸಿ ನಿರ್ದೇಶಿಸಿದ್ದರು.ಅನಂತರ ಭೂತರಾಜ್ಯ(೧೯೩೧) ಎಂಬ ಮೂಕಿ ಚಿತ್ರ ಸಹ ನಿರ್ಮಿಸಿದ್ದರು.ಕೈಗಾ ವಿದ್ಯುತ್ ಸ್ಥಾವರದ ವಿರುದ್ಧ ಹೋರಾಟದಲ್ಲೂ ಮುಂಚೂಣಿ ವಹಿಸಿದ್ದು ಈಗ ಇತಿಹಾಸ.ಇಂಥಹ ಮೇರು ವ್ಯಕ್ತಿಯ ಹೆಸರಲ್ಲಿ ಥೀಮ್ ಪಾರ್ಕ ನಿರ್ಮಿಸಿದ್ದು ನಿಜಕ್ಕೂ ಅವರ ನೆನಪನ್ನು ಹಸಿರಾಗಿಸುವ ಪ್ರಯತ್ನಗಳಲ್ಲೊಂದಾಗಿದೆ.
ಕಾರಂತರ ನೆನಪಿನಲ್ಲಿ ಅವರ ಹುಟ್ಟೂರಾದ ಕೋಟಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೨೦೨.೧೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಾಃಶಿವರಾಮಕಾರಂತ ಥೀಂ ಪಾರ್ಕ ಕೋಟತಟ್ಟು ಗ್ರಾಮ ಕೋಟ ಉಡುಪಿ ಜಿಲ್ಲೆ ಎಂಬ ನಾಮಫಲಕ ಹೊತ್ತ ಈ ವಿನೂತನ ಕಟ್ಟಡ ತನ್ನದೇ ಆದ ವಿನ್ಯಾಸದೊಂದಿಗೆ ಗಮನ ಸೆಳೆಯುತ್ತದೆ.
ಶಿವರಾಮ ಕಾರಂತರ ಕಾದಂಬರಿಗಳ ಹೆಸರನ್ನು ಹೊತ್ತ “ಮೂಕಜ್ಜಿಯ ಕನಸುಗಳು” ರಂಗಮಂದಿರ ಇಲ್ಲಿದೆ. ಈ ರಂಗಮಂದಿರದಲ್ಲಿ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತವೆ.ಇಲ್ಲಿ ಶಿವರಾಮ ಕಾರಂತರ ಭಾವಚಿತ್ರ ಇಡಲಾಗಿದ್ದು ಅದರ ಕಳೆಗೆ “ಮಾತಿಗಿಂತ ಮೌನವೇ ಲೇಸು” ಎಂದು ಬರೆಯಲಾಗಿದ್ದು ಶಾಂತತೆಯಿಂದ ವೀಕ್ಷಿಸಿ ಎಂಬುದನ್ನು ಸೂಚ್ಯವಾಗಿ ಹೇಳಿರುವಂತೆ ಭಾಸವಾಗುತ್ತದೆ.ಇವುಗಳ ಜೊತೆಗೆ ಸಾಹಿತ್ಯಕ ಚಟುವಟಿಕೆಗಳು,ವಿಚಾರ ಸಂಕಿರಣಗಳು ನಡೆಯುವ ಮೂಲಕ ವರ್ಷವಿಡೀ ಇಲ್ಲಿ ನಡೆಯುತ್ತವೆ. ಇಲ್ಲಿ ಸುಮಾರು ೫೦೦ ಮಂದಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆಯನ್ನು ಎತ್ತರದಿಂದ ಇಳಿಜಾರಿನಲ್ಲಿ “ಸಿ” ಆಕಾರದಲ್ಲಿ ನಿರ್ಮಿಸಲಾಗಿದೆ.ಹಸಿರು ಬಣ್ಣದ ಗೋಡೆಯ ಮೇಲೆ ಬಿಳಿಯ ರೇಖಾಕೃತಿಯ ಗಿಡದ ಚಿತ್ರ ರಚಿಸಿದ್ದು ಮತ್ತೊಂದೆಡೆ ಪ್ರಸಾಧನ ಕೋಣೆ “ಮೊಗ ಪಡೆದ ಮನ” ವಿದ್ದು ಮೇಕಪ್ ಇತ್ಯಾದಿ ಮಾಡಿಕೊಳ್ಳಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮತ್ತೊಂದೆಡೆ “ಸ್ವಪ್ನದ ಹೊಳೆ” ಹೆಸರಿನ ಕಲಾಮಂದಿರವಿದ್ದು.ಕಾರಂತರ ಅಪರೂಪದ ಚಿತ್ರಗಳನ್ನು ಇಟ್ಟಿದ್ದು ಇವುಗಳಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ನಿಂತಿರುವ ಕಾರಂತರು,ರಂಗ ವೇಷದಲ್ಲಿನ ಕಾರಂತರು ಹೀಗೆ ಅಪರೂಪದ ಭಾವಚಿತ್ರಗಳು ಕಾರಂತರ ವ್ಯಕ್ತಿತ್ವವನ್ನು ಸೂಚಿಸುವಂತಿದ್ದು ಕಪ್ಪು ಬಿಳುಪಿನ ಚಿತ್ರಗಳು ವಿಶೇಷ ಗಮನ ಸೆಳೆಯುತ್ತವೆ.ಇಲ್ಲಿ ಕಲಾ ಪ್ರದರ್ಶನಗಳನ್ನು ನಡೆಸಲಾಗುತ್ತದೆ.
