10 ವರ್ಷ ಪೂರ್ಣಗೊಳಿಸಿದ ಶಿಕ್ಷಕರ ವರ್ಗಾವಣೆ ಕಡ್ಡಾಯ!!!ಮುಂದಿನ ವರ್ಷ ನಡೆಯುವ ಶಿಕ್ಷಕರ ವರ್ಗಾವಣೆಗೆ ಈಗಿನಿಂದಲೇ ಸಿದ್ದತೆ ನಡೆಸಿದ ಶಿಕ್ಷಣ ಇಲಾಖೆ…
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ವರ್ಷ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ್ದು, ಮುಂದಿನ ವರ್ಷ ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ಯಾವುದೇ ಗೊಂದಲವಿಲ್ಲದೆ ಪೂರ್ಣಗೊಳಿಸಲು ಈಗಿಂದಲೇ ಪೂರ್ವ ತಯಾರಿ ಆರಂಭಿಸಿದೆ.ಒಂದೇ ಕಡೆ ಹತ್ತು ವರ್ಷ ಪೂರ್ಣಗೊಳಿಸಿದ ಶಿಕ್ಷಕರ ವರ್ಗಾವಣೆ ಮಾಡಲಾಗುವುದು. ಅನುಭವದಿಂದ ಪಾಠ ಕಲಿತ ಶಿಕ್ಷಣ ಇಲಾಖೆ ಈಗಿನಿಂದಲೇ ಕಡ್ಡಾಯ ವರ್ಗಾವಣೆಗೆ ಸಿದ್ಧತೆ ಆರಂಭಿಸಿದೆ. ನಿರಂತರವಾಗಿ 10 ವರ್ಷಗಳಿಗೂ ಅಥವಾ ಗ್ರಾಮೀಣ ಪ್ರದೇಶದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಲ್ಲಿ ಅಂತಹ ಶಿಕ್ಷಕರನ್ನು ವರ್ಗಾವಣೆ ಮಾಡಬಹುದು. ನಗರ ಪ್ರದೇಶ ಎ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಗ್ರಾಮೀಣ ಭಾಗಕ್ಕೆ ವರ್ಗಾವಣೆ ಪಡೆಯಲು ಹಿಂದೇಟು ಹಾಕುತ್ತಾರೆ.
ಒಂದು ವರ್ಷ ಹೆಚ್ಚುವರಿ, ಮತ್ತೊಂದು ವರ್ಷ ಕಡ್ಡಾಯ ಮಾದರಿಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. 10 ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು. ಎರಡು ವರ್ಷಗಳ ಹಿಂದೆ ಕಡ್ಡಾಯ ವರ್ಗಾವಣೆ ಮಾಡಿದ್ದ ಸಂದರ್ಭದಲ್ಲಿ ಸಾಕಷ್ಟು ಅಡೆತಡೆ ಎದುರಾಗಿತ್ತು. ಕೆಲವರು ಶಾಸಕರು, ಸಚಿವರ ಮೇಲೆ ಒತ್ತಡ ಹಾಕಿ ವರ್ಗಾವಣೆಯಿಂದ ಪಾರಾಗಲು ಯತ್ನಿಸಿದ್ದರು. ಮತ್ತೆ ಕೆಲವರು ವರ್ಗಾವಣೆ ಪ್ರಕ್ರಿಯೆ ಸ್ಥಗಿತಕ್ಕೆ ಕಾರಣರಾದರು. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿಯೂ ಆಯಿತು.
ಅನಾರೋಗ್ಯ, 55 ವರ್ಷ ಮೇಲ್ಪಟ್ಟವರನ್ನು ಹೊರಗಿಟ್ಟು ಕಡ್ಡಾಯ ವರ್ಗಾವಣೆ ನಡೆಸಲಾಗಿತ್ತು. ಈ ಬಾರಿ ಶಿಕ್ಷಣ ಇಲಾಖೆ ಸಾಕಷ್ಟು ಎಚ್ಚರವಹಿಸಿ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