ಮಕ್ಕಳಿಗಾಗಿ “ಚಿಣ್ಣರ ಅಂಗಳ” ಹೆಸರಿನ ಬಾಲವಾಡಿ,ಇದ್ದು ಇಲ್ಲಿನ ಗೋಡೆಯ ಮೇಲೆ ಮಕ್ಕಳನ್ನು ಆಕರ್ಷಿಸುವ ಚಿತ್ತಾರ ಬಿಡಿಸಲಾಗಿದೆ.ಜೊತೆಗೆ ಇದೊಂದು ಮಾದರಿ ಬಾಲವಾಡಿಯಾಗಿದ್ದು ಆಟಿಕೆಗಳು ಗಮನ ಸೆಳೆಯುತ್ತವೆ.ಜೊತೆಗೆ ಮಕ್ಕಳಿಗೆ ಅಕ್ಷರ ಪರಿಚಯಿಸುವ ಅಕ್ಷರಗಳ ಚಿತ್ತಾರಗಳನ್ನು ಅಂಕಿಗಳನ್ನು ವಿವಿಧ ಪ್ರಾಣಿಗಳ ಚಿತ್ರಗಳೊಂದಿಗೆ ಗೋಡೆಯ ಮೇಲೆ ಬಿಡಿಸಲಾಗಿದೆ. “ಚಿಗುರಿನ ಕನಸು” ಹೆಸರಿನ ಗ್ರಂಥಾಲಯವಿದ್ದು ಸುಮಾರು ೧೧ ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕ ಭಂಡಾರವನ್ನು ಈ ಗ್ರಂಥಾಲಯ ಹೊಂದಿದ್ದು.ಇಲ್ಲಿ ಕಾರಂತರ ಎಲ್ಲ ಕೃತಿಗಳು ಲಭ್ಯವಿದ್ದು ಎಲ್ಲ ಕೃತಿಗಳ ಹೆಸರನ್ನು ಶಿಲಾಫಲಕದಲ್ಲಿ ಇಡಲಾಗಿದ್ದು.ಓದಲು ಅನೂಕೂಲ ಮಾಡಿಕೊಡಲಾಗಿದೆ.
ಅಷ್ಟೇ ಅಲ್ಲ ಆವರಣದೊಳಗೆ ವೈಶಿಷ್ಟ್ಯಪೂರ್ಣ ಕಾರಂಜಿ.ಸಿಮೆಂಟ್ ಕಲಾಕೃತಿಯನ್ನು ಹೊಂದಿದ ಚೋಮನದುಡಿ ಮತ್ತು ಯಕ್ಷಗಾನ ಪ್ರಸಂಗಗಳ ಕಲಾಕೃತಿಗಳು.ಎತ್ತಿನ ಬಂಡಿ ಕಲ್ಲಿನಲ್ಲಿ ತೂಗುಮಂಚ,ನಿಮ್ಮನ್ನು ಆಕರ್ಷಿಸುವುದರಲ್ಲಿ ಯಾವ ಸಂದೇಹವೇ ಇಲ್ಲ.
ಕಾರಂತರ ಹುಟ್ಟೂರು ಪ್ರಶಸ್ತಿ…
ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಕಾರಂತರ ಹೆಸರಿನ ಪ್ರಶಸ್ತಿ ನೀಡುವ ಮೂಲಕ ಈ ಥೀಮ್ ಪಾರ್ಕಿನಲ್ಲಿ ಕಾರ್ಯಕ್ರಮವನ್ನು ಸಂಘಟಕರು ನಡೆಸುತ್ತ ಬಂದಿದ್ದು ಎಂ.ವೀರಪ್ಪ ಮೊಯ್ಲಿ(೨೦೦೫), ಲೋಕಾಯುಕ್ತ ಎನ್. ವೆಂಕಟಾಚಲಯ್ಯ (೨೦೦೬) ಪತ್ರಕರ್ತ ಸಾಹಿತಿ ರವಿ ಬೆಳಗೆರೆ (೨೦೦೭), ಶಿಕ್ಷಣ ತಜ್ಞ ಕೆ.ಆರ್.ಹಂದೆ(೨೦೦೮). ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ (೨೦೦೯) ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ (೨೦೧೦) ಸಾಲುಮರದ ತಿಮ್ಮಕ್ಕ (೨೦೧೧) ಬಿ.ಜಯಶ್ರೀ (೨೦೧೨),ಮೋಹನ ಆಳ್ವ(೨೦೧೩) ಜಯಂತ ಕಾಯ್ಕಿಣಿ(೨೦೧೪) ಛಾಯಾಗ್ರಾಹಕ ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣ(೨೦೧೫),ಡಾ.ಬಿ.ಎಂ.ಹೆಗ್ಡೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಗಾಗಿ (೨೦೧೬) ನಟ ಪ್ರಕಾಶ ರೈ.(೨೦೧೭) ಶ್ರೀ ಫಡ್ರೆ (೨೦೧೮) ಕೃಷಿ ಸಾಧಕಿ ಕವಿತಾ ಮಿಶ್ರಾ (೨೦೧೯) ಡಾ.ಎಸ್.ಎಲ್.ಬೈರಪ್ಪ (೨೦೨೦) ತೂಗು ಸೇತುವೆಗಳ ಹರಿಕಾರ ಸುಳ್ಯದ ಗಿರೀಶ್ ಭಾರದ್ವಾಜ (೨೦೨೧)ನಟ ನಿರ್ದೇಶಕ ರಮೇಶ ನ(೨೦೨೨) ಈ ವರ್ಷ ಖ್ಯಾತ ಸಂಗೀತಗಾರ ಡಾ.ವಿದ್ಯಾಭೂಷಣ (೨೦೨೩)ಅವರಿಗೆ ನೀಡಿದ್ದು ಪ್ರತಿವರ್ಷ ಅಕ್ಟೋಬರ್ ೧೦ ರಂದು ಕಾರಂತ ಪ್ರಶಸ್ತಿ ನೀಡಲಾಗುತ್ತಿದೆ.. ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಕಾರಂತರ ಸಾಧನೆಗಳನ್ನು ಬಿಂಬಿಸುವ ಈ ಥೀಮ್ ಪಾರ್ಕ ಕನ್ನಡಿಗರೆಲ್ಲರೂ ನೋಡಬೇಕಾದ ಸ್ಥಳ.
ಇಲ್ಲಿಯೇ ಹತ್ತಿರದಲ್ಲಿ ಸಾಲಿಗ್ರಾಮದಲ್ಲಿ ಕೂಡ ಮಾಲಿನಿಮಲ್ಯ ನೋಡಿಕೊಳ್ಳುತ್ತಿರುವ ಕಾರಂತ ಸ್ಮೃತಿಚಿತ್ರ ಶಾಲೆ ಎಂಬ ಬಹುಮಹಡಿ ಕಟ್ಟಡವಿದ್ದು ಕಾರಂತರ ಬದುಕಿನ ಬಹುಮುಖ್ಯ ಸಂಗತಿಗಳು ಅಂದರೆ ಅವರ ಹಸ್ತಪ್ರತಿಗಳು ಕಾದಂಬರಿಗಳು ಅವರು ಬಳಸುತ್ತಿದ್ದ ವಸ್ತುಗಳು ಇತ್ಯಾದಿ ಇಲ್ಲಿನ ಸಂಗ್ರಹಾಲಯದಲ್ಲಿ ನೋಡಲು ಅನುಕೂಲವನ್ನು ಮಾಲಿನಿಮಲ್ಯ ಕಲ್ಪಿಸಿದ್ದು ಕೋಟದಿಂದ ಬಹು ಹತ್ತಿರದಲ್ಲಿರುವ ಸಾಲಿಗ್ರಾಮಕ್ಕೂ ಕೂಡ ಭೇಟಿ ನೀಡಬಹುದಾಗಿದೆ. ನನಗೆ ಮಾಲಿನಿ ಮಲ್ಯ ಅವರು ಕಾರಂತರ ಪ್ರತಿ ಬರಹ ಕಾದಂಬರಿ.ಅವರ ಬಳಕೆಯ ವಸ್ತುಗಳು ಹೀಗೆ ತಮ್ಮ ಸಂಗ್ರಹದ ಇಡೀ ಕಟ್ಟಡದ ಕೊಠಡಿಗಳನ್ನು ತೋರಿಸಿದರು.ಅವರು ನಿಜಕ್ಕೂ ಕಾರಂತರ ಮ್ಯುಜಿಯಂ ಮಾಡಿದ ರೀತಿ ಶ್ಲಾಘನೀಯ.ಒಟ್ಟಾರೆ ನಾಡಿನೆಲ್ಲೆಡೆ ಸಾಹಿತಿಗಳ ಸ್ಮರಣೆಯಲ್ಲಿ ಕೇಂದ್ರಗಳಿದ್ದು ಅಂಥವುಗಳ ವೀಕ್ಷಣೆಯ ಮೂಲಕ ಅವರ ಸ್ಮರಣೆ ಇಂದಿನ ಪೀಳಿಗೆಗೂ ಅನುಕೂಲ ಮಾಡಿಕೊಡುವುದು ಒಳ್ಳೆಯದು.
ವೈ.ಬಿ.ಕಡಕೋಳ(ಶಿಕ್ಷಕರು) ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ-೫೯೧೧೧೭
ತಾಲೂಕಃ ಸವದತ್ತಿ ಜಿಲ್ಲೆಃ ಬೆಳಗಾವಿ ೮೯೭೧೧೧೭೪೪೨, ೯೪೪೯೫೧೮೪೦೦